ಸೋಮವಾರ, ಮೇ 23, 2022
30 °C

ಗೊಂದೆಡಗಿ: ತಾಳೆ ಬೆಳೆ ಕ್ಷೇತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೊಂದೆಡಗಿ(ಸೈದಾಪುರ): ನಿರಂತರ ಆದಾಯ ನೀಡುವ ವಾಣಿಜ್ಯ ಬೆಳೆಯಾದ ತಾಳೆಯನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಪಂಚಾಯಿತಿ ತೋಟಗಾರಿಕ ಉಪನಿರ್ದೇಶಕ ಸಂತೋಷ ಶೇಷಿಲು ತಿಳಿಸಿದರು.

ಸಮೀಪದ ಗೊಂದೆಡಗಿ ಗ್ರಾಮದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ) ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಸಹಯೋಗದಲ್ಲಿ ನಡೆದ ತಾಳೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತೋಟಗಾರಿಕೆ ಇಲಾಖೆಯಿಂದ ಯಾದಗಿರಿ ಜಿಲ್ಲೆಯ ಕೃಷಿ ಮತ್ತು ಭೀಮಾ ನದಿಯ ದಂಡೆಯ ಪ್ರದೇಶಗಳಲ್ಲಿ ಮುಂದಿನ ವರ್ಷದಲ್ಲಿ ಸುಮಾರು 3000 ಎಕರೆ ತಾಳೆ ಬೆಳೆಯ ಹೊಸ ಪ್ರದೇಶ ವಿಸ್ತರಣೆ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಸೈದಾಪುರ ಹೋಬಳಿಯ ಗೂಡೂರು, ಗೊಂದೆಡಗಿ, ಬೆಳಗುಂದಿ, ಭೀಮನಳ್ಳಿ, ಆನೂರು ಬಿ ಮತ್ತು ಕೆ, ಹಾಗೂ ಬಳಿಚಕ್ರ ಹೋಬಳಿಯ ಕೌಳೂರು, ಲಿಂಗೇರಿ, ಸಾವೂರು, ಗ್ರಾಮಗಳಲ್ಲಿ ತಾಳೆ ಬೆಳೆಯನ್ನು ಬೆಳೆಯಲು ಇಲಾಖೆ ನಿರ್ಧರಿಸಿದೆ. ಯಾದಗಿರಿ ಜಿಲ್ಲೆಯು ತಾಳೆ ಬೆಳೆ ಬೆಳೆಯಲು ಸೂಕ್ತವಾದ ಪ್ರದೇಶವಾಗಿದೆ ಎಂದರು.

ಎಲ್ಲಾ ಎಣ್ಣೆಗಳಲ್ಲಿ ಅತಿ ಹೆಚ್ಚು ಇಳುವರಿ ಕೊಡುವ ಬೆಳೆಯಾಗಿದೆ. ತಾಳೆ ಎಣ್ಣೆಗೆ ವಿದೇಶದಿಂದ ಶೇ 90ರಷ್ಟು ಬೇಡಿಕೆ ಇದೆ. ನಮ್ಮಲ್ಲಿ ಶೇ 70-80 ರಷ್ಟು ತಾಳೆ ಎಣ್ಣೆಯನ್ನು ಅಡುಗೆಗೆ ಉಪಯೋಗಿಸುತ್ತಾರೆ. ಇದನ್ನರಿತು ದೇಶದ ರೈತರಿಗೆ ಕೃಷಿಯಲ್ಲಿ ಅನೂಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ತಾಳೆ ಬೆಳಗೆ ಉತ್ತೇಜನ ನೀಡಲು ನಿರ್ಧರಿಸಿದೆ. ಅದರಂತೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ 3ಎಫ್ ಆಯಿಲ್ ಫಾಮ್ ಕಂಪನಿಯು ಯಾದಗಿರಿ ಜಿಲ್ಲೆಯ ರೈತರಿಗೆ ತಾಳೆ ಸಸಿಗಳನ್ನು ನೀಡುವುದರ ಜೊತೆಗೆ ಕೃಷಿ, ಖರೀದಿ, ಮಾರುಕಟ್ಟೆಯ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತದೆ ಎಂದು ಅವರು ತಿಳಿಸಿದರು.

ಅಲ್ಲದೇ 3 ವರ್ಷಗಳ ನಂತರದಲ್ಲಿ ಬರುವ ಫಲವನ್ನು ಮೊದಲೆ ನಿಗದಿ ಪಡಿಸಿದ ಬೆಲೆಗೆ ತೆಗೆದುಕೊಂಡು ಹೋಗುತ್ತದೆ. ಈಗಾಗಲೆ ಗೊಂದೆಡಗಿ ಗ್ರಾಮದಲ್ಲಿ 40- 60 ಎಕರೆಯಲ್ಲಿ ತಾಳೆ ಬೆಳೆಯ ಹೊಸ ಪ್ರದೇಶ ವಿಸ್ತರಣೆ ಆಗಿದೆ. ಇನ್ನೂ ಆಸಕ್ತಿಯುಳ್ಳ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಪ್ರತಿ ವರ್ಷವು ವಿವಿಧ ಕಾರಣಗಳಿಂದ ಬೆಳೆದ ಬೆಳೆಯು ರೈತರ ಕೈ ಸೇರುವ ಮುನ್ನವೇ ನಷ್ಟ ಅನುಭವಿಸುವುದಕ್ಕಿಂತ ಕಡಿಮೆ ಖರ್ಚು, ಅಧಿಕ ಲಾಭ ನೀಡುವ ಬೆಳೆಯನ್ನು ಬೆಳೆಯಿರಿ ಎಂದು ರೈತರಿಗೆ ಸಲಹೆ ನೀಡಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಜುಮುದ್ದೀನ್, ಎಜಿಎಮ್‍ನ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ಬಸವಪ್ರಭು, ಶ್ರೀಧರ, ಡಾ. ರೇವಣಪ್ಪ, ಭೀರಲಿಂಗಪ್ಪ, ಜಿಂದಪ್ಪ, ಸಂತೋಷಿ ಹಾಗೂ ಗ್ರಾಮದ ರೈತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.