ಗುರುಮಠಕಲ್: ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ವಾಂತಿ ಭೇದಿ ಸಮಸ್ಯೆ, ಕುಡಿಯುವ ನೀರಿನಲ್ಲಿ ಕಲುಷಿತ ನೀರು ಪ್ರಕರಣಗಳು ಮತ್ತೆ ಪುನರಾವರ್ತಿಸದಂತೆ ಮುಂಜಾಗ್ರತಿ ವಹಿಸುವ ಕುರಿತು ಬುಧವಾರ ಸಂಜೆ ವೇಳೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇಒ, ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ, ವೈದ್ಯಾಧಿಕಾರಿಗಳ ಜಂಟಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಇಒ ಎಸ್.ಎಸ್.ಖಾದ್ರೋಳಿ, ಪ್ರತಿ ತಿಂಗಳು ನಾಲ್ಕನೇ ಶನಿವಾರ ಕಡ್ಡಾಯವಾಗಿ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದು ಮತ್ತು ಗ್ರಾಮಗಳಲ್ಲಿ ಕ್ಲೋರಿನೇಶನ್ ಮಾಡಬೇಕು. ಈ ಸಂಬಂಧ ವರದಿ ನೀಡಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
ಎಲ್ಲಾ ಪಿಡಿಒಗಳು ನಿಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಯಾವುದೇ ಕಾರಣಕ್ಕೂ ವಾಂತಿ ಭೇದಿಯಂತ ಪ್ರಕರಣ ಮರುಕಳಿಸಿದರೆ ಸಹಿಸಲಾಗದು. ನಮಗೆ ಸರ್ಕಾರದ ಹಂತದಿಂದಲೇ ನಿರ್ದೇಶನ ನೀಡಲಾಗಿದ್ದು, ಪಂಚಾಯಿತಿಯಲ್ಲಿ ಸಂಬಂಧಿತ ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿದ್ದರೆ ಕೂಡಲೆ ವರದಿ ನೀಡುವಂತೆ ಸೂಚಿಸಿದರು.
ತಹಶೀಲ್ದಾರ್ ಮೊಹ್ಮದ್ ಅಹ್ಮದ್ ಮೋಸಿನ್ ಮಾತನಾಡಿ, ಸರ್ಕಾರದ ಹಂತದಿಂದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಸಿಬ್ಬಂದಿಯ ಬೇಜವಾಬ್ದಾರಿ ನಡೆಗೆ ಇಒ ಸೇರಿದಂತೆ ಸಂಬಂಧಿಸಿದ ಎಲ್ಲರೂ ಬೆಲೆ ತೆರಬೇಕಾಗಲಿದೆ. ಆದ್ದರಿಂದ ಎಲ್ಲರೂ ನಿಮ್ಮ ವ್ಯಾಪ್ತಿಯಲ್ಲಿ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಪ್ರತಿ ಸೋಮವಾರ ನೋಡಲ್ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಇಒ ಅಥವಾ ಸಂಬಂಧಿತ ಅಧಿಕಾರಿಗಳು ಸೇರಿದಂತೆ ನಾನೂ ಸಹ ಆಗಾಗ ಭೇಟಿ ನೀಡಲಿದ್ದೇನೆ. ಯಾವುದೇ ಕಾರಣಕ್ಕೂ ನೀವೂ ಸಹ ನಿಮ್ಮ ವ್ಯಾಪ್ತಿಯ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿತ ಕಾರ್ಯಗಳು ವಿಳಂಬವಿಲ್ಲದಂತೆ ಕೈಗೊಳ್ಳಬೇಕು ಎಂದರು.
ತಾಲ್ಲೂಕು ಪಮಚಾಯಿತಿ ಸಹಾಯಕ ಯೋಜನಾ ನಿರ್ದೇಶಕಿ ಭಾರತಿ ಸಜ್ಜನ, ಗ್ರಾಮೀಣ ನೀರು ಸರಬರಾಜು ಎಇಇ ಬಸವರಾಜ ಐರಡ್ಡಿ, ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ ಸೇರಿದಂತೆ ಪಿಡಿಒಗಳು ಇದ್ದರು.
ನೀರಿನ ಪರೀಕ್ಷೆ ವರದಿ: 7 ಮಾದರಿ ಯೋಗ್ಯವಲ್ಲ
ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ಸೋಮವಾರ ವಾಂತಿ ಭೇದಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆಗೆ ಗ್ರಾಮದ ವಿವಿಧ ನೀರಿನ 8 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.
ಬುಧವಾರ ನೀರಿನ ಪರೀಕ್ಷಾ ವರದಿ ಲಭ್ಯವಾಗಿದ್ದು, ಎಂಟು ಮಾದರಿಗಳಲ್ಲಿ ಏಳು ಮಾದರಿಗಳು ಕುಡಿಯಲು ಯೋಗ್ಯವಿಲ್ಲ ಎಂದು ತಿಳಿದುಬಂದಿದೆ.
ಉಪ್ಪಾರ ಓಣಿಯ ಶರಣಪ್ಪ ಗಡದರ, ಭೀಮಶಪ್ಪ ಮೇತ್ರಿ, ಶರಣಮ್ಮ ಸಾಬಣ್ಣ, ನರಸಮ್ಮ ಕುಂಟೆ, ನರಸಮ್ಮ ಗೌಂಡಿ ಅವರ ಮನೆಗಳಿಂದ ತಲಾ ಒಂದು, ಅಂಗನವಾಡಿ ಕೇಂದ್ರ-7, ಚಂದ್ರಮ್ಮ ಬಾಲಪ್ಪ ಮನೆ ಮುಂದೆ, ಸೇಡಂ ರಸ್ತೆಯಲ್ಲಿನ ಖಾಸಗಿ ಆರ್.ಒ. ಘಟಕ ಸೇರಿ ಒಟ್ಟು 8 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ನರಸಮ್ಮ ಗೌಂಡಿ ಮನೆಯ ಮುಂದಿನ ನಳದ ನೀರು ಹೊರತು ಪಡಿಸಿ ಉಳಿದೆಲ್ಲಾ ಮಾದರಿ ‘ಕುಡಿಯಲು ಯೋಗ್ಯವಿಲ್ಲ’ ಎಂದು ವರದಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.