ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಸಾವಿನ ಮನೆಯಾದ ‘ದಬ್ ದಭಿ’ ಜಲಪಾತ

ಮನಸ್ಸಿಗೆ ಮುದನೀಡಬೇಕಿದ್ದ ತಾಣ, ಆಕ್ರಂದನಕ್ಕೆ ಕಾರಣ
Last Updated 5 ಅಕ್ಟೋಬರ್ 2021, 2:48 IST
ಅಕ್ಷರ ಗಾತ್ರ

ಗುರುಮಠಕಲ್: ಪಟ್ಟಣದಿಂದ ನಜರಾಪುರ ಗ್ರಾಮದ ಮಾರ್ಗದಲ್ಲಿರುವ ನಯನ ಮನೋಹರವಾದ ದಬ್ ದಭಿ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಹಸಿರು ಸಿರಿಯಲ್ಲಿ ಧುಮ್ಮಿಕ್ಕುವ ನೀರಿನ ವೈಯಾರವನ್ನು ನೋಡಲೆಂದು ಬಂದವರಿಗೆ, ನೀರಿನ ಸೆಳೆತ ಸಾವಿನ ಬರೆ ಎಳೆಯುತ್ತಿರುವುದು ಸ್ಥಳೀಯರ ನೋವಿಗೆ ಕಾರಣವಾಗುತ್ತಿದೆ.

ಸಾವಿನ ಸರಣಿ ನೋಡಿದರೆ ದಬ್ ದಭಿ ಜಲಪಾತ ಈಗ ಪ್ರವಾಸಿ ತಾಣವಾಗಿ ಅಲ್ಲದೆ ಸಾವಿನ ಮನೆಯಾಗಿ ಕಾಣುತ್ತಿದೆ. ಮನಸ್ಸನ್ನು ಹಗುರಾಗಿಸಿಕೊಳ್ಳಲು ಜನ ಪ್ರವಾಸ ಮಾಡುತ್ತಾರೆ. ಬಂದವರೆ ಸಾವಿಗೆ ತುತ್ತಾಗಿ ಮನಸ್ಸಿನಲ್ಲಿ ಎಂದೂ ಇಳಿಸಲಾಗದ ಭಾರವನ್ನು ಹೊತ್ತೊಯ್ಯುತ್ತಿದ್ದಾರೆ ಎಂದು ಸ್ಥಳೀಯರಾದ ಮಹೇಶ, ನಾರಾಯಣ, ವೆಂಕಿ ವಿಷಾದ ವ್ಯಕ್ತಪಡಿಸುತ್ತಾರೆ.

ಮೊದಲು ನಮ್ಮೂರಿನಲ್ಲಿ ಇಂಥ ಜಲಪಾತವಿದ್ದುದ್ದು ನಮಗೆ ಹೆಮ್ಮೆ ಎನ್ನಿಸುತ್ತಿತ್ತು. ಆದರೆ, ಈಗ ಪ್ರವಾಸಿಗರ ಪ್ರಾಣ ಹೋಗುತ್ತಿರುವುದು ನೋಡಿದರೆ ಭಯವಾಗುತ್ತಿದೆ. ನೀರನ್ನು ನೋಡಿದ ತಕ್ಷಣ ಈಜುವ ಮನಸ್ಸಾಗುವುದು ಸಹಜ. ಅಪಾಯದ ಕುರಿತು ಎಚ್ಚರಿಕೆ ನೀಡುವ ವ್ಯವಸ್ಥೆಯಿಲ್ಲದ ಕಾರಣ ನೀರಿಗಿಳಿದವರು ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

2020ರ ಸೆ.19 ರಂದು ರಾಜಸ್ಥಾನ ಮೂಲದ ವಿದ್ಯಾರ್ಥಿ ಜಯರಾಮ ಜಾಟ (24), ಅದೇ ವರ್ಷದಲ್ಲಿ ಅಕ್ಟೋಬರ್ 3 ರಂದು ಹೈದರಾಬಾದ್ ನಿವಾಸಿಗಳಾದ ಅಬ್ದುಲ್ ರಹೀಮ್ (22) ಮತ್ತು ಹಬೀಬ್ ಅದ್ನಾನ್(16), 2021ರ ಆ.29 ರಂದು ಕಲಬುರ್ಗಿ ನಗರದ ಸೈಯದ್ ಹಝರ್ (34) ಹಾಗೂ ಭಾನುವಾರ ಚಿತ್ತಾಪುರ ನಗರದ ಐಶ್ವರ್ಯಾ ಶರಣು(23) ಹೀಗೆ ಎರಡು ವರ್ಷದ ಅವಧಿಯಲ್ಲಿ 5 ಜನರು ಜಲಪಾತದಲ್ಲಿ ಪ್ರಾಣ ತೆತ್ತಿದ್ದಾರೆ.

ಸಮನ್ವಯತೆ, ಇಚ್ಛಾಶಕ್ತಿ ಕೊರತೆ:ಜಲಪಾತವು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರಲಿದೆ. ಇದು ಪ್ರವಾಸೋದ್ಯಮ ಇಲಾಖೆಯವರ ಅಭಿವೃದ್ಧಿಗೆ ಅಡ್ಡಗಾಲಾಗಿದೆ. ಗ್ರಾಮ ಪಂಚಾಯಿತಿಯಿಂದ ಒಂದಿಷ್ಟು ಕೆಲಸ ಮಾಡಲಾಯಿತಾದರೂ ಹೆಚ್ಚಿನ ಕೆಲಸ ಮಾಡಲಾಗದು. ಪೊಲೀಸ್ ಇಲಾಖೆಯ ಸಿಬ್ಬಂದಿ ಬೀಟ್ ಪೊಲೀಸ್ ಮೂಲಕ ತಿರುಗಾಡುತ್ತಾರಾದರೂ ಅವರು ಅಲ್ಲೆ ನಿಲ್ಲಲಾಗದು.

ಜಲಪಾತದಲ್ಲಿ ಹೀಗೆ ಸಾವಿನ ಗಂಟೆ ಪದೇ ಪದೇ ಬಾರಿಸುತ್ತಿದ್ದರೂ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲು ಇಲಾಖೆಗಳ ನಡುವಿನ ಸಮನ್ವಯತೆ ಹಾಗೂ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ.

****

ದುರ್ಘಟನೆಗಳು ಜರುಗಿದಾಗ ಒಂದು ವಾರದ ಅವಧಿಯವರೆಗೆ ಕಾಳಜಿ ವಹಿಸುವ ಅಧಿಕಾರಿಗಳು ನಂತರ ಸುಮ್ಮನಾಗುತ್ತಾರೆ. ಮತ್ತೊಂದು ದುರ್ಘಟನೆ. ಯಥಾ ಪ್ರಕಾರ ನಡೆದಿದೆ. ಇದಕ್ಕೆ ಕೊನೆ ಯಾವಾಗ?

- ಶ್ರೀಕಾಂತರೆಡ್ಡಿ ನಡುಮಿಂಟಿ, ನಜರಾಪುರ ಗ್ರಾಮಸ್ಥ

***

ಜಲಪಾತದ ಹತ್ತಿರ ಪ್ರಾಣಾಪಾಯ ಜರುಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಆ ನಿಟ್ಟಿನಲ್ಲಿ ಯಾವ ಬೆಳವಣಿಗೆಗಳೂ ಆಗಿಲ್ಲ

- ಸಂಜೀವಕುಮಾರ ಅಲೆಗಾರ, ಕರ್ನಾಟಕ ಗರುಡ ಸಂಸ್ಥೆ ಉಪಾಧ್ಯಕ್ಷ

***

ಜಲಪಾತದಲ್ಲಿ ನಿರಂತರ ಸಾವುಗಳು ಸಂಭವಿಸುತ್ತಿವೆ. ಪ್ರಾಣಾಪಾಯ ತಪ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದ್ದ ಆಡಳಿತ ವರ್ಗ ಮಾತ್ರ ನಿರ್ಲಿಪ್ತವಾಗಿ ಕುಳಿತಿದ್ದು ಬೇಸರದ ಸಂಗತಿ

- ಮಹಾದೇವ ಎಂ.ಟಿ.ಪಲ್ಲಿ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT