ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಳ್ಳಿ: ಶುದ್ಧ ನೀರು ಮರೀಚಿಕೆ

ಶುದ್ಧೀಕರಣ ಘಟಕಗಳಿಂದ ಆಗುತ್ತಿಲ್ಲ ಶುದ್ಧ
ವಾಟ್ಕರ್ ನಾಮದೇವ
Published 25 ಮೇ 2024, 7:42 IST
Last Updated 25 ಮೇ 2024, 7:42 IST
ಅಕ್ಷರ ಗಾತ್ರ

ವಡಗೇರಾ: ತಾಲ್ಲೂಕಿನ ಕಂದಳ್ಳಿ ನೀರು ಶುದ್ಧಿ ಕರಣ ಘಟಕದಿಂದ ನೀರನ್ನು ಶುದ್ದೀಕರಿಸದೆ ಹಾಗೆಯೇ ಬಿಡುತ್ತಿರುವುದರಿಂದ ಕಂದಳ್ಳಿ ಕೋನಹಳ್ಳಿ ಹಾಗೂ ವಡಗೇರಾ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.

ಕಂದಳ್ಳಿ, ಕೋನಹಳ್ಳಿ ಹಾಗೂ ವಡಗೇರಾ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಭೀಮಾ ನದಿಯಿಂದ ಪೈಪ್‌ಲೈನ್ ಮುಖಾಂತರ ₹ 3 ಕೋಟಿ ರೂಪಾಯಿ ವೆಚ್ಚದಲ್ಲಿ 2011ರಲ್ಲಿ ಕಂದಳ್ಳಿ ಗ್ರಾಮದ ಅನತಿ ದೂರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ. ಆದರೆ ಅಂದಿನಿಂದ ಇಂದಿನವರೆಗೂ ಮೂರು ಹನಿ ನೀರು ಈ ಮೂರು ಗ್ರಾಮಗಳಿಗೆ ಸರಬರಾಜು ಆಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಮಲಿನ ನೀರು ಸರಬರಾಜು: ಭೀಮಾ ನದಿಯಿಂದ ನೇರವಾಗಿ ಸಾರ್ವಜನಿಕ ನಳಗಳಿಗೆ ನೀರನ್ನು ಸರಬರಾಜು ಮಾಡುತ್ತಿರುವದರಿಂದ ನಳಗಳಲ್ಲಿ ಪಾಚಿಗಟ್ಟಿದ, ಗಬ್ಬುವಾಸನೆಯಿಂದ ಕೂಡಿದ ಹೊಲಸು ನೀರು ಬರುತ್ತದೆ ಕೆಲವೊಂದು ವೇಳೆ ನಳಗಳಲ್ಲಿ ವಿಷ ಜಂತುಗಳು ಸಹ ಬಂದಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಮೂರು ಗ್ರಾಮಗಳ ಜನರು ಆ ನೀರನ್ನು ಕುಡಿಯಲು ಬಳಕೆ ಮಾಡದೇ ಕೇವಲ ಬಟ್ಟೆ ಹಾಗೂ ಪಾತ್ರೆಗಳನ್ನು ತೊಳೆಯಲು ಉಪಯೋಗಿಸುತ್ತಾರೆ.

ಲಕ್ಷಾಂತರ ರೂಪಾಯಿ ಅನುದಾನ ದುರ್ಬಳಕೆ : ಪ್ರತಿ ವರ್ಷ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಯನ್ನು ಮಾಡಲು ಸರ್ಕಾರದಿಂದ ಗ್ರಾಮೀಣ ಕುಡಿಯುವ ನೀರು ಹಾಗೂ ಒಳ ಚರಂಡಿ ಇಲಾಖೆಗೆ ಲಕ್ಷಾಂತರ ರೂಪಾಯಿ ಅನುದಾನ ಬರುತ್ತದೆ. ಆದರೆ ಅದು ಸದ್ಬಳಕೆಯಾಗುವುದಿಲ್ಲ.

ಟೆಂಡರನಲ್ಲಿ ಗೋಲ್ ಮಾಲ್: ಸರ್ಕಾರದ ನಿಯಮದ ಪ್ರಕಾರ ₹ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಮಗಾರಿ ಇದ್ದರೆ ಆನ್ ಲೈನ್ ಅರ್ಜಿಗಳನ್ನು ಕರೆಯಬೇಕು. ಇಲ್ಲವೆ ಪತ್ರಿಕೆಯಲ್ಲಿ ಜಾಹೀರಾತನ್ನು ನೀಡಬೇಕು. ಅತೀ ಕಡಿಮೆ ದರವನ್ನು ನಮೂದಿಸಿದ ಗುತ್ತಿಗೆದಾರರಿಗೆ ನಿರ್ವಹಣಾ ಕಾಮಗಾರಿಯನ್ನು ಕೊಡಬೇಕು. ಆದರೆ ಇಲಾಖೆಯ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ತಮಗೆ ಬೇಕಾದವರಿಗೆ ನಿರ್ವಹಣಾ ಕಾಮಗಾರಿಯನ್ನು ಕೊಡುತ್ತಾರೆ ಎಂಬ ಆರೋಪವಿದೆ.

ಆದ್ದರಿಂದ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಯಲ್ಲಿ ಅವ್ಯವಹಾರ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಶುದ್ಧ ನೀರನ್ನು ಸರಬರಾಜು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

ನಾನು ಬಂದು ಆರು ತಿಂಗಳಾಗಿದೆ ಕಂದಳ್ಳಿ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಆರು ತಿಂಗಳಲ್ಲಿ ಎರಡು ವೇಳೆ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಚ ಮಾಡಲಾಗಿದೆ.
–ಶರಣಪ್ಪ, ಜೆಇ
ಹಲವಾರು ವರ್ಷಗಳಿಂದ ಇಲಾಖೆಯ ಅಧಿಕಾರಿಗಳು ಕೇವಲ ಒಬ್ಬ ವ್ಯಕ್ತಿಗೆ ಕುಡಿಯುವ ನೀರಿನ ಘಟಕದ ನಿರ್ವಹಣೆಯ ಜವಾಬ್ದಾರಿನು ಕೊಟ್ಟಿದ್ದಾರೆ. ಅವರು ಸರಿಯಾಗಿ ನಿರ್ವಹಣೆ ಮಾಡಿದೆ ಇರುವದರಿಂದ ಅಶುದ್ಧ ನೀರು ಸರಬರಾಜು ಆಗುತ್ತಿದೆ.
–ಚಂದ್ರಶೇಖರ ಪಾಟೀಲ್, ಕಂದಳ್ಳಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT