ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದಾದ ಕದಡಿದ ಕನ್ನಡ ಮನಸ್ಸುಗಳು

ಕನ್ನಡಮ್ಮನ ತೇರು ಎಳೆಯಲು ಸಮ್ಮತಿಸಿದ ಕೆಂಭಾವಿ ಕಸಾಪ ವಲಯ
Published 12 ಆಗಸ್ಟ್ 2024, 7:04 IST
Last Updated 12 ಆಗಸ್ಟ್ 2024, 7:04 IST
ಅಕ್ಷರ ಗಾತ್ರ

ಸುರಪುರ: ಅದು ಏಪ್ರಿಲ್ 2022. ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆ ಸಭೆ ಏರ್ಪಡಿಸಲಾಗಿತ್ತು. ಕೆಂಭಾವಿ ವಲಯದಿಂದ ಪರಿಷತ್ತಿನ ನೂರಾರು ಸದಸ್ಯರು, ಸಾಹಿತಿಗಳು, ಕನ್ನಡ ಪ್ರೇಮಿಗಳು ಆಗಮಿಸಿದ್ದರು. ತಮ್ಮ ವಲಯದ ಮಡಿವಾಳಪ್ಪ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದರು. ಆದರೆ ಸುರಪುರದ ಶರಣಬಸವ ಯಾಳವಾರ ಆಯ್ಕೆಯಾದರು.

ಈ ಆಯ್ಕೆ ಸಮ್ಮತವಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಕಪಕ್ಷಿಯ ನಿರ್ಧಾರ. ನಮ್ಮನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಕೆಂಭಾವಿ ವಲಯದವರು ಸಭೆಯನ್ನು ಬಹಿಷ್ಕರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದೆ ಕೆಂಭಾವಿಯಲ್ಲಿ ಕನ್ನಡ ಸಾಹಿತ್ಯ ಸಂಘ ಕಟ್ಟಿಕೊಂಡು ಮಡಿವಾಳಪ್ಪ ಅವರನ್ನೆ ಅಧ್ಯಕ್ಷರನ್ನಾಗಿ ಮಾಡಿ ಆ ಮೂಲಕ ಕನ್ನಡಪರ ಚಟುವಟಿಕೆಗಳನ್ನು ನಡೆಸತೊಡಗಿದರು.

ಸುರಪುರ ತಾಲ್ಲೂಕು ಪರಿಷತ್ ನಡೆಸುವ ಕಾರ್ಯಕ್ರಮಗಳಿಗೆ ಹಾಜರಾಗುತ್ತಿರಲಿಲ್ಲ. ಒಂದರ್ಥದಲ್ಲಿ ಸುರಪುರಕ್ಕೆ ಪರ್ಯಾಯ ಕಸಾಪ ಎಂಬಂತೆ ಬಿಂಬಿಸುವ ಯತ್ನ ನಡೆದಿತ್ತು. ಇದರಿಂದ ಸಹಜವಾಗಿ ಸುರಪುರ ಕಸಾಪ ನಡೆಸುವ ಚಟುವಟಿಕೆಗಳಿಗೆ ಕೆಂಭಾವಿಯ ಬೆಂಬಲ ಇರಲಿಲ್ಲ. ಇಬ್ಬರನ್ನೂ ಒಂದು ಗೂಡಿಸುವ ಹಿರಿಯರ ಯತ್ನ ಯಶಸ್ವಿಯಾಗಿರಲಿಲ್ಲ.

ಹುಣಸಗಿ ಪ್ರತ್ಯೇಕ ತಾಲ್ಲೂಕು ಆದ ಮೇಲೆ ಸುರಪುರದಲ್ಲಿ ಕಕ್ಕೇರಾ, ಕೆಂಭಾವಿ ವಲಯವಷ್ಟೆ ಉಳಿದುಕೊಂಡವು. ಸುರಪುರದಲ್ಲಿ ಪರಿಷತ್‌ನ ಸದಸ್ಯರ ಸಂಖ್ಯೆ 316, ಕಕ್ಕೇರಾದಲ್ಲಿ ಕೇವಲ 83, ಕೆಂಭಾವಿಯಲ್ಲಿ 251. ಕೆಂಭಾವಿಯಲ್ಲಿ ಸಾಹಿತಿಗಳ, ಸಂಘಟಕರ ಸಂಖ್ಯೆಯೂ ಹೆಚ್ಚು. ಹೀಗಾಗಿ ಕಸಾಪ ಚಟುವಟಿಕೆಗಳಿಗೆ ಕೆಂಭಾವಿ ವಲಯದ ಬೆಂಬಲ ಅಗತ್ಯವಾಗಿತ್ತು.

ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹಲವಾರು ಸಲ ಇಬ್ಬರನ್ನೂ ಒಂದಾಗಿಸಲು ಮಾಡಿದ ಪ್ರಯತ್ನಗಳು ಇದುವರೆಗೂ ಫಲ ನೀಡಿರಲಿಲ್ಲ. ಕೊನೆಗೂ ಸಂಧಾನ ಯಶಸ್ವಿಯಾಗಿ ಕಳೆದ ಶುಕ್ರವಾರ ಮಡಿವಾಳಪ್ಪ ಪಾಟೀಲ ಕೆಂಭಾವಿ ವಲಯದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಎರಡುವರೆ ವರ್ಷದ ನಂತರ ಸಮಸ್ಯೆ ಇತ್ಯರ್ಥವಾಯಿತು. ಆಯ್ಕೆ ಸಭೆಯಲ್ಲಿ ಎಲ್ಲ ಕನ್ನಡ ಮನಸ್ಸುಗಳಿಗೆ ನಿರಾಳವಾದ ಭಾವ ಮೂಡಿತ್ತು.

ಕೆಂಭಾವಿಯ ಹಿರಿಯರಾದ ಲಿಂಗನಗೌಡ ಮಾಲಿಪಾಟೀಲ, ಯಂಕನಗೌಡ ಪಾಟೀಲ, ಎನ್.ಎಚ್. ದೇಸಾಯಿ ಇತರ ಸಾಹಿತಿಗಳು ಇದಕ್ಕೆ ಸಾಕ್ಷಿಯಾದರು.
ಮಡಿವಾಳಪ್ಪ ಅವರಿಗೆ ಅಂದು ಬೆಂಬಲವಾಗಿ ನಿಂತಿದ್ದ ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈ ಬಗ್ಗೆ ಮಾತನಾಡಲು ಶ್ರೀಗಳು ನಿರಾಕರಿಸಿದರು. ತಮ್ಮನ್ನು ಈ ಬಗ್ಗೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಅಸಮಾಧಾನ ವ್ಯಕ್ತಪಡಿಸಿದರು.

ಎಚ್.ಟಿ. ಪಾಟೀಲ ತಾಲ್ಲೂಕು ಕಸಾಪ ಅಧ್ಯಕ್ಷರಾಗಿದ್ದಾಗ 2002 ರಲ್ಲಿ ಸುರಪುರದಲ್ಲಿ ನಡೆದ ತಾಲ್ಲೂಕು ಮಟ್ಟದ ಎರಡನೇ ಸಮ್ಮೇಳನವೇ ಕೊನೆಯದು. ಶ್ರೀನಿವಾಸ ಜಾಲವಾದಿ ತಾಲ್ಲೂಕು ಕಸಾಪ ಅಧ್ಯಕ್ಷರಾಗಿದ್ದಾಗ 2017 ರಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರ ನೇತೃತ್ವದಲ್ಲಿ ಜಿಲ್ಲಾ ಸಮ್ಮೇಳನ ಅಭೂತಪೂರ್ವವಾಗಿ ನಡೆದಿತ್ತು. ಆದರೆ ತಾಲ್ಲೂಕು ಸಮ್ಮೇಳನ ಮತ್ತೆ ನಡೆದಿಲ್ಲ. ಅಧ್ಯಕ್ಷರ ಅವಧಿ ಉಳಿದದ್ದು ಇನ್ನು ಕೇವಲ ಎರಡುವರೆ ವರ್ಷ. ತಾಲ್ಲೂಕು ಸಮ್ಮೇಳನ ನಡೆದು 22 ವರ್ಷ ಸಂದಿವೆ. ಮೂರನೇ ಸಮ್ಮೇಳನ ಶೀಘ್ರದಲ್ಲಿ ಆಯೋಜಿಸಿರಿ ಎಂಬುದು ಸಾಹಿತಿಗಳ ಒತ್ತಾಯ.

ಶರಣಬಸವ ಯಾಳವಾರ
ಶರಣಬಸವ ಯಾಳವಾರ

ಮೂರನೇ ತಾಲ್ಲೂಕು ಸಮ್ಮೇಳವನ್ನು ಕೆಂಭಾವಿಯಲ್ಲಿ ಅದ್ಧೂರಿಯಾಗಿ ಶೀಘ್ರದಲ್ಲಿ ಆಯೋಜಿಸುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾದರಿ ಸಮ್ಮೇಳನ ಮಾಡುತ್ತೇವೆ ಮಡಿವಾಳಪ್ಪ

-ಪಾಟೀಲ ಕೆಂಭಾವಿ ವಲಯ ಕಸಾಪ ಅಧ್ಯಕ್ಷ

ಮಡಿವಾಳಪ್ಪ ನಾನು ಆತ್ಮೀಯರು. ಹಿರಿಯರ ಸಹಕಾರದಿಂದ ಭಿನ್ನಾಭಿಪ್ರಾಯ ಸುಖಾಂತ್ಯಗೊಂಡಿದೆ. ಎಲ್ಲರೂ ಒಟ್ಟಾಗಿ ಕನ್ನಡಮ್ಮನ ತೇರು ಎಳೆಯುತ್ತೇವೆ

-ಶರಣಬಸವ ಯಾಳವಾರ ತಾಲ್ಲೂಕು ಕಸಾಪ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT