ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲು ಕಾಂಗ್ರೆಸ್‌ ಬೆಂಬಲಿಸಿ: ಮಲ್ಲಿಕಾರ್ಜುನ ಖರ್ಗೆ

ಸೈದಾಪುರ ಬ್ಲಾಕ್‌ ಕಾಂಗ್ರೆಸ್ ಭವನಕ್ಕೆ ಅಡಿಗಲ್ಲು, ಜಿಲ್ಲಾ ಸಮಾವೇಶ
Last Updated 26 ಮಾರ್ಚ್ 2023, 9:08 IST
ಅಕ್ಷರ ಗಾತ್ರ

ಯಾದಗಿರಿ: ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲು ಕಾಂಗ್ರೆಸ್‌ ಬೆಂಬಲಿಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.

ತಾಲ್ಲೂಕಿನ ಸೈದಾಪುರ ಪಟ್ಟಣದಲ್ಲಿ ಬ್ಲಾಕ್‌ ಕಾಂಗ್ರೆಸ್ ಭವನಕ್ಕೆ ಅಡಿಗಲ್ಲು, ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಿಜೆಪಿ ಧರ್ಮ ಮತ್ತು ಜಾತಿ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ. ಇದರಿಂದ ಹೊಟ್ಟೆ ತುಂಬುವುದಿಲ್ಲ. ನಮ್ಮ ಕಾಂಗ್ರೆಸ್‌ ಸರ್ಕಾರದ ಸಾಧನೆಗಳು ಒಬ್ಬ ವ್ಯಕ್ತಿಗೆ ಸೀಮಿತವಾಗದೇ ಇಡೀ ದೇಶಕ್ಕೆ ಅನುಕೂಲವಾಗುತ್ತವೆ ಎಂದರು.

ಗುರುಮಠಕಲ್‌ ಕ್ಷೇತ್ರದ ಜನತೆ ಸತತ 8 ಬಾರಿ ಗೆಲ್ಲಿಸಿದ್ದರಿಂದ ಈ ಭಾಗಕ್ಕೆ ಶಾಶ್ವತ ಕೊಡುಗೆ ನೀಡಬೇಕು ಎಂದು ತೀರ್ಮಾನಿಸಿ ತಲೆತಲಾಂತರಕ್ಕೂ ಇರುವ ಯೋಜನೆ ಜಾರಿಗೆ ತಂದಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಿಗೆ ಅನುಕೂಲವಾಗಲಿ ಎಂದು ಕಲಂ 371(ಜೆ) ಜಾರಿಗೆ ತಂದೆವು. 371(ಜೆ) ಪ್ರಕಾರ‌ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಕಲ್ಯಾಣ ಕ‌ರ್ನಾಟಕದ ಭಾಗದ ಹೊರಗೆ ಶೇ 8 ಮೀಸಲಾತಿ‌ ಲಭ್ಯವಾಗುತ್ತದೆ. ಸೋನಿಯಾಗಾಂಧಿ ಹಾಗೂ ರಾಜೀವ್‌ಗಾಂಧಿ ಅವರ ಪ್ರಯತ್ನದಿಂದಾಗಿ ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರಲು ಅನುಕೂಲವಾಯಿತು ಎಂದು ತಿಳಿಸಿದರು.

₹460 ಕೋಟಿ‌ ಅನುದಾನ ನೀಡಿ ಯಾದಗಿರಿ ಬಳಿ ಬ್ರಿಜ್ ಕಂ ಬ್ಯಾರೆಜ್ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ್ದೇವೆ. ಆದರೆ‌, ಕೆಲವರು ನಮ್ಮ ಹೊಲದಲ್ಲಿ ಬೇಡ ಅನ್ನುತ್ತಿದ್ದಾರಂತೆ. ಸರ್ಕಾರ ಜಬರ್ದಸ್ತಿಯಿಂದ ಜಾರಿಗೊಳಿಸಬಹುದು. ಆದರೆ, ಅದು ಸರಿ ಇರಲ್ಲ ಮನವೊಲಿಸಿ ಜಾರಿಗೊಳಿಸಬೇಕು ಎಂದರು.

ನಮ್ಮ ಕಾಲದಲ್ಲಿ ಚಹಾ ಪಾನಿಯಲ್ಲೇ ಚುನಾವಣೆ ನಡೆಯಿತ್ತಿತ್ತು. ಈಗ ಬಾಬುರಾವ ಕಾಲದಲ್ಲಿ ಬದಲಾಗಿದೆ. ಮತದಾರರು ಎಷ್ಟು ಕೊಡುತ್ತೀರಿ ಎನ್ನುತ್ತಾರೆ. ಅವರು ಒಂದು ಕೇಳಿದರೆ ಬಾಬುರಾವ ಎರಡು ಕೊಡುತ್ತಾರೆ. ಆದರೆ, ಒಂದು ಎರಡು ಕೊಟ್ಟಿದ್ದು ಸ್ವಲ್ಪ ದಿನ ಮಾತ್ರ. ಮತದಾರರಿಗೆ ಕಾಯಂ ಅನುಕೂಲವಾಗುವಂತ ಕೆಲಸ ಮಾಡಬೇಕು. ನನ್ನ ಮತದಾರರು ಅದೃಶ್ಯ ಮತದಾರರು. ಅವರು ಬೇರೆಯವರಂತೆ ಚಪ್ಪಾಳೆ ತಟ್ಟುವವರಲ್ಲ. ಒಮ್ಮೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನಿಮ್ಮ ಮತದಾರರು ಯಾರು ಖರ್ಗೆ ಅವರೇ ಅಷ್ಟೊಂದು ಜೋಷ್‌ ಕಾಣುತ್ತಿಲ್ಲ ಎಂದಿದ್ದರು. ಆದರೆ, ಅವರು ಹಾಗೆ ಆದರೆ, ಕಾಂಗ್ರೆಸ್‌ಗೆ ಮತ ಒತ್ತುತ್ತಾರೆ ಎಂದಿದ್ದೆ. ನನಗೆ ಯಾವುದೇ ಆಸೆಗಳಿಲ್ಲ. 81 ವರ್ಷ ನಡೆದಿದೆ. ಆದರೆ ಜನರ ಪರವಾದ ಹೋರಾಟ ಮಾಡುತ್ತೇನೆ. ರಾಜ್ಯದ ಹಾಗೂ ದೇಶದ ಪರ ಹೋರಾಟ‌ ಮಾಡುತ್ತೇನೆ ಎಂದು ತಿಳಿಸಿದರು.

ಬಾಬುರಾವ ಚಿಂಚನಸೂರ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದಾರೆ. ಒಂದೇ ಪಕ್ಷದಲ್ಲಿ ಇರಬೇಕು. ನನಗೆ ಮುಖ್ಯಮಂತ್ರಿ ಪದವಿ ತಪ್ಪಿದರೂ ಯಾರ ವಿರುದ್ದ ಮಾತಾಡಿಲ್ಲ. ಹೀಗಾಗಿ ಬಾಬುರಾವ ನಷ್ಟವಾದರೂ ಸರಿ ಒಂದೇ ಕಡೆ ಇರಬೇಕು ಎಂದು ಖರ್ಗೆ ಸಲಹೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರ ಇದು. ರಾಜಕೀಯ ದುರುದ್ದೇಶದಿಂದ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ ಎಂದು ಹೇಳಿದರು.


ಐಸಿಸಿಸಿ ಕಾರ್ಯದರ್ಶಿ ಶ್ರೀಧರ ಬಾಬು ಮಾತನಾಡಿ, ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ಮೋದಿ ಅವರಿಗೆ ಗುಜರಾತ್‌ ಹೇಗೆ ಮುಖ್ಯವೋ‌ ಹಾಗೆ ಖರ್ಗೆ ಅವರಿಗೆ ಕಲ್ಯಾಣ ಕರ್ನಾಟಕ ಭಾಗ ಮುಖ್ಯ. ಚಿತ್ತಾಪುರದಲ್ಲಿ ಬಿಜೆಪಿ ನಿರ್ನಾಮವಾಗಿದೆ. ಪ್ರಿಯಾಂಕ್ ಖರ್ಗೆ ಎಷ್ಟು ಸಾವಿರ ಓಟುಗಳಿಂದ ಗೆಲ್ಲಲಿದ್ದಾರೆ ಎಂದು ಲೆಕ್ಕ ಹಾಕಬೇಕಿದೆ. ಕಾಂಗ್ರೆಸ್ ಪಕ್ಷದ‌ ಕೂದಲು ಕೋಂಕಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಪಕ್ಷ ನೆಲಕಚ್ಚಿದೆ. ಅವರು ಸುದರ್ಶನ ಚಕ್ರ ತಂದರೂ ಕಾಂಗ್ರೆಸ್‌ಗೆ ಏನು ಮಾಡಲಾಗದು ಎಂದರು.

ಇದೇ ವೇಳೆ ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು, ಶರಣಪ್ಪ ಸಲಾದಪುರ, ಶರಣಪ್ಪ ಮಾನಗೇರಾ ಮಾತನಾಡಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್‌ ವಕ್ತಾರ ಸ್ಯಾಂಸನ್ ಮಾಳಿಕೇರಿ ನಿರೂಪಿಸಿದರು.

ಶಾಸಕರಾದ ಶರಣಬಸಪ್ಪ ದರ್ಶನಾಪುರ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮುಖಂಡರಾದ ಡಾ.ಶರಣಪ್ರಕಾಶ ಪಾಟೀಲ, ಎ.ವಸಂತಕುಮಾರ, ಅಲ್ಲಂಪ್ರಭು ಪಾಟೀಲ, ಅಜಯಸಿಂಗ್‌, ಚನ್ನಾರೆಡ್ಡಿ ಪಾಟೀಲ ತುನ್ನೂರ, ಡೇವಿಡ್ ಸಿಮಿಯೋನ್, ಶರಣಕಕುಮಾರ ದೋಖಾ, ಡಾ.ಭೀಮಣ್ಣ ಮೇಟಿ, ಡಾ.ಕಾಮರೆಡ್ಡಿ, ಶರಣು ಮೋದಿ, ಮಹಿಪಾಲರೆಡ್ಡಿ ಹತ್ತಿಕುಣಿ, ಹಂಪನಗೌಡ ಬಾದರ್ಲಿ, ಚಿದಾನಂದಪ್ಪ ಕಾಳೆಬೆಳಗುಂದಿ, ವಿಶ್ವನಾಥ ನೀಲಹಳ್ಳಿ, ಕೃಷ್ಣಾ ಚಪೆಟ್ಲಾ, ಖನಿಜಾ ಫಾತೀಮಾ, ರಾಜಶೇಖರ ಪಾಟೀಲ ಹುಮನಾಬಾದ್ ಸೇರಿದಂತೆ ಗುರುಮಠಕಲ್‌ ಮತಕ್ಷೇತ್ರದ ಕಾರ್ಯಕರ್ತರು ಇದ್ದರು.

‘ಪ್ರತಿ ಬ್ಲಾಕ್‌ನಲ್ಲೂ ಕಾಂಗ್ರೆಸ್ ಹೋರಾಟ’

ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು, ಉತ್ತಮ ವಿರೋಧ ಪಕ್ಷ ಇರಬೇಕು ಎಂದಿದ್ದರು. ಆದರೆ, ಈಗಿನ ಸರ್ಕಾರದಲ್ಲಿ ವಿರೋಧ ಪಕ್ಷ ದುರ್ಬಲಗೊಳಿಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ರಾಹುಲ್‌ ಗಾಂಧಿಗೆ ಎರಡು ವರ್ಷದ ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಒಂದೇ ದಿನದಲ್ಲಿ ಅವರನ್ನು ಅನರ್ಹಗೊಳಿಸಿದರು. ಅವರನ್ನು ಸಂಸತ್ತಿನಿಂದ ಹೊರಗಿಡಬೇಕು ಎನ್ನುವ ಕುತಂತ್ರದಿಂದ ಇದನ್ನು ಮಾಡಿದ್ದಾರೆ. ಈ ಕುತಂತ್ರದ ವಿರುದ್ಧ ಹೋರಾಟ ಮಾಡುತ್ತೇವೆ. ಪ್ರತಿ ಬ್ಲಾಕ್‌ನಲ್ಲಿಯೂ ಕಾಂಗ್ರೆಸ್ ಹೋರಾಟ ಮಾಡುತ್ತೇವೆ. ನಾವೆಲ್ಲ ರಾಹುಲ್ ಜೊತೆಯಲ್ಲಿದ್ದೇವೆ. ಅವರು ಯಾರಿಗೂ ಹೆದರುವುದಿಲ್ಲ ಎಂದರು.

ಉದ್ಯಮಿ ಅದಾನಿಗೆ ಅನುಕೂಲವಾಗುವಂತ ಕಾನೂನುಗಳನ್ನು ಪ್ರಧಾನಿ ಮೋದಿ‌ ಜಾರಿಗೆ ತಂದಿದ್ದಾರೆ. ಮೋದಿ ಹಾಗೂ ಅದಾನಿ ಇಬ್ಬರು ಖಾಸಗಿ ವಿಮಾನದಲ್ಲೇ ಬಂದಿದ್ದಾರೆ ಯಾಕೆ? ಅದಕ್ಕೆ‌ ಉತ್ತರ ನಾವು ಕೇಳುತ್ತಿದ್ದೇವೆ. ಸಂಸತ್ತಿನಲ್ಲಿ ನಾವು ಮಾತನಾಡಬೇಕೆಂದರೆ‌ ಸಭೆ ಮುಂದೂಡುತ್ತಾರೆ. ನಾವು ಮಾತನಾಡಲು ಆಗದಂತೆ ವಾತಾವರಣ ನಿರ್ಮಿಸಲಾಗಿದೆ. ನಮ್ಮನ್ನು ಮಾತನಾಡದಂತೆ ಮಾಡಿ ಪ್ರಜಾತಂತ್ರ ವ್ಯವಸ್ಥೆ ಕೆಳಮಟ್ಟಕ್ಕೆ ಇಳಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಗುರುಮಠಕಲ್‌ ಮತಕ್ಷೇತ್ರದ ಮೆಲುಕು

ಭಾಷಣದ ಆರಂಭದಲ್ಲಿ ಗುರುಮಠಕಲ್‌ ಕ್ಷೇತ್ರದಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಕುರಿತು ಮಲ್ಲಿಕಾರ್ಜನ ಖರ್ಗೆ ಅವರು ಮೆಲುಕು ಹಾಕಿದರು.

1972 ರಲ್ಲಿ ಮೊದಲ ಬಾರಿಗೆ ಗುರುಮಠಕಲ್‌ನಲ್ಲಿ ನನಗೆ ಟಿಕೆಟ್ ನೀಡಲಾಗಿತ್ತು. ಆದರೆ‌, ನನಗೆ ಸೇಡಂನಲ್ಲಿ ಸ್ಪರ್ಧಿಸುವ ಆಸೆ ಇತ್ತು. ಆಗ ದೇವರಾಜ ಅರಸು ಅವರು ಗುರುಮಠಕಲ್‌ನಲ್ಲೇ ನಿಲ್ಲುವಂತೆ ಧೈರ್ಯ ಕೊಟ್ಟರು. ಗೆದ್ದರೆ ಸಚಿವ ಮಾಡುತ್ತೇನೆ ಎಂದು ಹೇಳಿದ್ದರು. ಈ ಭಾಗದಲ್ಲಿ ಪ್ರಭಾವಿ ವ್ಯಕ್ತಿಗಳಿದ್ದರೂ ಇಲ್ಲಿ ನನ್ನನ್ನು ಗೆಲ್ಲಿಸಿದರು ಎಂದು ಸ್ಮರಿಸಿದರು.

ಈ ಭಾಗದ130 ಹಳ್ಳಿಗಳ ಪೈಕಿ ಕೇವಲ 5 ಹಳ್ಳಿಗೆ ಮಾತ್ರ ವಿದ್ಯುತ್‌ ಸೌಲಭ್ಯ ಇತ್ತು. ಹಂತಹಂತವಾಗಿ ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಾಧ್ಯವಾಯಿತು ಎಂದು ಇಲ್ಲಿನ ಜನರು ನನ್ನನ್ನು ಬೆಂಬಲಿಸಿ 8 ಸಲ ಗೆಲ್ಲಿಸಿದರು. ಅವರ ಆಶೀರ್ವಾದದಿಂದಾಗಿ ನಾನು ಎಐಸಿಸಿ ಅಧ್ಯಕ್ಷನಾದೆ ಎಂದು ಮತದಾರರಿಗೆ ಧನ್ಯವಾದ ಅರ್ಪಿಸಿದರು.

‘ಕಾಂಗ್ರೆಸ್ ಬಾವುಟ ಕ್ಷೇತ್ರದಲ್ಲಿ ಹಾರಾಡಲಿ‘

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಕಟ್ಟಡವಲ್ಲ. ಅದು ದೇವಸ್ಥಾನ ಇದ್ದಂತೆ. ತೊಂದರೆಯಾದವರಿಗೆ ಇದು ಪವಿತ್ರವಾದ ದೇವಾಲಯ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ವಾರ್ಷಿಕ ₹5,000 ಕೋಟಿ ಬಿಡುಗಡೆ ಮಾಡುವ ವಾಗ್ಧಾನ ಮಾಡಿದ್ದೇವೆ. ಕಾಂಗ್ರೆಸ್ ಈ ದೇಶದ ಶಕ್ತಿ. ಕಾಂಗ್ರೆಸ್ ಪಕ್ಷ ಎಂದರೆ ಭರವಸೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿದೆ. ಬಿಸಿಯೂಟ, ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಬಹುತೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್. ನಿಮಗೆ ಮೀಸಲಾತಿ ಕೊಟ್ಟು ಬಡವರ ಮಕ್ಕಳು ಎಂಜಿನಿಯರ್ ಆಗಲು ಅನುಕೂಲ ಮಾಡಿಕೊಟ್ಟಿದ್ದೇ ಕಾಂಗ್ರೆಸ್. ಇದು ಡಾ.ಬಿ.ಆರ್‌. ಅಂಬೇಡ್ಕರ್‌ ಕನಸು ಅದು ನನಸಾಗಿದೆ ಎಂದು ಹೇಳಿದರು.

ಸೈದಾಪುರದಲ್ಲಿ ನಿರ್ಮಾಣವಾಗಲಿರುವ ಕಾಂಗ್ರೆಸ್ ಕಚೇರಿಗೆ ₹25 ಲಕ್ಷ ಕೊಡಲಿದ್ದೇವೆ. ರಾಹುಲ್ ಗಾಂಧಿ ಅವರ ಧ್ವನಿ ಹತ್ತಿಕ್ಕಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯನ್ನು ದೂರವಿಡಲು ಎಚ್‌.ಡಿ. ಕುಮಾರಸ್ವಾಮಿಗೆ ಅಧಿಕಾರ‌ ಬಿಟ್ಟುಕೊಟ್ಟೆವು. ಆದರೆ, ಅವರು ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಮತ್ತೆ ಈಗ ಜೆಡಿಎಸ್ ಅಧಿಕಾರಕ್ಕೆ ಬರಲ್ಲ. ಮುಂದೆ ಅಧಿಕಾರಕ್ಕೆ‌ ಬರಲ್ಲ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮತದಾರರು ಖರ್ಗೆ ಅವರಿಗೆ ಶಕ್ತಿ ನೀಡಿ ಗುರಮಠಕಲ್‌ನಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ‌ ತಾವು ಬಡವರು ಎನ್ನುತ್ತಾರೆ. ಅವರಿಗಿಂತ ಬಡವ ನಾನಿದ್ದೇನೆ. ಅವರು ಚಹಾ‌ ಮಾರಿರುವುದಾಗಿ ಹೇಳಿದ್ದಾರೆ. ಅವರು ಮಾರುವ ಚಹ ಕುಡಿಯಲು ಯಾರಾದರೂ ಬರುತ್ತಾರೆ. ನನ್ನ ಜಾತಿ ತಿಳಿದರೆ‌ ನನ್ನ ಬಳಿ ಯಾರು ಚಹ ಕುಡಿಯಲು ಬರುತ್ತಾರೆ. ಎಲ್ಲರೂ ಮೋದಿ ಬಳಿ ಹೋಗುತ್ತಾರೆ
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT