ಯಾದಗಿರಿ: ಜಿಲ್ಲೆಯಲ್ಲಿ ಅಕ್ರಮ ಮರಳು ಕುರಿತು ನಿತ್ಯ ದೂರುಗಳು ಬರುತ್ತಿವೆ. ಅಧಿಕಾರಿಗಳು, ಜಿಲ್ಲಾಮಟ್ಟದ ಸಮಿತಿ ಜಾಗೃತವಾಗಿದ್ದರೆ ಸಾರ್ವಜನಿಕರಿಂದ ದೂರು ಏಕೆ ಬರುತ್ತದೆ? ಅಧಿಕಾರಿಗಳು ಸಮಪರ್ಕವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ ಎಂಬುದಾಗಿ ಸಾರ್ವಜನಿಕರೇ ಬಹಿರಂಗವಾಗಿ ದೂರು ನೀಡುತ್ತಿದ್ದಾರೆ. ಇದು ಯಾರ ಜವಾಬ್ದಾರಿ? ಕರ್ತವ್ಯದಲ್ಲಿ ನಿಷ್ಠೆ ತೋರದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು..
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಮರಳು ನಿಯಂತ್ರಣ ಸಮಿತಿ ಸಭೆ, ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು ಹೀಗೆ.
‘ಅಕ್ರಮ ಮರಳುಗಾರಿಕೆ ತಡೆಯಲು ಕೇವಲ ಸಮಿತಿ ಸಭೆ ನಡೆಸಿದರೆ ಪ್ರಯೋಜನವಿಲ್ಲ. ಅದರಲ್ಲಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ತಹಶೀಲ್ದಾರ್‌ಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಇದೆ. ಇದು ಕೇವಲ ಜಿಲ್ಲಾಡಳಿತದ ಕೆಲಸವಲ್ಲ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುವವರು ಕ್ರಮ ಎದುರಿಸಬೇಕಾದೀತು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
‘ಅಕ್ರಮ ಮರಳು ಸಾಗಣೆ ಬಗ್ಗೆ ದೂರು ಬಂದಾಗ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ನೆಪ ಹೇಳುವಂತಾಗಬಾರದು. ಮರಳು ಅಕ್ರಮ ಸಾಗಣೆ ತಡೆಯುವಲ್ಲಿ ಈ ಎಲ್ಲಾ ಅಧಿಕಾರಿಗಳ ಪಾತ್ರ ಮತ್ತು ಅವರ ಅಧಿಕಾರದ ವ್ಯಾಪ್ತಿ ಏನೆಂಬುದನ್ನು ಸಭೆಯ ನಡಾವಳಿಯಲ್ಲಿ ಸೂಚಿಸಬೇಕು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಮುಷ್ಟಳ್ಳಿ, ಬೇವಿನಾಳ, ಗೌಡೂರು ಮರಳು ಬ್ಲಾಕ್‌ನಲ್ಲಿ ಸಿ.ಸಿ ಟಿವಿ ಕ್ಯಾಮೆರಾ, ವಾಹನ ತೂಕ ಮಾಡುವ ವೇಬ್ರಿಡ್ಜ್ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಪ್ರಥಮ ಹಂತವಾಗಿ ಶೆಳ್ಳಗಿ ಕ್ರಾಸ್ ಮತ್ತು ಹತ್ತಿಗುಡೂರ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಬೇಕು ಎಂದು ಸೂಚಿಸಿದರು. ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಕಾರ್ಯನಿರ್ವಹಣೆಯ ತಪಾಸಣೆ ಜವಾಬ್ದಾರಿಯನ್ನು ತಹಶೀಲ್ದಾರ್‌ರಿಗೆ ವಹಿಸಿದರು.
ಜಿಪಿಎಸ್ ಅಳವಡಿಕೆ:
ಪರವಾನಗಿ ಪಡೆದು ಮರಳು ಸಾಗಣೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ 15 ದಿನಗಳಲ್ಲಿ ಜಿಪಿಎಸ್ ಅಳವಡಿಸಬೇಕು. ಜಿಪಿಎಸ್ ಅಳವಡಿಸಿದ ವಾಹನಗಳು ಅತಿಯಾದ ಮರಳು ತುಂಬಿ ಸಾಗಣೆ ಮಾಡುವುದು ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಅಂತಹ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸೂಚಿಸಿದರು.
‘ಮರಳು ಸಾಗಣೆ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಬಗ್ಗೆ ಮಾಹಿತಿ ನೀಡಿದ ರಾಣೆ ಟಿ4ಯು ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಸಂದೀಪ್ ಪಾಟೀಲ್, ಜಿಪಿಎಸ್ ಅಳವಡಿಸಿದ ವಾಹನ ನಿರ್ದಿಷ್ಟ ಜಿಲ್ಲೆಯ ಹೊರತು ಬೇರೆ ಕಡೆ ಸಂಚರಿಸಿದರೆ ಎಚ್ಚರಿಕೆ ಸಂದೇಶ ಬರುತ್ತದೆ. ಮರಳು ಸಾಗಣೆ ಡಾಟಾ ಎರಡು ವರ್ಷಗಳವರೆಗೆ ಸಿಗುತ್ತದೆ. ಸಾರ್ವಜನಿಕರು ಕೂಡ ಮೊಬೈಲ್ ಆ್ಯಪ್‌ನಲ್ಲಿ ವಾಹನ ಸಂಖ್ಯೆ ನಮೂದಿಸಿ, ಮರಳು ಸಾಗಣೆ ಮಾಹಿತಿ ಪಡೆಯಬಹುದು’ ಎಂದರು. ಆಗ ಜಿಲ್ಲಾಧಿಕಾರಿ ಮಾತನಾಡಿ, ಅಕ್ರಮ ಮರಳುಗಾರಿಕೆ ತಡೆಗೆ ಜಿಪಿಎಸ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಸಿಫ್‌ವುಲ್ಲಾ ಮಾತನಾಡಿ,‘ಜಿಲ್ಲೆಯಲ್ಲಿ ಮರಳು ತೆಗೆಯಲು ಗುರುತಿಸಿದ್ದ ಒಟ್ಟು 12 ಬ್ಲಾಕ್‌ಗಳಲ್ಲಿ 6 ಬ್ಲಾಕ್‌ಗಳು ತಿರಸ್ಕೃತವಾಗಿವೆ. ಯಕ್ಷಿಂತಿ ಮತ್ತು ಸುಗೂರು ಗ್ರಾಮದ ಮರಳು ಬ್ಲಾಕ್‌ಗಳನ್ನು ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಕೆಆರ್‌ಐಡಿಎಲ್ (ಭೂಸೇನಾ)ಗೆ ನೀಡಲಾಗಿದೆ. ಪರವಾನಗಿ ನೀಡಿದ 4 ಮರಳು ಬ್ಲಾಕ್‌ಗಳಲ್ಲಿ ಮುಷ್ಟಳ್ಳಿ, ಬೇವಿನಾಳ, ಗೌಡೂರು ಚಾಲ್ತಿಯಲ್ಲಿವೆ’ ಎಂದು ಸಭೆಗೆ ಮಾಹಿತಿ ನೀಡಿದರು.
ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ರವಿಶಂಕರ, ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಶಹಾಪುರ ತಹಶೀಲ್ದಾರ್ ಸಂಗಮೇಶ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ವಿ.ಎಸ್.ಮಗಿ, ಭೂ ವಿಜ್ಞಾನಿ ಕಿರಣ್ ಸಭೆಯಲ್ಲಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.