ಭಾನುವಾರ, ಅಕ್ಟೋಬರ್ 24, 2021
25 °C

ಅಧಿಕಾರಿಗಳಿಗೆ ಹೀರೊ ಆಗೋ ಹುಚ್ಚು: ದೇವಸ್ಥಾನಗಳ ತೆರವಿಗೆ ಶಾಸಕ ರಾಜೂಗೌಡ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ‘ಮೈಸೂರು ಜಿಲ್ಲೆಯಲ್ಲಿ ದೇವಾಲಯ ತೆರವು ಮಾಡಿದ ಅಧಿಕಾರಿಗಳಿಂದಲೇ ದೇವಾಲಯ ಕಟ್ಟಿಸಬೇಕು. ಅಧಿಕಾರಿಗಳಿಗೆ ಮಾಧ್ಯಮದವರ ಎದುರು ಬಂದು ಹೀರೊ ಆಗೋ ಹುಚ್ಚು ಇದೆ. ಹೀಗಾಗಿ ಇಂಥ ಕೃತ್ಯಗಳನ್ನು ಮಾಡುತ್ತಿದ್ದಾರೆ’ ಎಂದು ಶಾಸಕ ರಾಜೂಗೌಡ ಹೇಳಿದರು.

‘ಪುರಾತನ ದೇವಾಲಯಗಳನ್ನು ತೆರವು ಮಾಡುವ ವೇಳೆ ಪುರಾತನ ದೇವಾಲಯ ಎಂದು ಮನವರಿಕೆ ಮಾಡುವುದು ಸಂಸದ ಪ್ರತಾಪ್ ಸಿಂಹ ಅವರ ಆದ್ಯ ಕರ್ತವ್ಯ. ಬಿಜೆಪಿ ಸರ್ಕಾರ ಅಂತ ಏನೂ ಇಲ್ಲ. ಲಿಪಿ ಸಿಕ್ಕಿವೆ, ನಮ್ಮ ಕ್ಷೇತ್ರದಲ್ಲಿಯೂ ಸಿಕ್ಕಿದೆ. ನಾವು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ. ದೇವಾಲಯ ತೆರವುಗೊ ಳಿಸಿರುವುದು ತಪ್ಪು’ ಎಂದು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಕೆಲವು ಅಧಿಕಾರಿಗಳಿಗೆ ಮಾಧ್ಯಮಗಳಲ್ಲಿ ಹೀರೊ ಆಗಬೇಕೆಂದು ಹುಚ್ಚು ಬಂದಿದೆ. ಅದಕ್ಕಾಗಿ ಹೀಗೆಲ್ಲ ತೀರ್ಮಾನ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕೇವಲ ಕಾಟಾಚಾರಕ್ಕೆ ನೋಟಿಸ್ ನೀಡಿದರೆ ಸಾಲದು. ಕೆಲವೊಂದು ಸರ್ಕಾರಿ ಕಟ್ಟಡಗಳನ್ನು ಸರಿಯಾಗಿ ಕಟ್ಟದೆ ಇದ್ದಾಗ ಕಟ್ಟಡದ ಖರ್ಚನ್ನು ಅವರ ಮೇಲೆ ಹಾಕುತ್ತೇವೆ. ಅದೇ ರೀತಿ ಈ ದೇವಾಲಯದ ಕಟ್ಟುವ ಖರ್ಚನ್ನು ಅಧಿಕಾರಿಗಳಿಂದ ವಸೂಲಿ ಮಾಡಬೇಕು’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿ ಖಡಕ್ ಇದ್ದಾರೆ. ಅಧಿಕಾರಿಗಳೊಂದಿಗೆ ನಡೆದುಕೊಳ್ಳುವ ರೀತಿ ಬರುವ ದಿನಗಳಲ್ಲಿ ಗೊತ್ತಾಗುತ್ತದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಬರುವ ಹಾಗಿಲ್ಲ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಸ್ಪೀಕರ್ ಆದೇಶ ಮಾಡಿದ್ದಾರೆ’ ಎಂದರು.

ಶಹಾಪುರ‌ದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಅತ್ಯಾಚಾರಿಗಳಿಗೆ ಹೈದಾರಾಬಾದ್‌ನಲ್ಲಿ ವಿಶ್ವನಾಥ್ ಸಜ್ಜನ್‌ ಅವರು ಮಾಡಿದಂತೆ ಮಾಡಬೇಕು’ ಎಂದು ಅತ್ಯಾಚಾರಿಗಳನ್ನು ಎನ್‌ಕೌಂಟರ್‌ ಮಾಡುವುದೇ ಉತ್ತಮ ಎಂದು ಪರೋಕ್ಷವಾಗಿ ಹೇಳಿದರು.

‘ವಿಡಿಯೊ ನೋಡಿದ ನಂತರ ನಾವು ಮನುಷ್ಯರ ಜತೆ ಇದ್ದೆವೋ, ಮೃಗಗಳ ಜೊತೆ ಇದ್ದೆವೋ ಎಂಬುದು ಗೊತ್ತಾಗುತ್ತಿಲ್ಲ. ಮೃಗಗಳು ಈ ರೀತಿ ನಡೆದುಕೊಳ್ಳುವುದಿಲ್ಲ. ನಾನೊಬ್ಬ ಶಾಸಕನಾಗಿ ಈ ಮಾತನ್ನು ಹೇಳಬಾರದು. ಆದರೆ, ಅನಿವಾರ್ಯ ವಾಗಿ ಹೇಳಬೇಕಾಗುತ್ತದೆ’ ಎಂದರು.

‘ಆರೋಪಿಗಳು ಮಾಡಿದ್ದು ನೇರವಾಗಿ ನಿರ್ಭಯವಾಗಿ ಹೇಳುತ್ತಿದ್ದಾರಂತೆ. ಇದನ್ನೆಲ್ಲ ನೋಡಿದರೆ ನಮ್ಮ ವೈಫಲ್ಯ ಕಾಣಿಸುತ್ತದೆ. ಯಾರು ಯಾವ ರೀತಿ ಇರಬೇಕೋ ಹಾಗೆ ಇದ್ದರೆ ಭಯ ಇರುತ್ತದೆ. ಇನ್ಸ್‌ಪೆಕ್ಟರ್ ಇನ್ಸ್‌ಪೆಕ್ಟರ್ ಆಗಿನೇ ಇರಬೇಕಾಗತ್ತದೆ. ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ತಲೆ ತಗ್ಗಿಸುವ ವಿಚಾರ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು