ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಅಭಿವೃದ್ಧಿ ನಿರೀಕ್ಷೆಯಲ್ಲಿ ಸ್ಮಾರಕಗಳು

Published 8 ನವೆಂಬರ್ 2023, 4:45 IST
Last Updated 8 ನವೆಂಬರ್ 2023, 4:45 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಅನೇಕ ಇತಿಹಾಸ ಹಾಗೂ ನಿಸರ್ಗದ ತಾಣಗಳು ಅಭಿವೃದ್ಧಿ ನಿರೀಕ್ಷೆಯಲ್ಲಿಯೇ ಹಲವು ವರ್ಷ ಸಂದಿವೆ. ನಿರೀಕ್ಷಿತ ಮಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ಕೆಲಸಗಳನ್ನು ಕೈಗೆತ್ತಿಕೊಂಡಿಲ್ಲ ಎಂಬ ಆರೋಪ ಇದೆ.

ಬುಧವಾರ(ನ.8) ತಾಲ್ಲೂಕಿನ ಶಿರವಾಳ ಹಾಗೂ ಶಹಾಪುರ ನಗರಕ್ಕೆ ಭೇಟಿ ನೀಡಲಿರುವ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಗಮನಹರಿಸಿ ಸ್ಮಾರಕಗಳ ಅಭಿವೃದ್ಧಿಗೆ ಮುಂದಾಗಬೇಕು ಎಂಬ ಕೂಗು ಜನರದ್ದಾಗಿದೆ.

‘ಶಿರವಾಳ ಗ್ರಾಮವು ಹಲವಾರು ಶಿಲಾ ಶಾಸನಗಳನ್ನು ಹೊಂದಿದೆ. ಗ್ರಾಮದಲ್ಲಿ ಸುಮಾರು 100ಕ್ಕೂ ಹೆಚ್ಚು ಸ್ಮಾರಕಗಳು ಇದ್ದು ಅದರಲ್ಲಿ 25 ಸುಸ್ಥಿತಿಯಲ್ಲಿವೆ. 11 ಶಾಸನಗಳಿವೆ. 2000 ವರ್ಷಕ್ಕೂ ಹಳೆಯದಾದ ಬ್ರಾಹ್ಮಿ ಶಾಸನ ಇಲ್ಲಿದೆ. ಅಪರೂಪದ ಪಂಚಕೂಟ ದೇಗುಲ. ಶಾಂತವಾಹನರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಯಾದವರು ಕಾಲದ ಶಾಸನಗಳು ಕಾಣಸಿಗುತ್ತವೆ. ಹಲವಾರು ಸ್ಮಾರಕಗಳು ಸಂರಕ್ಷಣೆ ಇಲ್ಲದೆ ಹಾಳಾಗಿವೆ. ತುರ್ತಾಗಿ ಸಂರಕ್ಷಣೆಗೆ ಮುಂದಾಗಬೇಕು. ಹೆಚ್ಚಿನ ಪ್ರಚಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲದೆ ಶಿರವಾಳ ಸ್ಮಾರಕಗಳನ್ನು ಭಾರತೀಯ ಪುರಾತತ್ವ ಸ್ಮಾರಕಗಳ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು’ ಎನ್ನುತ್ತಾರೆ ಶಿಲಾ ಶಾಸನಗಳ ಸಂಶೋಧಕ ಡಾ.ಎಂ.ಎಸ್. ಶಿರವಾಳ.

ತಾಲ್ಲೂಕಿನಲ್ಲಿ ಹಲವಾರು ಇತಿಹಾಸ ಸ್ಮಾರಕ ಹಾಗೂ ನಿಕ್ಷೇಪಗಳು ಇವೆ. ಪ್ರಚಾರದ ಕೊರತೆಯಿಂದ ದೂರ ಉಳಿದಿವೆ. ಅಲ್ಲಿನ ಪ್ರದೇಶಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಸೋತಿದೆ.
ಭಾಸ್ಕರರಾವ ಮುಡಬೂಳ, ಇತಿಹಾಸ ಸಂಶೋಧಕ ಶಹಾಪುರ

‘ನೋಡುಗರ ಕಣ್ಣುಗಳಲ್ಲಿ ಶೋಧನೆಯ ತುಡಿತವಿದ್ದರೆ ಗುಡ್ಡದ ಕಲ್ಲು ಬಂಡೆಗಳ ನಡುವೆ ವಸ್ತುಗಳನ್ನು ಕಾಣಲು ಸಾಧ್ಯ. ಶಹಾಪುರ- ಭೀಮರಾಯನಗುಡಿ ಮಧ್ಯದ ನಗರದಿಂದ 2 ಕಿ.ಮೀ ಅಂತರದಲ್ಲಿ ಸಾಲು ಬಂಡೆಗಳ ನಡುವೆ ಬುದ್ಧನ ಕಿವಿ, ಮೂಗು, ದೇಹವು ಮಲಗಿದಂತೆ ಕಾಣುತ್ತಾ ನಮಗರಿವಿಲ್ಲದೆ ಬುದ್ಧ ನಮ್ಮೊಳಗೆ ಮೂಡುತ್ತಾನೆ. ಅಂದಿನ ಸುರಪುರದ ರಂಗರಾವ ಬಡಶೇಷಿ ಇದನ್ನು ಶೋಧನೆ ಮಾಡಿದ್ದರು. ನಿಸರ್ಗ ತಾಣದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 2005ರಲ್ಲಿ ₹4.5 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಅದರಲ್ಲಿ 4.25 ಗುಂಟೆ ಜಮೀನು ಭೂ ಸ್ವಾಧೀನಪಡಿಸಿಕೊಂಡು ಅಗತ್ಯ ಸೌಲಭ್ಯಗಳನ್ನು ಒದಗಿಸುವ ರೂಪುರೇಷಗಳನ್ನು ಸಿದ್ಧಪಡಿಸಿತು. ಆದರೆ ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿ ಕೆಲಸಗಳನ್ನು ಆಮೆಗತಿಯಲ್ಲಿ ನಡೆದಿದೆ’ ಎನ್ನುತ್ತಾರೆ ಬುದ್ಧ ಪಾರಂಪರಿಕ ತಾಣ ಹಾಗೂ ಪರಿಸರ ಸಂರಕ್ಷಣೆಯ ಹೋರಾಟ ಸಮಿತಿ ಮುಖಂಡ ಬುದ್ಧಘೋಷ ದೇವಿಂದ್ರ ಹೆಗಡೆ.

‘ನಗರದಲ್ಲಿನ ಶಹಾಪುರ ಅಗಸಿ(ಕೋಟೆ) ಅವನತಿಯ ಅಂಚಿನಲ್ಲಿ ಸಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೋಟೆಯ ಕಲ್ಲುಗಳು ನೆಲಕ್ಕುರುಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ರಸ್ತೆ ಸಂಚಾರವನ್ನು ಬಂದ್‌ ಮಾಡಲಾಗಿದೆ. ಸುರಪುರ ಸಂಸ್ಥಾನದ ರಾಜಾ ಪಾಮಾ ನಾಯಕ ಅರಸು ನಿರ್ಮಿಸಿದ (1674-1693) ಅವಧಿಯ ಕೋಟೆ ಭವ್ಯ ಇತಿಹಾಸವನ್ನು ಹೊಂದಿದೆ. ಕೋಟೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸಂರಕ್ಷಣೆ ಮಾಡಬೇಕು’ ಎನ್ನುತ್ತಾರೆ ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ.

‘ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಯ ತಟದಲ್ಲಿ ವಜ್ರದ ನಿಕ್ಷೇಪಗಳು ಇರುವ ಬಗ್ಗೆ ಸಂಶೋಧನೆಯಿಂದ ತಿಳಿದು ಬಂದಿದೆ. ಸರ್ಕಾರ ಒಡೆತನದ 8.19 ಎಕರೆ ಜಮೀನು ಸದ್ಬಳಕೆ ಮಾಡಿಕೊಂಡು ಕೃತಕ ವಜ್ರ ವಸ್ತುವನ್ನು ನಿರ್ಮಿಸಿ ಸ್ಮಾರಕ ನಿರ್ಮಿಸಬೇಕು’ ಎಂಬುದು ಜನರ ಮನವಿಯಾಗಿದೆ.

ಶಹಾಪುರ ತಾಲ್ಲೂಕಿನ ಶಿರವಾಳ ದೇಗುಲದ ಮೇಲೆ ತ್ಯಾಜ್ಯ ವಸ್ತು ಎಸೆದಿರುವುದು
ಶಹಾಪುರ ತಾಲ್ಲೂಕಿನ ಶಿರವಾಳ ದೇಗುಲದ ಮೇಲೆ ತ್ಯಾಜ್ಯ ವಸ್ತು ಎಸೆದಿರುವುದು
ಶಹಾಪುರ ನಗರದ ದಿಗ್ಗಿ ಅಗಸಿ(ಕೋಟೆ)
ಶಹಾಪುರ ನಗರದ ದಿಗ್ಗಿ ಅಗಸಿ(ಕೋಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT