ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿಗಳಿಗೇ ಲಾಭ ತಂದ ಹೆಸರು ಖರೀದಿ ಕೇಂದ್ರಗಳು

ಜಿಲ್ಲೆಯಲ್ಲಿ 10 ಖರೀದಿ ಕೇಂದ್ರ ಸ್ಥಾಪನೆ; ಈಗಾಗಲೇ ಮಾರಾಟ ಮಾಡಿ ಕೈ ತೊಳೆದುಕೊಂಡ ರೈತರು
Last Updated 16 ಅಕ್ಟೋಬರ್ 2019, 11:02 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಹೆಸರು ಕಾಳನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರಖರೀದಿ ಕೇಂದ್ರಗಳನ್ನು ತಡವಾಗಿ ತೆರೆದಿದ್ದರಿಂದ, ಇವು ರೈತರ ಬದಲಾಗಿ ಮಧ್ಯವರ್ತಿಗಳಿಗೇ ಹೆಚ್ಚು ಲಾಭ ತಂದುಕೊಡುತ್ತಿವೆ.

ಜಿಲ್ಲೆಯಲ್ಲಿ ಹಂಗಾರು ಹಂಗಾಮಿನಲ್ಲಿ ಸುಮಾರು21,308 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಪ್ರತಿ ಹೆಕ್ಟೇರ್‌ಗೆ ಸರಿಸುಮಾರು 8ರಿಂದ 10 ಕ್ವಿಂಟಲ್‌ ಇಳುವರಿ ಬಂದಿದೆ. ಸೆಪ್ಟೆಂಬರ್‌ ಮಧ್ಯದಲ್ಲೇ ಬಹುಪಾಲು ರೈತರು ಕೈಸಾಲ ತೀರಿಸಿಕೊಳ್ಳಲು ಉತ್ಪನ್ನ ಮಾರಿಬಿಟ್ಟಿದ್ದಾರೆ. ಅಲ್ಲಲ್ಲಿ ಕೆಲವು ರೈತರು ಮಾತ್ರ ಹಾಗೇ ಇಟ್ಟುಕೊಂಡಿದ್ದಾರೆ.

ಈಗ ಜಿಲ್ಲಾಡಳಿತ ವಿವಿಧೆಡೆ 10 ಖರೀದಿ ಕೇಂದ್ರಗಳನ್ನು ತೆರೆದಿದೆ. ಇದರಲ್ಲಿ ಆರು ಕೇಂದ್ರಗಳಲ್ಲಿ ಮಾತ್ರ ರೈತರು ನೋಂದಣಿ ಮಾಡಿಕೊಂಡಿದ್ದು, ಉಳಿದ ನಾಲ್ಕು ಕೇಂದ್ರಗಳಲ್ಲಿ ಸಿಬ್ಬಂದಿ ನೊಣ ಹೊಡೆಯುವ ಸ್ಥಿತಿ ಇದೆ.

‘ಈಗಾಗಲೇ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ರೈತರಿಗೆ ‘ಬಿಳಿ ಚೀಟಿ’ ನೀಡಿ ಕನಿಷ್ಠ 100ರಿಂದ ಗರಿಷ್ಠ 300 ಚೀಲ ಹೆಸರುಕಾಳು ಸಂಗ್ರಹಿಸಿದ್ದಾರೆ. ಈಗ ತೆರೆದ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲೇ ಮಾರಾಟ ಮಾಡಿ,ಪರೋಕ್ಷವಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಖರೀದಿ ಕೇಂದ್ರಗಳ ಬಗ್ಗೆ ಜಿಲ್ಲಾಡಳಿತ ಸೂಕ್ತ ಪ್ರಚಾರ ಮಾಡಿಲ್ಲ. ಕಾರಣ, ಈಗಲೂ ರೈತರು ತಮ್ಮ ಉತ್ಪನ್ನವನ್ನು ಮಧ್ಯವರ್ತಿಗಳಿಗೇ ಮಾರುತ್ತಿದ್ದಾರೆ’ ಎಂದುನವ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಾರೆಡ್ಡಿ ಗೌಡ ಗುರುಸಣಗಿ ಹೇಳುತ್ತಾರೆ.

ಅವಧಿ ವಿಸ್ತರಿಸಿದರೂ ಪ್ರಯೋಜನವಿಲ್ಲ:ಈ ಮುಂಚೆ ಸರ್ಕಾರ ಅ.10ರವರೆಗೆ ಮಾತ್ರ ಹೆಸರುಕಾಳು ಖರೀದಿ ಮಾಡುವುದಾಗಿ ತಿಳಿಸಿತ್ತು. ಆದರೆ, ನಿರೀಕ್ಷೆಯಷ್ಟು ರೈತರು ನೋಂದಣಿ ಮಾಡಿಕೊಳ್ಳದ ಕಾರಣ ಖರೀದಿ ಅವಧಿಯನ್ನು ಅ.19ರವರೆಗೆ ವಿಸ್ತರಿಸಿದೆ. ಆದರೂ ರೈತರು ನೋಂದಣಿಗೆ ಮುಂದಾಗಿಲ್ಲ.

ಪ್ರತಿ ರೈತನಿಂದ ಕೇವಲ ನಾಲ್ಕು ಕ್ವಿಂಟಲ್‌ ಖರೀದಿಸಲು ಸರ್ಕಾರ ಮಿತಿ ಹೇರಿದ್ದು ಕೂಡ ಈ ನಿರಾಸಕ್ತಿಗೆ ಕಾರಣ ಎಂದುಎಪಿಎಂಸಿ ಮೂಲಗಳು ತಿಳಿಸುತ್ತವೆ. ಸಾಮಾನ್ಯವಾಗಿ ರೈತರು ಪ್ರತಿ ಹೆಕ್ಟೇರ್‌ಗೆ 8ರಿಂದ 10 ಕ್ವಿಂಟಲ್‌ ಉತ್ಪನ್ನ ಪಡೆದಿದ್ದಾರೆ. ನಾಲ್ಕೇ ಕ್ವಿಂಟಲ್‌ಗಾಗಿ ಖರೀದಿ ಕೇಂದ್ರದ ಬಾಗಿಲ ಬಳಿ ಕಾಯುತ್ತ ಕುಳಿತುಕೊಳ್ಳಬೇಕೇ ಎಂಬ ಪ್ರಶ್ನೆಯೂ ಅವರನ್ನು ಕಾಡುತ್ತಿದೆ. ಉಳಿದ ಹೆಸರುಕಾಳಿಗೆ ಮತ್ತೆ ಮಧ್ಯವರ್ತಿಗಳೇ ಗತಿ ಎನ್ನುವಂತಾಗಿದೆ.

ಕೃಷ್ಣಾ ಮತ್ತು ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಬಹುಪಾಲು ರೈತರು ನಲುಗಿದ್ದಾರೆ. ಈಗ ಖರೀದಿ ಕೇಂದ್ರದ ತಪ್ಪು ನಿರ್ಧಾರದಿಂದಾಗಿ ಮತ್ತೆ ಮಧ್ಯವರ್ತಿಗಳ ‘ಬಲ’ದಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಪ್ರತಿ ಕ್ವಿಂಟಲ್‌ಗೆ ₹1000 ರಿಂದ ₹2000 ನಷ್ಟ ಅನುಭವಿಸುತ್ತಿದ್ದಾರೆ.

***

ರೈತರು ಹೆಸರು ಕಾಳು ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿ ಲಾಭ ಪಡೆದುಕೊಳ್ಳಬೇಕು. ಅ. 19ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಮಧ್ಯವರ್ತಿಗಳಿಗೆ ಮಾರಬೇಡಿ
– ಎಂ.ಭೀಮರಾಯ
ಸಹಾಯಕ ನಿರ್ದೇಶಕ, ಎಪಿಎಂಸಿ.

***

ಸರ್ಕಾರ ಹೆಸರುಕಾಳು ಖರೀದಿ ಕೇಂದ್ರವನ್ನು ತಡವಾಗಿ ಆರಂಭಿಸಿದೆ. ಈಗ ಹಲವಾರು ರೈತರು ಮಾರಾಟ ಮಾಡಿಕೊಂಡಿರುವುದರಿಂದ ಉಪಯೊಗವಿಲ್ಲ
– ಶರಣಗೌಡ ಕಾಳಬೆಳಗುಂದಿ
ಅಧ್ಯಕ್ಷ, ಎಪಿಎಂಸಿ.

***

ಬಡ ರೈತರು ತಮ್ಮ ಸಾಲ ತೀರಿಸಲು ಹೆಸರುಕಾಳು ಮಾರಾಟ ಮಾಡಿದ್ದಾರೆ. ಸರ್ಕಾರ ಆಗಸ್ಟ್‌ ತಿಂಗಳಲ್ಲೇ ಖರೀದಿ ಕೇಂದ್ರ ಆರಂಭಿಸಿದ್ದರೆ ಅನುಕೂಲ ಆಗುತ್ತಿತ್ತು
– ಚನ್ನರೆಡ್ಡಿಗೌಡ ಗುರುಸುಣಗಿ
ರೈತ ಮುಖಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT