ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಿಕೆ ವಿತರಿಸುವ ಕಾಯಕ ಯೋಗಿಗಳಿಗೆ ಇವರಿಗೆ ವರ್ಷಕ್ಕೆ ನಾಲ್ಕೇ ದಿನ ರಜೆ

Published : 4 ಸೆಪ್ಟೆಂಬರ್ 2024, 5:15 IST
Last Updated : 4 ಸೆಪ್ಟೆಂಬರ್ 2024, 5:15 IST
ಫಾಲೋ ಮಾಡಿ
Comments

ಯಾದಗಿರಿ: ವರ್ಷದ ನಾಲ್ಕು ದಿನಗಳಲ್ಲಿ ಮಾತ್ರ ವಿಶ್ರಮಿಸಿ ವರ್ಷದ 361 ದಿನವೂ ಇವರ ಕಾಯಕ ಮುಂದುವರಿಯುತ್ತದೆ. ಹೌದು. ಇದು ಹೇಳ ಹೊರಟಿರುವುದು ಪತ್ರಿಕಾ ವಿತರಕರ ಬಗ್ಗೆ.

ಇವರ ಕಾಯಕ ಬೆಳಿಗ್ಗೆ 4 ಗಂಟೆಯಿಂದಲೇ ಆರಂಭವಾಗುತ್ತದೆ. ಚಳಿ, ಮಳೆ, ಗಾಳಿ, ಬಿಸಿಲು ಸೇರಿದಂತೆ ಯಾವುದೇ ವಾತಾವರವಿದ್ದರೂ ಮನೆಗಳಿಗೆ ಪತ್ರಿಕೆ ಹಾಕುವುದನ್ನು ಮರೆಯುವುದಿಲ್ಲ. ಇವರು ಇಷ್ಟೊಂದು ಕಾರ್ಯನಿರತರಾಗಿದ್ದಾರೆ. ಆದರೆ, ಇವರಿಗೆ ಸರ್ಕಾರಿ ಸೌಲಭ್ಯಗಳು ಕಡಿಮೆ ಪರಿಚಯ ಮತ್ತು ಅರಿವಿನ ಕೊರತೆ ಕಾಡುತ್ತಿದೆ.

ಹಲವರು ಎರಡ್ಮೂರು ತಲೆಮಾರಿನಿಂದ ಪತ್ರಿಕಾ ವಿತರಣ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಹಲವರು ಪತ್ರಿಕೆಗಳನ್ನು ಹಾಕಿ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಆದರೆ, ಪತ್ರಿಕಾ ವಿತರಕರು ಅಸಂಘಟಿತ ವಲಯದಲ್ಲಿ ಇರುವುದರಿಂದ ಎಲ್ಲ ರೀತಿಯ ಭದ್ರತೆ ಕಲ್ಪಿಸಬೇಕು ಎನ್ನುವುದು ವಿತರಕರ ಆಗ್ರಹವಾಗಿದೆ.

ವಿಮೆ ಸೌಲಭ್ಯ ಬೇಕು:

ಹಲವಾರು ವರ್ಷಗಳ ಬೇಡಿಕೆಯಾಗಿರುವ ವಿಮಾ ಸೌಲಭ್ಯ ಇಂದಿಗೂ ಗಗನ ಕುಸುಮಮಾಗಿದೆ. ಪ್ರತಿಯೊಂದು ಸರ್ಕಾರಕ್ಕೂ ಮನವಿ ಸಲ್ಲಿಸುತ್ತ ಬಂದರೂ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎನ್ನುವುದು ವಿತರಕರ ಮಾತಾಗಿದೆ. ‌

‘ಪ್ರತಿ ದಿನ ಬೆಳಗಿನ ಜಾವವೇ ಮನೆ ಮನೆಗಳಿಗೆ ಪತ್ರಿಕೆ ಹಾಕಲು ನಗರ ಸೇರಿದಂತೆ ಗ್ರಾಮಗಳಿಗೆ ತೆರಳುತ್ತಿದ್ದೇವೆ. ಇಂಥ ವೇಳೆ ದುರ್ಘಟನೆ ಸಂಭವಿಸಿದರೆ ನಮ್ಮ ಕುಟುಂಬಕ್ಕೆ ಯಾರು ಆಸರೆ ಎನ್ನುವ ಪ್ರಶ್ನೆ ಉದ್ಬವಿಸುತ್ತದೆ. ಹಲವಾರು ವರ್ಷಗಳಿಂದ ಈ ಕಾಯಕವನ್ನು ಮಾಡುತ್ತಿದ್ದರಿಂದ ಬಿಡದೇ ಕಷ್ಟವಾದರೂ ಇಷ್ಟದಿಂದ ಮಾಡುತ್ತೇವೆ‘ ಎನ್ನುತ್ತಾರೆ ವಿತರಕ ಶಿವಕುಮಾರ ಅಕ್ಕಿ.

‘ಹಲವಾರು ವರ್ಷಗಳಿಂದ ಜೀವ ವಿಮೆ ಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಕುಟುಂಬಕ್ಕೆ ಆಸರೆಯಾಗಲು ವಿಮೆ ಮಾಡಿಸಿಕೊಡಬೇಕು. ಆಗ ಮಾತ್ರ ಸ್ವಲ್ಪ ನಮಗೆ ಸರ್ಕಾರದಿಂದ ಲಾಭ ಸಿಕ್ಕಂತೆ ಆಗುತ್ತದೆ. ಕೆಲಸ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಕೂಡಲೇ ನಮಗೂ ಸೇವಾ ಭದ್ರತೆ, ಪಿಂಚಣಿ ಸೌಲಭ್ಯವನ್ನು ಒದಗಿಸಿಕೊಡಬೇಕು’ ಎನ್ನುವುದು ವಿತರಕರ ಮಾತಾಗಿದೆ.

ವಿತರಕರು ಅಸಂಘಟಿತರು:

ಪತ್ರಿಕಾ ವಿತರಕರು ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿದ್ದರಿಂದ ಯಾವುದೇ ಸಂಘಟನೆ ಶಕ್ತಿ ಇಲ್ಲದೇ ದೊಡ್ಡ ಧ್ವನಿಯಲ್ಲಿ ನಮ್ಮ ಬೇಡಿಕೆ ಈಡೇರಿಕೆಗೆ ಆಗುತ್ತಿಲ್ಲ ಎನ್ನುವುದು ಹಿರಿಯ ಪತ್ರಿಕಾ ವಿತರಕ ಮಾತಾಗಿದೆ.

‘ಪತ್ರಿಕಾ ವಿತರಿಕರಿಗೆ ಬಸ್‌ ಪಾಸ್‌ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಕಡಿಮೆ ದರದಲ್ಲಿ ವಾಹನ ಸೌಲಭ್ಯ ಒದಗಿಸಿಕೊಡಬೇಕು. ಕೋವಿಡ್‌ ಸಂದರ್ಭದಲ್ಲೂ ವಿತರಕರಿಗೆ ಯಾವುದೇ ಸೌಲಭ್ಯಗಳು ಸಿಗಲಿಲ್ಲ. ಈಗಾಲಾದರೂ ಸೌಲಭ್ಯ ಕಲ್ಪಿಸಲು ಸರ್ಕಾರ ನಮ್ಮ ಬಗ್ಗೆ ಯೋಚಿಸಬೇಕು’ ಎನ್ನುವುದು ವಿತರಕರ ಆಗ್ರಹವಾಗಿದೆ.

- ಯಾವ ಕಾಲವಾದರೂ ಓದುಗರಿಗೆ ಮನೆ ಮನೆಗೆ ಪತ್ರಿಕೆ ತಲುಪಿಸುವ ಜವಾಬ್ದಾರಿಯಾಗಿದೆ. ಹೀಗಾಗಿ ಸೌಲಭ್ಯ ಕಲ್ಪಿಸುವುದು ಸರ್ಕಾರ ಕೆಲಸವಾಗಿದೆ
ಶರಣಬಸಪ್ಪ ಹುಣಸಗಿ ಏಜೆಂಟ್
- ವಿತರಕರಿಗೆ ಜೀವನ ಭದ್ರತೆಗಾಗಿ ವಿಮಾ ಸೌಲಭ್ಯ ಪಿಂಚಣಿಯನ್ನು ಜಾರಿಗೆ ತರಬೇಕು. ಆ ಮೂಲಕ ಸರ್ಕಾರ ಪತ್ರಿಕಾ ವಿತರಕರ ಬಗ್ಗೆ ಕಾಳಜಿ ವಹಿಸಬೇಕು
ಶಿವಕುಮಾರ ಅಕ್ಕಿ ಶಹಾಪುರ
ಸರ್ಕಾರದಿಂದ ನಮಗೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮಖರಾಗಬೇಕು. ಅಲ್ಲದೇ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕು
ರಮೇಶ ಬಿ ಹೂಗಾರ ಯಾದಗಿರಿ
ಹಲವಾರು ವರ್ಷಗಳಿಂದ ವಿತರಕನಾಗಿ ಕೆಲಸ ಮಾಡುತ್ತಿದ್ದು ಹಲವಾರು ಸೌಲಭ್ಯಗಳಿಂದ ವಂಚಿತವಾಗಿದ್ದೇವೆ. ಕೂಡಲೇ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು
ಮಹಮ್ಮದ್‌ ಸಾದಿಕ್‌ ರಂಗಪೇಟೆ
ಸರ್ಕಾರ ಮತ್ತು ಜನಪ್ರತಿನಿಧಿಗಳು ಪತ್ರಿಕಾ ವಿತರಿಕರಿಗೆ ಸೌಲಭ್ಯಗಳನ್ನು ಜಾರಿಗೊಳಿಸುವ ಜೊತೆಗೆ ಅನುಷ್ಠಾನ ಮಾಡಬೇಕು. ಈ ಮೂಲಕ ಅವರಿಗೆ ಅನುಕೂಲ ಮಾಡಿಕೊಡಬೇಕು
ಅಮರಯ್ಯ ಸ್ವಾಮಿ ಯಾದಗಿರಿ
ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಶ್ರಮ ಹೆಚ್ಚಿದೆ. ಇವರ ಕೆಲಸವನ್ನು ಗುರುತಿಸುವ ಕೆಲಸ ಮಾಡಬೇಕು. ಆಗ ಮಾತ್ರ ನಾವು ಹೆಚ್ಚಿನ ಬದಲಾವಣೆ ಕಾಣಲು ಸಾಧ್ಯ
ದತ್ತಾತ್ರೇಯ ಕುಲಕರ್ಣಿ ಶಹಾಪುರ
ಕಳೆದ 30 ವರ್ಷಗಳಿಂದ ವಿತರಕನಾಗಿ ಕೆಲಸ ಮಾಡುತ್ತಿದ್ದು ಸೌಲಭ್ಯಗಳು ಮಾತ್ರ ದೂರ ಇವೆ. ಕೂಡಲೇ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಂಬಂಧಿಸಿದವರು ಪ್ರಯತ್ನ ಮಾಡಬೇಕು
ಮಹಾಂತೇಶ ಪಾಟೀಲ ನಾರಾಯಣಪುರ

ವಿತರಕರಿಗೆ ಸಾಲ ಸೌಲಭ್ಯ

ಪ್ರಧಾನ ಮಂತ್ರಿ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಿಸಿಕೊಳ್ಳಲು ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕಿರು ಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದ್ದು ಪತ್ರಿಕಾ ವಿತರಿಕರಿಗೆ ಸಾಲ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. ಆರ್ಥಿಕ ಸುಭದ್ರತೆಗಾಗಿ 3 ಕಂತುಗಳಲ್ಲಿ ಸಾಲ ಸೌಲಭ್ಯವಿದೆ. ಮೊದಲ ಕಂತಿನಲ್ಲಿ ₹10 ಸಾವಿರ ಸಾಲ ನೀಡಿ 12 ತಿಂಗಳ ಅವಧಿಯಲ್ಲಿ ಸಾಲ ಮರು ಪಾವತಿ ಮಾಡಿದಲ್ಲಿ ₹20 ಸಾವಿರ ಸಾಲ ನೀಡಲಾಗುವುದು. ಈ ಸಾಲವನ್ನು 18 ತಿಂಗಳ ಅವಧಿಯಲ್ಲಿ ಮರು ಪಾವತಿ ಮಾಡಿದಲ್ಲಿ ₹50 ಸಾವಿರ ಸಾಲ ಸೌಲಭ್ಯ ನೀಡಲಾಗುವುದು ಎಂದು ಜಿಲ್ಲಾ ಕೌಶಲ ಮಿಷನ್ ತಿಳಿಸಿದೆ.

ಇ-ಶ್ರಮ್ ಕಾರ್ಡ್

ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ದಪಡಿಸಲು ಇ-ಶ್ರಮ್ ಪೋರ್ಟಲ್‌ ಅಭಿವೃದ್ಧಿಪಡಿಸಿದ್ದು ಇದು ಪತ್ರಿಕಾ ವಿತರಕರಿಗೂ ಅನ್ವಯವಾಗುತ್ತಿದೆ. 356ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರು ಇ–ಶ್ರಮ್‌ ಕಾರ್ಡ್‌ಗೆ ನೋಂದಾಯಿಸಬಹುದಾಗಿದೆ. ಆದಾಯ ತೆರಿಗೆ ಪಾವತಿಸುವರನ್ನು ಹೊರತುಪಡಿಸಿ 16 ರಿಂದ 59 ವರ್ಷದೊಳಗಿನವರು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್‌ಬುಕ್ ಹಾಗೂ ಮೊಬೈಲ್ ನಂಬರ್ ತೆಗೆದುಕೊಂಡು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿ ಇ-ಶ್ರಮ್ ಕಾರ್ಡ್ ಪಡೆಯಬಹುದು. ಇದು ಜೀವಿತಾವಧಿವರೆಗೆ ಮಾನ್ಯವಾಗಿರುತ್ತದೆ.

ಇ–ಶ್ರಮ್‌ ಕಾರ್ಡ್‌ ನೋಂದಣಿ ಮಾಡಿಸಿದವರು ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದದಲ್ಲಿ ₹2 ಲಕ್ಷ ಪರಿಹಾರ ಅಂಗವೈಕ್ಯಲಕ್ಕೆ ₹1 ಲಕ್ಷ ಪರಿಹಾರ ಪಡೆಯಬಹುದಾಗಿದೆ. ಇದರ ಜೊತೆಗೆ ದೇಶದಲ್ಲಿ ಯಾವ ಯಾವ ಕಾರ್ಮಿಕರು ಎಷ್ಟು ಇದ್ದಾರೆ ಎಂದು ಡೇಡಾಬೇಸ್ ಸರ್ಕಾರಕ್ಕೆ ಅನುಕೂಲವಾಗುತ್ತದೆ. ಜೊತೆಗೆ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ನೀತಿ ಮತ್ತು ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಕಾರ್ಮಿಕ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT