ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಥಣಿ ಮೌನೇಶ್ವರ ಜಾತ್ರೆಗೆ ಸಿದ್ಧತೆ

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ
Last Updated 23 ಜನವರಿ 2020, 11:13 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ಫೆಬ್ರವರಿ 3ರಿಂದ 8ರವರೆಗೆ ಜರುಗಲಿರುವ ಮೌನೇಶ್ವರ ದೇವಸ್ಥಾನದ ಜಾತ್ರೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ತಿಂಥಣಿ ಮೌನೇಶ್ವರ ದೇವಸ್ಥಾನದ ಜಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಜಾತ್ರೆಗೆ ರಾಜ್ಯದ ಹಲವು ಜಿಲ್ಲೆಗಳು ಹಾಗೂ ಅಂತರರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಚರಂಡಿ ಮತ್ತು ಇನ್ನಿತರ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛತೆ ಕಾಪಾಡಬೇಕು. ಸಾರಿಗೆ ಬಸ್‍ಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ, ವಿದ್ಯುತ್, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಕರೆದು ನಿರ್ಣಯ ಕೈಗೊಳ್ಳಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎನ್.ಹಳ್ಳಿ ನಿರ್ದೇಶಿಸಿದರು.

ಜಾತ್ರೆಯ ಸಮಯದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಬೇಕು. ದೇವಸ್ಥಾನ ಮತ್ತು ಭಕ್ತರ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಅಳವಡಿಸಿರುವ ಸಿ.ಸಿ ಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಿ. ಜಾತ್ರೆ ನಿಮಿತ್ತ ಅಗತ್ಯ ಸ್ಥಳಗಳಲ್ಲಿ ಹೆಚ್ಚಿನ ಸಿ.ಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ದೇವಸ್ಥಾನದಲ್ಲಿ ಜರುಗುವ ಪೂಜೆಯನ್ನು ಭಕ್ತರು ವೀಕ್ಷಿಸುವಂತಾಗಲು ದೇವಸ್ಥಾನದ ಹೊರಗಡೆ ಎರಡು ಎಲ್‍ಇಡಿ ಸ್ಕ್ರೀನ್‍ಗಳನ್ನು ಅಳವಡಿಸುವಂತೆ ಸೂಚಿಸಿದರು.

ಜಾತ್ರೆ ಮುಗಿಯುವವರೆಗೆ ತುರ್ತು ಆರೋಗ್ಯ ಸೇವೆಗಳಿಗಾಗಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಆಯೋಜಿಸಲು ಸೂಚಿಸಿದ ಜಿಲ್ಲಾಧಿಕಾರಿ, 108 ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನ ಸ್ಥಳದಲ್ಲಿರಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಜಾತ್ರೆಯ ಆವರಣದವರೆಗೆ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಭಕ್ತರಿಗೆ ತೊಂದರೆಯುಂಟಾಗುತ್ತದೆ. ಹಾಗಾಗಿ, ದೇವಸ್ಥಾನದಿಂದ 1 ಕಿ.ಮೀ ದೂರದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ್‌ಸಿಂಗ್ ಠಾಕೂರ್ ಸಭೆಯ ನಡಾವಳಿ ಓದಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ, ತಾಲ್ಲೂಕು ಪಂಚಾಯಿತಿ ಇಒ ಅಮರೇಶ, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಹಣಮಂತಪ್ಪ, ಜೆಸ್ಕಾಂ ಎಇಇ ಈರಣ್ಣ, ದೇವಸ್ಥಾನ ಸಮಿತಿ ಸದಸ್ಯ ಸಣ್ಣಮಾನಯ್ಯ ಬಂಡೊಳ್ಳಿ, ಗಂಗಾಧರ ನಾಯಕ, ಹಣಮಂತ ತಿಂಥಣಿ, ಬಸವರಾಜ ದೊಡ್ಡಮನಿ, ಚಿನ್ನಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT