ಭಾನುವಾರ, ಆಗಸ್ಟ್ 1, 2021
27 °C
ವಿವಿಧ ತಾಲ್ಲೂಕುಗಳಲ್ಲಿ 4,041 ಪರೀಕ್ಷೆ, ಸೋಂಕು ಪತ್ತೆಗೆ ಅನುಕೂಲ

ಯಾದಗಿರಿ | ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್; 350 ಪಾಸಿಟಿವ್

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಜುಲೈ 17ರಿಂದ ಆಗಸ್ಟ್‌ 2ರವರೆಗೆ ವಿವಿಧ ತಾಲ್ಲೂಕುಗಳಲ್ಲಿ ನಡೆಸಲಾದ ರ‍್ಯಾ‍‍ಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ (ಆರ್‌ಎಟಿ) 4,041 ಪೈಕಿ 350 ಜನರಲ್ಲಿ ಕೋವಿಡ್‌ ದೃಢಪಟ್ಟಿದೆ. 3,691 ಜನರಲ್ಲಿ ನೆಗೆಟಿವ್ ಫಲಿತಾಂಶ‌ ಬಂದಿದೆ.

‘ಪ್ರತಿ ದಿನ ಅಲ್ಲದೇ ಭಾನುವಾರ ಆರ್‌ಎಟಿ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಅತಿ ಹೆಚ್ಚು ಕೋವಿಡ್‌ ಪತ್ತೆಯಾದ ಪ್ರದೇಶಗಳಲ್ಲೂ ಈ ಪ್ರಕ್ರಿಯೆ ನಡೆದಿದೆ. ಗುಂಪುಗುಂಪಾಗಿ ಇರುವ ಮನೆಗಳಲ್ಲಿ ಪರೀಕ್ಷೆಗೆ ಮನವೊಲಿಸಲಾಗುತ್ತಿದೆ. ಸಾರ್ವಜನಿಕರು ಸೋಂಕಿನ ಲಕ್ಷಣ ಕಂಡು ಬಂದರೆ ಶೀಘ್ರವೇ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮೊಬಷೀರ್ ಅಹ್ಮದ್‌ ಸಾಜಿದ್ ತಿಳಿಸಿದರು.

‘ರ‍್ಯಾಪಿಡ್‌ ಪರೀಕ್ಷೆಯಲ್ಲಿ ಮೂಗಿನ ದ್ರವ ತೆಗೆದುಕೊಳ್ಳಲಾಗುತ್ತಿದೆ. ಕಿಟ್‌ ಮೂಲಕ ಶೀಘ್ರವೇ ಫಲಿತಾಂಶ ಪಡೆಯಬಹುದು. ಒಂದು ವೇಳೆ ನೆಗೆಟಿವ್‌ ಬಂದು ರೋಗ ಲಕ್ಷಣಗಳು ಇದ್ದರೆ ಆಗ ಆರ್‌ಟಿ–ಪಿಸಿಆರ್‌ ಲ್ಯಾಬ್‌ಗೆ‌ ಮಾದರಿ ಕಳಿಸಲಾಗುತ್ತದೆ. ನೆಗೆಟಿವ್‌ ವರದಿ ಬಂದು ಯಾವುದೇ ಲಕ್ಷಣ ಇಲ್ಲದಿದ್ದರೆ ಅದು ನೆಗೆಟಿವ್‌ ಆಗಿರುತ್ತದೆ’ ಎಂದು ಅವರು ತಿಳಿಸಿದರು.

‘ಮಾದರಿ ಸಂಗ್ರಹಿಸಲು ಜಿಲ್ಲೆಯಲ್ಲಿ 38 ತಂಡಗಳು ಕಾರ್ಯನಿರ್ವಹಿಸುತ್ತಿವೆ. ಒಂದು ತಂಡದಲ್ಲಿ ಪ್ರಯೋಗಾಲಯ ಸಿಬ್ಬಂದಿ, ಡಿ ಗ್ರೂಪ್‌ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್‌ ಇರುತ್ತಾರೆ. ಇವರು ನಿಗದಿತ ಪ್ರದೇಶಕ್ಕೆ ತೆರಳಿ ಅಲ್ಲಿ ಪರೀಕ್ಷೆ ಮಾಡುತ್ತಾರೆ. ಜಿಲ್ಲೆಯಲ್ಲಿ ಹೆಚ್ಚು ಪರೀಕ್ಷೆ ಮಾಡಿದಷ್ಟು ಸೋಂಕು ಕಡಿಮೆ ಮಾಡಬಹುದು’ ಎಂದು  ಡಾ. ಸಾಜಿದ್ ತಿಳಿಸಿದರು.

***
ಜಿಲ್ಲೆಯಲ್ಲಿ ಪ್ರತಿದಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಸಾರ್ವಜನಿಕರು ಪರೀಕ್ಷೆ ಮಾಡಿಸಿಕೊಂಡಷ್ಟು ಸೋಂಕು ಬೇಗ ಪತ್ತೆ ಹಚ್ಚಲು ಸಾಧ್ಯ.
-ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

***
ಈಗಾಗಲೇ 5,220 ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ಕಿಟ್‌ ಬಂದಿದ್ದು, ಈಗ ಮತ್ತೆ 1,500 ಕಿಟ್‌ ಬಂದಿವೆ. ಕೇವಲ 5 ನಿಮಿಷದಲ್ಲಿ ಪರೀಕ್ಷಾ ಫಲಿತಾಂಶ ಬರಲಿದೆ.
-ಡಾ. ಮೊಬಷೀರ್ ಅಹ್ಮದ್‌ ಸಾಜಿದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು