ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಯ ವರ್ಗದ ಪಾಲಿಗೆ ಇವರು 'ಫೂಲ್‌ಛೇಡಿ' ಮೇಷ್ಟ್ರು

ಭಾವೈಕ್ಯದ ಸೇತುವೆ ಸಯ್ಯದ್‌ ಚಾಂದಾಸಾಬ್
Last Updated 8 ಡಿಸೆಂಬರ್ 2019, 4:31 IST
ಅಕ್ಷರ ಗಾತ್ರ

ಶಹಾಪುರ: ಮನೆ ಮಾತು ಉರ್ದುವಾದರೂ ಕನ್ನಡ ಅಧ್ಯಾಪಕರಾಗಿ ಭಾಷೆ, ಜಾತಿ, ಧರ್ಮವನ್ನು ಮೀರಿ ಹಲವಾರು ಕನ್ನಡ ಮನಸ್ಸುಗಳನ್ನು ಕಟ್ಟಿ ಬೆಳೆಸಿದ ಗುಣ ಸಯ್ಯದ್‌ ಚಾಂದಸಾಬ್ ಇನಾಮದಾರ ಅವರದ್ದು, ಅಕ್ಷರದ ದೀವಿಗೆಯನ್ನು ಇಂದಿಗೂ ಹಚ್ಚುತ್ತಲೆ ಇರುವ ಅವರು ಸಗರನಾಡಿನ ಭಾವೈಕ್ಯದ ಕೊಂಡಿಯಾಗಿದ್ದಾರೆ.

ಸೌಹಾರ್ದತೆಯ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡದ ಅಕ್ಷರ ಬಳ್ಳಿಯ ಮೂಲಕ ಮಾವನೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿರುವ ಸೈಯದ್‌ ಚಾಂದಾಸಾಬ್ ಅವರನ್ನು ಶಿಷ್ಯವರ್ಗ ‘ಫೂಲ್‌ಛೇಡಿ’ ಎಂದೇ ಕರೆಯುತ್ತಾರೆ.

ಜೇವರ್ಗಿ ತಾಲ್ಲೂಕಿನ ವಡಗೇರಾ ಗ್ರಾಮದ ಚಾಂದಸಾಬ್ ಹಾಗೂ ಜೈನಾಬಿ ಉದರದಲ್ಲಿ ಜನಿಸಿದ ಸಯ್ಯದ್‌ ಚಾಂದಾಸಾಬ್ ಅವರು ಶರಣರ ವಿಚಾರಗಳನ್ನು ಅಳವಡಿಸಿಕೊಂಡಿದ್ದಾರೆ. ಸಿಂದಗಿ ತಾಲ್ಲೂಕಿನ ಹೊನ್ನಳ್ಳಿ ಮಠದ ಕಲ್ಯಾಣದಯ್ಯ ವೀರಗಂಟಯ್ಯಸ್ವಾಮಿ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಸಾಧನೆಯ ಛಲದಿಂದ ಅಧ್ಯಯನ ಮಾಡಿ ಕನ್ನಡ ಶಾಲೆಯ ಮೇಷ್ಟ್ರಾಗಿ, ವೃತ್ತಿ ಜೀವನ ಆರಂಭಿಸಿದರು. ಪ್ರಾಥಮಿಕ, ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ್ದರು ಸಹ ಇಂದಿಗೂ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂರು ಜನ ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ತುಂಬು ಬದುಕು ಸಾಗಿಸುತ್ತಿರುವ ಅವರಿಗೆ ಪತ್ನಿ ಮಮ್ತಾಜ್ ಬೇಗಂ, ಅವರ ಜೀವನ ಪ್ರೀತಿಗೆ ಸಂಜೀವಿನಿಯಾಗಿದ್ದಾರೆ ಎಂದು ಅಭಿಮಾನದಿಂದ ನುಡಿಯುತ್ತಾರೆ ಉಪನ್ಯಾಸಕ ಎಂ.ಎಂ.ಹುಂಡೆಕಾರ.

ಸೂಕ್ಷ್ಮ ಸಂವೇದನಾಶೀಲರಾಗಿರುವ ಅವರು, ತಮ್ಮ ಬದುಕಿನಲ್ಲಿ ಯಾವುದೇ ಜಾತಿ, ಧರ್ಮ, ಮತ ಪಂಗಡಗಳ ಗೋಡೆಗಳನ್ನು ಕಟ್ಟದೆ ವಿದ್ಯಾರ್ಥಿಗಳನ್ನು ತಾಯ್ತನದ ಪ್ರೀತಿಯಿಂದ ಕಾಣುತ್ತಲೆ ಭವಿಷ್ಯ ರೂಪಿಸಿದ್ದಾರೆ. ಜ್ಞಾನವನ್ನು ವಿಸ್ತರಿಸುತ್ತ ನಿರಂತರವಾಗಿ ಶ್ರಮಿಸುವ ಭಾವೈಕ್ಯದ ಮಂದಾರವಾಗಿದ್ದಾರೆ ಎನ್ನುತ್ತಾರೆ ಉಪನ್ಯಾಸಕಿ ನಿರ್ಮಲ ತುಂಬಿಗಿ.

ಸಗರನಾಡಿನಲ್ಲಿ ವಚನಕಾರರ ಶರಣರ ಚಿಂತನೆಗಳ ಪರಿಸರದಲ್ಲಿ ಬೆಳೆಯುತ್ತ, ಸೂಫಿ–ಶರಣರ ಹಾಗೂ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಇಂದಿಗೂ ಕಾಯಕ ನಿಷ್ಠೆಯ ಜೀವನ ಅವರದಾಗಿದೆ. ಜಾತಿ ಧರ್ಮ ಭಾಷೆಗಿಂತ ಮಿಗಿಲಾಗಿರುವುದು ಮನುಷ್ಯತ್ವ ಎಂಬ ತತ್ವ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ಹಿರಿಯ ಜೀವ ಸಯ್ಯದ ಚಾಂದಪಾಶ ಮೇಷ್ಟ್ರು ಆಗಿದ್ದಾರೆ ಎನ್ನುತ್ತಾರೆ ಈಚೆಗೆ ಹೊರ ತಂದ ‘ಸಮನ್ವಯ ಚೇತನ’ ಪುಸ್ತಕದ ಸಂಪಾದಕ ರಾಘವೇಂದ್ರ ಹಾರಗೇರಾ.

ಮಾನವೀಯ ಅಂತಃಕರಣದಿಂದ ತುಂಬಿದ ಪ್ರೀತಿಯ ಮಾಸ್ತರರಿಗೆ ತಾಲ್ಲೂಕು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಭಾರತ ಸಂಸ್ಕೃತ ಪ್ರತಿಷ್ಠಾನ ಪ್ರಶಸ್ತಿ, ಚಿತ್ರದುರ್ಗ ಮುರುಘಾರಾಜೇಂದ್ರ ಸ್ವಾಮೀಗಳ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ಅವರು 75ರ ಇಳಿವಯಸ್ಸಿನಲ್ಲಿ ವಿದ್ಯಾದಾನದ ಕಾಯಕವನ್ನು ಮುಂದುವರೆಸಿದ್ದಾರೆ.

*
ಜಾತಿ, ಧರ್ಮಕ್ಕಿಂತ ಮೀಗಿಲಾಗಿರುವುದು ಮನುಷ್ಯತ್ವ ಎಂಬ ತತ್ವವನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದು ಅದೆಷ್ಟು ಕನ್ನಡದ ಮನಸ್ಸುಗಳಿಗೆ ಫೂಲ್‌ಛೇಡಿಯಾಗಿದ್ದಾರೆ.
-ರಾಘವೇಂದ್ರ ಹಾರಣಗೇರಾ, ಸಮನ್ವಯ ಚೇತನ, ಪುಸ್ತಕ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT