ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 101 ದೇಗುಲ, ಬಾವಿಗಳ ಹಗರಟಗಿ

ಪಾಂಡವರು ವನವಾಸಕ್ಕೆ ಬಂದಿದ್ದರು ಎನ್ನುವ ಪ್ರತೀತಿ ಇರುವ ಹುಣಸಗಿ ತಾಲ್ಲೂಕಿನ ಗ್ರಾಮ
Last Updated 8 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದಲ್ಲಿ 101 ದೇವಸ್ಥಾನ, ಅದರ ಪಕ್ಕದಲ್ಲಿ 101 ಬಾವಿಗಳಿರುವುದು ವಿಶೇಷವಾಗಿದೆ. ಪುರಾಣ ಪ್ರಸಿದ್ಧವಾದ ಈ ಗ್ರಾಮದಲ್ಲಿ ಚಾಲುಕ್ಯರ ಶೈಲಿಯ ದೇವಸ್ಥಾನ,
ಅವರಿಗೆ ಸಂಬಂಧಿಸಿದ ಲಾಂಛನ ಇರುವುದನ್ನು ಕಾಣಬಹುದಾಗಿದೆ.

ದೇವಸ್ಥಾನಗಳನ್ನು ಕಲ್ಲು, ಮಣ್ಣಿನಿಂದ ನಿರ್ಮಿಸಲಾಗಿದೆ. ದೇಗುಲಕ್ಕೆ ನೀರಿನ ಅವಶ್ಯಕತೆ ಇರುವುದರಿಂದ ದೇಗುಲ ಕಟ್ಟುವ ಜಾಗದಲ್ಲಿ ಬಾವಿ ತೊಡಲಾಗಿದೆ. ಹೀಗಾಗಿ ದೇವಸ್ಥಾನಗಳ ಪಕ್ಕದಲ್ಲಿ ಬಾವಿಗಳಿವೆ. ಗ್ರಾಮದಲ್ಲಿ 101 ಕೆರೆಗಳೂ ಇದ್ದವು ಎನ್ನುತ್ತಾರೆ ಗ್ರಾಮಸ್ಥರು.

‘ನಮ್ಮ ಹಿರಿಯರು ಅಂತರ್ಜಲ ಮೂಲವನ್ನು ತಿಳಿದುಕೊಂಡಿದ್ದರು. ಹೀಗಾಗಿ ಬಾವಿ, ಕೆರೆ ಕಟ್ಟಿ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡಿದ್ದರು ಎನ್ನುತ್ತಾರೆ’ ಗ್ರಾಮಸ್ಥರಾದ ಕಾಶಿನಾಥ, ಶಿವಕುಮಾರ.

ಪಂಚ ಪಾಂಡವರ ದೇಗುಲ: ಗ್ರಾಮದಲ್ಲಿ ಪಂಚ ಪಾಂಡವರ ದೇಗುಲಗಳೂ ಇವೆ. ಧರ್ಮರಾಯ, ಅರ್ಜುನ, ಭೀಮ, ನಕುಲ, ಸಹದೇವ, ಕುಂತಿ ದೇವಿ ದೇವಸ್ಥಾನ ಇದೆ. ಪಾಂಡವರು ವನವಾಸದ ವೇಳೆ ಈ ಮಾರ್ಗವಾಗಿ ಬಂದಿದ್ದರು. ಹೀಗಾಗಿ ಪಾಂಡವರ ದೇಗುಲ ನಿರ್ಮಿಸಿರಬೇಕು ಎಂಬುದು ಗ್ರಾಮಸ್ಥರ ಅನಿಸಿಕೆ.

ಪ್ರತಿ ವರ್ಷ ಗ್ರಾಮದಲ್ಲಿ ಯುಗಾದಿ ವೇಳೆ ಧರ್ಮರಾಯನ ಜಾತ್ರೆ ನಡೆಯುತ್ತದೆ. ಚಿಕ್ಕ ರಥವನ್ನು ಮಹಿಳೆಯರು ಎಳೆದರೆ, ದೊಡ್ಡ ರಥವನ್ನು ಪುರುಷರು ಎಳೆಯುತ್ತಾರೆ. ಇದರಿಂದ ಇಲ್ಲಿ ಸ್ತ್ರೀಯರಿಗೂ ರಥ ಎಳೆಯುವ ಧಾರ್ಮಿಕ
ಕೈಂಕರ್ಯವನ್ನು ಕಲ್ಪಿಸಿಕೊಡಲಾಗಿದೆ.

'ಈಗ ಗ್ರಾಮದಲ್ಲಿ 101 ದೇವಸ್ಥಾನವೂ ಇಲ್ಲ, ಬಾವಿಗಳೂ ಇಲ್ಲ. ನಿಧಿ ಆಸೆಗಾಗಿ ದೇಗುಲವನ್ನು ಹಾಳುಗಡೆವಿದ್ದಾರೆ. ಇದರಿಂದ ಹಲವಾರು ದೇಗುಲಗಳು ಶಿಥಿಲಗೊಂಡಿವೆ. ಹೆಸರಿಗೆ ಮಾತ್ರ ಹೇಳಿಕೊಳ್ಳಲು ದೇಗುಲ, ಬಾವಿ, ಕೆರೆಗಳಿವೆ' ಎನ್ನುತ್ತಾರೆ ಗ್ರಾಮದ ಮುಖಂಡ ಅರುಣಕುಮಾರ ಮಲ್ಕಾಪುರ.

ಇಲ್ಲಿಯ ಮತ್ತೊಂದು ವಿಶೇಷವೆಂದರೆ ಧರ್ಮರಾಯನ ಗರ್ಭಗುಡಿಯಲ್ಲಿರುವ ಲಿಂಗವು ಎಡಗಡೆ ಮುಖ ಹೊಂದಿದೆ. ಬೇರೆ ದೇವಸ್ಥಾನಗಳಲ್ಲಿ ಬಲಗಡೆ ಮುಖ ಹೊಂದಿದೆ. ಇಂಥ
ಚರಿತ್ರೆ ಹೊಂದಿರುವ ಗ್ರಾಮದ ದೇವಸ್ಥಾನ, ಬಾವಿಗಳನ್ನು
ಸಂರಕ್ಷಿಸಬೇಕಾಗಿದೆ.

***

ಭೀಮನ ದೇವಸ್ಥಾನದ ಕಂಬಗಳಲ್ಲಿ ತಣ್ಣನೆಯ ನೀರು ಜಿನುಗಿದಂತೆ ಭಾಸವಾಗುತ್ತದೆ. ಇಲ್ಲಿ ಎಲ್ಲ ಕಾಲದಲ್ಲಿ ತಂಪಿನ ವಾತಾವರಣ ಇರುತ್ತದೆ

ಗುರು ಬಂಡಿ, ಗ್ರಾಮಸ್ಥ

***

ಗ್ರಾಮವೂ ಐತಿಹಾಸಿಕ ಸ್ಥಳಗಳನ್ನು ಹೊಂದಿದೆ. ಇವುಗಳನ್ನು ಪುರಾತತ್ವ ಇಲಾಖೆ ಸಂರಕ್ಷಣೆ ಮಾಡಬೇಕು ಅರುಣಕುಮಾರ ಮಲ್ಕಾಪುರ,ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT