ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬೇಕಿದೆ ಸೌಲಭ್ಯ

Published 8 ನವೆಂಬರ್ 2023, 4:42 IST
Last Updated 8 ನವೆಂಬರ್ 2023, 4:42 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯು ಪ್ರಾಗೈತಿಹಾಸಿಕ ಪ್ರವಾಸಿ ತಾಣಗಳನ್ನು ಒಳಗೊಂಡಿದ್ದು, ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ.

ಜಿಲ್ಲೆಯ ಎಲ್ಲ ಆರು ತಾಲ್ಲೂಕುಗಳಲ್ಲಿ ಐತಿಹಾಸಿಕ ಸ್ಥಳಗಳಿವೆ. ಆದರೆ, ಅಲ್ಲಿಗೆ ತೆರಳಲು ಸೂಕ್ತ ರಸ್ತೆ, ಮೂಲ ಸೌಕರ್ಯಗಳು ಇಲ್ಲದೇ ನಲುಗುತ್ತಿವೆ. ಈ ಹಿಂದೆ ಯಾದಗಿರಿ ಕೋಟೆ ಅಭಿವೃದ್ಧಿಗಾಗಿ ಕೋಟ್ಯಂತರ ಹಣ ಖರ್ಚಾದರೂ ಜನರಿಗೆ ಬೇಕಾದ ಸೌಲಭ್ಯಗಳನ್ನು ಮಾಡಲಾಗಿಲ್ಲ. ಅಲ್ಲದೇ ಕೋಟೆಗೆ ತೆರಳುವ ಮಾರ್ಗದರ್ಶನ ಫಲಕಗಳೇ ಇಲ್ಲ.

ಕೃಷ್ಣಾ, ಭೀಮಾ ನದಿಗಳು ಜಿಲ್ಲೆಯಲ್ಲಿ ಹರಿಯುತ್ತವೆ. ನೀರಾವರಿ ಸಮೃದ್ಧವಾಗಿದೆ. ಯಾದಗಿರಿ, ಶಹಾಪುರ, ಸುರಪುರದಲ್ಲಿ ಕೋಟೆಗಳು, ಯಾದಗಿರಿಯಲ್ಲಿ ಎರಡು ಚಿಕ್ಕ ಜಲಾಶಯಗಳು, ಹುಣಸಗಿಯಲ್ಲಿ ಬಸವಸಾಗರ ಜಲಾಶಯ, ಎರಡು ಎ ಗ್ರೇಡ್‌ ದೇವಸ್ಥಾನಗಳಿವೆ. ಮೈಲಾಪುರ, ತಿಂಥಣಿ ದೇವಸ್ಥಾನಗಳಿಗೆ ಪ್ರಾಧಿಕಾರ ರಚನೆಯಾಗಿ ಆ ಮೂಲಕ ದೈವ ಸ್ಥಳಗಳು ಭಕ್ತರನ್ನು, ಪ್ರವಾಸಿಗರನ್ನು ಸೆಳೆಯಬೇಕಾಗಿತ್ತು. ಆದರೆ, ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಐತಿಹಾಸಿಕ ಸ್ಥಳಗಳಿದ್ದರೂ ಗುರುತಿಸಿಕೊಂಡಿಲ್ಲ ಎನ್ನುವುದು ಜಿಲ್ಲೆಯ ಜನರ ಅಸಮಾಧಾನವಾಗಿದೆ.

ಸೂಚನಾ ಫಲಕಗಳಿಲ್ಲ

ಜಿಲ್ಲೆಯ ಎಲ್ಲ ತಾಲ್ಲೂಕುಗಳು ಐತಿಹಾಸಿಕ ಶ್ರೀಮಂತಿಕೆ ಹೊಂದಿವೆ. ಆದರೆ, ಸೂಕ್ತ ಫಲಕಗಳಿಲ್ಲ. ಜಿಲ್ಲೆ, ಹೊರ ಜಿಲ್ಲೆಯವರಿಗೆ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿಯೇ ಸಿಗುವುದಿಲ್ಲ. ಇದರಿಂದ ಪ್ರವಾಸಿಗರಿಗೆ ಯಾವ ಕಡೆ ತೆರಳಬೇಕು ಎನ್ನುವ ದಾರಿ ಕಾಣುವುದಿಲ್ಲ.

ಪ್ರವಾಸಿ, ಐತಿಹಾಸಿಕ ತಾಣಗಳ ಬಗ್ಗೆ ಸೂಚನ ಫಲಕ ಮತ್ತು ಮಾರ್ಗಸೂಚಿ ಚಿಹ್ನೆಗಳಿದ್ದರೆ ಜಿಲ್ಲೆಗೆ ಭೇಟಿ ನೀಡುವವರು ಆ ಸ್ಥಳಗಳಿಗೆ ತೆರಳಲು ಸಾಧ್ಯವಾಗುತ್ತದೆ. ಆದರೆ, ಇಂಥ ಕೆಲಸ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿದಿಂದ ಆಗಿಲ್ಲ.

ಸಚಿವರು ಗಮನ ಹರಿಸಲಿ

ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವ ‍ಪ್ರವಾಸೋದ್ಯಮ ಸಚಿವರು ಐತಿಹಾಸಿಕ ಸ್ಥಳಗಳ ಬಗ್ಗೆ ಗಮನ ಹರಿಸಬೇಕು ಎನ್ನುವುದು ಜಿಲ್ಲೆಯ ಪ್ರವಾಸೋದ್ಯಮಿಗಳ ಆಗ್ರಹವಾಗಿದೆ. ಜಿಲ್ಲೆಯು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಆದರೆ ಅವುಗಳ ಜೀರ್ಣೋದ್ಧಾರ ಸಂರಕ್ಷಣೆ ಆಗುತ್ತಿಲ್ಲ. ಪ್ರವಾಸಿ ಮಿತ್ರರಿದ್ದರೂ ಅವರ ಮೂಲಕ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಕೆಲಸವಾಗಬೇಕು. ಜಿಲ್ಲಾ ಪ್ರವಾಸಿ ತಾಣಗಳ ಟೂರ್‌ ಹಮ್ಮಿಕೊಳ್ಳುವ ಮೂಲಕ ಪರಿಚಯ ಮಾಡಿಕೊಡಬೇಕು ಎನ್ನುವುದು ಜಿಲ್ಲೆಯ ಜನತೆ ಒತ್ತಾಯವಾಗಿದೆ.

ಜಿಲ್ಲೆಯಲ್ಲಿವೆ ಐತಿಹಾಸಿಕ ಸ್ಮಾರಕಗಳು

ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಇವುಗಳನ್ನು ಪ್ರವಾಸೋದ್ಯಮ ಇಲಾಖೆ ಪುರಾತತ್ವ ಇಲಾಖೆ ತಮ್ಮ ಸುಪರ್ದಿಗೆ ಪಡೆದು ಸಂರಕ್ಷಣೆ ಮಾಡಬೇಕು ಎನ್ನುವುದು ಪ್ರವಾಸಿ ಪ್ರಿಯರ ಆಗ್ರಹವಾಗಿದೆ. ಯಾದಗಿರಿ ವಾಗಣಗೇರಿ ವನದುರ್ಗದಲ್ಲಿ ಕೋಟೆಗಳಿವೆ. ಇವು ನೂರಾರು ವರ್ಷಗಳಿಂದ ರಾಜರ ಆಳ್ವಿಕೆಯ ಹೆಗ್ಗುರುತಾಗಿದೆ. ಆದರೆ ಯಾವ ಕೋಟೆಗೂ ತೆರಳಲು ಸೂಕ್ತ ಸೌಲಭ್ಯಗಳಿಲ್ಲ. ಮೆಟ್ಟಿಲುಗಳ ಕಲ್ಲುಗಳು ಬಿದ್ದಿವೆ. ಯಾದಗಿರಿ ತಾಲ್ಲೂಕಿನ ಗುಹಾಂತರ ಮೈಲಾಪುರ ದೇವಸ್ಥಾನ ಬಳಿಚಕ್ರ ವರ್ಕನಳ್ಳಿ ಬೆಟ್ಟಗಳು ಹತ್ತಿಕುಣಿ ಮತ್ತು ಸೌದಾಗರ ಜಲಾಶಯಗಳು ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ ಛಾಯಾ ಭಗವತಿ ಕೊಡೇಕಲ್ಲ ಬಸವಣ್ಣ ರಾಜನಕೋಳೂರು ಗ್ರಾಮದ ಬುಡ್ಡರ ಮನೆಗಳು ಮುದನೂರಿನ ದೇವರ ದಾಸಿಮಯ್ಯ ಕ್ಷೇತ್ರ ಹಗರಟಗಿಯ 101 ದೇವಸ್ಥಾನ 101 ಬಾವಿಗಳು ಗುರುಮಠಕಲ್‌ ತಾಲ್ಲೂಕಿನ ದಬ್‌ದಭಿ ಜಲಪಾತ ಬಂಡಲೋಗ ಚಿಂತನಳ್ಳಿ ಗವಿ ಸಿದ್ಧಲಿಂಗೇಶ್ವರ ದೇವಸ್ಥಾನ ಸುರಪುರ ತಾಲ್ಲೂಕಿನ ಬೊನ್ಹಾಳ ಪಕ್ಷಿಧಾಮ ತಿಂಥಣಿ ಮೌನೇಶ್ವರ ದೇವಸ್ಥಾನ ಸುರಪುರ ಅರಮನೆ ಏವೂರು ಐತಿಹಾಸಿಕ ಸ್ಥಳಗಳು ಶಹಾಪುರದ ಶಿರವಾಳ ದೇವಸ್ಥಾನಗಳು ಬೇಟೆ ಅರಮನೆ ವಡಗೇರಾದ ಕೃಷ್ಣಾ ಭೀಮಾ ನದಿ ಸಂಗಮ ಬೆಂಡೆಬೆಂಬಳಿಯ ದೊಡ್ಡ ಮನೆಗಳು ಸೇರಿದಂತೆ ಆಯಾ ತಾಲ್ಲೂಕನ್ನು ಪ್ರತಿನಿಧಿಸುವ ಸ್ಥಳಗಳಿಗೆ ಸಂರಕ್ಷಣೆ ಜೊತೆಗೆ ಪ್ರವಾಸಿ ತಾಣಗಳ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.

ವಿವಿಧೆಡೆ ಸಚಿವರು ಇಂದು ಭೇಟಿ

ಕಾನೂನು ನ್ಯಾಯ ಮಾನವ ಹಕ್ಕುಗಳ ಸಂಸದೀಯ ವ್ಯವಹಾರ ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ನವೆಂಬರ್ 8ರಂದು ಬೆಳಿಗ್ಗೆ 9 ಗಂಟೆಗೆ ಶಹಾಪುರ ತಾಲ್ಲೂಕಿನ ಶಿರವಾಳ ದೇವಾಲಯಗಳ ಸಮುಚ್ಛಯಕ್ಕೆ ಭೇಟಿ ನೀಡಿ ನಂತರ ಬೆಳಿಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುವರು. ನಂತರ ಮಧ್ಯಾಹ್ನ ಬುದ್ಧ ಮಲಗಿದ ಬೆಟ್ಟ ದ್ವಾರ ಬಾಗಿಲು ವೀಕ್ಷಣೆ ನಂತರ ಯಾದಗಿರಿ ಕೋಟೆ ದರ್ಶನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿದ್ದರೂ ಅವುಗಳಿಗೆ ಯಾವುದೇ ಸೌಲಭ್ಯಗಳಿಲ್ಲ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಅಧಿಕಾರಿಗಳು ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.
ಮಾಣಿಕರೆಡ್ಡಿ ಕುರಕುಂದಿ, ಯುವ ಮುಖಂಡ
ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ನಾಮಫಲಕಗಳನ್ನು ಅಳವಡಿಸಬೇಕು. ಪ್ರವಾಸಿ ಸ್ಥಳಗಳ ಪರಿಚಯ ಮಾಡಿಕೊಡಲು ಆದ್ಯತೆ ನೀಡಬೇಕು
ಬಸವರಾಜ ಪಾಟೀಲ, ಯುವ ಮುಖಂಡ
ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನ ಗರ್ಭಗುಡಿ
ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನ ಗರ್ಭಗುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT