ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಾಗಲಿದ್ದಾರೆ ಯಾದಗಿರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ?

ಸಂಪರ್ಕಕ್ಕೆ ಸಿಗದ ಇಬ್ಬರು ‘ಕೈ’ ಸದಸ್ಯರು, ಕಮಾಲ್‌ ಮಾಡುತ್ತಾ ಬಿಜೆಪಿ?
Last Updated 9 ಜುಲೈ 2020, 16:21 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಪಂಚಾಯಿತಿಯ 10 ತಿಂಗಳ ಅಧಿಕಾರವಧಿಗೆ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

24 ಸದಸ್ಯರ ಬಲ ಹೊಂದಿರುವ ಜಿ.ಪಂ.ನಲ್ಲಿ ಕಾಂಗ್ರೆಸ್‌, ಬಿಜೆಪಿಯ ತಲಾ ಒಬ್ಬ ಸದಸ್ಯರು ನಿಧರಾಗಿದ್ದಾರೆ. ಇದರಿಂದ 22ಕ್ಕೆ ಕುಸಿದಿದೆ. ಕಾಂಗ್ರೆಸ್‌ 11, ಜೆಡಿಎಸ್‌ 1, ಬಿಜೆಪಿ 10 ಸದಸ್ಯರನ್ನು ಹೊಂದಿದೆ. ಬಹುಮತಕ್ಕೆ 12 ಮತಗಳು ಬೇಕಾಗಿವೆ. ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ.

ಗುರುಮಠಕಲ್‌ ತಾಲ್ಲೂಕಿನ ಕೊಂಕಲ್‌ ಮತಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಬಸರೆಡ್ಡಿಗೌಡ ಅನಪುರ 30 ತಿಂಗಳು, ಸುರಪುರ ತಾಲ್ಲೂಕಿನ ದೇವತ್ಕಲ್‌ ಕ್ಷೇತ್ರದ ರಾಜಶೇಖರಗೌಡ ಪಾಟೀಲ ವಜ್ಜಲ್‌ 18 ತಿಂಗಳು ಅಧಿಕಾರ ನಡೆಸಿದ್ದಾರೆ. ಈಗ 10 ತಿಂಗಳು ಉಳಿದಿದ್ದು, ಅಧ್ಯಕ್ಷ ಸ್ಥಾನ ಯಾರಾ ಪಾಲಾಗಲಿದೆ ಎನ್ನುವುದು ನಿಗೂಢವಾಗಿದೆ.

ಇಬ್ಬರು ಸದಸ್ಯರು ನಾಪತ್ತೆ: ಕಾಂಗ್ರೆಸ್‌ನ ಇಬ್ಬರು ಸದಸ್ಯರು ನಾಪತ್ತೆಯಾಗಿದ್ದು, ಬಿಜೆಪಿ ಅವರನ್ನು ಸೆಳೆದಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಬಿಜೆಪಿ ಇಬ್ಬರು ಸದಸ್ಯರನ್ನು ಸೆಳೆದು ಅಧ್ಯಕ್ಷ ಗಾದಿಗೆ ಏರುವ ಪ್ರಯತ್ನ ಮುಂದುವರಿಸಿದೆ.

ಬಿಜೆಪಿ ಪ್ರಯತ್ನ: ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಈ ಬಾರಿಕಾಂಗ್ರೆಸ್‌ನ ಇಬ್ಬರಿಗೆ ಗಾಳ ಹಾಕಿದೆ. ಆ ಮೂಲಕ ಅಧ್ಯಕ್ಷ ಗಾದಿ ಏರುವ ಪ್ರಯತ್ನ ನಡೆಸಿದೆ. 2011ರಲ್ಲಿ ಬಿಜೆಪಿ ಕೆಲ ತಿಂಗಳ ಮಟ್ಟಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿತ್ತು. ಆನಂತರ ಕಾಂಗ್ರೆಸ್‌ ಗೆಲವು ಸಾಧಿಸಿಕೊಂಡು ಬಂದಿದ್ದರಿಂದ ಬಿಜೆಪಿಗೆ ಹಿನ್ನಡೆ ಉಂಟಾಗಿತ್ತು. ಈಗ ಆ ಕೊರತೆಯನ್ನು ನೀಗಿಸಲು ಪ್ರಯತ್ನ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.

‘ಗುರುವಾರ ಪಕ್ಷದ ಸಭೆ ನಡೆಸಿದ್ದು, ಸಗರ ಜಿ.ಪಂ. ಸದಸ್ಯೆ ಶರಣಮ್ಮ ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಇಬ್ಬರು ಸದಸ್ಯರು ಮರಳಿ ಬರುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್‌ ತಿಳಿಸಿದರು.

ವಿಶೇಷ ಸಭೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲುವಿಶೇಷ ಸಭೆಯನ್ನು ಜುಲೈ 10ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಿಗದಿಪಡಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT