ಮಂಗಳವಾರ, ಮೇ 24, 2022
26 °C
ಗ್ರಾಮ ಪಂಚಾಯಿತಿಗಳಲ್ಲಿ ಮೀಸಲಾತಿ ವರದಾನ, ಅಧ್ಯಕ್ಷ ಗಿರಿ ಮಹಿಳೆಯರ ಪಾಲು

ಮೀಸಲಾತಿ ವರದಾನ: ಯಾದಗಿರಿ ಜಿಲ್ಲೆಯಲ್ಲಿ ಮಹಿಳಾಮಣಿಗಳ ಆಳ್ವಿಕೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಈಚೆಗೆ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಶೇ 50ರಷ್ಟು ಮಹಿಳಾ ಸದಸ್ಯಯರೇ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಈ ಮೂಲಕ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮಣಿಗಳ ದರ್ಬಾರ್‌ ನಡೆಯುತ್ತಿದೆ. 

ಫೆ.5ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಕೆಲ ಕಡೆ ಪುರುಷರು ಗೆದ್ದರೂ ಮೀಸಲಾತಿ ನಿಗದಿಯಿಂದ ಮಹಿಳೆಯರೇ ಆಯ್ಕೆಯಾಗಿದ್ದಾರೆ. 

ಸುರಪುರ, ಹುಣಸಗಿಯಲ್ಲಿ ಹೆಚ್ಚು: ಜಿಲ್ಲೆಯಲ್ಲಿ ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಅಧ್ಯಕ್ಷೆಯರಾಗಿ ಮಹಿಳೆಯರೇ ಹೆಚ್ಚು ಆಯ್ಕೆಯಾಗಿದ್ದಾರೆ.

ಹುಣಸಗಿ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ 12 ಅಧ್ಯಕ್ಷ ಸ್ಥಾನಗಳಿಗೆ ಮಹಿಳೆಯರು ಆಯ್ಕೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸುರಪುರ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ 16 ಕಡೆ ಅಧ್ಯಕ್ಷೆ ಸ್ಥಾನ ಅಲಂಕರಿಸಿದ್ದಾರೆ. ಯಾದಗಿರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮಣಿಗಳೇ ಹೆಚ್ಚು ಅಧ್ಯಕ್ಷೆ ಸ್ಥಾನ ಪಡೆದಿದ್ದಾರೆ.

ಯಾದಗಿರಿ ತಾಲ್ಲೂಕಿನ ಮುಂಡರಗಿ, ಅರಕೇರಾ (ಕೆ), ಕೌಳೂರು, ಬಳಿಚಕ್ರ, ಕಿಲ್ಲನಕೇರಾ, ಯರಗೋಳ, ಬಂದಳ್ಳಿ, ಮುದ್ನಾಳ, ಅರಿಕೇರಾ (ಬಿ), ಹತ್ತಿಕುಣಿ, ಮೋಟ್ನಳ್ಳಿ, ಅಲ್ಲಿಪುರ ಹಾಗೂ ಹೊನಗೇರಾ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರೇ ಅಧ್ಯಕ್ಷೆ ಸ್ಥಾನ ಪಡೆದಿದ್ದಾರೆ. 

ಸೈದಾಪುರ ವಲಯದ ಸೈದಾಪುರ, ಬಾಡಿಯಾಳ, ಅಜಲಾಪುರ, ಕಡೇಚೂರ, ಬೆಳಗುಂದಿ ಸೇರಿದಂತೆ 5 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಐವರು ಮಹಿಳಾ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. 

ಸ್ಥಳೀಯ ಸಂಸ್ಥೆಯಲ್ಲಿಯೂ ಮಹಿಳೆಯರೆ ಆಯ್ಕೆ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿಯೂ ಮಹಿಳೆಯರೇ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನ ಪಡೆದು ಆಳ್ವಿಕೆ ನಡೆಸುತ್ತಿದ್ದಾರೆ.

‘ನಮ್ಮ ಪಂಚಾಯಿತಿಗೆ ಬಹುದಿನಗಳ ನಂತರ ಎಸ್‌ಸಿ ಸಮುದಾಯಕ್ಕೆ ಮೀಸಲಾತಿ ಬಂದಿದೆ. ಮಹಿಳೆಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ. ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸಲು ಮೊದಲು ಆದ್ಯತೆ ನೀಡುತ್ತೇನೆ’ ಎನ್ನುತ್ತಾರೆ ಕುರಕುಂದಾ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಮೀನಾಕ್ಷಿ ವಿನೋದ ಅವರು.

‘ಗುರುಮಠಕಲ್ ಮತಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ, ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರ ಮಾರ್ಗದರ್ಶನದಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ’ ಎಂದು ತಿಳಿಸುತ್ತಾರೆ ಹೊನಗೇರಾ ಗ್ರಾ.ಪಂ ಅಧ್ಯಕ್ಷೆ ಮಮತಾ ಸಾಯಿಬಣ್ಣ ಯಾದವ ಅವರು.

‘ಗ್ರಾಮದ ಬಾವಿಯಲ್ಲಿ ಆರ್ಸೆನಿಕಯುಕ್ತ ನೀರು ಇದ್ದು, ಶುದ್ಧ ಕುಡಿಯವ ನೀರಿನ ಘಟಕ ಇಲ್ಲ. ಇದನ್ನು ನಿರ್ಮಿಸಲು ಮೊದಲ ಆದ್ಯತೆ ನೀಡುತ್ತೇನೆ’ ಎನ್ನುತ್ತಾರೆ ಹೆಬ್ಬಾಳ ಗ್ರಾಪಂ ಅಧ್ಯಕ್ಷೆ ಸೌಭಾಗ್ಯ ಚನ್ನಪ್ಪ ಚೆಟ್ಟಿ.

***

ಡಿಸಿ, ಸಿಇಒ, ಡಿಎಚ್‌ಒ ಮಹಿಳಾ ಅಧಿಕಾರಿಗಳು!

ಜಿಲ್ಲೆಯಲ್ಲಿ ಮೀಸಲಾತಿಯಿಂದ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆಯುವುದು ಒಂದೆಡೆಯಾದರೆ ಮಹಿಳಾ ಅಧಿಕಾರಿಗಳು ಆಡಳಿತದ ಚುಕ್ಕಾಣಿ ಹಿಡಿದು ಆಳ್ವಿಕೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಪಾಟೀಲ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 

2019ರಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಜಿಲ್ಲೆಗೆ ಬಂದಿದ್ದಾರೆ. 2020ರ ಆಗಸ್ಟ್‌ ತಿಂಗಳಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅಧಿಕಾರ ಸ್ವೀಕರಿಸಿದ್ದಾರೆ. ಇದಾದ ನಂತರ ಮಹಿಳಾ ಡಿಎಚ್‌ಒ ಕೂಡ ಬಂದಿದ್ದಾರೆ. ಈ ಮೂಲಕ ಗಿರಿಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳಿಂದಲೇ ಆಳ್ವಿಕೆ ನಡೆಯುತ್ತಿದೆ.

ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ. ಮಹಿಳಾ ಅಧ್ಯಕ್ಷೆಯಾಗಿ ಉತ್ತಮ ಆಡಳಿತ ನಡೆಸುತ್ತೇನೆ.
ಮೀನಾಕ್ಷಿ ವಿನೋದ, ಕುರಕುಂದಾ ಗ್ರಾ.ಪಂ ನೂತನ ಅಧ್ಯಕ್ಷೆ

ಗ್ರಾಮದ ಹಿರಿಯರು, ಮಹಿಳೆಯರು, ಯುವಕರ ಸಲಹೆ, ಸೂಚನೆಗಳನ್ನು ಮುಕ್ತವಾಗಿ ಸ್ವೀಕರಿಸುವೆ. ಚರಂಡಿ ಸ್ವಚ್ಛತೆ, ಶಿಕ್ಷಣ, ಆರೋಗ್ಯ ಕುಡಿಯುವ ನೀರು ಕುರಿತು ಗಮನಹರಿಸುವೆ.
ಮಮತಾ ಸಾಯಿಬಣ್ಣ ಯಾದವ, ಹೊನಗೇರಾ ಗ್ರಾ.ಪಂ ಅಧ್ಯಕ್ಷೆ

ಕಲ್ಲದೇವನಹಳ್ಳಿ ಗ್ರಾಮಕ್ಕೆ ಇದೇ ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ. ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ.
ಸೌಭಾಗ್ಯ ಚನ್ನಪ್ಪ ಚೆಟ್ಟಿ, ಹೆಬ್ಬಾಳ ಗ್ರಾಪಂ ಅಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು