ಬುಧವಾರ, ಆಗಸ್ಟ್ 10, 2022
25 °C
ಜಿಲ್ಲೆಯಲ್ಲಿ 925 ಪ್ರಾಥಮಿಕ, 122 ಪ್ರೌಢಶಾಲೆಗಳಿವೆ;, 2,691 ಶಿಕ್ಷಕರ ಹುದ್ದೆ ಖಾಲಿ ಇವೆ

ನಮ್ಮ ಜನ ನಮ್ಮ ಧ್ವನಿ: ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಮೇ 16 ರಿಂದ ಸರ್ಕಾರಿ ಶಾಲೆಗಳು ಆರಂಭವಾಗಿದ್ದು, ಶಿಕ್ಷಕರ, ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 2,691 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 925 ಪ್ರಾಥಮಿಕ ಶಾಲೆಗಳು, 122 ಪ್ರೌಢಶಾಲೆಗಳಿವೆ. ಶಿಕ್ಷಣ ಇಲಾಖೆಯಲ್ಲಿ ಹಳೆ ತಾಲ್ಲೂಕುಗಳಲ್ಲಿ ಮಾತ್ರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿವೆ. ಅಲ್ಲಿಂದಲೇ ಹೊಸ ತಾಲ್ಲೂಕುಗಳು ಕಾರ್ಯನಿರ್ವಹಿಸಲ್ಪಡುತ್ತಿವೆ.

ಆಟದ ಮೈದಾನ, ಶೌಚಾಲಯ ಕೊರತೆ, ವಿದ್ಯುತ್‌ ಸೌಲಭ್ಯ, ಕುಡಿಯುವ ನೀರಿನ ಸಮಸ್ಯೆ, ಆವರಣಗೋಡೆ ಸೇರಿದಂತೆ ಹಲವಾರು ಸೌಲಭ್ಯಗಳ ಕೊರತೆಯು ಸರ್ಕಾರಿ ಶಾಲೆಗಳಲ್ಲಿ ಕಂಡು ಬರುತ್ತಿವೆ. ಶಾಲಾರಂಭಕ್ಕೆ ಸರ್ಕಾರ ಒತ್ತು , ಸೌಲಭ್ಯ ಕಲ್ಪಿಸಲು ನೀಡಿಲ್ಲ ಎನ್ನುವುದು ಪೋಷಕರ ದೂರಾಗಿದೆ.

ಸೌಲಭ್ಯಗಳು ಇಲ್ಲದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಹೇಗೆ ಕಳಿಸುವುದು ಎನ್ನುವುದೂ ಪಾಲಕರ ಪ್ರಶ್ನೆಯಾಗಿದೆ.

ಸೌಲಭ್ಯಗಳ ಕೊರತೆ

ಜಿಲ್ಲೆಯ ಹಲವಾರು ಪ್ರಾಥಮಿಕ ಶಾಲೆಗಳಲ್ಲಿ ಕುಡಿಯುವ ನೀರು, ಆಟದ ಮೈದಾನ, ವಿದ್ಯುತ್‌ ಸೌಲಭ್ಯ, ಆವರಣಗೋಡೆ ಇಲ್ಲ.
ಶಹಾಪುರ ತಾಲ್ಲೂಕಿನಲ್ಲಿ 48,388 ವಿದ್ಯಾರ್ಥಿಗಳಿದ್ದು, 247 ಶಾಲೆಗಳಲ್ಲಿ ಬಾಲಕರಿಗೆ ಶೌಚಾಲಯ ವ್ಯವಸ್ಥೆ ಇದೆ. 38 ಕಡೆ ಶೌಚಕ್ಕೆ ಬಯಲೇ ಗತಿಯಾಗಿದೆ. 260 ಶಾಲೆಗಳಲ್ಲಿ ಬಾಲಕಿಯರ ಶೌಚಾಲಯವಿದ್ದು, 25 ಕಡೆ ಇಲ್ಲ. 281 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿದೆ. 4 ಶಾಲೆಗಳಲ್ಲಿ ನೀರಿಗಾಗಿ ಅಲೆದಾಡುವುದು ಸಾಮಾನ್ಯವಾಗಿದೆ. 114 ಶಾಲೆಗಳಲ್ಲಿ ಆಟದ ಮೈದಾನವಿದ್ದು, 174 ಕಡೆ ಆಟವಾಡಲು ಜಾಗವೇ ಇಲ್ಲದಂತೆ ಆಗಿದೆ. 263 ಶಾಲೆಗಳಲ್ಲಿ ವಿದ್ಯುತ್‌ ಸೌಲಭ್ಯ ಇದ್ದು, 22 ಕಡೆ ಇಲ್ಲ. 200 ಶಾಲೆಗಳಿಗೆ ಆವರಣ ಗೋಡೆ ಇದ್ದು, 85 ಕಡೆ ಇಲ್ಲ.

ಸುರಪುರ ತಾಲ್ಲೂಕಿನಲ್ಲಿ 58,785 ವಿದ್ಯಾರ್ಥಿಗಳು ದಾಖಲು ಮಾಡಿಕೊಂಡಿದ್ದಾರೆ. 241 ಕಡೆ ಬಾಲಕರ ಶೌಚಾಲಯವಿದೆ. 105 ಕಡೆ ಇಲ್ಲ. 285 ಕಡೆ ಬಾಲಕಿಯರ ಶೌಚಾಲಯವಿದ್ದು, 61 ಕಡೆ ಇಲ್ಲ. 339 ಕಡೆ ಕುಡಿಯುವ ನೀರಿನ ಸಮಸ್ಯೆ ಇಲ್ಲ.

7 ಕಡೆ ನೀರಿನ ಅಭಾವ ಇದೆ. 194 ಕಡೆ ಆಟದ ಮೈದಾನವಿದ್ದು, 175 ಕಡೆ ಇಲ್ಲ. 310 ಶಾಲೆಗಳಲ್ಲಿ ವಿದ್ಯುತ್‌ ಸೌಲಭ್ಯವಿದ್ದು, 11 ಕಡೆ ಇಲ್ಲ. 255 ಕಡೆ ಆವರಣಗೋಡೆ ಇದೆ. 75 ಕಡೆ ಇಲ್ಲ.

ಯಾದಗಿರಿ ತಾಲ್ಲೂಕಿನ 294 ಶಾಲೆಗಳಲ್ಲಿ 46,980 ವಿದ್ಯಾರ್ಥಿಗಳಿದ್ದಾರೆ. 273 ಶಾಲೆಗಳಲ್ಲಿ ಬಾಲಕರ ಶೌಚಾಲಯ ವ್ಯವಸ್ಥೆ ಇದ್ದು, 21 ಕಡೆ ಇಲ್ಲ. 278 ಕಡೆ ಬಾಲಕಿಯರ ಶೌಚಾಲಯಕ್ಕೆ ಸಮಸ್ಯೆ ಇಲ್ಲ. 16 ಕಡೆ ಶೌಚಾಲಯ ವ್ಯವಸ್ಥೆ ಇಲ್ಲ. 292 ಕಡೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. 2 ಕಡೆ ಮಾತ್ರ ನೀರಿನ ಸಮಸ್ಯೆ ಇದೆ. 119 ಕಡೆ ಆಟದ ಮೈದಾನವಿದ್ದು, 175 ಕಡೆ ಇಲ್ಲ. 283 ಕಡೆ ವಿದ್ಯುತ್‌ ಸೌಲಭ್ಯ ಇದ್ದು, 11 ಕಡೆ ಇಲ್ಲ. 219 ಶಾಲೆಗಳಿಗೆ ಆವರಣಗೋಡೆ ಇದ್ದು, 75 ಕಡೆ ಇಲ್ಲ.

ಪ್ರೌಢಶಾಲೆಗಳಲ್ಲಿ ಕೊರತೆ ಕಡಿಮೆ

ಪ್ರಾಥಮಿಕ ಶಾಲೆಗಳಿಗೆ ಹೋಲಿಕೆ ಮಾಡಿದರೆ ಪ್ರೌಢಶಾಲೆಗಳಲ್ಲಿ  ಕೆಲಮಟ್ಟಿಗೆ ಹೆಚ್ಚಿಗೆ ಇವೆ.

ಜಿಲ್ಲೆಯ 122 ಪ್ರೌಢಶಾಲೆಗಳ ಮೂರು ತಾಲ್ಲೂಕುಗಳಲ್ಲಿ 28,364 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 105 ಕಡೆ ಬಾಲಕರ ಶೌಚಾಲಯ ವ್ಯವಸ್ಥೆ ಇದೆ. 17 ಕಡೆ ಇಲ್ಲ. 112 ಕಡೆ ಬಾಲಕಿಯರ ಶೌಚಾಲಯವಿದ್ದು, 10 ಕಡೆ ಇಲ್ಲ. 118 ಕಡೆ ಕುಡಿಯುವ ನೀರಿನ ವ್ಯವಸ್ಥೆ ಇದ್ದು, 4 ಕಡೆ ಇಲ್ಲ. 100 ಶಾಲೆಗಳಲ್ಲಿ ಆಟದ ಮೈದಾನವಿದೆ. 22 ಕಡೆ ಇಲ್ಲ. ವಿದ್ಯುತ್‌ ಸೌಲಭ್ಯ ಮಾತ್ರ 122 ಶಾಲೆಗಳಲ್ಲಿದೆ. 108 ಶಾಲೆಗಳಲ್ಲಿ ಆವರಣಗೋಡೆ ಸೌಲಭ್ಯವಿದ್ದು, 14 ಕಡೆ ಈ ಸೌಲಭ್ಯವಿಲ್ಲ.

ಕೋಣೆಗಳ ವಿವರ

ಪ‍್ರಾಥಮಿಕ ಶಾಲೆಗಳಲ್ಲಿ 1,053 ಶಾಲೆಗಳು ಹೆಚ್ಚಿನ ದುರಸ್ತಿಯಲ್ಲಿದ್ದು, ಪ್ರೌಢಶಾಲೆಗಳಲ್ಲಿ 117 ಕಡೆ ದುರಸ್ತಿ ಇವೆ. 1,548 ಮುಖ್ಯಶಿಕ್ಷಕರ ಕೋಣೆ, ಅಡುಗೆ ಕೋಣೆ ಇತ್ಯಾದಿ ಇವೆ.

ಶಹಾಪುರ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ 1,697 ಕೋಣೆಗಳಿದ್ದು, 1,108 ಗುಣಮಟ್ಟದ
ಕೋಣೆಗಳಿವೆ. 224 ಸಣ್ಣಮಟ್ಟದ ದುರಸ್ತಿ, 365 ದೊಡ್ದ
ದುರಸ್ತಿಗೆ ಬಂದಿವೆ. 423 ಇತರೆ ಕೋಣೆಗಳಿವೆ.

ಸುರಪುರ ತಾಲ್ಲೂಕಿನಲ್ಲಿ 2,068 ಶಾಲೆಗಳಲ್ಲಿ 1,291 ಗುಣಮಟ್ಟದ ಕೋಣೆಗಳಿವೆ. 352 ಸಣ್ಣಮಟ್ಟದ ದುರಸ್ತಿ, 425 ದೊಡ್ಡ ಮಟ್ಟದ ದುರಸ್ತಿಗಾಗಿ ಕಾದಿವೆ. 284 ಇತರೆ ಕೋಣೆಗಳಿವೆ.

ಯಾದಗಿರಿ ತಾಲ್ಲೂಕಿನಲ್ಲಿ 1,785 ಶಾಲೆಗಳ ಕೋಣೆಗಳಿದ್ದು, 1,281 ಗುಣಮಟ್ಟ ಇದ್ದು, 241 ಸಣ್ಣಪುಟ್ಟ ದುರಸ್ತಿಗಾಗಿ ಕಾದಿವೆ. 263 ದೊಡ್ಡ ಮಟ್ಟದ ದುರಸ್ತಿಗಾಗಿ ಕಾದಿವೆ. 931 ಇತರೆ ಕಟ್ಟಡಗಳಿವೆ.

122 ಪ್ರೌಢಶಾಲೆಗಳಲ್ಲಿ 28,363 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 1,027 ಕೋಣೆಗಳಿವೆ. 730 ಉತ್ತಮ ಗುಣಮಟ್ಟದ ಕಟ್ಟಡಗಳಿವೆ. 180 ಸಣ್ಣಮಟ್ಟದ ದುರಸ್ತಿಗಳಿವೆ. 117 ದೊಡ್ಡ ಮಟ್ಟದ ದುರಸ್ತಿಗಳಿವೆ. 617 ಇತರೆ ಕೋಣೆಗಳಿವೆ.

ನಗರದ ಪ್ರದೇಶದಲ್ಲಿರುವ ಬಹುತೇಕ ಶಾಲೆಗಳಲ್ಲಿ ಸೌಲಭ್ಯಗಳಿಲ್ಲ. ಇನ್ನೂ ಗ್ರಾಮೀಣ ಭಾಗದಲ್ಲಿ ಅಷ್ಟಕ್ಕಷ್ಟೆ ಎನ್ನುವಂತೆ ಆಗಿದೆ. ಶೌಚಾಲಯ ಸಮಸ್ಯೆ ಎಲ್ಲ ಶಾಲೆಗಳಲ್ಲಿ ತೀವ್ರವಾಗಿದೆ. 

‘ಆವರಣಗೋಡೆ ಹಾರಿ ಶಾಲೆಯ ಒಳಗೆ ಪ್ರತಿದಿನ ಜೂಜಾಟ ಆಡುತ್ತಾರೆ. ಈ ಕುರಿತು ಪೊಲೀಸರಿಗೂ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಗುಟಕಾ ತಿಂದು ಶಾಲೆಯಲ್ಲಿ ಉಗುಳುತ್ತಾರೆ. ಆವರಣಗೋಡೆಗೆ ಬೇಲಿ
ಇದ್ದರೂ ಅದನ್ನು ತೆಗೆದು ಶಾಲೆ ಒಳಗೆ ಬಂದು ಇಸ್ಪೀಟ್‌ ಆಡುತ್ತಾರೆ. ರಾತ್ರಿ ಕುಡಿದು, ಬಾಟಲಿ ಶಾಲೆಯಲ್ಲಿ ಬಿಸಾಡುತ್ತಾರೆ. ಬೆಳಿಗ್ಗೆ ನಾವೇ ಬಂದು ಸ್ವಚ್ಛತೆ ಮಾಡಬೇಕು’ ಎನ್ನುತ್ತಾರೆ ಶಾಲೆಯ ಪ್ರಭಾರಿ ಮುಖ್ಯಗುರು ಮಹ್ಮದ್‌ ಆರೀಫ್‌.

ಜಿಲ್ಲೆಯಲ್ಲಿರುವ ಪ್ರಾಥಮಿಕ ಶಾಲೆಗಳು

ತಾಲ್ಲೂಕು;ಶಾಲೆಗಳ ಸಂಖ್ಯೆ
ಶಹಾಪುರ;285
ಸುರಪುರ;346
ಯಾದಗಿರಿ;294
ಒಟ್ಟು;925

–––––

ಜಿಲ್ಲೆಯಲ್ಲಿರುವ ಪ್ರೌಢಶಾಲೆಗಳು

ತಾಲ್ಲೂಕು;ಶಾಲೆಗಳ ಸಂಖ್ಯೆ
ಶಹಾಪುರ;38
ಸುರಪುರ;45
ಯಾದಗಿರಿ;39
ಒಟ್ಟು;122

–––––––

ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ವಿವರ

ತಾಲ್ಲೂಕು;ಮಂಜೂರು;ಭರ್ತಿ;ಖಾಲಿ
ಶಹಾಪುರ;1,753;951;802
ಸುರಪುರ;2,054;1,087;967
ಯಾದಗಿರಿ;1,764;1,149;615
ಒಟ್ಟು;5571;3,187;2,384

––––––––––

ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ವಿವರ

ತಾಲ್ಲೂಕು;ಮಂಜೂರು;ಭರ್ತಿ;ಖಾಲಿ
ಶಹಾಪುರ;376;283;93
ಸುರಪುರ;456;337;119
ಯಾದಗಿರಿ;393;298;95
ಒಟ್ಟು;1,225;918;307
ಆಧಾರ: ಶಿಕ್ಷಣ ಇಲಾಖೆ
****
ಶಿಕ್ಷಕರ ಕೊರತೆ, ಶಿಥಿಲಗೊಂಡ ಶಾಲಾ ಕೋಣೆಗಳು

ಸುರಪುರ: ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳಲ್ಲಿ 45 ಸರ್ಕಾರಿ ಪ್ರೌಢಶಾಲೆಗಳು ಮತ್ತು 347 ಸರ್ಕಾರಿ ಪ್ರಾಥಮಿಕ ಶಾಲೆಗಳು ಇವೆ.

ಪ್ರಾಥಮಿಕ ಶಾಲೆಗೆ ಮಂಜೂರಾದ ಒಟ್ಟು 2,052 ಶಿಕ್ಷಕರ ಹುದ್ದೆಗಳಲ್ಲಿ 848 ಖಾಲಿ ಇವೆ. ಅದರಲ್ಲಿ 650 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.

ಪ್ರೌಢಶಾಲೆಗೆ ಒಟ್ಟು 272 ಮಂಜೂರಾದ ಶಿಕ್ಷಕರ ಹುದ್ದೆಗಳ ಪೈಕಿ 69 ಖಾಲಿ ಇವೆ. ಖಾಲಿ ಇರುವ ಎಲ್ಲ 69 ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಎಲ್ಲ ಶಾಲೆಗಳಿಗೆ ಸ್ವಂತ ಕಟ್ಟಡಗಳಿವೆ. ಅದರಲ್ಲಿ ಶೇ 50 ರಷ್ಟು ಹಳೆಯ ಕಟ್ಟಡಗಳು. ಹಲವು ತರಗತಿ ಕೋಣೆಗಳ ಛತ್ತುಗಳು ಕಿತ್ತು ಹೋಗಿವೆ. ಇನ್ನು ಕೆಲ ಶಾಲೆಗಳ ಕೋಣೆಗಳು ಶಿಥಿಲಗೊಂಡಿದ್ದು ಬೀಳುವ ಹಂತದಲ್ಲಿವೆ.

ಈ ಎಲ್ಲ ಕಾರಣಗಳು ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ. ಬಿಸಿಯೂಟ ಇತರ ಯೋಜನೆಗಳು, ಸಭೆ, ಸರ್ಕಾರಿ ಸಮಾರಂಭ, ಚುನಾವಣೆ ಕೆಲಸ ಇತರ ಕಾರಣಗಳು ಶಿಕ್ಷಕರ ಮೇಲೆ ಒತ್ತಡ ಹೇರಿವೆ. ಇದೂ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರಣವಾಗಿವೆ ಎನ್ನುತ್ತಾರೆ ಪಾಲಕರು.
****
ಶಹಾಪುರ: 712 ಶಿಕ್ಷಕರ ಹುದ್ದೆ ಖಾಲಿ!

ಶಹಾಪುರ: ತಾಲ್ಲೂಕಿನಲ್ಲಿ ಒಟ್ಟು 712 ಶಿಕ್ಷಕರ ಹುದ್ದೆ ಖಾಲಿ ಇವೆ. ಶೈಕ್ಷಣಿಕ ವರ್ಷ ಆರಂಭವಾಗಿದೆ. ಅದರಂತೆ ತಾತ್ಕಾಲಿಕವಾಗಿ 530 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಕಳೆದ ಎರಡು ವರ್ಷದಿಂದ ಕೋವಿಡ್‌ನಿಂದ ಮಕ್ಕಳು ಅಕ್ಷರ ಕಲಿಕೆಯಿಂದ ದೂರ ಉಳಿದುಕೊಂಡಿದ್ದರು. ಈಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆ ಖಾಲಿ ಇರುವುದು ಪಾಲಕರಿಗೆ ಆತಂಕ ಶುರುವಾಗಿದೆ.

ಅಲ್ಲದೆ ತಾಲ್ಲೂಕಿನ 15 ಶಾಲೆಗಳಲ್ಲಿ ಶಿಕ್ಷಕರಿಲ್ಲ. ಅವರನ್ನು ತಾತ್ಕಾಲಿಕವಾಗಿ ನಿಯೋಜನೆ ಮೇಲೆ ಕಳುಹಿಸಲಾಗಿದೆ. ಆದರೆ, ಮೂಲ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜನೆಗೊಳಿಸಬೇಡಿ. ಇದರಿಂದ ನಮ್ಮ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಪಾಲಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಇದು ನಮಗೆ ದೊಡ್ಡ ತಲೆ ನೋವಾಗಿದೆ. ಕೊಂಕಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ 368 ವಿದ್ಯಾರ್ಥಿಗಳು ಇದ್ದಾರೆ. ಅಲ್ಲಿ ಕೇವಲ ಒಬ್ಬ ಶಿಕ್ಷಕರು ಇದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ ಒಬ್ಬರು ಬೇಸರ ವ್ಯಕ್ತಪಡಿಸಿದರು.

‘ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಮನವಿ ಮಾಡಿದ್ದೇವೆ. ಸಾಧ್ಯವಾದಷ್ಟು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ, ಶಾಸಕರ ಅನುದಾನ, ನರೇಗಾ ಮುಂತಾದ ಯೋಜನೆ ಅಡಿಯಲ್ಲಿ ಶಾಲಾ ಕಾಂಪೌಂಡ್‌, ಕೋಣೆ ನಿರ್ಮಾಣ ಸೇರಿದಂತೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಶಾಸಕರು ಭರವಸೆ ನೀಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ತಿಳಿಸಿದ್ದಾರೆ.

***

ಶೌಚಾಲಯ ದುರಸ್ತಿ ಮಾಡದೇ ಸುಣ್ಣ ಬಣ್ಣ ಮಾಡಿದ್ದಾರೆ. ಶೌಚಾಲಯ ಬಳಕೆಗೆ ಯೊಗ್ಯವಾಗಿಲ್ಲ. ಶಿಕ್ಷಣ ಇಲಾಖೆಯ ಎಲ್ಲರ ಗಮನಕ್ಕೂ ತಂದರೂ ಯಾವುದೇ ಪ್ರಯೋಜವಾಗಿಲ್ಲ
ಮಲ್ಲಿಕಾರ್ಜುನ, ಎಸ್‌ಡಿಎಂಸಿ ಸದಸ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ, ಯಾದಗಿರಿ

***

ಶಾಲೆಯಲ್ಲಿ ನಮ್ಮ ಮಕ್ಕಳೇ ಓದುವ ಕಾರಣ ಶಾಲೆ ಅಕ್ಕಪಕ್ಕದ ಮನೆಯವರು ಶಾಲೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇದನ್ನು ಕೂಡ ನಮ್ಮ ಮನೆಯಂತೆ ಕಾಳಜಿ ವಹಿಸಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ
ಗುಲಾಮ್‌ ಜಿಲಾನಿ ಆಫ್ಘಾನ್‌, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ, ಮುಸ್ಲಿಂಪುರ

***

ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೌಚಾಲಯ ಸಮಸ್ಯೆ ಇದ್ದು, ಸ್ವಚ್ಛತೆ ಮಾಡುವವರು ಇಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಆಟದ ಮೈದಾನ, ಆವರಣಗೋಡೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಮಾಡಿಸಿಕೊಳ್ಳಲು ಅವಕಾಶವಿದೆ
ಶಾಂತಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

***

ಸರ್ಕಾರಿ ಶಾಲೆಗಳಲ್ಲಿ ಮತ್ತಷ್ಟು ಸೌಕರ್ಯ ಒದಗಿಸಬೇಕು. ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವ ಹಾಗೆ ಬೋಧನೆ ಇರಬೇಕು. ಇದು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ
ರಾಜು ಕಟ್ಟಿಮನಿ, ಪೋಷಕ ಸುರಪುರ

***

ತಾಲ್ಲೂಕಿನಲ್ಲಿ ಶಿಕ್ಷಕರ ಹುದ್ದೆ ಕೊರತೆ ಇದ್ದ ಕಾರಣ 530 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮೇಲಧಿಕಾರಿಗೆ ಹಾಗೂ ಶಾಸಕರಿಗೆ ಮನವಿ ಮಾಡಲಾಗಿದೆ
ರುದ್ರಗೌಡ ಪಾಟೀಲ ಬಿಇಒ, ಶಹಾಪುರ

***

ಕೋಣೆ ಕೊರತೆ ಇರುವ ಮತ್ತು ಶಿಥಿಲಗೊಂಡಿರುವ ಕೋಣೆಗಳ ಕಾಮಗಾರಿ ಕೈಗೊಳ್ಳಲು ಡಿಡಿಪಿಐ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ
ಮಹಾದೇವರೆಡ್ಡಿ, ಬಿಇಒ ಸುರಪುರ

***

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು