ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಇ–ಶ್ರಮ್‌ ಕಾರ್ಡ್‌: 65 ಸಾವಿರ ನೋಂದಣಿ

ನೋಂದಣಿ ಮಾಡಿಸಿಕೊಂಡವರು ಮೃತಪಟ್ಟಲ್ಲಿ ₹ 2 ಲಕ್ಷ ಪರಿಹಾರ
Last Updated 10 ಜನವರಿ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ–ಶ್ರಮ್‌ ಕಾರ್ಡ್‌ಗೆ ಜಿಲ್ಲೆಯಲ್ಲಿ ಇದುವರೆಗೆ 65 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ.

ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ (NDUW) ಯೋಜನೆಯಡಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುತ್ತಿದೆ.

ಜಿಲ್ಲೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವವರು, ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹೆಚ್ಚಿದ್ದು, ಇಂಥವರು ಸರ್ಕಾರದ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಾರ್ಮಿಕರ ಇಲಾಖೆಯ ಅಧಿಕಾರಿಗಳು ಸಭೆಗಳನ್ನು ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಹೊಲಿಗೆ, ಎಂಬ್ರಾಡಿಂಗ್‌, ಮೆಕ್ಯಾನಿಕ್‌, ವಾಹನಗಳ ಕ್ಲಿನರ್‌, ರಿಕ್ಷಾ, ಕುಂಬಾರರು, ಕಲ್ಲು ಒಡೆಯುವವರು, ಬಡಗಿಗಳು, ಅಡುಗೆ ಕೆಲಸಗಾರರು, ಮನೆಗೆಲಸದವರು, ಮಾಂಸ – ಮೀನು ಮಾರಾಟಗಾರರು, ಆಭರಣಗಳ ತಯಾರಕರು, ನೇಕಾರರು, ಬೀದಿ ವ್ಯಾಪಾರಿಗಳು, ಛಾಯಾಚಿತ್ರ ಉತ್ಪನ್ನ ಯಂತ್ರಗಳ ಆಪರೇಟರ್‌ಗಳು, ಮಾಣಿಗಳು, ಕೃಷಿಕರು ಹೀಗೆ 356ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರು ಇ–ಶ್ರಮ್‌ ಕಾರ್ಡ್‌ಗೆ ನೋಂದಾಯಿಸಬಹುದಾಗಿದೆ.

ಅಸಂಘಟಿತ ವಲಯದಲ್ಲಿ ಈ ಮುಂಚೆ ಕೆಲ ಇಲಾಖೆಗಳು ಮಾತ್ರ ಇದ್ದವು. ಈಗ 356ಕ್ಕೂ ಹೆಚ್ಚು ಅಸಂಘಟಿತ ವಿವಿಧ ಕಾರ್ಮಿಕ ವರ್ಗಗಳನ್ನು ಸೇರಿಸಲಾಗಿದೆ.

ಯಾರು ನೋಂದಣಿಗೆ ಅರ್ಹರು

ಇ–ಶ್ರಮ್‌ ಯೋಜನೆಗೆ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬಹುದು.

16ರಿಂದ 59 ವಯೋಮಾನದವರು ಈ ಯೋಜನೆಗೆ ಅರ್ಹರಾಗಿದ್ದು, ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಪಿಎಫ್‌ಒ ಮತ್ತು ಇಎಸ್‌ಐ ಸದಸ್ಯರಾಗಿರಬಾರದು. ಅಂಥವರು ಮಾತ್ರ ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಕಾರ್ಮಿಕರ ಇಲಾಖೆಯಲ್ಲಿ , ಜಿಲ್ಲೆಯಲ್ಲಿನ 500ಕ್ಕೂ ಸಾಮಾನ್ಯ ಸೇವಾ ಸೇವಾ ಕೇಂದ್ರ (ಸಿಎಸ್‌ಸಿ)ಗಳಲ್ಲಿ ಹಾಗೂ ಮೊಬೈಲ್‌ನಲ್ಲಿ ಸ್ವಯಂ ಆಗಿಯೂ ಇ–ಶ್ರಮ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.


ನೋಂದಣಿಗೆ ಬೇಕಾಗುವ ದಾಖಲೆಗಳು

ಆಧಾರ್‌ ಕಾರ್ಡ್‌, ಆಧಾರ ಸಂಖ್ಯೆಗೆ ಜೋಡಣೆಯಾದ ಮೊಬೈಲ್‌ ಸಂಖ್ಯೆ, ಸಕ್ರಿಯ ಬ್ಯಾಂಕ್‌ ಖಾತೆಯ ವಿವರ ನೀಡಬೇಕು.


ನೋಂದಣಿಯ ಪ್ರಯೋಜನೆಗಳು

ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಬಹುದು. ಒಂದು ವರ್ಷಕ್ಕೆ ‘ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ’ (PM-SBY) ಪ್ರಯೋಜನೆ ಪಡೆಯಬಹುದು. ನೋಂದಣಿ ಮಾಡಿಸಿದವರು ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಅಂಗವಿಕಲತೆ ಹೊಂದಿದಲ್ಲಿ ₹2 ಲಕ್ಷ ಪರಿಹಾರ, ಅಂಗವೈಕಲ್ಯಕ್ಕೆ ₹ 1 ಲಕ್ಷ ಪರಿಹಾರ ಪಡೆಯಬಹುದಾಗಿದೆ. ಇದರ ಜೊತೆಗೆ ದೇಶದಲ್ಲಿ ಯಾವ ಯಾವ ಕಾರ್ಮಿಕರು ಎಷ್ಟು ಇದ್ದಾರೆ ಎನ್ನುವ ದತ್ತಾಂಶವು ಸರ್ಕಾರಕ್ಕೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೆರವಾಗುತ್ತದೆ. ಜೊತೆಗೆ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ನೀತಿ ಮತ್ತು ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ.

***

3 ಲಕ್ಷ ನೋಂದಣಿ ಗುರಿ


ಜಿಲ್ಲೆಯಲ್ಲಿ 3 ಲಕ್ಷ ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಸದ್ಯಕ್ಕೆ 65,467 ಮಂದಿ ಇ–ಶ್ರಮ್‌ ಕಾರ್ಡ್‌ಗೆ ನೋಂದಣಿ ಮಾಡಿಕೊಂಡಿದ್ದಾರೆ. ಗುರಿಯನ್ನು ತಲುಪಲು ಕಾರ್ಮಿಕ ಇಲಾಖೆಯಿಂದ ಜಾಗೃತಿ ಸಭೆಗಳನ್ನು ಮಾಡಲಾಗುತ್ತಿದೆ.

2021ರಲ್ಲಿ ಈ ಯೋಜನೆ ಆರಂಭವಾಗಿದೆ. ಕಟ್ಟಡ ಕಾರ್ಮಿಕರು ಸೇರಿದಂತೆ ಈಗಾಗಲೇ ಕಾರ್ಮಿಕ ಇಲಾಖೆಯ ಕಾರ್ಡ್‌ ಹೊಂದಿದವರು ನೋಂದಣಿ ಮಾಡಿಕೊಳ್ಳಬಹುದು. ಇದರಿಂದ ಮೊದಲ ಕಾರ್ಡ್‌ ರದ್ದು ಆಗುವುದಿಲ್ಲ ಎಂದು ಕಾರ್ಮಿಕರ ಇಲಾಖೆಯ ಅಧಿಕಾರಿಗಳು ಸ್ಪಷ್ಟ‍ಪಡಿಸುತ್ತಾರೆ.

***

ಇ–ಶ್ರಮ್‌ ಕಾರ್ಡ್‌ಗೆ ಒಂದು ಬಾರಿ ನೋಂದಣಿ ಮಾಡಿಕೊಂಡರೆ ಸಾಕು ಜೀವನ ಪರ್ಯಂತರ ಇರುತ್ತದೆ. ನವೀಕರಿಸುವ ಮಾಡುವ ಅವಶ್ಯವಿಲ್ಲ. ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳಿ
–ಉಮಾಶ್ರೀ ಕೋಳಿ,
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT