ಮಂಗಳವಾರ, ಅಕ್ಟೋಬರ್ 19, 2021
23 °C
ಜಿಲ್ಲೆಯ ಕೆಲ ಎಪಿಎಂಸಿಗಳು ಆವಕ ಇಲ್ಲದೇ ಖಾಲಿ ಖಾಲಿ, ಅಭಿವೃದ್ಧಿಗೆ ಕುಂಠಿತ

ಯಾದಗಿರಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಆದಾಯ ಕುಸಿತ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಳಕೆದಾರರ ಶುಲ್ಕವನ್ನು ಸರ್ಕಾರ ₹1.50 ಪೈಸೆಯಿಂದ 60 ಪೈಸೆಗೆ ಇಳಿಕೆ ಮಾಡಿದ ಬಳಿಕ ಸಂಗ್ರಹವಾಗುವ ಶುಲ್ಕದಲ್ಲಿ ಭಾರಿ ಇಳಿಕೆಯಾಗಿದ್ದು, ಆದಾಯ ಕುಸಿಯುತ್ತ ಸಾಗುತ್ತಿದೆ.

ಜಿಲ್ಲೆಯಲ್ಲಿ ಮೂರು ಮುಖ್ಯ ಮಾರುಕಟ್ಟೆಗಳು, ನಾಲ್ಕು ಉಪ ಮಾರುಕಟ್ಟೆಗಳು ಇದ್ದೂ ಕೆಲ ಕಡೆ ಯಾವುದೇ ಆವಕ ಬಾರದ ಕಾರಣ ಶುಲ್ಕವೇ ಸಂಗ್ರಹವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಗಳು ಖಾಲಿಯಾಗಿ ಉಳಿದಿವೆ.

ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳಲ್ಲಿ ಎಪಿಎಂಸಿಯ ಮುಖ್ಯ ಮಾರುಕಟ್ಟೆಗಳಿವೆ. ಯಾದಗಿರಿ ತಾಲ್ಲೂಕಿನ ಸೈದಾಪುರ, ಗುರುಮಠಕಲ್‌ ಪಟ್ಟಣದ ಗುರುಮಠಕಲ್‌, ಸುರಪುರ ತಾಲ್ಲೂಕಿನ ಕೆಂಭಾವಿ, ಹುಣಸಗಿ ತಾಲ್ಲೂಕಿನ ಹುಣಸಗಿಯಲ್ಲಿ ಉಪ ಮಾರುಕಟ್ಟೆಗಳಿವೆ.

ಬಾರದ ಆವಕ: ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನಲ್ಲಿ ಮಾತ್ರ ಎಪಿಎಂಸಿಗೆ ವಿವಿಧ ಬೆಳೆಗಳ ಆವಕವಾಗುತ್ತಿದೆ. ಉಳಿದ ತಾಲ್ಲೂಕುಗಳಲ್ಲಿ ಮಾರುಕಟ್ಟೆ ಇದ್ದರೂ ಯಾವುದೇ ಪ್ರಯೋಜವಿಲ್ಲದಂತೆ ಆಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಸೂರ್ಯಕಾಂತಿ ಆವಕ ಬಂದರೆ ಉಳಿದ ಮಾರುಕಟ್ಟೆಗಳಲ್ಲಿ ಖಾಲಿ ಖಾಲಿಯಾಗುತ್ತದೆ.

ಜಿಲ್ಲೆಯಲ್ಲಿ ಹತ್ತಿ, ಭತ್ತ ಪ್ರಮುಖ ಬೆಳೆಗಳು. ಇವು ಎಪಿಎಂಸಿಗೆ ಬಾರದೇ ಖಾಸಗಿಯಾಗಿ ಹೆಚ್ಚು ಮಾರಾಟ ಆಗುತ್ತಿದೆ. ಇದರಿಂದ ಎಪಿಎಂಸಿಗೆ ಯಾವುದೇ ಆದಾಯ ಬರುತ್ತಿಲ್ಲ.

ಗುರಿ ತಲು‍ಪುದೇ ಕಷ್ಟ

₹60 ಪೈಸೆ ಶುಲ್ಕ ಸಂಗ್ರಹ 2021ರ ಜನವರಿ 2ರಿಂದ ಜಾರಿಗೆ ಬಂದಿದೆ. ಆದರೆ, ಈ ವರ್ಷಕ್ಕೆ ಇರುವ ಗುರಿ ತಲುಪಲು ಸಾಧ್ಯವೇ ಇಲ್ಲದಂತೆ ಪರಿಸ್ಥಿತಿ ಮಾರುಕಟ್ಟೆಗಳಲ್ಲಿ ನಿರ್ಮಾಣವಾಗಿದೆ.

ಯಾದಗಿರಿ ಮುಖ್ಯ ಮಾರುಕಟ್ಟೆಗೆ 2021–22ನೇ ಸಾಲಿನಲ್ಲಿ ₹2.95 ಕೋಟಿ ಶುಲ್ಕದ ಗುರಿ ಇದೆ. ಆದರೆ, ಆಗಸ್ಟ್‌ ಅಂತ್ಯಕ್ಕೆ ಕೇವಲ ₹58 ಲಕ್ಷ ಮಾತ್ರ ಸಂಗ್ರಹವಾಗಿದೆ.
ಅದರಂತೆ ಶಹಾಪುರ ಮಾರುಕಟ್ಟೆಗೆ ₹45 ಲಕ್ಷ ಗುರಿ ಇದ್ದರೆ, ₹3.36 ಸಾವಿರ ಶುಲ್ಕ ಬಂದಿದೆ. ಸುರಪುರ
ಮಾರುಕಟ್ಟೆಗೆ ₹3.20 ಕೋಟಿ ಗುರಿ ಇದ್ದರೆ ₹36.96 ಲಕ್ಷ ಶುಲ್ಕ ಬಂದಿದೆ. ಇದರಿಂದ ಈ ಸಾಲಿನ ಮಾರುಕಟ್ಟೆ ಶುಲ್ಕ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿದೆ.

₹1.50 ಪೈಸೆ ಇದ್ದ ವೇಳೆ ಯಾದಗಿರಿಯಲ್ಲಿ ₹2.95 ಕೋಟಿ ಗುರಿ ಇದ್ದರೆ ₹2.83 ಕೋಟಿ ಶುಲ್ಕ ಸಂಗ್ರಹವಾಗಿತ್ತು. ಶಹಾಪುರ ತಾಲ್ಲೂಕಿನಲ್ಲಿ ₹45 ಲಕ್ಷ ಗುರಿ ಇತ್ತು. ₹1.59 ಸಾವಿರ ಬಂದಿದೆ. ಸುರಪುರ ತಾಲ್ಲೂಕಿನಲ್ಲಿ ₹3.20 ಕೋಟಿ ಗುರಿ ಇದ್ದರೆ ₹4.08 ಲಕ್ಷ ಬಂದಿತ್ತು.

***

ದಂಡ ಸಂಗ್ರಹಿಸುವ ಅಧಿಕಾರವೇ ಇಲ್ಲ!

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ಈಗ ದಂಡ ಸಂಗ್ರಹಿಸುವ ಅಧಿಕಾರವೇ ಇಲ್ಲ. ಮಾರುಕಟ್ಟೆಯ ಆವರಣ ಮುಂಭಾಗದ ರಸ್ತೆಯಲ್ಲಿ ಖಾಸಗಿ ವರ್ತಕರು ಯಾವುದೇ ಬೆಳೆಯನ್ನು ಖರೀದಿಸಿದರೂ ದಂಡ ವಿಧಿಸುವ ಅಧಿಕಾರವನ್ನೆ ಸರ್ಕಾರ ಕಸಿದುಕೊಂಡಿದೆ.

ಕಳೆದ ಮೂರು ವರ್ಷಗಳಲ್ಲಿ ದಂಡದಿಂದಲೇ ಕೋಟ್ಯಂತರ ರೂಪಾಯಿ ಎಪಿಎಂಸಿಗೆ ಆದಾಯ ಬಂದಿತ್ತು. ಎಪಿಎಂಸಿ ಹೊಸ ಕಾಯ್ದೆ ಪ್ರಕಾರ ಯಾರು ಎಲ್ಲಿ ಬೇಕಾದರೂ ಖರೀದಿ, ಮಾರಾಟ ಮಾಡಬಹುದಾಗಿದೆ. ಇದರಿಂದ ದಂಡದ ರೂಪದಲ್ಲಿ ಸಂಗ್ರಹವಾಗುತ್ತಿದ್ದ ಕೋಟ್ಯಂತರ ರೂಪಾಯಿ ಆದಾಯ ನಿಂತಿದೆ.

2018–19ರಲ್ಲಿ ಯಾದಗಿರಿ ತಾಲ್ಲೂಕಿನಲ್ಲಿ ಕಲಂ 70ರ ರಂತೆ ₹67 ಸಾವಿರ ದಂಡ ಸಂಗ್ರಹವಾಗಿದೆ. 2019–20ರಲ್ಲಿ ₹3.47 ಲಕ್ಷ, 2020–21ರಲ್ಲಿ ಹೊಸ ಕಾಯ್ದೆ ಬಂದ ನಂತರ ದಂಡ ವಿಧಿಸಲು ಅವಕಾಶವೇ ಇಲ್ಲದಂತೆ ಆಗಿದೆ.

ಇನ್ನೂ ಶಹಾಪುರ ತಾಲ್ಲೂಕಿನಲ್ಲಿ 2018–19ರಲ್ಲಿ ₹5.75 ಲಕ್ಷ, 2019–20ರಲ್ಲಿ ₹8.15 ಲಕ್ಷ ದಂಡದ ರೂಪದಲ್ಲಿ ಸಂಗ್ರಹವಾಗಿದೆ. ಸುರಪುರ ತಾಲ್ಲೂಕಿನಲ್ಲಿ 2018–19ರಲ್ಲಿ ದಂಡ ಸಂಗ್ರಹ ಮಾಡಿದ್ದು, ₹1.01 ಲಕ್ಷ ದಂಡ ವಸೂಲಿಯಾಗಿದೆ.

***

ಶುಲ್ಕ ಸಂಗ್ರಹ ತಗ್ಗಿದ್ದರಿಂದ ಮಾರುಕಟ್ಟೆಗೆ ಆದಾಯ ಕಡಿಮೆ ಆಗಿದೆ. ಹಿಂದೆ ಶುಲ್ಕ ಹೆಚ್ಚಿದ್ದರಿಂದ ಹೆಚ್ಚು ಸಂಗ್ರಹವಾಗುತ್ತಿತ್ತು

-ಎಸ್‌.ಎಂ.ಪತ್ತಾರ್‌, ಎಪಿಎಂಸಿ ಪ್ರಭಾರಿ ಸಹಾಯಕ ನಿರ್ದೇಶಕ 

***

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶುಲ್ಕ ಕಡಿಮೆಯಾಗಿದ್ದರಿಂದ ವರ್ತಕರಿಗೆ ಸಮಸ್ಯೆ ಆಗಿಲ್ಲ. ಆದರೆ, ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿದೆ

-ಮಾರುತಿ ಕಲಾಲ್‌, ಎಪಿಎಂಸಿ ವರ್ತಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು