ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಬಸ್ ತಂಗುದಾಣ: ‍ಪ್ರಯಾಣಿಕರಿಂದ ದೂರ

ಜಿಲ್ಲೆಯ ಬಹುತೇಕ ಬಸ್‌ ತಂಗುದಾಣಗಳಲ್ಲಿ ಸ್ವಚ್ಛತೆ ಮರೀಚಿಕೆ; ಸುತ್ತಲೂ ಗಿಡಗಂಟಿಗಳು
Last Updated 31 ಜನವರಿ 2021, 15:31 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ಮುಖ್ಯರಸ್ತೆಗಳಲ್ಲಿ ನಿರ್ಮಿಸಿರುವ ಬಸ್‌ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ನಿರ್ಮಿಸಿರುವ ಇಲಾಖೆಗಳು ಸಂಬಂಧಿಸಿದವರಿಗೆ ಹಸ್ತಾಂತರಿಸದಿರುವುದು ಕೂಡ ಇವು ಹಾಳಾಗಲು ಕಾರಣ.

ಶಾಸಕ, ಸಂಸದರ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರದಮೂಲಕಜಿಲ್ಲೆಯಲ್ಲಿ ಬಸ್‌ ತಂಗುದಾಣಗಳನ್ನು ನಿರ್ಮಿಸಲಾಗಿದೆ.

ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ನಿರ್ಮಾಣ ಮಾಡಿದ ನಂತರ ಅವುಗಳನ್ನು ದುರಸ್ತಿ ಮಾಡುವುದಕ್ಕೆ ಯಾರೂ ಮುಂದಾಗುತ್ತಿಲ್ಲ.

ಬಿರುಕು ಬಿಟ್ಟ ಕಟ್ಟಡಗಳ ದರ್ಶನ: ಜಿಲ್ಲೆಯ ಬಹುತೇಕ ಬಸ್‌ ತಂಗುದಾಣಗಳು ಬಿರುಕು ಬಿಟ್ಟಿವೆ. ಇವು ಪ್ರಯಾಣಿಕರಿಗೆ ಅನುಕೂಲವಾಗಿಲ್ಲ. ಯಾವಾಗ ಬೀಳುತ್ತವೋ ಎಂದು ಜೀವ ಭಯದಲ್ಲಿ ಆಶ್ರಯಪಡೆಯಬೇಕಾಗಿದೆ. ಮಳೆಗಾಲದಲ್ಲಿ ಅಲ್ಲಿ ನಿಂತುಕೊಳ್ಳಲು ಭಯಪಡುವಂತೆ ಆಗಿದೆ ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಜನ.

ಮುಳ್ಳುಕಂಟಿಗಳುಆವರಿಸಿದ ತಾಣಗಳು: ರಸ್ತೆ ಪಕ್ಕದಲ್ಲಿ ನಿರ್ಮಾಣಗೊಂಡಿರುವ ತಂಗುದಾಣಗಳಲ್ಲಿ ಮುಳ್ಳುಕಂಟಿಗಳು ಆವರಿಸಿದ್ದು, ಕೆಲವೆಡೆ ಒಳಗೆ ಪ್ರವೇಶಿಸಲು ಆಗದ ಪರಿಸ್ಥಿತಿ ಕಂಡು ಬರುತ್ತಿದೆ. ಸ್ವಚ್ಛತೆ ಮರೀಚಿಕೆಯಾಗಿದ್ದು, ಗಬ್ಬು ನಾರುತ್ತಿವೆ.

ಕೆಲ ಕಡೆ ರಸ್ತೆ ಬದಿಯ ತ್ಯಾಜ್ಯ ಸುಡಲು ಉಪಯೋಗಿಸುವ ಸ್ಥಳವಾಗಿಯೂ ಮಾರ್ಪಟ್ಟಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಇದ್ದ ತ್ಯಾಜ್ಯವನ್ನು ಗುಡ್ಡೆ ಹಾಕಿ ಸುಟ್ಟಿರುವುದು ಯಾದಗಿರಿ ತಾಲ್ಲೂಕಿನ ಬಂದಳ್ಳಿ ಬಸ್‌ ತಂಗುದಾಣದಲ್ಲಿ ಕಂಡು ಬಂದಿದೆ.

₹5 ವೆಚ್ಚದಲ್ಲಿ ನಿರ್ಮಾಣ: ಬಸ್‌ ತಂಗುದಾಣಗಳನ್ನು ಶಾಸಕ, ಸಂಸದರ ನಿಧಿಯಿಂದ ₹5 ಲಕ್ಷದ ವರೆಗೂ ವೆಚ್ಚಮಾಡಿ ನಿರ್ಮಿಸಲಾಗುತ್ತಿದೆ. ನಂತರ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಲಕ್ಷಾಂತರ ರೂಪಾಯಿ ವ್ಯಯವಾದರೂ ಕೆಲ ತಿಂಗಳು ಮಟ್ಟಿಗೆ ಮಾತ್ರ ಆಸನ ಸೌಲಭ್ಯ ಇರುತ್ತದೆ. ನಂತರ ಮೇಲ್ಛಾವಣಿ, ನಾಮಫಲಕ ಕಾಣಿಸುವುದಿಲ್ಲ. ನಗರದಲ್ಲಿ ಇವು ಭಿಕ್ಷುಕರ, ಮಾನಸಿಕ ಅಸ್ವಸ್ಥರ ತಾಣವಾಗಿವೆ.

45 ತಂಗುದಾಣ ನಿರ್ಮಾಣ: 2018–19ರ ಸಾಲಿನಲ್ಲಿ45 ಬಸ್‌ ತಂಗುದಾಣಗಳು ಮಂಜೂರು ಆಗಿವೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಡಿಎಲ್)‌ಮೂಲಕ25 ನಿರ್ಮಿಸಲಾಗಿದೆ. ಜಾಗದ ಸಮಸ್ಯೆಯಿಂದ20ತಂಗುದಾಣಗಳು ನಿರ್ಮಾಣಗೊಂಡಿಲ್ಲ.

ಗುರುಮಠಕಲ್‌ ಕ್ಷೇತ್ರದಲ್ಲಿ 4: 2018–19ರಲ್ಲಿಗುರುಮಠಕಲ್‌ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಶಾಸಕರ ಅನುದಾನದಲ್ಲಿಲೋಕೋಪಯೋಗಿ ಇಲಾಖೆಮೂಲಕಗುರುಮಠಕಲ್‌ ಕ್ಷೇತ್ರದ ಬಳಿಚಕ್ರ, ಲಿಂಗೇರಿ, ಬಾಲಛೇಡ, ಅಲ್ಲಿಪುರ ಗೇಟ್‌ ಬಳಿ ₹5 ಲಕ್ಷ ವೆಚ್ಚದಲ್ಲಿ ತಂಗುದಾಣಗಳ ನಿರ್ಮಾಣ ಮಾಡಲಾಗಿದೆ.

ಅಕ್ರಮ ಚಟುವಟಿಕೆಯ ತಾಣ

ಶಹಾಪುರ: ಗ್ರಾಮೀಣ ಪ್ರದೇಶ ಹಾಗೂ ನಗರದ ಪ್ರಯಾಣಿಕರ ಅನುಕೂಲಕ್ಕಾಗಿ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಈಗ ಅವೆಲ್ಲವು ನಿರ್ವಹಣೆ ಇಲ್ಲದೆ ಪಾಳು ಬಿದ್ದರೆ, ಇನ್ನು ಕೆಲವು ಕಡೆ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿವೆ.

10 ವರ್ಷಗಳ ಹಿಂದೆ ಸಂಸದರ ನಿಧಿಯಿಂದ ಅನುದಾನ ಬಳಕೆ ಮಾಡಿಕೊಂಡು ತಂಗುದಾಣವನ್ನು ನಿರ್ಮಿಸಲಾಗಿತ್ತು. ತಾಣದ ಅಕ್ಕಪಕ್ಕದಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದಾರೆ. ಕಿಡಿಗೇಡಿಗಳು ಮದ್ಯ ಕುಡಿದ ಬಾಟಲಿಯನ್ನು ಬಿಸಾಕಿದ್ದಾರೆ. ತಂಗುದಾಣ ನಿರ್ಮಿಸಿದ ಸ್ಥಳದಲ್ಲಿ ಬಸ್ ನಿಲ್ಲಿಸದೆ ಹೋಗುತ್ತಾರೆ. ಇದರಿಂದ ಅಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಆಗದ ಸ್ಥಿತಿ ನಿರ್ಮಾಣಗೊಂಡಿದೆ ಎನ್ನುತ್ತಾರೆ ನಗರದ ನಿವಾಸಿ ನಿಂಗಪ್ಪ ರಾಕಂಗೇರಿ.

ನಗರದ ಬಸ್ ತಂಗುದಾಣದ ಬಳಿ ಕಸದ ರಾಶಿ ಬಿದ್ದಿರುತ್ತದೆ. ನಗರಸಭೆ ಸಿಬ್ಬಂದಿ ನೆನಪಾದಗೊಮ್ಮೆ ಸ್ವಚ್ಛಗೊಳಿಸುತ್ತಾರೆ.
***
ಹಾವು ಚೇಳುಗಳ ವಾಸಸ್ಥಾನ

ಹುಣಸಗಿ: ತಾಲ್ಲೂಕಿನಲ್ಲಿ ಬಹುತೇಕ ಹಳ್ಳಿಗಳ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ ಪ್ರಯಾಣಿಕ ತಂಗುದಾಣಗಳು ನಿರ್ವಹಣೆ ಕೊರತೆಯಿಂದಾಗಿ ಹಾಳಾಗಿದ್ದು, ಪ್ರಯಾಣಿಕರಿಗೆ ಅನೂಕೂಲವಿಲ್ಲದಂತಾಗಿದೆ.

ತಾಲ್ಲೂಕಿನ ಮುದನೂರುದಿಂದ ನಾರಾಯಣಪುರದ ವರೆಗೆ ಹಾಗೂ ಮಾಳನೂರದಿಂದ ಹೆಬ್ಬಾಳವರೆಗ ಸುಮಾರು 60ಕ್ಕೂ ಹೆಚ್ಚು ಕಡೆ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆರಂಭದಲ್ಲಿ ಇವುಗಳಿಂದ ಸಾಕಷ್ಟು ಜನ ಗ್ರಾಮೀಣ ಭಾಗದ ವೃದ್ಧರು, ಮಹಿಳೆಯರು, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು.

‘ವರ್ಷಗಳು ಕಳೆದಂತೆಲ್ಲ ಇವುಗಳ ಮೂಲ ಉದ್ದೇಶ ಮರೆಯಾಗಿ ನಿರುಪಯುಕ್ತವಾಗಿವೆ. ನಿರ್ಮಾಣ ಮಾಡಿದ ಬಳಿಕ ಯಾವುದೇ ಅಧಿಕಾರಿಗಳು ಇವುಗಳ ದುರಸ್ತಿ ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಕರವೇ ಪ್ರಮುಖ ಬಸವರಾಜ ಚನ್ನೂರ, ಶಿವು ಮಾಳನೂರ ಹೇಳುತ್ತಾರೆ.

‘ತಾಲ್ಲೂಕಿನ ತೀರ್ಥ ಗ್ರಾಮದ ಬಳಿ ಇರುವ ತಂಗುದಾಣದಲ್ಲಿ ಕುಳಿತುಕೊಳ್ಳುವ ಸ್ಥಳ ಹಾಳಾಗಿದ್ದು, ಹಾವು ಚೇಳುಗಳ ವಾಸಸ್ಥಾನವಾಗಿವೆ’ ಎಂದು ರಮೇಶ ಬಿರಾದಾರ ಹೇಳಿದರು.

ಇನ್ನು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾಗಿದ್ದ ಬಸ್ ಶೆಲ್ಟರ್‌ಗಳು ಹಾಳಾಗಿದ್ದು, ಇವುಗಳಲ್ಲಿ ಜಾಲಿಕಂಟಿ ಬೆಳೆದಿವೆ.

ಕಳೆದ ಎರಡು ವರ್ಷಗಳ ಹಿಂದೆ ಹುಣಸಗಿ ಪಟ್ಟಣದಲ್ಲಿ ತಂಗದಾಣವನ್ನು ಯುವಕರೇ ಕಾಳಜಿ ವಹಿಸಿ ದುರಸ್ತಿಗೊಳಿಸಿದ್ದಾರೆ. ಹುಣಸಗಿ ಪಟ್ಟಣದಲ್ಲಿ ಗೆಳೆಯರ ಬಳಗದ ಕಾರ್ಯಕರ್ತರು ಪೊಲೀಸ್ ಸ್ಟೇಷನ್ ಬಳಿ ಇರುವ ತಂಗುದಾಣ ದುರಸ್ತಿಗೊಳಿಸಿ ಅದಕ್ಕೆ ಸುಣ್ಣ ಬಣ್ಣ ಹಚ್ಚುವ ಮೂಲಕ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದರು.
***
ನಿರ್ವಹಣೆ ಕೊರತೆಯಿಂದ ಪಾಳು

ಸುರಪುರ: ಪ್ರಯಾಣಿಕರಿಗೆ ಬಸ್‍ಗಳಿಗಾಗಿ ಕಾಯಲು ತಾಲ್ಲೂಕಿನ ವಿವಿಧೆಡೆ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಸಾರಿಗೆ ಸಂಸ್ಥೆಯ ತಂಗುದಾಣಗಳನ್ನು ಬಿಟ್ಟು ಎಲ್ಲವೂ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ.

ತಾಲ್ಲೂಕಿನಲ್ಲಿ 160ಕ್ಕೂ ಹೆಚ್ಚು ಗ್ರಾಮಗಳಿವೆ. ಬಹುತೇಕ ಗ್ರಾಮಗಳಲ್ಲಿ ತಂಗುದಾಣಗಳಿಲ್ಲ. ಮರದ ನೆರಳೇ ಪ್ರಯಾಣಿಕರಿಗೆ ಆಶ್ರಯ. ಒಂದು ತಂಗುದಾಣಕ್ಕೆ ₹5 ಲಕ್ಷ ವೆಚ್ಚದವರೆಗೂ ತಾಲ್ಲೂಕಿನ ಮುಖ್ಯ ರಸ್ತೆಗಳಲ್ಲಿ ಸಂಸದರ ನಿಧಿಯಿಂದ 30ಕ್ಕೂ ಹೆಚ್ಚು ತಂಗುದಾಣಗಳನ್ನು ನಿರ್ಮಿಸಲಾಗಿದೆ. ದಶಕಗಳ ಹಿಂದೆ ವಿಶ್ವ ಆಹಾರ ಯೋಜನೆಯಡಿ ಅಲ್ಲಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಎಲ್ಲವೂ ನಿರ್ವಹಣೆಯಿಲ್ಲದೆ ಪ್ರಯೋಜನಕ್ಕೆ ಬಾರದಂತಾಗಿವೆ.

ಇವುಗಳಲ್ಲಿ ಬಹುತೇಕ ತಾಣಗಳನ್ನು ಅಲ್ಲಿನ ಜನರು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ತಂಗುದಾಣಗಳನ್ನು ನಿರ್ಮಿಸಿದ ಉದ್ದೇಶ ಸಫಲವಾಗಿಲ್ಲ. ಪ್ರಯಾಣಿಕರು ಬಿಸಿಲಿನಲ್ಲೇ ನಿಂತು ಬಸ್‍ಗಾಗಿ ಕಾಯುವ ಪರಿಸ್ಥಿತಿ ಇದೆ.

ಬಸ್‌ ತಂಗುದಾಣಗಳನ್ನು ನಿರ್ಮಿಸಿದ್ದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಬಿಸಿಲಿನಲ್ಲಿ ನಿಲ್ಲವುದು, ಮಳೆಯಲ್ಲಿ ನೆನೆಯುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ತಂಗುದಾಣ ನಿರ್ಮಿಸಲು ಮುಂದಾಗಬೇಕು.
***
ಮನೋರಂಜನೆಗೆ ಬಳಕೆಯಾಗುತ್ತಿರುವ ತಂಗುದಾಣಗಳು
ಗುರುಮಠಕಲ್:
ಗ್ರಾಮೀಣ ಪ್ರದೇಶಗಳಲ್ಲಿ ನಿರ್ವಹಣೆಯ ಕೊರತೆಯಿಂದ ತಂಗುದಾಣಗಳಲ್ಲಿ ಕಸ, ಕಡ್ಡಿ, ದೂಳು ತುಂಬಿಕೊಂಡಿದೆ. ಇನ್ನೊಂದಿಷ್ಟು ತಂಗುದಾಣಗಳು ಮನೋರಂಜನೆಗೆ ಬಳಕೆಯಾಗುತ್ತಿವೆ.

ವಿಜಯಪುರ-ಹೈದರಾಬಾದ್ ರಾಜ್ಯ ಹೆದ್ಧಾರಿ-16ಯ ಪಸಪುಲ್ ಹಾಗೂ ಗಣಪುರ ಗೇಟ್ ಹತ್ತಿರದ ತಂಗುದಾಣಗಳು ಹೆದ್ದಾರಿ ಕಾಮಗಾರಿಗಾಗಿ ರಸ್ತೆಯ ಎತ್ತರ ಹೆಚ್ಚಿದ್ದರ ಕಾರಣ ಅರ್ಧದಷ್ಟು ಕಟ್ಟಡ ರಸ್ತೆಯ ಕೆಳಮಟ್ಟದಲ್ಲಿವೆ.

ತೆಲಂಗಾಣದ ನಾರಾಯಣಪೇಟಗೆ ತೆರಳುವ ಮಾರ್ಗದ ಪುಟಪಾಕ ಬಸ್ ತಂಗುದಾಣದಲ್ಲಿ ಸದಾ ಕೆಲವೊಂದಿಷ್ಟು ಜನರು ಚೌಕಾಬಾರಾ, ಹುಲಿಕಟ್ಟೆ, ಇಸ್ಪೀಟ್‌ನಂಥ ಮನೋರಂಜನೆಯ ಆಟಗಳನ್ನು ಆಡುತ್ತಾ ಕುಳಿತಿರುತ್ತಾರೆ. ಕೇಶ್ವಾರದ ರಸ್ತೆಯ ಪಕ್ಕದ ಹನುಮ ಮಂದಿರವೇ ಪ್ರಯಾಣಿಕರಿಗೆ ಗತಿ. ಚಪೆಟ್ಲಾ, ಯದ್ಲಾಪುರ, ರಾಂಪುರ ಗ್ರಾಮಗಳಲ್ಲಿ ತಂಗುದಾಣಗಳು ನಿರ್ವಹಣೆಗಾಗಿ ಕಾಯುತ್ತಿವೆ.

‘ಬಸ್ ನಿಲ್ದಾಣದ ಸುತ್ತ ಪೊದೆ ಬೆಳೆದಿದ್ದರಿಂದ ಪಕ್ಕದಲ್ಲೇ ಇರುವ ದೇವಸ್ಥಾನ ಹಾಗೂ ಗಿಡದ ನೆರಳಲ್ಲಿ ನಿಂತು ಬಸ್ ಕಾಯುತ್ತಿದ್ದೇವೆ’ ಎಂದು ಪಸಪುಲ ಗ್ರಾಮದ ಮಲ್ಲಿಕಾರ್ಜುನ ಮಲ್ಲೆಪಲ್ಲಿ ತಿಳಿಸಿದರು.

‘ತಂಗುದಾಣಗಳ ಕಟ್ಟಡ ನಿರ್ಮಾಣ ನಮ್ಮ ವ್ಯಾಪ್ತಿಗೆ ಬರುತ್ತದೆ. ಕಟ್ಟಡದ ಕೆಲಸ ಪೂರ್ಣಗೊಂಡನಂತರ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಅಲ್ಲಿನ ಪಟ್ಟಣ ಪಂಚಾಯಿತಿ, ಪುರಸಭೆ ಅಥವಾ ನಗರಸಭೆಗಳಿಗೆ ಹಸ್ತಾಂತರಿಸುತ್ತೇವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಂಯಿತಿಗೆ ವಹಿಸಿಕೊಡುತ್ತೇವೆ. ನಂತರ ಅವುಗಳ ನಿರ್ವಹಣೆ ಸ್ಥಳೀಯ ಆಡಳಿತದ್ದು’ ಎಂದು ಲೋಕೋಪಯೋಗಿ ಇಲಾಖೆಯ ಜೆಇ ಪರಶುರಾಮ ತಿಳಿಸಿದರು.
***
ದುರ್ನಾತ ಬೀರುತ್ತಿವೆ

ಯರಗೋಳ: ಸುತ್ತಲಿನ ಹಲವು ಹಳ್ಳಿಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಿರುವ ಗ್ರಾಮೀಣ ಪ್ರದೇಶದ ಬಸ್‌ ತಂಗುದಾಣಗಳಲ್ಲಿ ಸ್ವಚ್ಛತೆ ಮರೆಯಾಗಿದೆ.

ಅಲ್ಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವೆಂಕಟೇಶ್ ನಗರದಲ್ಲಿನ ಬಸ್ ತಂಗುದಾಣ ಕುರಿ, ಕೋಳಿ, ಜಾನುವಾರುಗಳ ಆಶ್ರಯ ತಾಣವಾಗಿದೆ.

ಯರಗೋಳ ಗ್ರಾಮದ ಹಳೆ ಬಸ್ ತಂಗುದಾಣ ಪ್ರಯಾಣಿಕರು ಕುಳಿತುಕೊಳ್ಳಲು ಯೋಗ್ಯವಾಗಿಲ್ಲ. ಹಂದಿ, ನಾಯಿಗಳ ವಾಸಸ್ಥಳವಾಗಿದ್ದು, ಮಳೆಗಾಲದಲ್ಲಿ ಪ್ರಯಾಣಿಕರು ರಸ್ತೆ ಪಕ್ಕದಲ್ಲಿರುವ ಹೋಟೆಲ್, ಅಂಗಡಿಗಳ ಮುಂದೆ ನಿಲ್ಲುತ್ತಾರೆ. ಗ್ರಾಮದ ಹೊರಗಡೆ ನಿರ್ಮಿಸಿರುವ ಹೊಸ ಬಸ್ ತಂಗುದಾಣದ ಸುತ್ತ ತಿಪ್ಪೆಗುಂಡಿಗಳಿದ್ದು, ರೈತರು ಬೆಳೆದ ಬೆಳೆಗಳನ್ನು ರಾಶಿ ಮಾಡಲು ಬಳಕೆಯಾಗುತ್ತಿದೆ.

ಹೊನಗೇರಾ ಗ್ರಾಮ ಹೊರವಲಯದ ಬಸ್ ತಂಗುದಾಣ ಮುಳ್ಳು ಕಂಟಿಗಳಿಂದ ಆವೃತವಾಗಿದೆ. ಸೌದಗರ ತಾಂಡಾ ರಸ್ತೆ ತಿರುವಿನಲ್ಲಿರುವ ಬಸ್ ತಂಗುದಾಣ ಅಕ್ರಮ ಚಟುವಟಿಗಳ ತಾಣವಾಗಿದೆ.

ಬಂದಳ್ಳಿ, ಯಡ್ಡಳ್ಳಿ, ಬಾಚವಾರ, ಹೊನಗೇರಾ, ಮುದ್ನಾಳ, ಹತ್ತಿಕುಣಿ ಗ್ರಾಮದಲ್ಲಿರುವ ಬಸ್ ತಂಗುದಾಣಗಳು ಹಾಳಾಗಿವೆ ಎಂದು ಗ್ರಾಮಸ್ಥರು ದೂರಿದರು.
***
ಬಸ್‌ ತಂಗುದಾಣಗಳಲ್ಲಿ ಕುಟುಂಬಗಳ ವಾಸ

ಸೈದಾಪುರ: ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಬಸ್‌ ತಂಗುದಾಣದಲ್ಲಿ ಎರಡು ಕುಟುಂಬಗಳು ವಾಸ ನಡೆಸುತ್ತಿವೆ. 15 ವರ್ಷಗಳ ಹಿಂದೆ ಕುಟುಂಬ ಕಲಹದಿಂದಾಗಿ ತವರು ಮನೆಗೆ ಬಂದ ಬಸ್ಸಮ್ಮ ಜಾಗದ ಸಮಸ್ಯೆಯಿಂದಾಗಿ ಮಗನೊಂದಿಗೆ ತಂಗುದಾಣದಲ್ಲೇ ವಾಸವಾಗಿದ್ದಾರೆ. ಅದೇ ರೀತಿ ಬಸ್ಸಮ್ಮ ತಂಗಿಯೂ ಬದ್ದೇಪಲ್ಲಿಯಲ್ಲಿ ಪತಿಯೊಂದಿಗೆ ಜಗಳ ಮಾಡಿಕೊಂಡು ಬಂದು ತನ್ನ ನಾಲ್ಕು ಮಕ್ಕಳೊಡನೆ ಇದೇ ತಂಗುದಾಣದಲ್ಲಿ ವಾಸ ಮಾಡುತ್ತಿದ್ದಾರೆ. ಎರಡು ಕುಟುಂಬಗಳಿಗೆ ಗ್ರಾಮದಲ್ಲಿ ನಿವೇಶನವಿಲ್ಲ.

‘ಗ್ರಾಮ ಪಂಚಾಯಿತಿ ಸದಸ್ಯರಿಗೆ ನಮ್ಮ ಸಮಸ್ಯೆಯ ಕುರಿತು ಅನೇಕ ಬಾರಿ ತಿಳಿಸಿದ್ದೇವೆ. ಆದರೆ, ನಿಮಗೆ ಜಾಗವಿಲ್ಲ. ಜಾಗವಿದ್ದರೆ ಹೇಳಿ ನಿಮಗೆ ಮನೆ ಕಟ್ಟಿಸಿಕೊಡುತ್ತೇವೆ’ ಎಂದು ಹೇಳುತ್ತಾ ಬಂದಿದ್ದಾರೆ ಎಂದು ತಿಳಿಸುತ್ತಾರೆ. ‘ಇಲ್ಲಿಯವರೆಗೆ ಅಧಿಕಾರಿಗಳು, ಜನಪ್ರತಿನಿಧಿಗಳಾಗಲಿ ನಮಗೆ ಕೇಳಿಲ್ಲ. ನಮ್ಮ ಕಷ್ಟವನ್ನು ಯಾರ ಮುಂದೆ ಹೇಳೋದು ತಿಳಿಯದೆ ಇರುವಷ್ಟು ದಿನ ಹೇಗೋ ಜೀವನ ಸಾಗಿಸುತ್ತಿದ್ದೇವೆ’ ಎಂದು ಅಕ್ಕ, ತಂಗಿ ತಿಳಿಸಿದರು.

ಪ್ರಯಾಣಿಕರು ಬಸ್ ಬರುವವರೆಗೂ ಬೇರೆಯವರ ಮನೆ ಮುಂದೆ, ಅಂಗಡಿ ಮುಂದೆ ಕಾದು ಕೂರುವ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಕೆಲವೊಮ್ಮೆ ಪ್ರಯಾಣಿಕರು ಇಲ್ಲ ಎಂದು ತಿಳಿದು ಬಸ್ ನಿಲುಗಡೆಯಾಗದೆ ಹಾಗೆ ಹೋಗಿದ್ದು ಉಂಟು ಎಂದು ಸಾರ್ವಜನಿಕರು ತಿಳಿಸುತ್ತಾರೆ.

***

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎ.ಪಿಂ. ಚಪೆಟ್ಲಾ, ತೋಟೇಂದ್ರ ಎಸ್ ಮಾಕಲ್, ಮಲ್ಲಿಕಾರ್ಜುನ ಬಿ ಅರಕೇರಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT