ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್: ಮಳೆಗೆ ಸಿಂಗಾರಗೊಂಡ ಬಂಡಲೋಗು ಜಲಪಾತ

Published 21 ಜುಲೈ 2023, 6:59 IST
Last Updated 21 ಜುಲೈ 2023, 6:59 IST
ಅಕ್ಷರ ಗಾತ್ರ

ಗುರುಮಠಕಲ್: ಸೋಮವಾರದಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ಹೊರವಲಯದ ಮಲ್ಲಾ ಅರಣ್ಯ ಪ್ರದೇಶದಲ್ಲಿರುವ ಬಂಡಲೋಗು ಜಲಪಾತವು ಮೈದುಂಬಿಕೊಂಡು ಸಿಂಗಾರಗೊಂಡಿದೆ.

ಗುರುಮಠಕಲ್ ಪಟ್ಟಣ, ಕೇಶ್ವಾರ ಹಾಗೂ ನಜರಾಪುರ ಗ್ರಾಮಗಳ ನಡುವಿರುವ ಈ ಜಲಪಾತವು ಬಹುತೇಕ ಮಳೆಯಾಶ್ರಿತವಾಗಿದೆ. ಮುಂಗಾರು ಅವಧಿಯಲ್ಲಿ ಉತ್ತಮ ಮಳೆ ಸುರಿದರೆ ಸುತ್ತಲಿನ ಗುಡ್ಡಗಳಿಂದ ನೀರು ಉಕ್ಕುತ್ತಾ ಜಲಪಾತದತ್ತ ಸಾಗುತ್ತವೆ. ಮುಂಗಾರು ಮತ್ತು ಹಿಂಗಾರು ಅವಧಿಯ ಮಳೆಯಿಂದಾಗಿ ಬೆಟ್ಟಗಳಲ್ಲಿ ಹಿಡಿದಿಟ್ಟುಕೊಂಡ ಮಳೆ ನೀರು ಬೇಸಿಗೆಯಲ್ಲೂ ಸಣ್ಣಗೆ ಹರಿದು ಜಲಪಾತವನ್ನು ಸೇರುತ್ತವೆ.

ಪ್ರಸಕ್ತ ಸಾಲಿನ ಮುಂಗಾರು ಆರಂಭದ ಕಾಲ ಸರಿದರೂ ಮಳೆಯ ಸುರಿಯದ ಹಿನ್ನಲೆ ಜಲಪಾತ ನೀರಿಲ್ಲದೆ ಸಂಪೂರ್ಣ ಸೊರಗಿತ್ತು. ಸುರಿಯುತ್ತಿರುವ ಮಳೆಗೆ ಜಲಪಾತ ಸಿಂಗಾರಗೊಂಡಿದೆ. ಇನ್ನೂ ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಕುರಿಗಾಹಿಯೊಬ್ಬರು ತಿಳಿಸಿದರು.

ಸುತ್ತಲೂ ಹಸಿರ ವನಸಿರಿ, ಬಂಡೆಗಲ್ಲುಗಳ ಮೇಲೆ ಸದ್ದು ಮಾಡುತ್ತಾ ಮದುವೆ ದಿಬ್ಬಣ ಹೊರಟಂತೆ ವಯ್ಯಾರದಿಂದ ನುಗ್ಗುವ ಜಲರಾಶಿ, ರಸ್ತೆಯಿಂದ ಸುಮಾರು ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಹರಿಯುವ ಹಳ್ಳವು ಹಲವೆಡೆ ಚಿಕ್ಕ ಪುಟ್ಟ ಜಲಪಾತಗಳನ್ನೂ ತೋರಿಸುತ್ತದೆ. ಹಾಗೇ ಹಳ್ಳದಲ್ಲಿ ನಡೆಯುತ್ತಾ ಸಾಗಿದಂತೆ ಬಂಡೆಗಲ್ಲುಗಳ ಮೇಲೆ ಹರಿವ ನೀರಿನ ಸದ್ದು ಮನಸೆಳೆಯಲಿದೆ. ಜಲರಾಶಿಯ ಸಂಗೀತಕ್ಕೆ ಹಕ್ಕಿಗಳ ಚಿಲಿಪಿಲಿ ಜತೆಗೂಡಿ ಮನವನ್ನು ಮುದಗೊಳಿಸುತ್ತದೆ.

‘ಮಲ್ಲಾ ಅರಣ್ಯ ಪ್ರದೇಶದಲ್ಲಿ ನವಿಲುಗಳು ಕಾಣಸಿಗುವುದು, ಆಗಾಗ ನವಿಲುಗಳು ನರ್ತಿಸುವ ದೃಶ್ಯಗಳನ್ನೂ ಇಲ್ಲಿ ನೋಡಬಹುದು. ಕಾಡು ಹೂಗಳ ಘಮಲು ಹರಡುವುದರಿಂದ ಸುತ್ತಲಿನ ಪ್ರದೇಶವು ಮನಸ್ಸಿಗೆ ಆಹ್ಲಾದದ ಅನುಭವ ನೀಡಲಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಇಲ್ಲಿಗೆ ಬರುತ್ತೇನೆ. ಪ್ರತಿ ಬಾರಿಯೂ ಜಲಪಾತಕ್ಕೆ ತಲುಪಿದ ನಂತರ ಸಮಯ ಕಳೆದದ್ದೇ ತಿಳಿಯದು. ಇಲ್ಲಿನ ಪ್ರಶಾಂತ ವಾತಾವರನದಿಂದ ಮನಸ್ಸಿಗೆ ನೆಮ್ಮದಿ ಸಿಗುವುದರಿಂದ ಇಲ್ಲೇ ಉಳಿದು ಬಿಡುವ ಮನಸಾಗುತ್ತದೆ’ ಎಂದು ಹೇಳುತ್ತಾರೆ ಪ್ರವಾಸಿಗ ಸಾಯಿಕೃಷ್ಣ.

ದೊಡ್ಡ ಮಟ್ಟದ ಮಳೆಯಾದಾಗ ಜಲಪಾತವನ್ನು ನೋಡಿದರೆ ‘ನಯಾಗರ’ ನೆನಪಾಗುತ್ತದೆ. ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತದ ಸೊಬಗು ಪಡೆಯುತ್ತಿದೆ ಎಂದು ಸೇಡಂ ತಾಲ್ಲೂಕಿನ ಕಾರ್ತಿಕ್ ಅನುಭವವನ್ನು ಹಂಚಿಕೊಂಡರು.

ಸ್ಥಳೀಯರ ಸಹಕಾರ ಅಗತ್ಯ: ಬೇರೆಡೆಯಿಂದ ಜಲಪಾತಕ್ಕೆ ಬರುವವರು, ಹೊಸತಾಗಿ ಬಂದಿದ್ದರೆ ಖಂಡಿತ ಯಾರಾದರೂ ಸ್ಥಳೀಯರ ಸಹಾಯ ಪಡೆಯಬೇಕು. ಇಲ್ಲವಾದರೆ ದಾರಿ ತಪ್ಪುವ ಸಾಧ್ಯತೆಯಿದೆ. ಸದಾ ನೀರು ಹರಿಯುವುದರಿಂದ ಬಂಡೆಗಳ ಮೇಲೆ ಕಾಲು ಜಾರುವ ಸಾಧ್ಯತೆಯಿದ್ದು, ಜಾಗರೂಕರಾಗಿ ಹೆಜ್ಜೆಯಿಡಬೇಕು ಎಂದು ಕೇಶ್ವಾರ ಗ್ರಾಮದ ಮಹಬೂಬ್ ಕೋರೆಬನ್ ಹೇಳುತ್ತಾರೆ.

ದಾರಿ ಯಾವುದು?: ಗುರುಮಠಕಲ್ ಪಟ್ಟಣದಿಂದ ನೆರೆಯ ತೆಲಂಗಾಣದ ನಾರಾಯಣಪೇಟ್ ನಗರಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಎರಡು ಕಿ.ಮೀ. ಸಾಗಿದರೆ ಮಲ್ಲಾ ಅರಣ್ಯ ಪ್ರದೇಶ ಪ್ರಾರಂಭವಾಗುತ್ತದೆ. ಅಲ್ಲಿಂದ ಕಾಲು ನಡುಗೆಯಲ್ಲಿ ನಡೆದುಕೊಂಡು ಹೋಗಬೇಕು.

ಗುರುಮಠಕಲ್ ಹೊರವಲಯದ ಬಂಡಲೋಗು ಜಲಪಾತ.
ಗುರುಮಠಕಲ್ ಹೊರವಲಯದ ಬಂಡಲೋಗು ಜಲಪಾತ.
ಮಹಬೂಬ್ ಕೋರೆಬನ್ ಕೇಶ್ವಾರ ಗ್ರಾಮಸ್ಥ
ಮಹಬೂಬ್ ಕೋರೆಬನ್ ಕೇಶ್ವಾರ ಗ್ರಾಮಸ್ಥ
ಸಾಯಿಕೃಷ್ಣ ಪ್ರವಾಸಿಗ
ಸಾಯಿಕೃಷ್ಣ ಪ್ರವಾಸಿಗ

ಸುರಿಯುತ್ತಿರುವ ಮಳೆಯಿಂದ ಹೆಚ್ಚಿದ ಕಳೆ ಚಾರಣ ಪ್ರಿಯರ ಮನಸ್ಸನ್ನು ಹಿಡಿದಿಡುವ ತಾಣ ಜಲಪಾತದ ಜೊತೆಗೆ ನವಿಲುಗಳೂ ಕಾಣುವ ಭಾಗ್ಯ

ರಸ್ತೆಯಿಂದ ಹಳ್ಳದಲ್ಲಿ ನೀರು ಹರಿದು ಹೋಗುವ ಮಾರ್ಗದಲ್ಲೇ ಹೋದರೆ ಜಲಪಾತದ ಸೌಂದರ್ಯದ ಜೊತೆಗೆ ಐದಾರು ಅಡಿಗಳ ಚಿಕ್ಕ ಪುಟ್ಟ ಜಲಪಾತಗಳ ವಯ್ಯಾರವನ್ನೂ ನೋಡಬಹುದು. ಅಡ್ಡ ದಾರಿಯಲ್ಲಾದರೆ ಜಲಪಾತದ ಹತ್ತಿರದವರೆಗೂ ಕಾಡನ್ನು ನೋಡುತ್ತಾ ಸಾಗಬಹುದು.
ಮಹಬೂಬ್ ಕೋರೆಬನ್ ಕೇಶ್ವಾರ ಗ್ರಾಮಸ್ಥ
ಯಾಂತ್ರಿಕ ಜೀವನದಿಂದ ಜಡಗಟ್ಟಿದ ಮನಸ್ಸನ್ನು ಉಲ್ಲಾಸಿತಗೊಳಿಸಲು ಮತ್ತು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಥಳವಿದೆ. ಕಾಡಿನಲ್ಲಿ ನಡೆಯುತ್ತಾ ಸಾಗುವುದೇ ಮನಸ್ಸಿಗೆ ಖುಷಿ ನೀಡುತ್ತದೆ.
ಸಾಯಿಕೃಷ್ಣ ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT