ಮಂಗಳವಾರ, ಜೂನ್ 15, 2021
23 °C

ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ: ಉನ್ನತ ವ್ಯಾಸಂಗಕ್ಕೂ ಅವಕಾಶ

ಆರ್.ಬಿ. ಗುರುಬಸವರಾಜ Updated:

ಅಕ್ಷರ ಗಾತ್ರ : | |

Prajavani

ಎಲ್ಲಾ ಕೈಗಾರಿಕೆಗಳ ಯಾಂತ್ರಿಕ ಪ್ರಕ್ರಿಯೆಗೆ ಉಪಕರಣಗಳು ಹಾಗೂ ನಿಯಂತ್ರಕಗಳು ಬೇಕಾಗುತ್ತವೆ. ಈ ಉಪಕರಣ ಮತ್ತು ನಿಯಂತ್ರಕಗಳು ವಿಶ್ವಾಸಾರ್ಹತೆಯಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಗುಣಮಟ್ಟದ ಉತ್ಪನ್ನ ಸಕಾಲಕ್ಕೆ ಮಾರುಕಟ್ಟೆಗೆ ಲಭ್ಯವಾಗುತ್ತದೆ. ಇಂತಹ ಸಲಕರಣೆ ಮತ್ತು ನಿಯಂತ್ರಕಗಳ ತಾಂತ್ರಿಕ ಅಧ್ಯಯನವೇ ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ.

ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿಯು ಎಂಜಿನಿಯರಿಂಗ್ ವಿಭಾಗದ ಸಂಕೀರ್ಣ ಹಾಗೂ ಆಧುನಿಕ ಶಾಖೆಗಳಲ್ಲಿ ಒಂದು. ಡಿಪ್ಲೊಮಾ 3 ವರ್ಷಗಳ ಕೋರ್ಸ್‌ ಆಗಿದ್ದು, ಪ್ರತ್ಯೇಕವಾಗಿ ಅಥವಾ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಜೊತೆಗೆ ಅಧ್ಯಯನ ಮಾಡಬಹುದು. ಅಧ್ಯಯನವು ಮುಖ್ಯವಾಗಿ ವಿನ್ಯಾಸ, ಸಂರಚನೆ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ಮೇಲೆ ಕೇಂದ್ರೀಕೃತವಾಗಿದೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದ ವೃತ್ತಿಪರರನ್ನು ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರ್ ಎಂದು ಕರೆಯಲಾಗುತ್ತದೆ.

ಇನ್‌ಸ್ಟ್ರುಮೆಂಟೇಶನ್‌ ಟೆಕ್ನಾಲಜಿ ಡಿಪ್ಲೊಮಾ ಕೋರ್ಸ್‌ ಅನ್ನು ಪ್ರಾರಂಭಿಕ ಹಂತದ ತಾಂತ್ರಿಕ ಅಭ್ಯರ್ಥಿಗಳಿಗಾಗಿ ರೂಪಿಸಲಾಗಿದೆ. ರಾಸಾಯನಿಕ ಸ್ಥಾವರಗಳು, ವಿದ್ಯುತ್ ಸ್ಥಾವರಗಳು, ತೈಲ ಸಂಸ್ಕರಣಾ ಘಟಕಗಳು, ದೇಶದಾದ್ಯಂತ ಜಾಲ ಹೊಂದಿರುವ ಪೈಪ್‌ಲೈನ್ ಕಂಪನಿಗಳಂತಹ ಸ್ಥಳಗಳಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ವಿದ್ಯಾರ್ಥಿಗಳು ಸಲಕರಣೆ ನಿರ್ವಹಣೆ ಮತ್ತು ಮಾರಾಟದಲ್ಲಿಯೂ ಕೆಲಸ ಮಾಡಬಹುದು.

ಪ್ರವೇಶಾರ್ಹತೆ: ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ ಡಿಪ್ಲೊಮಾ ಕೋರ್ಸ್‌ ಸೇರಲು 10ನೇ ತರಗತಿ ಉತ್ತೀರ್ಣರಾಗಿರಬೇಕು. ಪಿಯುಸಿ ಓದಿದ ಮತ್ತು ಓದುತ್ತಿರುವ ವಿದ್ಯಾರ್ಥಿಗಳೂ ಸಹ ಅರ್ಹರು. ಇದಕ್ಕೆ ಕನಿಷ್ಠ ವಯಸ್ಸಿನ ಮಿತಿ 15 ವರ್ಷಗಳು. ಅಲ್ಲದೇ ಈ ಕೋರ್ಸ್‌ಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಉತ್ತಮ ಸಂವಹನ ಕೌಶಲದ ಅಗತ್ಯವಿದೆ. ಬರವಣಿಗೆ ಮತ್ತು ಸಾರ್ವಜನಿಕ ಮಾತುಗಾರಿಕೆಯೂ ಅಗತ್ಯವಿದೆ.

ಕೋರ್ಸ್‌ನಲ್ಲಿ ಏನೇನಿರುತ್ತದೆ?
ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ ಡಿಪ್ಲೊಮಾ ಕೋರ್ಸ್‌ನಲ್ಲಿ ಗಣಿತ, ಅನ್ವಯಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಯನ ಇರುತ್ತವೆ. ಇವುಗಳ ಜೊತೆಗೆ ತಂತ್ರಜ್ಞಾನದ ತತ್ವಗಳು, ತಾಂತ್ರಿಕ ಭೌತಶಾಸ್ತ್ರ, ತಾಂತ್ರಿಕ ಗಣಿತ, ಮೂಲ ಎಲೆಕ್ಟ್ರಾನಿಕ್ಸ್, ಡಿಜಿಟಲ್ ಮೈಕ್ರೋಪ್ರೊಸೆಸರ್ ಸಿಸ್ಟಮ್ಸ್, ವಿದ್ಯುತ್ ಸರ್ಕ್ಯೂಟ್‌, ಇನ್‌ಸ್ಟ್ರುಮೆಂಟೇಶನ್ ಎಲೆಕ್ಟ್ರಾನಿಕ್, ನಿಯಂತ್ರಣ ಪ್ರಕ್ರಿಯೆಗಳನ್ನು ಸಹ ಕಲಿಸಲಾಗುತ್ತದೆ. ಸೈದ್ಧಾಂತಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಉನ್ನತ ವ್ಯಾಸಂಗದ ಅವಕಾಶಗಳು
ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ ಡಿಪ್ಲೊಮಾ ಕೋರ್ಸ್‌ ನಂತರ ಉನ್ನತ ವ್ಯಾಸಂಗದ ಆಸಕ್ತಿ ಇರುವವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಇ/ ಬಿ.ಟೆಕ್ ಮತ್ತು ಎಂ.ಟೆಕ್‌ಗಳನ್ನೂ ಮಾಡಬಹುದು. ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಸ್ನಾತಕೋತ್ತರ ಅಧ್ಯಯನದ ನಂತರ ಪಿಎಚ್‌ಡಿ ಮಾಡಬಹುದು. ಅಲ್ಲದೇ ಕೆಲವು ಅಸೋಸಿಯೇಟ್ ಮೆಂಬರ್‌ಶಿಪ್ ಎಲೆಕ್ಟ್ರಾನಿಕ್ ಕೋರ್ಸ್‌ಗಳು ಸಹ ಲಭ್ಯ ಇವೆ. ಇವು ವಿಶ್ವವಿದ್ಯಾಲಯಗಳು ಒದಗಿಸುವ ಬಿ.ಇ/ ಬಿ.ಟೆಕ್‌ಗೆ ತತ್ಸಮಾನವಾಗಿವೆ.

ಉದ್ಯೋಗದ ಅವಕಾಶಗಳು
ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ ಡಿಪ್ಲೊಮಾ ನಂತರ ಅಭ್ಯರ್ಥಿಗಳಿಗೆ ಹಲವಾರು ಉದ್ಯೋಗ ಅವಕಾಶಗಳಿವೆ. ವಿದ್ಯುತ್, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಈ ಕೋರ್ಸ್ ಮಾಡಿದವರಿಗೆ ಬೇಡಿಕೆ ಇದೆ. ಅಲ್ಲದೇ ಸ್ವಯಂಚಾಲಿತ ಪ್ರಕ್ರಿಯೆ ಇರುವ ಕೈಗಾರಿಕೆಗಳಲ್ಲೂ ಉದ್ಯೋಗದ ಅವಕಾಶಗಳಿವೆ. ಉಪಕರಣ ಉತ್ಪಾದನೆ ಮತ್ತು ನಿರ್ವಹಣೆಯೊಂದಿಗೆ ವ್ಯವಹರಿಸುವ ವಿವಿಧ ಕಂಪನಿಗಳು ಡಿಪ್ಲೊಮಾ ಹೊಂದಿದವರನ್ನು ನೇಮಿಸಿಕೊಳ್ಳುತ್ತವೆ. ನಿರ್ವಹಣೆ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗದ ವಿಪುಲ ಅವಕಾಶಗಳಿವೆ. ಟಿಂಬರ್ ಅಂಡ್ ಪೇಪರ್, ಗಣಿಗಾರಿಕೆ, ಧಾನ್ಯ ಸಂಸ್ಕರಣೆ, ಪರಮಾಣು ಮತ್ತು ಉಷ್ಣ ಉತ್ಪಾದನೆ, ಬಯೋಮೆಡಿಕಲ್ ಮುಂತಾದ ಕಡೆಗಳಲ್ಲೂ ಉದ್ಯೋಗ ಲಭ್ಯ. ವೇತನ ಪ್ರಮಾಣವು ಅಭ್ಯರ್ಥಿಯ ಕೌಶಲವನ್ನು ಅವಲಂಬಿಸಿರುತ್ತದೆ.

ಉದ್ಯೋಗದಾತರು: ಪೆಟ್ರೋ ಕೆಮಿಕಲ್ ಉದ್ಯಮ, ದೊಡ್ಡ ಪ್ರಮಾಣದ ಉತ್ಪಾದನಾ ಕೈಗಾರಿಕೆಗಳು, ಐಟಿ ಕಂಪನಿಗಳು, ಆರ್ ಅಂಡ್ ಡಿ ಸಂಸ್ಥೆಗಳು, ಉಷ್ಣ ವಿದ್ಯುತ್ ಕೇಂದ್ರಗಳು, ಉಕ್ಕಿನ ಸ್ಥಾವರಗಳು, ಸಂಸ್ಕರಣಾಗಾರಗಳು, ಸಿಮೆಂಟ್ ಮತ್ತು ರಸಗೊಬ್ಬರ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು.

ಕೋರ್ಸ್ ಇರುವ ಕೆಲವು ಕಾಲೇಜುಗಳು

* ದಯಾನಂದ ಸಾಗರ್‌ ಎಂಜಿನಿಯರಿಂಗ್ ಕಾಲೇಜ್, ಬೆಂಗಳೂರು

* ಮಣಿಪಾಲ್ ಇನ್ನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ್

* ಆರ್.ವಿ. ಎಂಜಿನಿಯರಿಂಗ್ ಕಾಲೇಜ್, ಬೆಂಗಳೂರು

* ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜ್, ಬೆಂಗಳೂರು

* ಜೆ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಮೈಸೂರು

* ಸಿದ್ದಗಂಗಾ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು.

* ಬಾಪೂಜಿ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಕಾಲೇಜ್, ದಾವಣಗೆರೆ

* ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು