ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಕೆಎಎಸ್‌ ಪ್ರಿಲಿಮ್ಸ್‌ ಬೂಸ್ಟರ್‌

Published 26 ಜೂನ್ 2024, 23:30 IST
Last Updated 26 ಜೂನ್ 2024, 23:30 IST
ಅಕ್ಷರ ಗಾತ್ರ

1. ಸಾಟಲೈಟ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ

ಜಿಎನ್‌ಎಸ್‌ಎಸ್-ಆಧಾರಿತ (ಉಪಗ್ರಹ ಆಧಾರಿತ) ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ಅನುಷ್ಠಾನಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಆಸಕ್ತ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅರ್ಜಿಗಳನ್ನು (ಇಒಐಗಳು) ಆಹ್ವಾನಿಸಿದೆ. ಈ ಉಪಕ್ರಮವು ರಾಷ್ಟ್ರೀಯ ಹೆದ್ದಾರಿಗಳ ಬಳಕೆದಾರರಿಗೆ ತಡೆರಹಿತಪ್ರಯಾಣ ಮತ್ತು ತಡೆ-ಮುಕ್ತ ಟೋಲಿಂಗ್ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ.

ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ETC) ಬಗ್ಗೆ

GNSS-ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ ವಾಹನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸುಂಕದ ಹೆದ್ದಾರಿಗಳಲ್ಲಿ ಪ್ರಯಾಣದ ದೂರವನ್ನು ಆಧರಿಸಿ ಟೋಲ್‌ಗಳನ್ನು ಲೆಕ್ಕಹಾಕಲು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ತಂತ್ರಜ್ಞಾನವನ್ನು ಬಳಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ ?

* ಈ ವ್ಯವಸ್ಥೆಯು ವಾಹನಗಳ ಚಲನೆಯನ್ನು ಟ್ರ್ಯಾಕ್‌ ಮಾಡಲು ಉಪಗ್ರಹಗಳನ್ನು ಬಳಸಿಕೊಳ್ಳುತ್ತದೆ.

* ಸುಂಕದ ಹೆದ್ದಾರಿಗಳಲ್ಲಿ ಪ್ರಯಾಣಿಸುವ ದೂರವನ್ನು ಆಧರಿಸಿ ಪಾವತಿಸಬೇಕಿರುವ ಟೋಲ್‌ಗಳನ್ನು ಲೆಕ್ಕ ಹಾಕಲಾಗುತ್ತದೆ.

* GNSS-ಸಕ್ರಿಯಗೊಳಿಸಿದ ಆನ್ ಬೋರ್ಡ್ ಯೂನಿಟ್‌ಗಳನ್ನು (OBUs) ಹೊಂದಿದ ವಾಹನಗಳಿಗೆ ಅವು ಪ್ರಯಾಣಿಸುವ ದೂರವನ್ನು ಆಧರಿಸಿ ಶುಲ್ಕ ವಿಧಿಸಲಾಗುತ್ತದೆ.

* NHAI ಪ್ರಸ್ತುತ FASTag ವ್ಯವಸ್ಥೆಯೊಳಗೆ GNSS-ಆಧಾರಿತ ಟೋಲ್‌ ವ್ಯವಸ್ಥೆಯನ್ನು ಸಂಯೋಜಿಸಲು ಯೋಜಿಸಿದೆ.

ಆರಂಭಿಕ ಹಂತದಲ್ಲಿ ಫಾಸ್ಟ್‌ ಟ್ಯಾಗ್‌ ಆಧಾರಿತ ಟೋಲ್‌ ಕಟ್ಟುವಿಕೆ ಮತ್ತು GNSS-ಆಧಾರಿತ ಟೋಲ್ ಕಟ್ಟುವಿಕೆ ಹೀಗೆ ಎರಡೂ ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತದೆ.

ಮಹತ್ವ

* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ವಾಹನ ಸಂಚಾರವನ್ನು ಖಚಿತಪಡಿಸುತ್ತದೆ.

* ಪ್ರಯಾಣಿಕರಿಗೆ ಅಡಚಣೆ ಮುಕ್ತ ಪ್ರಯಾಣದ ಟೋಲಿಂಗ್ ಅನುಭವವನ್ನು ಒದಗಿಸುತ್ತದೆ.

* ದೂರ-ಆಧಾರಿತ ಟೋಲಿಂಗ್ ಲೆಕ್ಕಾಚಾರದ ಪ್ರಕಾರ ಪ್ರಯಾಣಿಸಿದ ದೂರಕ್ಕೆ ಮಾತ್ರ ಬಳಕೆದಾರರಿಗೆ ಶುಲ್ಕ ವಿಧಿಸುತ್ತದೆ.

* ಸೋರಿಕೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಟೋಲ್ ವಂಚನೆಯನ್ನು ತಡೆಯುವ ಮೂಲಕ ಟೋಲ್ ಸಂಗ್ರಹದ ದಕ್ಷತೆಯನ್ನು ಹೆಚ್ಚಿಸುತ್ತದೆ.

2.ಮೊಂಗ್ಲಾ ಬಂದರು

* ಭಾರತವು ಬಾಂಗ್ಲಾದೇಶದಲ್ಲಿ ಮೊಂಗ್ಲಾ ಬಂದರಿನ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು , ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಹೊಸ ಟರ್ಮಿನಲ್ ಅನ್ನು ನಿರ್ಮಿಸಲು ಪ್ರಯತ್ನಿಸುವುದು ಭಾರತದ ದೂರಾಲೋಚನೆಯಾಗಿದೆ.

ಬಂದರಿನ ಬಗ್ಗೆ

* ಬಾಂಗ್ಲಾದೇಶದ ಬಾಗರ್‌ಹಾಟ್ ಜಿಲ್ಲೆಯಲ್ಲಿದೆ. ಬಂಗಾಳ ಕೊಲ್ಲಿಯ ಕರಾವಳಿಯ ಉತ್ತರಕ್ಕೆ 62 ಕಿ.ಮೀ ದೂರದಲ್ಲಿ ಪಸುರ್ ಮತ್ತು ಮೊಂಗ್ಲಾ ನದಿಗಳ ಸಂಗಮ ಪ್ರದೇಶದಲ್ಲಿದೆ.

* ಸುಂದರಬನ್ಸ್ ಮ್ಯಾಂಗ್ರೋವ್ ಅರಣ್ಯದಿಂದ ಸುತ್ತುವರಿದಿದ್ದು, ಚಿತ್ತಗಾಂಗ್ ನಂತರ ಬಾಂಗ್ಲಾದೇಶದ ಎರಡನೇ ಅತಿ ದೊಡ್ಡ ಬಂದರಾಗಿದೆ.

ಭಾರತಕ್ಕೆ ಆಗುವ ಪ್ರಯೋಜನಗಳು

* ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರಾ ಮತ್ತು ಮೇಘಾಲಯಗಳಂತಹಾ ಆಯಕಟ್ಟಿನ ಪ್ರದೇಶಗಳಿಗೆ ಸುಗಮ ಪ್ರವೇಶವನ್ನು ಒದಗಿಸುತ್ತದೆ.

* ಈ ಪ್ರದೇಶಗಳಿಗೆ ಸಾಗಲು ಮತ್ತು ಸರಕುಗಳ ಸಾಗಾಣಿಕೆಗೆ ದೂರ ಮತ್ತು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ.

* ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (IPGL) ಮೊಂಗ್ಲಾ ಬಂದರನ್ನು ನಿರ್ವಹಿಸಲು ಆಸಕ್ತಿಯನ್ನು ತೋರಿಸಿದ್ದು, ಇದು ಇರಾನ್‌ನ ಚಬಹಾರ್ ಮತ್ತು ಮ್ಯಾನ್ಮಾರ್‌ನ ಸಿಟ್ವೆ ನಂತರ IPGL ನ ಮೂರನೇ ಅಂತರರಾಷ್ಟ್ರೀಯ ಬಂದರು ಕಾರ್ಯಾಚರಣೆಯಾಗಿದೆ.

* ವಿಸ್ತರಣಾ ಯೋಜನೆ: 2015ರಲ್ಲಿ, ಭಾರತ ಮತ್ತು ಬಾಂಗ್ಲಾದೇಶವು ಚಟ್ಟೋಗ್ರಾಮ್ ಮತ್ತು ಮೊಂಗ್ಲಾ ಬಂದರುಗಳ ಬಳಕೆಯ ಕುರಿತು ಒಪ್ಪಂದಕ್ಕೆ ಸಹಿ ಹಾಕಿದವು.

* ಮೊಂಗ್ಲಾ ಬಂದರಿನಿಂದ ಭಾರತದ ಈಶಾನ್ಯ ರಾಜ್ಯಗಳಿಗೆ ಜಲಮಾರ್ಗಗಳು, ರಸ್ತೆಗಳು ಮತ್ತು ರೈಲುಮಾರ್ಗಗಳ ಮೂಲಕ ಸರಕುಗಳ ಸಾಗಣೆಯ ಮಹತ್ವದ ಅಂಶಗಳನ್ನು ಈ ಒಪ್ಪಂದವು ಒಳಗೊಂಡಿದೆ.

3. ರೈನ್ ನದಿ

ದಕ್ಷಿಣ ಜರ್ಮನಿಯ ರೈನ್ ನದಿಯಲ್ಲಿ ನೀರಿನ ಮಟ್ಟವು ಭಾರಿ ಮಳೆಯಿಂದಾಗಿ ಹೆಚ್ಚಿದ್ದು ಸರಕು ಸಾಗಣೆಗಳು ಸಾಧ್ಯವಾಗದೇ ಇತ್ತೀಚೆಗೆ ಮುಚ್ಚಲ್ಪಟ್ಟವು.

ರೈನ್ ನದಿಯ ಬಗ್ಗೆ

* ಇದು ಯುರೋಪ್‌ ನಲ್ಲಿ ಹರಿಯುತ್ತಿರುವ 12ನೇ ಅತಿ ಉದ್ದದ ನದಿಯಾಗಿದೆ ಮತ್ತು ಪಶ್ಚಿಮ ಮತ್ತು ಮಧ್ಯ ಯುರೋಪ್ ನಲ್ಲಿ ಹರಿಯುತ್ತಿರುವ ಅತ್ಯಂತ ಉದ್ದದ ನದಿಯಾಗಿದೆ.

* ಈ ನದಿಯು ಜರ್ಮನಿಯಲ್ಲಿ ರೈನ್, ಫ್ರಾನ್ಸ್‌ನಲ್ಲಿ ರೈನ್ ಮತ್ತು ನೆದರ್ಲೆಂಡ್ಸ್‌ನಲ್ಲಿ ರಿಜ್ನ್ ಮುಂತಾಗಿ ತಾನು ಹರಿಯುವ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತದೆ.

* ರೈನ್ ನದಿಯು ಸ್ವಿಟ್ಜರ್ಲೆಂಡ್‌ನ ಸ್ವಿಸ್ ಆಲ್ಪ್ಸ್‌ನಲ್ಲಿ ತನ್ನ ಮೂಲದಿಂದ 1,232 ಕಿಮೀ (766 ಮೈಲುಗಳು) ಗಿಂತ ಹೆಚ್ಚು ಹರಿಯುತ್ತದೆ.

* ಇದು ಸ್ವಿಟ್ಜರ್ಲೆಂಡ್, ಲಿಚ್ಟೆನ್‌ಸ್ಟೈನ್, ಆಸ್ಟ್ರಿಯಾ, ಜರ್ಮನಿ, ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ ಮುಂತಾದ ಆರು ದೇಶಗಳ ಮೂಲಕ ಹರಿಯುತ್ತದೆ.

* ರೈನ್ ಜರ್ಮನಿ ಮತ್ತು ಫ್ರಾನ್ಸ್ ನಡುವೆ ಇರುವ ನೈಸರ್ಗಿಕ ಗಡಿಯಾಗಿದೆ.

* ಈ ನದಿಯು ಸುಮಾರು 185,000 ಚದರ ಕಿಲೋಮೀಟರ್ ಪ್ರದೇಶಗಳಷ್ಟು ಹರಿಯುತ್ತದೆ.

* ಉಪನದಿಗಳಲ್ಲಿ ಆರೆ, ತಮಿನಾ, ಮೊಸೆಲ್ಲೆ, ಎರ್ಫ್ಟ್, ರೀನ್ ಡ ತುಮಾ, ಪ್ಲೆಸುರ್, ರೋಟಾಚ್ ಮತ್ತು ವೈಸೆ ನದಿಗಳು ಸೇರಿವೆ.

* ಇದು ಯುರೋಪಿನ ಪ್ರಮುಖ ವಾಣಿಜ್ಯ ಜಲಮಾರ್ಗವಾಗಿದ್ದು, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ನೆದರ್ಲೆಂಡ್ಸ್‌ ನಡುವೆ ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತದೆ.

* ರೈನ್ ನದೀಪಾತ್ರದ ಉದ್ದಕ್ಕೂ ಇರುವ ಪ್ರಮುಖ ನಗರಗಳಲ್ಲಿ ಬಾಸೆಲ್ (ಸ್ವಿಟ್ಜರ್ಲೆಂಡ್), ಕಲೋನ್, ಬಾನ್, ಡ್ಯೂಸ್ಬರ್ಗ್, ಮೈಂಜ್, ಲೆವರ್ಕುಸೆನ್, ಮತ್ತು ನ್ಯೂಸ್ (ಜರ್ಮನಿ), ಸ್ಟ್ರಾಸ್ಬರ್ಗ್ (ಫ್ರಾನ್ಸ್), ಮತ್ತು ರೋಟರ್‌ಡ್ಯಾಮ್‌ ಮತ್ತು ಉಟ್ರೆಕ್ಟ್ (ನೆದರ್ಲ್ಯಾಂಡ್ಸ್) ನಗರಗಳು ಸೇರಿವೆ.

* ನದಿಯು ಕೈಗಾರಿಕಾ ಸಾರಿಗೆ ಮತ್ತು ಉತ್ಪಾದನೆಗೆ ಅನುಕೂಲಕರ ಪ್ರದೇಶವಾಗಿದ್ದು ಪ್ರಪಂಚದ ಸುಮಾರು ಶೇ 20 ರಾಸಾಯನಿಕ ಕೈಗಾರಿಕೆಗಳು ಅದರ ದಡದಲ್ಲಿ ನೆಲೆಗೊಂಡಿವೆ.

4. IATA

ಭಾರತವು 2025 ರಲ್ಲಿ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ​​(IATA) ನ ವಾರ್ಷಿಕ ಸಾಮಾನ್ಯ ಸಭೆಯನ್ನು (AGM) ಆಯೋಜಿಸಲು ಸಜ್ಜಾಗುತ್ತಿದೆ. ಭಾರತ 42 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಕ್ರಮವನ್ನು ಕೈಗೊಳ್ಳುತ್ತಿದೆ.

ಇಂಟರ್‌ ನ್ಯಾಷನಲ್‌ ಏರ್ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್ ​​(IATA) ಬಗ್ಗೆ:

ಸ್ಥಾಪನೆ: 57 ಆರಂಭಿಕ ಸದಸ್ಯರೊಂದಿಗೆ 1945 ರಲ್ಲಿ ಕ್ಯೂಬಾದ ಹವಾನಾದಲ್ಲಿ ಸ್ಥಾಪನೆಯಾದ IATA ಜಗತ್ತಿನ ವಿಮಾನಯಾನ ಸಂಸ್ಥೆಗಳ ಜಾಗತಿಕ ವ್ಯಾಪಾರ ಸಂಘವಾಗಿದೆ.

ಮಿಷನ್: ಸಂಘದ ಧ್ಯೇಯವು ‘ವಿಮಾನಯಾನ ಉದ್ಯಮವನ್ನು ಪ್ರತಿನಿಧಿಸುವುದು, ಮುನ್ನಡೆಸುವುದು ಮತ್ತು ಸೇವೆ ಸಲ್ಲಿಸುವುದು’

IATA ಜಾಗತಿಕವಾಗಿ ವಿಮಾನಯಾನ ಉದ್ದಿಮೆಯ ಹಿತಾಸಕ್ತಿಗಳಿಗಾಗಿ ಶ್ರಮಿಸುತ್ತದೆ ಮತ್ತು ಉದ್ಯಮದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT