ಭಾನುವಾರ, ಅಕ್ಟೋಬರ್ 17, 2021
23 °C

ಅರ್ಥಶಾಸ್ತ್ರ ಎಂಎ: ಮುಂದೇನು ಮಾಡಬಹುದು?

ವಿ. ಪ್ರದೀಪ್‌ಕುಮಾರ್‌ Updated:

ಅಕ್ಷರ ಗಾತ್ರ : | |

1. ನಾನು ಎಂಎ (ಅರ್ಥಶಾಸ್ತ್ರ) ಮುಗಿಸಿ, ಎರಡು ವರ್ಷ ಕೆಲಸ ಮಾಡಿದ್ದೇನೆ. ನಾನು ಓದಿರುವ ವಿಷಯಕ್ಕೆ ಸಂಬಂಧಿಸಿದ ಉದ್ಯೋಗವೇ ನನಗೆ ಇಷ್ಟ. ಕಿವಿ ಸಮಸ್ಯೆ ಇದೆ. ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಉದ್ಯೋಗಗಳ ಬಗ್ಗೆ ತಿಳಿಸಿ.

–ಶರತ್ ಬಾಬು, ಹಿರಿಯೂರು.

ಉತ್ತರ: ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಯನ್ನು ಗಳಿಸಿರುವ ನಿಮಗೆ ಅನೇಕ ವೃತ್ತಿಯ ಅವಕಾಶಗಳಿವೆ. ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿಯ ಅನುಸಾರ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಶಿಕ್ಷಣ, ಬ್ಯಾಂಕಿಂಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಇದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದ ಇಲಾಖೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು. ಕಿವಿಯ ಸಮಸ್ಯೆಗೆ ತಜ್ಞ ವೈದ್ಯರೊಡನೆ ಸಮಾಲೋಚಿಸಿ ಪರಿಹಾರವನ್ನು ಕಂಡುಕೊಳ್ಳಿ.

2. ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆಯಲ್ಲಿ ಪಾಸಾದರೆ, ಅದು ರೆಗ್ಯುಲರ್ ಪಿಯುಸಿಗೆ ಸರಿಸಮವಾಗಿರುತ್ತದೆಯೇ? ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಬಹುದೇ? ಎಸ್‌ಡಿಎ, ಪೊಲೀಸ್ ಕಾನ್‌ಸ್ಟೇಬಲ್ ಇನ್ನೂ ಮುಂತಾದ ಸರ್ಕಾರಿ ಉದ್ಯೋಗಗಳಿಗೆ ಪರೀಕ್ಷೆ ಬರೆಯಬಹುದೇ? ದಯಮಾಡಿ ತಿಳಿಸಿ. ಮುಂದೆ ಐಎಎಸ್ ಆಗಬೇಕೆಂದು ಕನಸು ಕಂಡಿದ್ದೇನೆ.

–ರಾಜ್, ಮೈಸೂರು

ಉತ್ತರ: ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು ಪಾಸಾದ ಪಿಯುಸಿಗೆ ಮಾನ್ಯತೆ ಇರುತ್ತದೆ. ಹಾಗಾಗಿ, ನಿಮ್ಮ ಯೋಜನೆಯಂತೆ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

3. ನನಗೆ ಈಗ 25 ವರ್ಷ ವಯಸ್ಸು. ನಾನು ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಬೇಕೆನ್ನುವ ಹಂಬಲ, ಹಠ ಎರಡೂ ಇದೆ. ಆದರೆ, ಸಮಯದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸಲಹೆ ನೀಡಿ.

–ಶ್ಯಾಮು, ಬೆಂಗಳೂರು.

4. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದು ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಇಚ್ಛಿಸಿದ್ದೇನೆ. ನನ್ನ ತಯಾರಿ ಹೇಗಿರಬೇಕು? ಹಾಗೂ ಮೊದಲ ಪತ್ರಿಕೆಗೆ ಯಾವ ರೀತಿ ತಯಾರಾಗಬೇಕು?

–ಹೆಸರು, ಊರು ತಿಳಿಸಿಲ್ಲ.

5. ಕೆಪಿಎಸ್‌ಸಿ ಎಂದರೆ ಗೊಂದಲ ಶುರುವಾಗುತ್ತದೆ. ಅಂತಹದರಲ್ಲಿ, ನಾನು ಕೆಎಎಸ್ ಮಾಡಬೇಕು ಅಂದುಕೊಂಡಿದ್ದೇನೆ. ಆದರೆ ಇಂಗ್ಲಿಷ್ ಭಯವಿದ್ದು ಅದರಿಂದ ಹೊರಗೆ ಬರುವುದು ಹೇಗೆ ಮತ್ತು ಕೆಎಎಸ್ ಪಠ್ಯಕ್ರಮದ ಬಗ್ಗೆ ತಿಳಿಸಿಕೊಡಿ.

–ಮಂಜು ಗೌಡ್ರ, ಕುಷ್ಟಗಿ.

ಉತ್ತರ: ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳ ಮಾದರಿ ಹೆಚ್ಚುಕಡಿಮೆ ಒಂದೇ ವಿಧದಲ್ಲಿರುತ್ತವೆ. ಕೆಎಎಸ್ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಬಹುದು. ಇಂಗ್ಲಿಷ್ ಭಾಷೆಯನ್ನು ಆಫ್‌ಲೈನ್ ಅಥವಾ ಆನ್‌ಲೈನ್ ಕೋರ್ಸ್‌ಗಳ ಮುಖಾಂತರ ಕಲಿಯಬಹುದು. ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ವಿವರ, ಪಠ್ಯಕ್ರಮ ಮತ್ತು ತಯಾರಿಯ ಬಗ್ಗೆ ಇದೇ ವರ್ಷದ ಜೂನ್ 21, ಜೂನ್ 28 ಮತ್ತು ಸೆಪ್ಟೆಂಬರ್ 27ರ ಪ್ರಶ್ನೋತ್ತರದಲ್ಲಿ ವಿವರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

6. ನನಗೆ ಬಣ್ಣಗುರುಡು ಇದೆ. ನಾನು ಕೆಪಿಎಸ್‌ಸಿ ಮುಖಾಂತರ ವಿವಿಧ ಹುದ್ದೆಗಳಿಗೆ ಅಂಗವಿಕಲತೆಯ ಕೋಟಾದಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದೇ?.

–ಚೆನ್ನಬಸವ ಎಸ್., ಧಾರವಾಡ.

ಉತ್ತರ: ತಮಗಿರುವ ಮಾಹಿತಿಯಂತೆ ನಿಮಗಿರುವ ಸಮಸ್ಯೆಗೆ ಅಂಗವಿಕಲತೆಯೆ ಕೋಟಾ ಅನ್ವಯವಾಗುವುದಿಲ್ಲ. ಖಚಿತವಾದ ಮಾಹಿತಿಗಾಗಿ ಕೆಪಿಎಸ್‌ಸಿಯ ಮಾಹಿತಿ ಕೇಂದ್ರವನ್ನು ಸಂಪರ್ಕಿಸಿ.

7. ಬಿ.ಫಾರ್ಮಾ ಕೋರ್ಸ್ ಮುಗಿಸಿದ ನಂತರದ ಸರ್ಕಾರಿ ಉದ್ಯೋಗಗಳ ಬಗ್ಗೆ ದಯವಿಟ್ಟು ತಿಳಿಸಿ.

–ಚಂದ್ರಮೋಹನ್ ಎ.ಆರ್., ಮಂಡ್ಯ.

ಉತ್ತರ: 4 ವರ್ಷದ ಬಿ.ಫಾರ್ಮಾ ಕೋರ್ಸ್ ರಸಾಯನ ವಿಜ್ಞಾನ, ಆರೋಗ್ಯ, ಔಷಧೋಪಚಾರ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು, ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ಡ್ರಗ್ ಕಂಟ್ರೋಲ್ ಇಲಾಖೆಗಳು, ಲ್ಯಾಬೊರೇಟರಿಗಳು, ಕಾಲೇಜುಗಳು, ಮೆಡಿಕಲ್ ಟ್ರಾನ್ಸ್‌ಸ್ಕ್ರಿಪ್ಷನ್ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ.


–ವಿ. ಪ್ರದೀಪ್‌ಕುಮಾರ್‌

8. ನಾನು ನನ್ನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಕೋರ್ಸ್ ಮುಗಿಸಿದ್ದೇನೆ. ಮುಂದಿನ ಉದ್ಯೋಗಾವಕಾಶಗಳೇನು ಎಂದು ಮಾಹಿತಿ ನೀಡಿ.

–ಜೀವನ್ ಗೌಡ, ಊರು ತಿಳಿಸಿಲ್ಲ.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯ ನಂತರ ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆ ಸಂಸ್ಥೆಗಳು, ರೈಲ್ವೇಸ್, ಆಟೋಮೊಬೈಲ್, ಏರೋಸ್ಪೇಸ್, ಪ್ರಾಪರ್ಟಿ, ಎಂಜಿನಿಯರಿಂಗ್ ಸೇವೆಗಳ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವಕಾಶಗಳಿವೆ.

 

 

9. ನನ್ನ ಮೊಮ್ಮಗ 10ನೇ ತರಗತಿಯಲ್ಲಿದ್ದು, ಮಿಲಿಟರಿ ಆಫೀಸರ್ ಆಗಬೇಕೆಂಬ ಹಂಬಲದಿಂದ ಮುಂದಿನ ವರ್ಷಗಳಲ್ಲಿ ಎನ್‌ಡಿಎ ಪರೀಕ್ಷೆ ತೆಗೆದುಕೊಳ್ಳಲು ಅಪೇಕ್ಷಿಸುತ್ತಿದ್ದಾನೆ. ಹೈದರಾಬಾದ್ ಮತ್ತು ರಾಜಸ್ಥಾನದಲ್ಲಿ ಕೋಚಿಂಗ್ ಸೆಂಟರ್‌ಗೆ ಹೋಗುವುದೇ ಎಂದು ಯೋಚಿಸುತ್ತಿದ್ದಾನೆ. ನಿಮ್ಮ ಸಲಹೆ ನೀಡಿ.

–ಈಶ್ವರ, ದೊಡ್ಡಬಳ್ಳಾಪುರ.

ಉತ್ತರ: ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸ್ವಯಂ ಅಧ್ಯಯನದಿಂದ ತಯಾರಾಗುವುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೇ ಎನ್ನುವುದು ಕ್ಲಿಷ್ಟವಾದ ಆಯ್ಕೆ. ಎರಡೂ ಬಗೆಯ ಪ್ರಯತ್ನಗಳಿಂದ ಇಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾದವರು ಇರುವುದರಿಂದ ಈ ಗೊಂದಲ ಸಹಜ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ಮಾರ್ಗದರ್ಶನವಿರಬೇಕು. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿಯಿದ್ದರೆ ಸ್ವಯಂ ಅಧ್ಯಯನದಿಂದಲೂ ಯಶಸ್ಸನ್ನು ಗಳಿಸಬಹುದು. ಹಾಗಾಗಿ, ಅಂತಿಮ ನಿರ್ಧಾರ ನಿಮ್ಮದು.

10. ನನ್ನ ಬಿಎ 6ನೇ ಸೆಮಿಸ್ಟರ್ ಮುಗಿದಿದೆ. ಮುಂದೆ ಯಾವ ಕೋರ್ಸ್‌ಗಳನ್ನು ಮಾಡಬಹುದು? ಯಾವುದಾದರೂ ವೃತ್ತಿಪರ ಕೋರ್ಸ್ ಮಾಡಬಹುದೇ? ನಿಮ್ಮ ಸಲಹೆ ನೀಡಿ.

ಕುಮಾರ ಎಸ್. ರಾಠೋಡ, ಯಾದಗಿರಿ.

ಉತ್ತರ: ಸಾಮಾನ್ಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಬಿಎ ನಂತರದ ಆಯ್ಕೆಯಲ್ಲಿ ವಿಪುಲತೆಯೂ ವೈವಿಧ್ಯತೆಯೂ ಇದೆ. ನೀವು ಬಿಎ ನಂತರ ಮಾಡಬಹುದಾದ ಕೋರ್ಸ್‌ಗಳೆಂದರೆ ಐಎಎಸ್, ಕೆಎಎಸ್, ಎಂಎ, ಎಂಬಿಎ, ಎಲ್‌ಎಲ್‌ಬಿ, ಸಿಎ, ಎಸಿಎಸ್, ಬಿಎಡ್, ಬಿಪಿಇಡಿ, ಬಿಎಸ್‌ಡಬ್ಲ್ಯು ಜರ್ನಲಿಸಮ್, ಫೈನ್ ಆರ್ಟ್ಸ್, ಕ್ರಿಯೇಟಿವ್ ರೈಟಿಂಗ್, ಡಿಸೈನ್ ಕೋರ್ಸ್‌ಗಳು (ಗ್ರಾಫಿಕ್ಸ್, ವಿಎಫ್‌ಎಕ್ಸ್, ಗೇಮ್ಸ್, ಫ್ಯಾಷನ್ ಇತ್ಯಾದಿ), ವಿದೇಶಿ ಮತ್ತು ಭಾರತೀಯ ಭಾಷೆಗಳು, ವಿಷಯಾನುಸಾರ ಸರ್ಟಿಫಿಕೆಟ್ ಮತ್ತು ಡಿಪ್ಲೊಮಾ ಕೋರ್ಸ್‌ಗಳು ಇತ್ಯಾದಿ. ಪ್ರಮುಖವಾಗಿ, ನಿಮ್ಮ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆಯ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ಮುಂದಿನ ಕೋರ್ಸ್ ಆಯ್ಕೆ ಮಾಡಬಹುದು.

11. ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಇ ಮುಗಿಸಿದ್ದೇನೆ. ಪಿಡಿಒ ಪರೀಕ್ಷೆಗೆ ಬೇಕಾದ ಪುಸ್ತಕ ಮತ್ತು ಪರೀಕ್ಷೆಯ ಬಗ್ಗೆ ಮಾಹಿತಿ ತಿಳಿಸಿ.

ಆಶಾ ಪಿ., ಊರು ತಿಳಿಸಿಲ್ಲ.

ಉತ್ತರ: ಪಿಡಿಒ ಪರೀಕ್ಷೆಯ ಮಾದರಿ, ವಿಷಯಸೂಚಿ ಮತ್ತು ಇನ್ನಿತರ ಮಾಹಿತಿಗಾಗಿ ಗಮನಿಸಿ: https://www.recruitment.guru/syllabus/kea-pdo-syllabus/

12. ಎಂಕಾಂ ಮತ್ತು ಬಿಇಡಿ ಆಗಿದೆ. ಶಾಲಾ ಶಿಕ್ಷಕ ಅಥವಾ ವಾರ್ಡನ್ ಆಗಿ ಕೆಲಸ ಸಿಗುತ್ತದೆಯೇ?

ಎಂಕಾಂ ಮತ್ತು ಬಿಇಡಿ ಆಗಿರುವುದರಿಂದ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಬಹುದು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕಾದರೆ, ಸೆಂಟ್ರಲ್ ಟೀಚರ್ ಎಲಿಜಿಬಲಿಟಿ ಟೆಸ್ಟ್ (ಸಿಟಿಇಟಿ) ಪಾಸಾಗಬೇಕು.

13. ಸರ್, ನಾನು ಪಿಯುಸಿ ಮುಗಿಸಿದ್ದೇನೆ. ಮುಂದೆ ಎಂಜಿನಿಯರಿಂಗ್‌ನಲ್ಲಿ ಯಾವ ವಿಭಾಗ ಮತ್ತು ಯಾವ ಕಾಲೇಜು ತೆಗೆದುಕೊಂಡರೆ ಉತ್ತಮ. ಹಾಗೇ, ಓದಿನ ಜೊತೆ ಮನೆಯಿಂದಲೇ ಮಾಡಬಹುದಾದ ಪಾರ್ಟ್ ಟೈಮ್ ಕೆಲಸಗಳ ಬಗ್ಗೆ ತಿಳಿಸಿಕೊಡಿ.

–ಲಾವಣ್ಯ, ದಾವಣಗೆರೆ.

ಉತ್ತರ: ಒಂದು ಅಂದಾಜಿನ ಪ್ರಕಾರ ಎಂಜಿನಿಯರಿಂಗ್ ಕೋರ್ಸ್ನಲ್ಲಿ ಸುಮಾರು ನೂರು ಸ್ಪೆಷಲೈಜೇಷನ್ಸ್ ಇದೆ ಎನ್ನಲಾಗುತ್ತದೆ. ಪ್ರಮುಖವಾಗಿ, ಕಂಪ್ಯೂಟರ್ ಸೈನ್ಸ್, ಐಟಿ, ರೊಬೊಟಿಕ್ಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಮೆಕಾಟ್ರಾನಿಕ್ಸ್, ಸಿವಿಲ್, ಬಯೋಟೆಕ್, ಬಯೋಮೆಡಿಕಲ್, ಏರೋನಾಟಿಕಲ್, ಏರೋಸ್ಪೇಸ್ ಇತ್ಯಾದಿ. ನಿಮ್ಮ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆಯ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ಮುಂದಿನ ಕೋರ್ಸ್ ಮತ್ತು ವಿಭಾಗವನ್ನು ಆಯ್ಕೆ ಮಾಡಬಹುದು. ಅರೆಕಾಲಿಕ ವೃತ್ತಿಗಳಿಗಾಗಿ, ಈ ಪುರವಣಿಯಲ್ಲಿ ಕಳೆದ ಸೆಪ್ಟೆಂಬರ್ 27ರಂದು ಪ್ರಕಟವಾದ ಲೇಖನವನ್ನು ನೋಡಿ. ಕಾಲೇಜುಗಳ ಆಯ್ಕೆಗಳು ಮತ್ತು ರ‍್ಯಾಂಕಿಂಗ್ ಮಾಹಿತಿಗಾಗಿ ಗಮನಿಸಿ: https://www.nirfindia.org/2021/EngineeringRanking.html

14. ನಾನು ಪಿಯುಸಿ (ವಿಜ್ಞಾನ) ಮುಗಿಸಿ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ 5 ವರ್ಷಗಳ ಅರ್ಥಶಾಸ್ತ್ರ ಕೋರ್ಸ್‌ಗೆ ಆಯ್ಕೆಯಾಗಿದ್ದೇನೆ. ಈ ಕೋರ್ಸ್ ಬಗ್ಗೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಪಡೆಯಬೇಕು. ಸಹಾಯ ಮಾಡಿ.

ಹೆಸರು, ಊರು ತಿಳಿಸಿಲ್ಲ

–ನೀವು ಆಯ್ಕೆಯಾಗಿ ಸೇರಬಯಸುತ್ತಿರುವುದು ಒಂದು ಪ್ರತಿಷ್ಠಿತ ಸಂಸ್ಥೆ. ಈ ಕೋರ್ಸ್ ನಂತರ ಶಿಕ್ಷಣ, ಬ್ಯಾಂಕಿಂಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಪ್ಲೇಸ್‌ಮೆಂಟ್ ಮತ್ತು ಇನ್ನಿತರ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು