ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ ಶಾಲೆಗಷ್ಟೆ; ಓದಿಗಲ್ಲ..

Last Updated 24 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೇಸಿಗೆಯ ರಜಾ ದಿನಗಳು ಆರಂಭವಾಗಿವೆ. ಮಕ್ಕಳಿಗೆ ಪೋಷಕರೊಂದಿಗೆ ಕಾಲ ಕಳೆಯುವ ಅವಕಾಶ. ಇವುಗಳ ಮಧ್ಯೆಯೂ ಕೆಲವು ಪೋಷಕರು ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುತ್ತಾರೆ. ಅವುಗಳು ಎಷ್ಟರಮಟ್ಟಿಗೆ ಉಪಯೋಗವಾಗುತ್ತಿವೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇನ್ನೂ ಶಾಲೆಯ ವಿಚಾರಕ್ಕೆ ಬರುವುದಾದರೆ, ಬೇಸಿಗೆರಜೆ ಪೂರ್ತಿ ಮಾಡುವಷ್ಟು ಹೋಂವರ್ಕ್ ನೀಡಲಾಗಿರುತ್ತದೆ. ಅದು ಸರಿಯೆ ಆದರೂ ಅವರು ನೀಡಿರುವ ಹೋಮ್‌ವರ್ಕ್‌ ನೋಡಿದರೆ ಆಶ್ಚರ್ಯವೂ, ಭಯವೂ ಆಗುತ್ತದೆ. ನಿತ್ಯ ಒಂದು ಪುಟ ಪಾಠ, ಮಗ್ಗಿ, ಕಾಪಿರೈಟಿಂಗ್, ಕಳೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಿಡಿಸುವುದು, ಕಾಗುಣಿತ ಇಂತಹವೇ ಆಗಿರುತ್ತವೆ. ಪ್ರತಿ ವರ್ಷ ಇಂತಹ ‘ಮನೆಕೆಲಸ’ ನೀಡಲಾಗುತ್ತದೆ. ಆದರೂ ಶಾಲೆ ಶುರುವಾದ ಬಳಿಕ ಮಕ್ಕಳು ಎಳ್ಳಷ್ಟು ಸುಧಾರಿಸಿದೇ ಇರುವುದು ಕಂಡು ಬಂದಿದೆ. ಕೆಲವು ಶಾಲೆಯ ಮಕ್ಕಳು ಮನೆಯ ಪಾಠಕ್ಕೆ ಹೋಗಿ ಮುಂದಿನ ವರ್ಷದ ಓದಿನ ತಯಾರಿ ನಡೆಸಿರುತ್ತಾರೆ. ಆ ಒಂದೆರಡು ಪ್ರಕರಣಗಳನ್ನು ಎಲ್ಲಾ ಮಕ್ಕಳಿಗೂ ಅನ್ವಯಿಸಲಾಗದು!

ಇಷ್ಟೆಲ್ಲ ವಿವರಿಸಿದ ಮೇಲೆ, ‘ಮಕ್ಕಳು ರಜೆಯಲ್ಲೂ ಓದ್ಬೇಕಾ?’ ಎಂಬ ಪ್ರಶ್ನೆ ಉದ್ಭವಿಸದಿರದು. ಈ ಪ್ರಶ್ನೆಗೆ ನೇರ ಉತ್ತರವೆಂದರೆ ‘ಹೌದು’. ಅದಕ್ಕೆ ಕಾರಣಗಳೂ ಇವೆ. ಸುಮಾರು ಐವತ್ತು ದಿನಗಳಷ್ಟು ಮಕ್ಕಳಿಗೆ ರಜೆ ಸಿಕ್ಕಿರುತ್ತದೆ. ಅಷ್ಟು ದಿನಗಳ ಕಾಲ ಅವರು ಶಾಲೆಯಿಂದ ಸಂಪೂರ್ಣ ದೂರವಿರುತ್ತಾರೆ. ಶಾಲೆಯಲ್ಲಿ ಕಲಿಯುವ ಮಕ್ಕಳು 6 ರಿಂದ 14 ವರ್ಷದೊಳಗಿನವರೇ ಆಗಿರುತ್ತಾರೆ. ಎಳೆ ವಯಸ್ಸಿನ ಮನಸ್ಸೇ ಹಾಗೆ. ನಿರಂತರತೆ ಇಲ್ಲದಿದ್ದರೆ ಬೇಗ ಮರೆವಿಗೆ ಜಾರುತ್ತದೆ. ಹಲವು ಅಧ್ಯಯನಗಳ ಪ್ರಕಾರ ಎರಡು ತಿಂಗಳುಗಳ ಕಾಲ ಓದಿನ ಹತ್ತಿರವೇ ಸುಳಿಯದವರು ಈಗಾಗಲೇ ಕಲಿತಿರುವುದಕ್ಕಿಂತ ಸಾಕಷ್ಟು ಹಿಂದೆ ಸಾಗುತ್ತಾರೆ. ಇದು ನಮ್ಮ ಸರ್ಕಾರಿ ಶಾಲೆಯ, ಹಳ್ಳಿ ಮಕ್ಕಳ ಮಟ್ಟಿಗೆ ಸತ್ಯವೇ ಆಗಿದೆ. ಪರಿಸರ, ಮನೆಯ ಸ್ಥಿತಿ ಗತಿಯ ಕಾರಣದಿಂದ ಮಕ್ಕಳು ಪುಸ್ತಕವನ್ನು ಹಿಡಿಯಲಾಗುವುದಿಲ್ಲ. ಇದರ ಪರಿಣಾಮದ ಅರಿವು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸಾಕಷ್ಟಿದೆ. ಪ್ರತಿ ವರ್ಷ ಶಾಲೆಗಳು ಆರಂಭವಾದ ಮೇಲೆ ಒಂದು ತಿಂಗಳ ಕಾಲ ಮಕ್ಕಳನ್ನು ಮೊದಲ ಸ್ಥಿತಿಗೆ ತರಲು ಶಿಕ್ಷಕರು ಸಾಕಷ್ಟು ಒದ್ದಾಡಬೇಕಾಗುತ್ತದೆ. ಕಲಿಕೆಯ ವಿಷಯದಲ್ಲಿ ಒಂದು ದೀರ್ಘವಾದ ಅಂತರ ಎಂತಹ ಕಲಿಕೆಯನ್ನೂ ಕುಂಠಿತಗೊಳಿಸಬಹದು. ಕೋವಿಡ್ ಇದನ್ನು ನಮಗೆ ಚೆನ್ನಾಗಿಯೇ ಅರ್ಥ ಮಾಡಿಸಿದೆ.

ಹೀಗೆ ರಜೆ ಅವಧಿಯಲ್ಲಿ ಮಗುವು ಓದುವಿಕೆಯಿಂದ ದೂರ ಉಳಿಯುವುದನ್ನು ಶಿಕ್ಷಣ ತಜ್ಞರು ‘summer slide' ಅಂತ ಕರೆಯುತ್ತಾರೆ. ಅದರ ಅರ್ಥವಿಷ್ಟೇ; ಹಿಂದಿನ ಕಲಿಕೆಯ ನಿರಂತರತೆಯನ್ನು ಉಳಿಸಿಕೊಳ್ಳಲಾಗದೆ ಅದರಿಂದ ದೂರವಿದ್ದು, ಹಿಂದೆ ಕಲಿತಿದ್ದನ್ನೂ ಕಳೆದುಕೊಳ್ಳುವುದೇ ಆಗಿದೆ. ಇದು ಕಡಿಮೆ ಆದಾಯದ ಕುಟುಂಬಗಳಲ್ಲೇ ಜಾಸ್ತಿ ಕಂಡು ಬರುತ್ತದೆ. ತಿಳಿವಳಿಕೆಯ ಕೊರತೆ ಮತ್ತು ಆರ್ಥಿಕ ಸ್ಥಿತಿ ಅವರನ್ನು ಹಾಗೆ ಮಾಡಬಹುದು! ಕಲಿಕೆಗೆ ನೀಡುವ ಒಂದು ದೀರ್ಘವಾದ ಅಂತರದ ಪರಿಣಾಮ ಏನು ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಕೊಡಬೇಕೆಂದರೆ; ಒಂದು ಸಂಗೀತ ವಾದ್ಯ ನುಡಿಸುವುದನ್ನು ಕಲಿಯುವ ವ್ಯಕ್ತಿ ಏಕಾಏಕಿ ಮೂರಾಲ್ಕು ತಿಂಗಳುಗಳ ಕಾಲ ನಿಲ್ಲಿಸಿ ಬಿಟ್ಟರೆ ಆತ ಅದನ್ನು ಸುಧಾರಿಸಿಕೊಳ್ಳಲು ಮತ್ತೆ ಸಾಕಷ್ಟು ದಿನಗಳನ್ನು ತಗೆದುಕೊಳ್ಳಬೇಕಾಗುತ್ತದೆ. ನಿತ್ಯ ವ್ಯಾಯಾಮ ಮಾಡುವವನು ದಿಢೀರನೆ ನಿಲ್ಲಿಸಿ, ಮತ್ತೆಂದೋ ಆರಂಭಿಸಿದಾಗ ದೇಹ ಮತ್ತೆ ಸ್ಪಂದಿಸಲು ಸಮಯ ತಗೆದುಕೊಳ್ಳುತ್ತದೆ.

ಏನು ಓದಬೇಕು?

ಈಗಾಗಲೇ ಶೈಕ್ಷಣಿಕ ಕ್ಷೇತ್ರದಲ್ಲಿ ನಡೆದಿರುವ ಅಧ್ಯಯನಗಳು/ ಸಮೀಕ್ಷೆಗಳ ಪ್ರಕಾರ ಸಾಮಾನ್ಯ ಕಲಿಕಾ ಮಟ್ಟಕ್ಕಿಂತ ಕೆಳಗಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಹಾಗಾಗಿ, ಗಣಿತದ ಮೂಲ ಕ್ರಿಯೆಗಳು, ವಾಕ್ಯರಚನೆ, ಪದ ಬಳಕೆ, ವ್ಯಾಕರಣದಂತಹ ವಿಷಯಗಳನ್ನು ಕಲಿತುಕೊಳ್ಳಲು ಮಕ್ಕಳಿಗೆ ಇದು ಸರಿಯಾದ ಸಮಯ. ರಜೆ ಅವಧಿಯಲ್ಲಿಯೇ ಕಲಿತುಕೊಂಡರೆ ಶಾಲಾ ಅವಧಿಯಲ್ಲಿ ಸಾಮಾನ್ಯ ಓದಿನೊಂದಿಗೆ ಹೊಂದಿಕೊಳ್ಳಬಹುದು.

ಕೇವಲ ಶಾಲಾ ಪಠ್ಯಗಳನ್ನು ಓದಬೇಕಾಗಿಲ್ಲ. ಆದರೆ ಓದು ನಿರಂತರವಾಗಿರಬೇಕು. ನಿಮಗೆ ಕುತೂಹಲವೆನಿಸಿದ, ಆಸಕ್ತಿಯ ಪುಸ್ತಕಗಳನ್ನು ಶಾಲಾ ಶಿಕ್ಷಕರ ಬಳಿ, ಗ್ರಂಥಾಲಯಗಳಿಂದ ಕೇಳಿ ತಂದು ಓದಬಹುದು.

ನಿತ್ಯ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ರೂಢಿಸಿಕೊಂಡರೆ ಜ್ಞಾನವೃದ್ಧಿಗೆ ಬೇಕಾದ ಅನೇಕ ವಿಚಾರಗಳು ಅಲ್ಲಿ ಸಿಗುತ್ತವೆ.

ಸೃಜನಾತ್ಮಕ ಬರವಣೆಗೆಯಲ್ಲಿ ತೊಡಗಿಕೊಳ್ಳಬಹುದು. ನೀವು ಓದಿದ ವಿಷಯವಾಗಲಿ, ಅನುಭವಕ್ಕೆ ಬಂದ ವಿಷಯವಾಗಲಿ ನಿಮ್ಮದೇ ಪದಗಳಲ್ಲಿ ಬರೆಯುವ ಅಭ್ಯಾಸವಾಗಬೇಕು. ಆಗ ಭಾಷೆಯ ಮೇಲೆ ಹಿಡಿತ ಸಿಗುತ್ತದೆ.

ಶಾಲಾ ಕಲಿಕೆಯಲ್ಲಿ ಯಾವ ವಿಷಯದಲ್ಲಿ ಕಠಿಣ ಅಂಶಗಳನ್ನು ಎದುರಿಸುತ್ತೀರೋ ಆ ವಿಷಯಗಳ ಕಡೆ ಗಮನಹರಿಸುವುದು ಸೂಕ್ತ.

ಓದನ್ನು ಹೀಗೆ ರೂಢಿಸಿ...

ಮನೆಯ ಹಿರಿಯರು, ಪೋಷಕರು ಪ್ರತಿ ನಿತ್ಯ ಮಕ್ಕಳೊಂದಿಗೆ ಪುಸ್ತಕ ಹಿಡಿದು ಓದುತ್ತಾ, ಒಂದಿಷ್ಟು ಹೊತ್ತು ಕಳೆಯಿರಿ.

ಮಕ್ಕಳನ್ನು ನಿತ್ಯ ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ. ಇದೊಂದು ಉತ್ತಮ ರೂಢಿಯಾಗಿದ್ದು, ಮಕ್ಕಳಿಗೆ ಅಭ್ಯಾಸ ಮಾಡಿಸಿ.

ಮನೆಯಲ್ಲಿ ಪತ್ರಿಕೆ, ಮ್ಯಾಗಜೀನ್‌, ಪುಸ್ತಕಗಳನ್ನು ಎಲ್ಲೆಂದರಲ್ಲಿ ಕಾಣುವಂತೆ, ಮಕ್ಕಳಿಗೆ ಸಿಗುವಂತೆ ವ್ಯವಸ್ಥೆ ಮಾಡಿರಿ.

ಅವರ ಓದಿನ ಬಗೆಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರಿ. ಸರಿ ಉತ್ತರಕ್ಕೆ ಅಭಿನಂದಿಸಿ.

ಮಕ್ಕಳು ದಿನಪೂರ್ತಿ ಓದುತ್ತಲೇ ಇರಬೇಕೆಂದು ಬಯಸಬೇಡಿ, ಇದು ರಜೆಯ ಸಮಯ. ಒಂದೆರಡು ಗಂಟೆಗಳ ಓದಿನ ನಂತರ ಅವರ ಆಟೋಟಗಳಿಗೆ ಪೂರ್ಣ ಸ್ವತಂತ್ರ ನೀಡಿ.

ಮಕ್ಕಳನ್ನು ಮನೆಪಾಠಕ್ಕೆ ಕಳಿಸಿ, ಆ ಚಟುವಟಿಕೆಗೂ ನಿಮಗೂ ಸಂಬಂಧವಿಲ್ಲದಂತೆ ಕೂರಬೇಡಿ. ಮಕ್ಕಳು ಅಲ್ಲೇನು ಕಲಿಯುತ್ತಿದ್ದಾರೆಂದು ನಿತ್ಯ ಗಮನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT