ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಇಇ ಪರೀಕ್ಷೆ ಇಲ್ಲದೆ ಐಐಟಿಗೆ ಪ್ರವೇಶ!

ಅಕ್ಷರ ಗಾತ್ರ

ಹೌ ದು. ಪಿಯುಸಿ ಹಂತದ ವಿದ್ಯಾರ್ಥಿಗಳು ಜೆಇಇ (ಜಾಯಿಂಟ್ ಎಂಟ್ರೆನ್ಸ್ ಎಕ್ಸಾಂ) ಪರೀಕ್ಷೆ ಬರೆಯದೇ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸಂಸ್ಥೆಗೆ ಪ್ರವೇಶ ಪಡೆಯುವ ಸುವರ್ಣಾವಕಾಶ ಬಂದಿದೆ! ಈವರೆಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾತ್ರ ಎರಡು ಹಂತಗಳಲ್ಲಿ ನಡೆಯುವ ರಾಷ್ಟ್ರಮಟ್ಟದ ಕಠಿಣ ಸವಾಲಿನ ಜೆಇಇ ಪರೀಕ್ಷೆ ಬರೆದು, ಉನ್ನತ ಅಂಕಗಳಿಸಿ ಐಐಟಿಯಲ್ಲಿ ಎಂಜಿನಿಯರಿಂಗ್ ಸೀಟ್ ಗಿಟ್ಟಿಸುತ್ತಿದ್ದರು. ಐಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆಯುವುದು ದೇಶದ ಪ್ರತಿ ವಿಜ್ಞಾನ ವಿದ್ಯಾರ್ಥಿಯ ಬಹುದೊಡ್ಡ ಕನಸೂ ಹೌದು. ಪ್ರತಿ ಸಾವಿರದಲ್ಲಿ ಒಬ್ಬರಿಗೆ ಮಾತ್ರ ಸೀಟು ಸಿಗುವುದರಿಂದ ಐಐಟಿ ಪ್ರವೇಶ ಸುಲಭದ್ದಲ್ಲ.

ಆದರೆ ಈಗ ಮದ್ರಾಸ್ ಐಐಟಿಯವರು ರೂಪಿಸಿರುವ ಹೊಸ ಆನ್‌ಲೈನ್ ಪದವಿಕೋರ್ಸ್‌ಗೆ ಪ್ರವೇಶ ಪಡೆಯಲು ಜೆಇಇಪರೀಕ್ಷೆ ಬರೆಯಬೇಕಿಲ್ಲ! ನೀವು ವಿಜ್ಞಾನದ ವಿದ್ಯಾರ್ಥಿಯೂ ಆಗಿರಬೇಕಿಲ್ಲ! ಆರ್ಟ್ಸ್, ಕಾಮರ್ಸ್, ಸೈನ್ಸ್‌ನಲ್ಲಿ ಪಿಯುಸಿ ಮುಗಿಸಿದ ಯಾವುದೇ ವಿದ್ಯಾರ್ಥಿ ಮದ್ರಾಸ್ ಐಐಟಿ ನಡೆಸುವ ಅರ್ಹತಾ (qualifier) ಪರೀಕ್ಷೆ ಬರೆದು ಡೇಟಾಸೈನ್ಸ್ ಬಿಎಸ್‌ಸಿ ಪದವಿಗೆ ಸೇರಬಹುದು. ದಾಖಲಾತಿ ನೀಡುವ ಐಐಟಿ, ಆರ್ಹತಾ ಪರೀಕ್ಷೆಗೆ ಒಂದು ತಿಂಗಳ ತರಬೇತಿಯನ್ನೂ ನೀಡುತ್ತದೆ. ವಿಜ್ಞಾನ ಶಿಕ್ಷಣ ಪಡೆಯದಿದ್ದರೂ ಡೇಟಾ ವಿಜ್ಞಾನದಲ್ಲಿ ಡಿಗ್ರಿ ಗಳಿಸುವ ಅವಕಾಶ ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಉನ್ನತ ಶಿಕ್ಷಣ ಸಂಸ್ಥೆಯಿಂದ ದೊರೆಯುತ್ತಿರುವುದು ಇದೇ ಮೊದಲು.

ತರಬೇತಿ - ಪರೀಕ್ಷೆ

ಅರ್ಹತಾ ಪರೀಕ್ಷೆಗೆ ಬೇಕಾದ ಒಂದು ತಿಂಗಳ ಆನ್‌ಲೈನ್ ತರಬೇತಿ ನೀಡಿದ ನಂತರ ಪರೀಕ್ಷೆ ಇರುತ್ತದೆ. ಹತ್ತನೆಯ ತರಗತಿಯಲ್ಲಿ ಗಣಿತ ಓದಿರುವ ಹಾಗೂ 12ನೆಯ ತರಗತಿ ಪೂರೈಸಿರುವ ಯಾವುದೇ ವಿದ್ಯಾರ್ಥಿ ಅರ್ಹತಾ ಪರೀಕ್ಷೆ ಬರೆಯಬಹುದು. ವಯೋಮಿತಿಯ ನಿರ್ಬಂಧ ಇಲ್ಲ. ಡೇಟಾ ಸೈನ್ಸ್‌ನಲ್ಲಿ ಆನ್‌ಲೈನ್ ಪದವಿ ನೀಡುತ್ತಿರುವ ವಿಶ್ವದ ಏಕೈಕ ಕೋರ್ಸ್ ಇದಾಗಿದ್ದು ಹನ್ನೆರಡನೆ ತರಗತಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸುತ್ತದೆ. ಅರ್ಹತಾ ಪರೀಕ್ಷೆ ಪಾಸಾಗುವ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಮೊದಲ ಹಂತದ ಫೌಂಡೇಶನ್ ಪ್ರೋಗ್ರಾಂಗೆ ಪ್ರವೇಶ ದೊರೆಯುತ್ತದೆ.

ವಿವಿಧ ಹಂತದ ಕೋರ್ಸ್

ಕೋರ್ಸ್‌ನಲ್ಲಿ ಫೌಂಡೇಶನ್, ಡಿಪ್ಲೊಮಾ ಮತ್ತು ಪದವಿ ಎಂಬ ಮೂರು ಹಂತಗಳಿವೆ. ವಿದ್ಯಾರ್ಥಿಗಳು ತಮಗೆ ಬೇಕಾದ ಹಂತದಲ್ಲಿ ಶಿಕ್ಷಣದಿಂದ ನಿರ್ಗಮಿಸುವ ಅವಕಾಶವೂ ಇದೆ. ವಿಶ್ವದ ಯಾವುದೇ ಜಾಗದಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ಈ ಕೋರ್ಸ್ ಸೇರಬಹುದು. ಆನ್‌ಲೈನ್ ಪರೀಕ್ಷೆ ಸದ್ಯಕ್ಕೆ ಭಾರತ, ಶ್ರೀಲಂಕಾ ಮತ್ತು ಯುಎಇಗಳ ನಿರ್ಧರಿತ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತದೆ. ವಾರ್ಷಿಕ ಇಂತಿಷ್ಟೇ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬೇಕೆಂಬ ನಿಬಂಧನೆ ಇಲ್ಲವಾದ್ದರಿಂದ 2020ನೇ ಸಾಲಿನಲ್ಲಿ 30 ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರು. ಅವರ ಪೈಕಿ 8,154 ವಿದ್ಯಾರ್ಥಿಗಳು ಅರ್ಹತೆ ಗಳಿಸಿ ಮುಂದಿನ ಹಂತದ ಶಿಕ್ಷಣಕ್ಕೆ ದಾಖಲಾಗಿದ್ದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ರೂಪುಗೊಂಡಿರುವ ಈ ಕೋ‌ರ್ಸ್‌ನಲ್ಲಿ ಬಹುಪ್ರವೇಶ (Multiple entry) ಮತ್ತು ಬಹುನಿರ್ಗಮನ (Multiple exit) ಗಳ ಅವಕಾಶವಿದೆ. ಅಲ್ಲದೆ ಬೇರೆ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಸಹ ಈ ಕೋರ್ಸ್‌ಗೆ ದಾಖಲಾಗಬಹುದು.

ಶಿಕ್ಷಣಕ್ಕೆ ಪ್ರತ್ಯೇಕ ಪೋರ್ಟಲ್

ಅರ್ಹತಾ ಪರೀಕ್ಷೆಯ ನಂತರ ಕೋರ್ಸ್‌ಗೆ ದಾಖಲಾದ ವಿದ್ಯಾರ್ಥಿಗಳ ತರಬೇತಿ ಮತ್ತು ಕೋರ್ಸ್ ಕಲಿಕೆಗೆ ಪ್ರತ್ಯೇಕ ಆನ್‌ಲೈನ್ ಪೋರ್ಟಲ್ ಇದೆ. ದೇಶದ ವಿವಿಧ ಯಶಸ್ವಿ ಡೇಟಾಸೈನ್ಸ್ ಉದ್ಯಮದ ತಜ್ಞರು, ಐಐಟಿ ಪ್ರೊಫೆಸರ್‌ಗಳು, ನುರಿತ ಎಂಜಿನಿಯರ್‌ಗಳು ಪಾಠ ಮಾಡುತ್ತಾರೆ. ಅರ್ಹತಾ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದವರಿಗೆ ಶೇ 75 ರಷ್ಟು ಶುಲ್ಕ ವಿನಾಯಿತಿಯೂ ಇದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಒಂದು ಲಕ್ಷ ರೂಪಾಯಿಯ ಕೆಳಗಿದ್ದರೆ ಶೇ 50 ರಿಂದ 75 ರವರೆಗೆ ಶುಲ್ಕ ವಿನಾಯಿತಿ ಇದ್ದು ಇಡೀ ಕೋರ್ಸ್ ಅನ್ನು ಕೇವಲ ₹60 ಸಾವಿರದಲ್ಲಿ ಮುಗಿಸಬಹುದು.

ಉದ್ಯೋಗಾವಕಾಶದ ಮಹಾಪೂರ

‘ಡೇಟಾ ಡ್ರೈವ್ಸ್ ದ ನ್ಯೂ ವರ್ಲ್ಡ್’ ಎಂಬ ಮಾತು ಈಗ ಎಲ್ಲ ಕಡೆ ಕೇಳಿಬರುತ್ತದೆ. ಜಗತ್ತಿನ ಎಲ್ಲರೂ, ಎಲ್ಲ ಬಗೆಯ ವಸ್ತುಗಳೂ ಡೇಟಾ ಉತ್ಪಾದಿಸುತ್ತವೆ. ಅದರ ವಿಶ್ಲೇಷಣೆ, ಕ್ರೋಢೀಕರಣ, ವರ್ಗೀಕರಣ ಮತ್ತು ಬಳಕೆಗೆ ಜನ ಬೇಕು. ಹಾಗಾಗಿ ಲೆಕ್ಕವಿಲ್ಲದಷ್ಟು ಕೆಲಸಗಳು ಡೇಟಾಸೈನ್ಸ್ ಓದಿದವರಿಗೆ ಕಾದು ಕೂತಿವೆ. ಇದನ್ನೇ ದೃಷ್ಟಿಯಲ್ಲಿರಿಸಿಕೊಂಡು ರೂಪಿಸಲಾಗಿರುವ ಈ ಕೋರ್ಸ್‌ಗೆ ಉದ್ಯೋಗ ದೊರಕಿಸಿಕೊಡಲು ವಿವಿಧ ಕಂಪನಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವ ಐಐಟಿ, ವಿದ್ಯಾರ್ಥಿಗಳಿಗೆ ಉದ್ಯೋಗ ಪೂರ್ವ ಇಂಟರ್ನ್‌ಶಿಪ್‌ ಕೊಡಿಸುವ ಯೋಜನೆ ಹಾಕಿಕೊಂಡಿದೆ.

ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯ ತರಬೇತಿ ಪಡೆದುಕೊಳ್ಳಲು ₹3000 ಶುಲ್ಕ ಭರಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲರಿಗೆ ತಲಾ ₹1500 ಮತ್ತು ₹750 ಶುಲ್ಕವಿದೆ.

2. JEE ಅಡ್ವಾನ್ಸ್ಡ್ ಮತ್ತು ಒಲಿಂಪಿಯಾಡ್ ಪರೀಕ್ಷೆ ಬರೆದವರು ಅರ್ಹತಾ ಪರೀಕ್ಷೆ ಬರೆಯದೆ ನೇರವಾಗಿ ಕೋರ್ಸಿಗೆ ದಾಖಲಾಗಬಹುದು .

3.ಮೇ 6 ,2022 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.

4.https://onlinedegree.iitm.ac.in

(ಲೇಖಕರು: ಪ್ರಾಚಾರ್ಯರು, ವಿಡಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT