ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌/ ಆಫ್‌ಲೈನ್‌ ಪರೀಕ್ಷೆ: ಪುಟ್ಟ ಮಕ್ಕಳಿಗೂ ಇರಲಿ ಸಿದ್ಧತೆ

ಆನ್‌ಲೈನ್‌/ ಆಫ್‌ಲೈನ್‌ ಪರೀಕ್ಷೆ
Last Updated 4 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಆನ್‌ಲೈನ್‌ನಲ್ಲಿ ಪಾಠ ಕೇಳಿದ ಮಕ್ಕಳು ಕಿರು ಪರೀಕ್ಷೆಗಳನ್ನೂ ಕೂಡ ಅದರಲ್ಲೇ ಬರೆದಿದ್ದಾರೆ. ಆದರೆ ಬಹುತೇಕ ಮಕ್ಕಳು ಪೋಷಕರು ನೆರವಿನಿಂದ ಪರೀಕ್ಷೆ ಬರೆದಿರುವುದರಿಂದ ವಾರ್ಷಿಕ ಪರೀಕ್ಷೆ ನಡೆದರೆ ಹೇಗೆ ಸಿದ್ಧತೆ ಮಾಡಬೇಕು?

ಕೋವಿಡ್‌ ಕಾರಣದಿಂದ ಕಳೆದ ಒಂದು ವರ್ಷದಿಂದ ಮನೆಯೇ ಮಕ್ಕಳಿಗೆ ಪಾಠಶಾಲೆ. ಆನ್‌ಲೈನ್ ತರಗತಿಗಳಿಂದ ಹಿಡಿದು ಕಿರುಪರೀಕ್ಷೆಗಳವರೆಗೂ ಎಲ್ಲವೂ ಮನೆಯಿಂದಲೇ ನಡೆದಿವೆ. ಶಿಕ್ಷಕರ ರೀತಿಯಲ್ಲೇ ಮಕ್ಕಳೊಟ್ಟಿಗೆ ಕೂತು ಪೋಷಕರು ಕೂಡ ಕಲಿಕೆಗೆ ಸಹಾಯ ಮಾಡಿದ್ದಾರೆ. ಅದರಲ್ಲೂ ಪ್ರಾಥಮಿಕ ಹಂತದಲ್ಲಿರುವ ಮಕ್ಕಳು ತಮ್ಮೆಲ್ಲ ಕಿರುಪರೀಕ್ಷೆಗಳನ್ನು ಪೋಷಕರ ಸಹಾಯದಿಂದ ಮನೆಯಿಂದಲೇ ಬರೆದಿದ್ದಾರೆ. ಇದು ಒಂದರ್ಥದಲ್ಲಿ ಒಳ್ಳೆಯದೇ ಆಗಿದ್ದರೂ ಮಕ್ಕಳ ಸ್ವಂತಿಕೆ ವಿಚಾರದಲ್ಲಿ ಸ್ವಲ್ಪ ಯೋಚಿಸುವಂತಾಗಿದೆ. ಅತಿಯಾದ ಅವಲಂಬನೆಯೂ ಬೆಳವಣಿಗೆಗೆ ಮಾರಕವಾಗಬಹುದು. ಒಂದನೇ ತರಗತಿಯಿಂದಲೇ ಶಾಲೆಯಲ್ಲಿ ಕೂತು (ಆಫ್‌ಲೈನ್) ಪರೀಕ್ಷೆ ಬರೆಯುವ ಸಂದರ್ಭ ಬಂದರೆ ಅಥವಾ ಮೌಖಿಕ ಪರೀಕ್ಷೆ ನಡೆದರೆ ನಿಜವಾದ ಸಮಸ್ಯೆ ಶುರುವಾಗುವುದು ಆಗಲೆ. ಸಮಯ ಮೀರಿಲ್ಲ, ಸಮಸ್ಯೆಯನ್ನು ತಿಳಿಗೊಳಿಸಲು ಈಗಿನಿಂದಲೇ ಮಕ್ಕಳನ್ನು ತಯಾರು ಮಾಡಿ.

ಪರೀಕ್ಷೆಯ ಬಗ್ಗೆ ತಿಳಿಹೇಳಿ

ಶಾಲೆಯ ಮೆಟ್ಟಿಲನ್ನೆ ಏರಿರದ ಅಥವಾ ಹೋಗಿದ್ದರೂ ಪರೀಕ್ಷೆಯೆಂಬ ಪದದ ಅರಿವೇ ಇರದ ಒಂದು, ಎರಡನೇ ತರಗತಿ ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಭಯ ಹುಟ್ಟಿಸುವುದು ಬೇಡ. ಬದಲಿಗೆ ಪರೀಕ್ಷೆಯೆಂದರೆ ಏನು ಎಂದು ವಿವರಿಸಿ ಹೇಳಿ.

ವರ್ಕ್‌ಶೀಟ್‌ಗಳನ್ನು ಬಳಸಿ

ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿಯೇ ವರ್ಕ್‌ಶೀಟ್‌ಗಳನ್ನು ನೀವೆ ತಯಾರಿಸಿ ಮಕ್ಕಳಿಗೆ ಬರೆಯಲು ನೀಡಿ. ಬಹಳಷ್ಟು ವೆಬ್‌ಸೈಟ್‌ಗಳಲ್ಲಿಯೂ ತರಗತಿಗಳಿಗೆ ಅನುಸಾರವಾಗಿ ವರ್ಕ್‌ಶೀಟ್‌ಗಳು ಸಿಗುತ್ತವೆ. ಒಂದೆರಡು ಪತ್ರಿಕೆಗಳನ್ನು ಅವರ ಮುಂದೆ ನೀವೆ ಉತ್ತರಿಸಿ ತೋರಿಸಿ. ಜೊತೆ ಕೂತು ಕೆಲವೊಂದನ್ನು ಮಾಡಿಸಿ. ನಂತರ ಅವರಿಗೆ ಮಾಡಲು ಬಿಡಿ. ಇದರಿಂದ ಮಕ್ಕಳಿಗೆ ಪ್ರಶ್ನೆಗಳ ಮಾದರಿ ಮತ್ತು ಯಾವ ಪ್ರಶ್ನೆಗೆ ಉತ್ತರಗಳನ್ನು ಹೇಗೆ ಬರೆಯಬೇಕೆಂಬುದು ಗೊತ್ತಾಗುತ್ತದೆ.

ಮಾದರಿ ಪರೀಕ್ಷೆಗಳನ್ನು ಮನೆಯಲ್ಲಿ ಮಾಡಿ (ಪೂರ್ವ ಸಿದ್ಧತಾ ಪರೀಕ್ಷೆ)

ಸತತವಾಗಿ ಒಂದು ಕಡೆ ಒಂದೂವರೆ ಗಂಟೆಯಾದರೂ ಕೂತು ಬರೆಯುವುದನ್ನು ಅಭ್ಯಾಸ ಮಾಡಿಸಿ. ಹೇಳಿದ ತಕ್ಷಣ ಕೂರುವುದು ಕಷ್ಟ, ಕೂತು ಬರೆದರೆ ಇಷ್ಟವಾದ ತಿಂಡಿಗಳನ್ನು ಮಾಡಿಕೊಡುವುದಾಗಿಯೋ ಅಥವಾ ಇಷ್ಟದ ವಸ್ತುಗಳನ್ನು ಕೊಡಿಸುವುದಾಗಿಯೋ ಹೇಳಿ ಅಥವಾ ನೀವೇ ಅವರ ಜೊತೆ ಒಂದು ಗಂಟೆ ಆಟವಾಡುವುದಾಗಿ ಹೇಳಿ. ಎಲ್ಲ ಆಟಗಳಿಗಿಂತ ಅಮ್ಮ– ಅಪ್ಪನ ಜೊತೆಗೆ ಆಡುವುದೆಂದರೆ ಮಕ್ಕಳಿಗೆ ಇಷ್ಟ.

ಒತ್ತಡ ಹಾಕಬೇಡಿ

ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕೆಂದು ತಾಕೀತು ಹಾಕಬೇಡಿ. ಅರ್ಥವಾಗಿದ್ದನ್ನು ಬರೆದು ಬರುವಂತೆ ತಿಳಿಸಿ. ಒತ್ತಡ ಹಾಕಿದಷ್ಟೂ ಮಗುವಿನ ಮನಸ್ಸಿನಲ್ಲಿ ಭಯ ಆವರಿಸುತ್ತದೆ.

ಪ್ರಶ್ನೆಗಳನ್ನು ಬರೆಯಲು ಹೇಳಿ

ಕಲಿಕೆಯ ಮೊದಲ ಹಂತದಲ್ಲಿರುವ ಮಕ್ಕಳಿಗೆ ಉತ್ತರಗಳಷ್ಟೆ ಪ್ರಶ್ನೆಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಮಾತ್ರ ಹೇಳಿಸುವುದು ಸಾಮಾನ್ಯ. ಇದಕ್ಕೆ ಕಾರಣ ಪರೀಕ್ಷೆಯಲ್ಲಿ ಮಗು ಉತ್ತರವಷ್ಟೇ ಬರೆಯಬೇಕಲ್ಲವೆ ಎಂಬುದು. ಆದರೆ ಪ್ರಶ್ನೆ ಸರಿಯಾಗಿ ಅರ್ಥವಾದರೆ ಮಾತ್ರ ಮಗು ಉತ್ತರ ಹೇಳಲು ಅಥವಾ ಬರೆಯಲು ಸಾಧ್ಯ. ಹಾಗಾಗಿ ಒಂದೊಂದು ಪಾಠದ ಪ್ರಶ್ನೆಗಳನ್ನು ಓದಿ ಮಗುವಿಗೆ ಪ್ರಶ್ನೆ ಏನೆಂಬುದು ಅರ್ಥವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸಹಾಯಕ್ಕೆ ಶಿಕ್ಷಕರೂ ಇರುತ್ತಾರೆ

‘ನನ್ನ ಮಗು ಒಂದನೇ ತರಗತಿ. ಓದೋದಕ್ಕೆ ಈಗ ಕಲಿತಿದ್ದಾನೆ. ಮನೆಯಲ್ಲಾದರೆ ಪ್ರಶ್ನೆಗಳನ್ನು ಓದಿ ಅರ್ಥ ಮಾಡಿಸಲು ನಾವಿದ್ದೆವು. ಆದರೆ ಶಾಲೆಯಲ್ಲಿ ಏನು ಮಾಡ್ತಾನೆ?’ ಎನ್ನುವ ಪ್ರಶ್ನೆ ಬಹುಪಾಲು ಪೋಷಕರದ್ದು. ಅದಕ್ಕಾಗಿ ಯೋಚಿಸುವ ಅಗತ್ಯವಿಲ್ಲ. ನಿಮ್ಮಂತೆಯೇ ಮಗುವಿನ ಸಹಾಯಕ್ಕಾಗಿ ಶಾಲೆಯಲ್ಲಿ ಶಿಕ್ಷಕರಿರುತ್ತಾರೆ.

ಈ ಶೈಕ್ಷಣಿಕ ಸಾಲಿನ ಕಲಿಕಾ ಮಟ್ಟವನ್ನು ಹಿಂದಿನ ವರ್ಷಗಳೊಂದಿಗೆ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ಪೋಷಕರೊಟ್ಟಿಗೆ ಬೆರೆತು ಹೆಚ್ಚು ಕಲಿಯುತ್ತಿರುವ ಮಕ್ಕಳ ಉದಾಹರಣೆಗಳೂ ಇಲ್ಲವೆಂದಲ್ಲ. ಅದು ಮಗುವಿನಿಂದ ಮಗುವಿಗೆ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಹಾಗಾಗಿ ಮಗುವಿನ ಕಲಿಕಾ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗೆ ತಯಾರು ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT