ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ಎದ್ದೇಳಿ, ಸಿದ್ಧರಾಗಿ

Published : 30 ನವೆಂಬರ್ 2025, 23:43 IST
Last Updated : 30 ನವೆಂಬರ್ 2025, 23:43 IST
ಫಾಲೋ ಮಾಡಿ
Comments
ಮೇಘವಿ ಮಂಜುನಾಥ್

ಮೇಘವಿ ಮಂಜುನಾಥ್

ಪ್ರ

ನೀವು ರಸಪ್ರಶ್ನೆಯನ್ನು ಹೇಗೆ ಅರ್ಥೈಸುತ್ತೀರಿ, ನಿಮ್ಮ ಪ್ರಕಾರ ಕ್ವಿಜ್ ಎಂದರೆ ಏನು?

ಮಕ್ಕಳಲ್ಲಿನ ಅಪಾರ ಕುತೂಹಲವನ್ನು ತಣಿಸುವ ಕೆಲಸ ಮಾಡುವ ರಸಪ್ರಶ್ನೆ ಸ್ಪರ್ಧೆಯು ಅವರಲ್ಲಿ ನಾಯಕತ್ವ ಗುಣ, ಗುಂಪಿನೊಂದಿಗೆ ಹೊಂದಾಣಿಕೆ, ಸ್ವಕಲಿಕಾ ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸುತ್ತದೆ. ಗುಂಪಿನಲ್ಲಿ ಇದ್ದುಕೊಂಡು ಹೇಗೆ ಕೆಲಸ ಮಾಡಬೇಕು, ಎಲ್ಲರೊಂದಿಗೆ ಹೇಗೆ ಸಮನ್ವಯ ಸಾಧಿಸಬೇಕೆಂಬ ಕೌಶಲ ವೃದ್ಧಿಸುವುದು ರಸಪ್ರಶ್ನೆ ಕಾರ್ಯಕ್ರಮಗಳ ಮುಖ್ಯ ಉದ್ದೇಶ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಜ್ಞಾನ, ಮಾಹಿತಿ ಇರುತ್ತದೆ. ಅದನ್ನು ಹೇಗೆ ಸಮಗ್ರವಾಗಿ ಪ್ರಸ್ತುತಪಡಿಸಬೇಕು ಎಂಬುದನ್ನು ಮಕ್ಕಳು ಕಲಿಯುತ್ತಾರೆ. ಸಮಸ್ಯೆಗಳನ್ನು ಬಗೆಹರಿಸುವ ಕೌಶಲವನ್ನು ಕಲಿಯುತ್ತಾರೆ.

ಪ್ರ

ರಸಪ್ರಶ್ನೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳ ತಯಾರಿ ಯಾವ ರೀತಿ ಇರಬೇಕು?

ಸಾಮಾನ್ಯ ಜ್ಞಾನವೇ ರಸಪ್ರಶ್ನೆ ಸ್ಪರ್ಧೆಯ ಕೇಂದ್ರ ಬಿಂದು. ಇಲ್ಲಿ ತರಗತಿಗಳಲ್ಲಿ ಇದ್ದಂತೆ ನಿರ್ದಿಷ್ಟ ಸ್ವರೂಪದ ಪಠ್ಯವಾಗಲೀ ವಿಷಯವಾಗಲೀ ಇರುವುದಿಲ್ಲ. ಮಕ್ಕಳು ಪ್ರತಿನಿತ್ಯ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಏನು ನೋಡುತ್ತಾರೋ ಓದುತ್ತಾರೋ ಅದಕ್ಕೆ ಸಂಬಂಧಿಸಿದ ವಿಷಯಗಳೇ ಇರುತ್ತವೆ. ಆದ್ದರಿಂದ ವಿವಿಧ ಪುಸ್ತಕಗಳು, ದಿನಪತ್ರಿಕೆಗಳು, ವಾರ–ಮಾಸ ಪತ್ರಿಕೆಗಳನ್ನು ಓದಬೇಕು. ವಿವಿಧ ಮೂಲಗಳಿಂದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಬರವಣಿಗೆ, ಸಂಶೋಧನೆಯೂ ಮುಖ್ಯವಾಗುತ್ತವೆ. ಕೌತುಕವನ್ನು ಉಳಿಸಿಕೊಳ್ಳಬೇಕು.

ಪ್ರ

ರಸಪ್ರಶ್ನೆಗೆ ಸಂಬಂಧಿಸಿದಂತೆ ಹುಟ್ಟುಹಾಕಿದ ನಿಮ್ಮ ಕ್ಯೂರಿಯಾಸಿಟಿ ನಾಲೆಜ್ ಸಲ್ಯೂಷನ್ಸ್‌ ಕಂಪನಿ ಬಗ್ಗೆ ಹೇಳುವುದಾದರೆ...

ನಮ್ಮದು ಬೆಂಗಳೂರು ಮೂಲದ ಕಂಪನಿಯಾಗಿದ್ದು, ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಶಾಲಾ ಮಟ್ಟದ ಕ್ವಿಜ್‌ನಿಂದ ಪ್ರಾರಂಭವಾದ ಈ ಸಂಸ್ಥೆ, ಈಗ ಕೇಂದ್ರ ಸರ್ಕಾರದ ಹಲವು ಪ್ರಾಜೆಕ್ಟ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ರಸಪ್ರಶ್ನೆಗೆ ಸಂಬಂಧಿಸಿದಂತೆ ನಾವು ಸಿದ್ಧಪಡಿಸಿದ ವಿಷಯವಸ್ತುಗಳು 160ಕ್ಕೂ ಅಧಿಕ ದೇಶಗಳನ್ನು ತಲುಪಿವೆ. ರಸಪ್ರಶ್ನೆಯನ್ನು ವೃತ್ತಿಪರವಾಗಿ ಸ್ವೀಕರಿಸಿದ ದೇಶದ ಪ್ರಥಮ ಮಹಿಳಾ ಕ್ವಿಜ್‌ ಮಾಸ್ಟರ್ ಎಂಬ ಹಿರಿಮೆ ಕೂಡ ನನ್ನದಾಗಿದೆ.

ಪ್ರ

ನೀವು ಈವರೆಗೆ ಎಷ್ಟು ರಸಪ್ರಶ್ನೆ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಿರುವಿರಿ?

ಎರಡು ಸಾವಿರಕ್ಕೂ ಅಧಿಕ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಿದ್ದೇನೆ. ವಿವಿಧ ಟಿ.ವಿ. ಚಾನೆಲ್‌ಗಳಲ್ಲಿ 200 ಗಂಟೆಗಳ ಕಾರ್ಯಕ್ರಮ ನೀಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಸ್ಪರ್ಧೆಯನ್ನೂ ಹಮ್ಮಿಕೊಂಡಿದ್ದೆವು. ಕ್ವಿಜ್‌ ಆ್ಯಪ್‌ಗಳಿಗೆ ಒಂದು ಲಕ್ಷಕ್ಕೂ ಅಧಿಕ ಪ್ರಶ್ನೆಗಳನ್ನು ಸಿದ್ಧಪಡಿಸಿ ಒದಗಿಸಿದ್ದೇವೆ.  

ಪ್ರ

ಕ್ವಿಜ್‌ ಮಾಸ್ಟರ್‌ಗಳಿಗೆ ಈಗ ಯಾವ ರೀತಿಯ ಅವಕಾಶವಿದೆ? ಇದನ್ನೇ ವೃತ್ತಿಯಾಗಿ ಸ್ವೀಕರಿಸಬಹುದೆ?

ರಸಪ್ರಶ್ನೆ ನಿರ್ವಹಣೆಯನ್ನೂ ವೃತ್ತಿಯಾಗಿ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಈ ಹಿಂದೆ ಜನರಿಗೆ ಅರಿವಿರಲಿಲ್ಲ. ಶಾಲೆಗಳಲ್ಲಿ ಶಿಕ್ಷಕರು ನಡೆಸಿಕೊಡುವ ಸ್ಪರ್ಧೆಯೆಂದು ಹಲವರು ತಪ್ಪಾಗಿ ಭಾವಿಸಿದ್ದರು. ಇದನ್ನೂ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂಬುದು ಈಗ ಅರಿವಿಗೆ ಬರುತ್ತಿದೆ. ಇತ್ತೀಚೆಗೆ ಈ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅವಕಾಶಗಳೂ ಬಹಳಷ್ಟಿವೆ. 2010ರ ನಂತರ ದೇಶದಲ್ಲಿ ಈ ಕ್ಷೇತ್ರ ವಿಸ್ತರಿಸಿಕೊಂಡಿದೆ. ಕಂಪನಿಗಳು, ಶಾಲಾ–ಕಾಲೇಜುಗಳು, ಪಬ್‌ಗಳು, ಸ್ವಯಂಸೇವಾ  ಸಂಸ್ಥೆಗಳು ಸೇರಿ ವಿವಿಧೆಡೆ ರಸಪ್ರಶ್ನೆ ಸ್ಪರ್ಧೆಗಳು ನಡೆಯುತ್ತಿವೆ. 

ಪ್ರ

ಕ್ವಿಜ್‌ ಮಾಸ್ಟರ್ ಆಗುವವವರ ತಯಾರಿ ಹೇಗಿರಬೇಕು? ಏನೆಲ್ಲ ಕೌಶಲ ಅಗತ್ಯ? 

ಮೊದಲನೆಯದಾಗಿ, ಕುತೂಹಲ ಇರಬೇಕು. ಸುತ್ತಮುತ್ತಲಿನ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ, ಪ್ರಶ್ನಿಸಿ ಅರಿಯುವ ಮನೋಭಾವ ಇರಬೇಕು. ಸಂಶೋಧನೆ, ಸಂವಹನ ಕಲೆ ಕೂಡ ಮುಖ್ಯವಾಗುತ್ತವೆ. ಒಳ್ಳೆಯ ಸಂಶೋಧಕರಾದರೆ ಉತ್ತಮ ಕ್ವಿಜ್ ಮಾಸ್ಟರ್ ಆಗಲು ಸಾಧ್ಯ. ಪ್ರೇಕ್ಷಕರಿಗೆ ಬೇಸರವಾಗದಂತೆ ಗಂಟೆಗಟ್ಟಲೆ ಅವರನ್ನು ಹಿಡಿದಿಟ್ಟುಕೊಳ್ಳುವ ಕಲೆ ಕರಗತವಾಗಿರಬೇಕು. ಭಾಷೆ ಅಷ್ಟಾಗಿ ಮುಖ್ಯವಾಗದಿದ್ದರೂ ಪ್ರೇಕ್ಷಕರ ಜತೆಗೆ ಸಂವಹನ ಸಾಧಿಸುವ ಸಾಮರ್ಥ್ಯ ಇರಬೇಕು. ಓದುವ ಹವ್ಯಾಸವನ್ನು ರೂಢಿಸಿಕೊಂಡಿರಬೇಕು. 

ಪ್ರ

ರಾಜ್ಯದಲ್ಲಿ ರಸಪ್ರಶ್ನೆ ಚಟುವಟಿಕೆಗಳು ಹೇಗೆ ನಡೆಯುತ್ತಿವೆ?

ರಾಜ್ಯದಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಕ್ವಿಜ್ ಜನಪ್ರಿಯವಾಗುತ್ತಿದೆ. ಉಳಿದ ನಗರಗಳಲ್ಲಿಯೂ ಕ್ವಿಜ್ ಚಟುವಟಿಕೆಯನ್ನು ಇತ್ತೀಚೆಗೆ ನೋಡಬಹುದಾಗಿದೆ. ಶಾಲಾ–ಕಾಲೇಜುಗಳಲ್ಲಿ ಕ್ವಿಜ್‌ಗೆ ಒತ್ತು ನೀಡಬೇಕಿದೆ. ಸರ್ಕಾರವು ಇದಕ್ಕೆ ಆದ್ಯತೆ ನೀಡಿ, ಇಲಾಖಾವಾರು ನಡೆಸಬೇಕಿದೆ. 

ಪ್ರ

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌ ಬಗ್ಗೆ ಹೇಳುವುದಾದರೆ...

ರಾಜ್ಯದಲ್ಲಿ ರಸಪ್ರಶ್ನೆಯ ಸಂಸ್ಕೃತಿ ಬೆಳೆಸಲು ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್’ ಸಹಕಾರಿಯಾಗಿದೆ. ಈ ಚಾಂಪಿಯನ್‌ಶಿಪ್ ಯಾವಾಗ ಮತ್ತೆ ಬರಲಿದೆ ಎಂಬ ಕುತೂಹಲವನ್ನು ಕಾಯ್ದುಕೊಂಡಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ತಲುಪಿದೆ. ಜ್ಞಾನದ ಜತೆಗೆ ಬುದ್ಧಿವಂತಿಕೆಯನ್ನೂ ಒರೆಗೆ ಹಚ್ಚಲು ಇದು ಸಹಕಾರಿಯಾಗಿದೆ. ಕರ್ನಾಟಕಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT