ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಪಠ್ಯಗಳೇ ಮಕ್ಕಳ ಪತ್ರಿಕೆಯಾದರೆ?

Published 16 ಅಕ್ಟೋಬರ್ 2023, 0:30 IST
Last Updated 16 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ, ವೃತ್ತ ಪತ್ರಿಕೆಗಳೆಲ್ಲ ಗೊತ್ತು ಅದರೆ ಪಠ್ಯಪತ್ರಿಕೆ ಗೊತ್ತಿದೆಯೇ? ಭಾಷಾ ಕೌಶಲ ಬೆಳೆಸಲು, ಮಕ್ಕಳಲ್ಲಿ ಗ್ರಹಿಕೆಯ ಶಕ್ತಿ ಹೆಚ್ಚಿಸಲು ಪಠ್ಯಕ್ರಮವನ್ನೇ ಸುದ್ದಿ ರೂಪದಲ್ಲಿ ಪ್ರಕಟಿಸುವಂಥ ಶಾಲಾ ಸಂಚಿಕೆ ರೂಪಿಸಲಾಗುತ್ತಿದೆ. ಎಲ್ಲಿ? ಮತ್ತು ಈ ಚಟುವಟಿಕೆಯ ಪರಿಣಾಮವನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಭತ್ತಕ್ಕೆ ತಿರುಗೇಟು ನೀಡಿದ ರಾಗಿ, ರಾಗಿಯನ್ನು ತುಚ್ಛವಾಗಿ ಟೀಕಿಸಿದ್ದ ಭತ್ತ(ರಾಮಧ್ಯಾನ ಚರಿತೆ), ಇಲಿಯೂರಿನಲ್ಲಿ ಇಲಿಗಳ ಕಾಟಕ್ಕೆ ಹೈರಾಣಾದ ಜನ ಜೋಗಿಯಿಂದ ಪರಿಹಾರ(ಕಿಂದರ ಜೋಗಿ)... ಇವು ದಿನ ಪತ್ರಿಕೆಯಲ್ಲಿ ಬಂದ ಸುದ್ದಿಗಳ ತಲೆ ಬರೆಹಗಳಲ್ಲ! ಶಾಲಾ ಪಠ್ಯಗಳಲ್ಲಿನ ವಿಷಯವನ್ನೇ ಆಯ್ದುಕೊಂಡು ಸುದ್ದಿ ರೀತಿಯಲ್ಲಿ ಪಠ್ಯವನ್ನು ರೂಪಾಂತರಗೊಳಿಸಿ ಬರೆದು ಶಾಲಾ ಪಠ್ಯಪತ್ರಿಕೆಯ ಸುದ್ದಿಗಳಿವು.

ಸಾಮಾನ್ಯವಾಗಿ ಶಾಲೆಯಲ್ಲಿ ಪತ್ರಿಕೆಗಳನ್ನು ಮಾಡುವುದನ್ನು ಕೇಳಿದ್ದೇವೆ, ಆದರೆ ಪಠ್ಯ ವಿಷಯವನ್ನೇ ಆಧರಿಸಿ ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳೇ ಪತ್ರಿಕೆಗಳನ್ನು ಮಾಡುವ ಹೊಸ ಕಲ್ಪನೆಯನ್ನು ಮೂಡಿಸಿದವರು ಬೆಂಗಳೂರಿನ ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ್(ಐ.ಎಫ್.ಎ-ಕಲಿಕಲಿಸು) ಯೋಜನೆಯ ಕಾರ್ಯಕ್ರಮ ನಿರ್ವಾಹಕರಾದ ಟಿ.ಎನ್.ಕೃಷ್ಣಮೂರ್ತಿಯವರು.

ವಿದ್ಯಾರ್ಥಿಗಳಿಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ಪಠ್ಯ ವಿಷಯಗಳನ್ನೇ ವಿವಿಧ ವಿನ್ಯಾಸಗಳ ಮೂಲಕ ದಿನ ಪತ್ರಿಕೆಗಳನ್ನಾಗಿ ವಿದ್ಯಾರ್ಥಿಗಳಿಂದಲೇ ಮಾಡಿಸಿದರೆ ಅವರಿಗೆ ಅರಿವಿಲ್ಲದಂತೆ ಪಠ್ಯಾಭ್ಯಾಸವಾಗುತ್ತದೆ, ಯೋಚನಾಶಕ್ತಿ ಬೆಳೆದು ವಿಷಯ ಬಹು ದಿನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ ಎಂಬುದು ಅವರ ವಿಚಾರ.

ಆಯ್ದ ಅಧ್ಯಾಯಗಳ ಪಠ್ಯ ವಿಷಯಕ್ಕೆ ಪತ್ರಿಕೆಯ ವಿನ್ಯಾಸ ನೀಡಿ ಕಥೆ, ಹಾಡು, ನಾಟಕ, ಚಿತ್ರಕಲೆಗೆ ವರ್ಗಾಯಿಸಬಹುದು. ಇದೊಂದು ವಿದ್ಯಾರ್ಥಿಗಳಿಗೆ ಸೃಜನಶೀಲ ಗುಂಪು ಚಟುವಟಿಕೆಯಾಗಿ ಪಠ್ಯ ಅಭ್ಯಾಸದ ಜೊತೆಗೆ ಮೌಲ್ಯಮಾಪನವೂ ಆಗುತ್ತದೆ.

ಮೋಜಿನ ಮೂಲಕ ಪಠ್ಯ ಅಭ್ಯಾಸ
ವಾರಕ್ಕೊಮ್ಮೆ ದಿನಪತ್ರಿಕೆಗಳಲ್ಲಿ ಬರುವಂತೆ ಸುಡೊಕು, ಕ್ರಾಸ್‍ವರ್ಡ್, ರಸಪ್ರಶ್ನೆಗಳು, ಒಗಟುಗಳು, ಪದಬಂಧ, ವಾಕ್ಯ ಜೋಡಣೆ, ಮಿಸ್ಸಿಂಗ್ ಲೆಟರ್ಸ್, ಚಿತ್ರ ಮಾಹಿತಿ, ಸಣ್ಣ ಕಥೆಗಳು, ಕವನಗಳು, ರೇಖಾಚಿತ್ರಗಳು, ಕರಕುಶಲ ಚಿತ್ರಗಳು, ಛಾಯಾಗ್ರಹಣ, ವರದಿ ಬರವಣಿಗೆ... ಹೀಗೆ ಏನೇ ಇರಲಿ ಅವುಗಳಿಗೆ ಪಠ್ಯ ಲೇಪನ ಇರಲೆಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಓದುವ, ಬರೆಯುವ, ಕ್ರಿಯಾಶೀಲತೆ ಹೆಚ್ಚುತ್ತದೆ, ಶಾಲೆಯಲ್ಲಿ ಲವಲವಿಕೆಯ ಕಲಿಕಾ ವಾತಾವರಣ ನಿರ್ಮಾಣವಾಗುತ್ತದೆ.
ಪತ್ರಿಕೆ ಓದುವ ಆಸಕ್ತಿದಾಯಕ ಮಾರ್ಗ ಇಲ್ಲಿ ಮಕ್ಕಳಿಗೆ ಅರಿವಿಲ್ಲದಂತೆಯೇ ಪಠ್ಯ ಅಭ್ಯಾಸದ ಮೂಲಕ ಶೈಕ್ಷಣಿಕ ಮೌಲ್ಯ ತುಂಬುತ್ತದೆ. ವಿಶೇಷವಾಗಿ ಸೃಜನಶೀಲ ಚಿಂತನೆಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಪಠ್ಯ ವಿಷಯವನ್ನು ಕಥೆಗೆ ರೂಪಾಂತರಿಸಲು ಉದಾಹರಣೆ ಕೊಡುವುದಾದರೆ, 'ಗಂಗೆಯ ಮಗಳು ಯಮುನಾ ಘಗ್ರಿ ತೊಟ್ಟುಕೊಂಡು ತನ್ನ ಗಂಡನ ಜೊತೆಗೆ ಗೋವುಗಳನ್ನು ಕಾಯಲು ಹೋಗುತ್ತಿರುತ್ತಾಳೆ. ಯಮುನೆಯ ತಾಯಿ ರಾಮನನ್ನು ಪೂಜಿಸುವುದನ್ನು ನೆನಪಿಸಿಕೊಂಡು ತಾನೂ ರಾಮನ ಜೊತೆಗೆ ಗಂಗೆಯನ್ನೂ ಸೇರಿಸಿ ರಾಮಗಂಗಾಳನ್ನು ಪೂಜಿಸುತ್ತಾಳೆ. ಪೂಜೆಗೆ ಅವಳ ಸಹೋದರಿಯರಾದ ಶಾರದ, ಸೋನೆ, ಕೋಸಿ ಬಂದಿರುತ್ತಾರೆ. ಇದರಿಂದ ಯಮುನೆ ತನ್ನ ಜೀವನವನ್ನು ಸುಖವಾಗಿ ನಡೆಸುತ್ತಾಳೆ' ಈ ಕಥೆ ಗಂಗಾ ನದಿಯ ಉಪನದಿಗಳ ಮಾಹಿತಿ ನೀಡುತ್ತದೆ. ಮತ್ತೊಂದು ಕಥೆ ನೋಡೊಣ, ರಾಜು ಮತ್ತು ರಾಧಾ ಅಣ್ಣತಂಗಿಯರು. ಅದೊಂದು ದಿನ ರಾಧಾ ಅಣ್ಣನಿಗೆ ಹೇಳುತ್ತಾಳೆ 'ಅಣ್ಣ ನಮ್ಮೂರಿನ ಆಚೆ ಇರುವ ಜಾಕೀರಗಿರಿ ಪರ್ವತ ಏರುವ ಆಸೆ ಇದೆ ಕರೆದುಕೊಂಡು ಹೋಗಣ್ಣ" ಎನ್ನುತ್ತಾಳೆ. ತಂಗಿಯ ಆಸೆಯಂತೆ ಅಣ್ಣ ಪರ್ವತ ಏರಲು ಹೋಗುತ್ತಿರುವಾಗ ರಾಜು ಮಿತ್ರರಾದ ಫಕೃದ್ಧಿನ್ ರೆಡ್ಡಿ ಜೈಲಸಿಂಗ್ ಎದುರಾಗುತ್ತಾರೆ. ವಿಷಯ ತಿಳಿದು ಅವರು ಪರ್ವತ ಏರುಲು ಬರುತ್ತಾರೆ. ಬೆಟ್ಟ ಏರಿದ ರಾಧಾಳಿಗೆ ಬಾಯಾರಿಕೆಯಾಗುತ್ತದೆ. ಆಚೀಚೆ ಎಲ್ಲೂ ನೀರಿನ ಮೂಲಗಳು ಇದ್ದಿಲ್ಲ. ದೂರದಲ್ಲಿ ಒಂದು ದೇವಸ್ಥಾನ ಕಾಣುತ್ತಿತ್ತು. ಅಲ್ಲಿ ನೀರು ಸಿಗಬಹುದೆಂದು ಸಮೀಪ ಹೋದಾಗ ಅದು ರಮಾಶಂಕರ ನಾರಾಯಣ ದೇವಾಲಯವಾಗಿತ್ತು... ಹೀಗೆ ಕಥೆ ಮುಂದುವರೆಯುತ್ತದೆ. ಈ ಕಥೆಯಲ್ಲಿ ಕ್ರಮಾನುಗತವಾಗಿ ರಾಷ್ಟ್ರಪತಿಗಳ ಹೆಸರು ಬರುತ್ತವೆ. ಹೀಗೆನೇ ಹಾಡು, ಚುಟುಕು, ನಾಟಕ ಬರೆಯಲು ಮಾರ್ಗದರ್ಶನ ಮಾಡಿದರೆ ವಿದ್ಯಾರ್ಥಿಗಳು ಪಠ್ಯವನ್ನೇ ತಡಕಾಡಿ ರೂಪಾಂತರಗೊಳಿಸುತ್ತಾರೆ.

ಪಠ್ಯ ಪತ್ರಿಕೆಗೆ ಮಕ್ಕಳೇ ಮಾಲೀಕರು:
ಇಲ್ಲಿ ವಿದ್ಯಾರ್ಥಿಗಳೇ ಸಂಪಾದಕೀಯ ಮಂಡಳಿಯ ಸದಸ್ಯರಾಗಿರುತ್ತಾರೆ. ಮೊದಲು ಇವರಿಗೆ ಆಸಕ್ತಿ ತುಂಬಿದರೆ ಉಳಿದ ವಿದ್ಯಾರ್ಥಿಗಳ ಆಸಕ್ತಿಗೆ ಇವರೇ ಕಾರಣರಾಗುತ್ತಾರೆ. ತಿಂಗಳಿಗೊಮ್ಮೆ ಸಂಪಾದಕೀಯ ಮಂಡಳಿಯ ಸಭೆ ನಡೆಸಿ ಆ ತಿಂಗಳ ಬಂದಿರುವ ಬರೆಹಗಳನ್ನು ಪರಿಶೀಲಿಸಿ ಪ್ರಕಟಣೆಗೆ ಸ್ವೀಕರಿಸುತ್ತಾರೆ. ಶಿಕ್ಷಕರು ಮೈಕ್ರೋಸಾಫ್ಟ್ ಪಬ್ಲೀಷರ್‍ನಲ್ಲಿರುವ ಉಚಿತ ಫೈಲ್‍ನಲ್ಲಿರುವ ಟೆಂಪ್ಲೆಟ್ಸ್ ಆಯ್ಕೆ ಮಾಡಿಕೊಂಡು ಸರಳವಾಗಿ ಎ-3 ಸೈಜಿನಲ್ಲಿ ಪುಟ ವಿನ್ಯಾಸಗೊಳಿಸಬಹುದು. ಬರಹಗಾರರ ಭಾವಚಿತ್ರವೂ ಪ್ರಕಟವಾಗುವುದರಿಂದ ಸಮುದಾಯದಲ್ಲಿ ಪ್ರೋತ್ಸಾಹ ದೊರಕುತ್ತದೆ.


ಈ ಚಿಂತನೆಯಂತೆ ಪ್ರಾಯೋಗಿಕವಾಗಿ ಈಚೆಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಐ.ಎಫ್.ಎ ಸಹಯೋಗದಲ್ಲಿ ಶಿವಮೊಗ್ಗ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳ ಆಯ್ದ 75 ಜನ ಶಿಕ್ಷಕರಿಗೆ ಈ ಪತ್ರಿಕೆ ರಚಿಸುವ ಕಾರ್ಯಾಗಾರ ನಡೆಸಿದ ಬಳಿಕ ಹಲವಾರು ಪತ್ರಿಕೆಗಳು ಹೊರ ಬಂದು ಪ್ರಯೋಗದ ಯಶಸ್ವಿ ಸೂಚಿಸಿವೆ. ಅಂತರ್ಗತ ಕಲೆಗಳ ಮುಖಾಂತರ ಪಠ್ಯಕ್ರಮಗಳನ್ನು ಪರಿಚಯಿಸುವುದು ಈಗಿರುವ ಬೋಧನಾ ಕ್ರಮದ ಜೊತೆಗೆಬೋಧನಾ ಕ್ರಮಗಳಲ್ಲಿ ಸಮಾನಾಂತರ ಚಿಂತನೆಗಳು ಬೆಳೆಯುತ್ತಿರುವ ಈ ದಿನಗಳಲ್ಲಿ ನಮ್ಮ ಸಾಂಪ್ರದಾಯಿಕ ಬೋಧನಾ ಯೋಚನೆಗಳು ಬದಲಾಗುವ ವಾತಾವರಣ ಕಟ್ಟುವ ತರಬೇತಿಗಳು ಹೆಚ್ಚಾಗುವ ಅವಶ್ಯಕತೆ ಇದೆ. ಇದು ಹೊಸತನದ ಪ್ರಯೋಗ ಮತ್ತು ವಿಭಿನ್ನ ಆಲೋಚನೆ ಎನಿಸಿಕೊಳ್ಳುತ್ತದೆ. ನಾವು ಭಾಷೆ ಬೇರೆ, ವಿಜ್ಞಾನ ಬೇರೆ, ಇತಿಹಾಸ ಬೇರೆ ಎಂದೆಲ್ಲ ಗೋಡೆ ಕಟ್ಟಿಕೊಂಡು ಕೂಡುವ ಬದಲು ವಿಷಯದಲ್ಲಿ ಆಸಕ್ತಿಯ ಹೂರಣ ತುಂಬಬೇಕಷ್ಟೆ.


ಪಠ್ಯಪತ್ರಿಕೆ-1
ಕೊಪ್ಪಳದಲ್ಲಿ ನಡೆದ ಪಠ್ಯಪತ್ರಿಕೆ ಕಾರ್ಯಾಗಾರದಲ್ಲಿ ಪತ್ರಿಕೆ ತಯಾರಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು

ಪಠ್ಯಪತ್ರಿಕೆ-2
ತಾವು ತಯಾರಿಸಿದ ಪಠ್ಯಪತ್ರಿಕೆ ಪ್ರದರ್ಶಿಸುತ್ತಿರುವ ಶಿಕ್ಷಕರು

ಪಠ್ಯಪತ್ರಿಕೆ-3
ಸಂಪನ್ಮೂಲ ವ್ಯಕ್ತಿ ಕೊಟ್ರೇಶ ಪತ್ರಿಕೆ ಪ್ರದರ್ಶನ ಮೂಲಕ ತರಬೇತಿ ನೀಡುತ್ತಿರುವುದು

ಪಠ್ಯಪತ್ರಿಕೆ-4
ವಿವಿಧ ಶಾಲೆಗಳಲ್ಲಿ ಮಕ್ಕಳಿಂದಲೇ ತಯಾರಾದ ಪಠ್ಯಪತ್ರಿಕೆಗಳು
-0-
ಕಿಶನರಾವ್ ಕುಲಕರ್ಣಿ

ವಿವಿಧ ಶಾಲೆಗಳಲ್ಲಿ ಮಕ್ಕಳಿಂದಲೇ ತಯಾರಾದ ಪಠ್ಯಪತ್ರಿಕೆಗಳು
ವಿವಿಧ ಶಾಲೆಗಳಲ್ಲಿ ಮಕ್ಕಳಿಂದಲೇ ತಯಾರಾದ ಪಠ್ಯಪತ್ರಿಕೆಗಳು
‘ಬಹುಮುಖಿ’ ಪಠ್ಯಪತ್ರಿಕೆಯ ಮಾದರಿ

‘ಬಹುಮುಖಿ’ ಪಠ್ಯಪತ್ರಿಕೆಯ ಮಾದರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT