ಆಧುನಿಕ ಸಮಾಜವು ಸಂಕೀರ್ಣ ಮತ್ತು ಸವಾಲಿನಿಂದ ಕೂಡಿದ್ದು, ಮಕ್ಕಳು ಹೆಚ್ಚು ಹೆಚ್ಚು ಸ್ವಕೇಂದ್ರಿತರಾಗುತ್ತಿದ್ದಾರೆ. ಅವರಲ್ಲಿ ಕರುಣೆ, ಅನುಭೂತಿ, ಪ್ರೀತಿ, ಇತರರ ಕಷ್ಟಗಳಿಗೆ ಸ್ಪಂದಿಸುವುದು, ಹಿರಿಯರಿಗೆ ಗೌರವ ಕೊಡುವುದು, ಸಹನೆಯಂತಹ ಗುಣಗಳು ಕಡಿಮೆಯಾಗುತ್ತಿವೆಯೇನೋ ಎಂಬ ಆತಂಕ ಎಲ್ಲರಲ್ಲೂ ಉಂಟಾಗುತ್ತಿದೆ. ಕುಟುಂಬದ ಸದಸ್ಯರು ಹಾಗೂ ಇತರರೊಂದಿಗೆ ಬೆರೆಯುವ ಗುಣ ಇಲ್ಲವಾಗುತ್ತಿರುವುದು ದುಗುಡಕ್ಕೆ ಕಾರಣವಾಗಿದೆ. ತಾವಾಯಿತು ತಮ್ಮ ಮೊಬೈಲ್ ಫೋನಾಯಿತು ಎಂಬಂತೆ ಕೊಠಡಿಯ ಒಳಗೆ ಸ್ವಯಂ ಬಂದಿಗಳಾಗಿ ಕಾಲ ಕಳೆಯುವ ಪ್ರವೃತ್ತಿಯು ಪೋಷಕರನ್ನು ಚಿಂತೆಗೀಡುಮಾಡುತ್ತಿದೆ. ಇದರ ಜೊತೆಗೆ, ಕಾನೂನಿನೊಂದಿಗೆ ಸಂಘರ್ಷ ಎದುರಿಸುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಇವೆಲ್ಲಕ್ಕೂ ಪರಿಹಾರ ಎಂಬಂತೆ, ಮಕ್ಕಳಿಗೆ ನೀತಿ ಶಿಕ್ಷಣ, ಮೌಲ್ಯ ಶಿಕ್ಷಣ ನೀಡಬೇಕು ಎಂಬ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತಜ್ಞರ ಮೂಲಕ ಅದಕ್ಕೆ ಪೂರಕವಾದ ಸಂಪನ್ಮೂಲ ಸಾಹಿತ್ಯ ರಚನೆಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಈ ಉದ್ದೇಶಕ್ಕಾಗಿ, ಮಕ್ಕಳ ತರಗತಿಗೆ ಅನುಗುಣವಾಗಿ 10 ಪ್ರಧಾನ ಮೌಲ್ಯಗಳನ್ನು ಗುರುತಿಸಲಾಗಿದೆ. ಪ್ರತಿ ಮೌಲ್ಯಕ್ಕೆ ಉಪಮೌಲ್ಯಗಳನ್ನು ವಿಷದೀಕರಿಸಿ, ಅದಕ್ಕೆ ತಕ್ಕಂತೆ ಸೂಕ್ತವಾದ ಚಟುವಟಿಕೆಗಳನ್ನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಹಲವು ವರ್ಷಗಳ ಹಿಂದೆ ಶಾಲೆಗಳಲ್ಲಿ ನೀತಿ ಶಿಕ್ಷಣದ ಬೋಧನೆಗಾಗಿಯೇ ಪ್ರತ್ಯೇಕವಾದ ಒಂದು ಅವಧಿ ಇರುತ್ತಿತ್ತು. ಆ ಸಮಯದಲ್ಲಿ, ನಿರ್ದಿಷ್ಟ ಪುಸ್ತಕದಲ್ಲಿ ಅಳವಡಿಸಲಾದ ಕಥೆಗಳ ಮೂಲಕ ಶಿಕ್ಷಕರು ನೀತಿಯನ್ನು ಬೋಧಿಸುತ್ತಿದ್ದರು. ಕೆಲ ವರ್ಷಗಳ ನಂತರ ಈ ಅವಧಿಯನ್ನು ಮೌಲ್ಯ ಶಿಕ್ಷಣ ಎಂದು ಬದಲಾಯಿಸಲಾಯಿತು. ನೀತಿ ಶಿಕ್ಷಣ, ಮೌಲ್ಯ ಶಿಕ್ಷಣ ಮತ್ತು ಜೀವನ ಕೌಶಲ ಶಿಕ್ಷಣವನ್ನು ಸಮಾನ ಅರ್ಥದಲ್ಲಿ ಬಳಸಿದರೂ ಇವುಗಳ ನಡುವೆ ವ್ಯತ್ಯಾಸವಿದೆ. ಒಳ್ಳೆಯ ಅಥವಾ ಕೆಟ್ಟ ವರ್ತನೆಗಳು ಯಾವುವು ಎಂಬ ಬಗ್ಗೆ ಬೋಧಿಸುವುದು ಮತ್ತು ಸ್ಥಾಪಿತ ಸಾಮಾಜಿಕ ಆದರ್ಶಗಳ ಬಗ್ಗೆ ತಿಳಿಸುವುದನ್ನು ‘ನೀತಿ ಶಿಕ್ಷಣ’ ಎನ್ನುತ್ತಾರೆ. ಮೌಲ್ಯ ಶಿಕ್ಷಣವು ವಿಶಾಲವಾದ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಪರಿಕಲ್ಪನೆಯಾಗಿದೆ.

ನೈತಿಕ ಶಿಕ್ಷಣವು ಮೌಲ್ಯ ಶಿಕ್ಷಣದ ಭಾಗವಾಗಿದ್ದು, ಪರಿಸರ ಜಾಗೃತಿ, ಸಹಿಷ್ಣುತೆ, ಸಾಮಾಜಿಕ ನ್ಯಾಯದಂತಹ ಗುಣಗಳನ್ನು ಮೈಗೂಡಿಸಿಕೊಳ್ಳುವುದಕ್ಕೆ ಅಗತ್ಯವಾದ ವಿಶಾಲ ತಳಹದಿಯ ನಂಬಿಕೆಗಳು, ತತ್ವಗಳು ಹಾಗೂ ಮನೋಭಾವವನ್ನು ರೂಪಿಸುವುದಾಗಿದೆ. ವ್ಯಕ್ತಿಯೊಬ್ಬನಲ್ಲಿ ಅಂತರ್ಗತವಾದ ನಂಬಿಕೆ, ತತ್ವ ಮತ್ತು ಮನೋಭಾವವನ್ನು ಅವಶ್ಯಕತೆಗೆ ಅನುಸಾರವಾಗಿ ಪ್ರಕಟಿಸುವ ಸಾಮರ್ಥ್ಯವು ಜೀವನ ಕೌಶಲ ಎನಿಸಿಕೊಳ್ಳುತ್ತದೆ. ಉದಾಹರಣೆಗೆ, ಇತರರು ತನ್ನ ಮನಸ್ಸನ್ನು ನೋಯಿಸಿದರೂ ತಾನು ಸಹನೆಯಿಂದ ಪ್ರತಿಕ್ರಿಯಿಸಬೇಕು ಎಂಬ ನಂಬಿಕೆ ಹಾಗೂ ತತ್ವವನ್ನು ಹೊಂದಿರುವುದು ಮೌಲ್ಯವಾದರೆ, ಅಂತಹ ಸನ್ನಿವೇಶವನ್ನು ನಿಭಾಯಿಸಿ, ಸಹನೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವು ಜೀವನ ಕೌಶಲ ಎನಿಸಿಕೊಳ್ಳುತ್ತದೆ.

ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಬೇಕೆಂಬ ಒತ್ತಾಸೆಗೆ ಪೂರಕವಾಗಿ, ಅದಕ್ಕೆ ಅಗತ್ಯವಾದ ಚಟುವಟಿಕೆಗಳನ್ನು ಒಳಗೊಂಡ ಪುಸ್ತಕ ರಚನೆಗೆ ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ಕಥೆಗಳು, ವಿವಿಧ ರೀತಿಯ ಚಟುವಟಿಕೆಗಳನ್ನು ಈ ಪುಸ್ತಕ ಒಳಗೊಂಡಿರಲಿದೆ

ಮೌಲ್ಯ ಶಿಕ್ಷಣವನ್ನು ಶಾಲೆಗಳಲ್ಲಿ ಯಾವ ರೀತಿ ಅಳವಡಿಸಬಹುದು ಎಂಬ ಬಗ್ಗೆ ಎನ್ಸಿಇಆರ್ಟಿ ವಿಶಾಲವಾದ ಚೌಕಟ್ಟನ್ನು ಸಿದ್ಧಪಡಿಸಿ, ಎಲ್ಲರಿಗೂ ಲಭ್ಯವಾಗುವಂತೆ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಅದರಂತೆ, ವಿದ್ಯಾರ್ಥಿಗಳ ಮೇಲೆ ಮೌಲ್ಯಗಳನ್ನು ಹೇರದೆ ಅವರು ಅವುಗಳನ್ನು ಗಳಿಸಲು ಸಾಧ್ಯವಾಗುವಂತಹ ವಾತಾವರಣವನ್ನು ಶಾಲೆಗಳಲ್ಲಿ ಸೃಷ್ಟಿಸಬೇಕು. ವಿವಿಧ ಸವಾಲು ಮತ್ತು ಸಂಕಷ್ಟದ ಸನ್ನಿವೇಶಗಳಲ್ಲಿ ಸ್ವಯಂ ಅರಿವು ಮತ್ತು ಸ್ವಯಂ ನಿರ್ದೇಶನಗಳ ಮೂಲಕ ತನ್ನೊಳಗಿನ ಮೌಲ್ಯಗಳಿಗೆ ಅನುಸಾರವಾಗಿ ಅವರು ಜವಾಬ್ದಾರಿಯುತವಾದ ಆಯ್ಕೆಗಳನ್ನು ಮಾಡುವಂತೆ ಅವರನ್ನು ಸಜ್ಜುಗೊಳಿಸಬೇಕು. ಮೌಲ್ಯ ಶಿಕ್ಷಣವನ್ನು ವಾರಕ್ಕೊಂದು ಅವಧಿಯಲ್ಲಿ ಬೋಧಿಸುವುದಷ್ಟೇ ಅಲ್ಲ, ಸಂದರ್ಭಾನುಸಾರ ಶಿಕ್ಷಕರು ಮೌಲ್ಯಗಳನ್ನು ಬೋಧಿಸಬೇಕು. ವಿದ್ಯಾರ್ಥಿಗಳ ನಡುವೆ ನಡೆಯುವ ಜಗಳ, ಹೊಡೆದಾಟ, ಕದಿಯುವುದು, ಶಾಲೆಗೆ ತಡವಾಗಿ ಬರುವಂತಹ ಸಂದರ್ಭಗಳನ್ನು ಬಳಸಿಕೊಂಡು ಮಕ್ಕಳನ್ನು ಚಿಂತನೆಗೆ ಹಚ್ಚಬೇಕು. ಅನೇಕ ಮಕ್ಕಳು ಅಪರೂಪದ ಉತ್ತಮ ಗುಣಗಳನ್ನು ಪ್ರದರ್ಶಿಸುವ ಪ್ರಸಂಗಗಳನ್ನು ಉದಾಹರಣೆಯಾಗಿ ತೆಗೆದುಕೊಂಡು, ವಿದ್ಯಾರ್ಥಿಗಳು ಆಲೋಚಿಸುವಂತೆ ಮಾಡಬೇಕು.

ವಿವಿಧ ವಿಷಯಗಳ ಬೋಧನೆಯ ನಡುವೆಯೂ ಮೌಲ್ಯ ಶಿಕ್ಷಣವನ್ನು ಬೋಧಿಸುವ ರೀತಿಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಬೇಕು. ಉದಾಹರಣೆಗೆ, ಇತಿಹಾಸ ವಿಷಯದಲ್ಲಿ ವಿಶ್ವಯುದ್ಧದ ಪಾಠ ಮಾಡುವಾಗ, ಪ್ರಸ್ತುತ ಉಕ್ರೇನ್– ರಷ್ಯಾ ಯುದ್ಧದ ವಿಷಯವನ್ನೂ ಚರ್ಚಿಸಬಹುದು. ಆ ಮೂಲಕ, ಯುದ್ಧಗಳು ಮನುಕುಲಕ್ಕೆ ಅದರಲ್ಲೂ ಮಕ್ಕಳ ಭವಿಷ್ಯಕ್ಕೆ ಹೇಗೆ ಮಾರಕವಾಗುತ್ತವೆ ಎಂಬುದನ್ನು ವಿವರಿಸಬಹುದು. ವಿಜ್ಞಾನ ಬೋಧನೆಯಲ್ಲಿ ಬೆಳಕಿನ ವಕ್ರೀಭವನದ ಪಾಠ ಮಾಡುವಾಗ, ನೀರೊಳಗೆ ಇರುವ ಗಾಜಿನ ಕಡ್ಡಿ ಅಥವಾ ವಸ್ತು ಹೇಗೆ ಬಾಗಿದಂತೆ ಕಾಣುತ್ತದೆ ಎಂಬುದನ್ನು ಬಳಸಿಕೊಂಡು, ವಿಷಯಗಳು ನಮ್ಮ ಹೊರನೋಟಕ್ಕೆ ಕಾಣಿಸುವುದಕ್ಕಿಂತ ಎಷ್ಟು ಭಿನ್ನವಾಗಿರುತ್ತವೆ ಎಂಬುದನ್ನು ತಿಳಿಸಬಹುದು. ಅಂದರೆ, ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬಂತಹ ವಿಮರ್ಶಾತ್ಮಕ ಆಲೋಚನಾ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬಹುದು. ಹೀಗೆ ಮಕ್ಕಳಿಗೆ ಮೌಲ್ಯ ಮತ್ತು ಜೀವನಕೌಶಲ ಕಲಿಸುವುದನ್ನು ಒಂದು ನಿರಂತರ ಪ್ರಕ್ರಿಯೆಯಾಗಿ ಪರಿಗಣಿಸಿ, ಅದರಲ್ಲಿ ಪೋಷಕರು ಹಾಗೂ ಸ್ಥಳೀಯ ಸಮುದಾಯಗಳನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅವಶ್ಯ.

ಪ್ರಧಾನ ಮೌಲ್ಯಗಳು

ಅನುಭೂತಿ ಮತ್ತು ಕರುಣೆ, ಗೌರವ, ಪ್ರಾಮಾಣಿಕತೆ, ಸುಸ್ಥಿರ ಜೀವನ ಮತ್ತು ಪರಿಸರ ಜಾಗೃತಿ, ನಾಗರಿಕ ಜವಾಬ್ದಾರಿ, ವಿವಿಧತೆ, ಸಮತೆ ಮತ್ತು ಒಳಗೊಳ್ಳುವಿಕೆ, ಭಾವನಾತ್ಮಕ ಬುದ್ಧಿಶಕ್ತಿ ಮತ್ತು ಪುಟಿದೇಳುವುದು, ವೈಜ್ಞಾನಿಕ ಮನೋಭಾವ ಮತ್ತು ಕುತೂಹಲ, ಸುರಕ್ಷತೆ, ಲಿಂಗತ್ವ ಸಮಾನತೆಯನ್ನು ಪ್ರಧಾನ ವಿಷಯಗಳನ್ನಾಗಿ ಮೌಲ್ಯ ಶಿಕ್ಷಣಕ್ಕೆ ಪರಿಗಣಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.