ಬುಧವಾರ, ಮೇ 25, 2022
29 °C

ಪ್ರಚಲಿತ ವಿದ್ಯಮಾನ ನಿರಂತರವಾಗಿರಲಿ ದಿನಪತ್ರಿಕೆಯ ಓದು

ಡಾ. ರವಿ ಎಸ್.ಆರ್. Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿಯೊಂದು ಹಂತದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ, ಸಾಮಾನ್ಯ ಜ್ಞಾನದ ಜೊತೆಗೆ ಪ್ರಚಲಿತ ವಿದ್ಯಮಾನಗಳಿಗೆ ಅದರದ್ದೇ ಆದ ಮಹತ್ವವನ್ನು ನೀಡಲಾಗಿದೆ. ಬರವಣಿಗೆಯ ಹಂತದಿಂದ ಸಂದರ್ಶನದವರೆಗೂ ಈ ವಿಷಯಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಚಲಿತ ವಿದ್ಯಮಾನಗಳೆಂದರೆ ದಿನನಿತ್ಯ ಸಮಾಜದಲ್ಲಿ ನಡೆಯುವಂತಹ ವಿಷಯಗಳು. ಅದರಲ್ಲಿ ರಾಜಕೀಯ, ಆರ್ಥಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ.. ಹೀಗೆ ಹಲವಾರು ವಿಷಯಗಳನ್ನು ನೋಡುತ್ತೇವೆ.

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ

ಈ ಪರೀಕ್ಷೆಗಳಲ್ಲಿ ಶೇ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಪ್ರಚಲಿತ ವಿದ್ಯಮಾನದಿಂದಲೇ ಕೇಳುತ್ತಾರೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ.. ಹೀಗೆ ಎಲ್ಲ ಹಂತಗಳಲ್ಲೂ ಹೆಚ್ಚಿನ ಪ್ರಶ್ನೆಗಳನ್ನು ಇದರಿಂದ ನಿರೀಕ್ಷಿಸಬಹುದು. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯಲ್ಲಿ ಸಂಕ್ಷಿಪ್ತವಾಗಿ ಉತ್ತರಗಳನ್ನು ಬರೆಯುವುದರಿಂದ ಪ್ರಚಲಿತ ವಿದ್ಯಮಾನಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಬೇಕಾಗುತ್ತದೆ. ಪ್ರತಿಯೊಂದು ಸಾಲುಗಳ ನಡುವೆ ಇರುವ ಒಳಾರ್ಥವನ್ನು ಅರ್ಥೈಸಿಕೊಳ್ಳಬೇಕು ಹಾಗೂ ಮುಖ್ಯವಾಗಿ ಸಂಪಾದಕೀಯ ಪುಟ (ಎಡಿಟೋರಿಯಲ್‌) ವನ್ನು ಪ್ರತಿನಿತ್ಯವೂ ಓದಿ ಮುಖ್ಯ ಅಂಶಗಳನ್ನು ಮನದಟ್ಟು ಮಾಡಬೇಕು.

ಒಂದು ವಿಷಯವನ್ನು ಏನು? ಎಲ್ಲಿ? ಯಾವಾಗ? ಯಾವುದು? ಯಾಕೆ? ಲಾಭ– ನಷ್ಟ.. ಹೀಗೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಓದಬೇಕು. ಏಕೆಂದರೆ ಇಂತಹ ಪರೀಕ್ಷೆಗಳಲ್ಲಿ ಕೇವಲ ಒಂದು ಆಯ್ಕೆ ಮಾತ್ರ ಸರಿಯಿಲ್ಲದೆ ಹಲವಾರು ಆಯ್ಕೆಗಳು ಸರಿಯಿರುವಂತಹ ಪ್ರಶ್ನೆಗಳನ್ನೂ ಕೇಳುತ್ತಾರೆ. ಹಾಗೆಯೇ ಹಲವಾರು ವಾಕ್ಯಗಳನ್ನು ಕೊಟ್ಟು ಅದಕ್ಕೆ ಸರಿಯಾದ ಉತ್ತರ ನೀಡುವಂತೆ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗಾಗಿ ಅತ್ಯಂತ ಸೂಕ್ಷ್ಮವಾಗಿ ಪ್ರತಿಯೊಂದು ವಿಷಯವನ್ನು ವಿಶ್ಲೇಷಿಸಿ ಉತ್ತರಿಸಬೇಕಾಗುತ್ತದೆ

ಐಬಿಪಿಎಸ್/ ಎಸ್‌ಬಿಐ/ ಆರ್‌ಬಿಐ/ ಆರ್‌ಆರ್‌ಬಿ

ಈ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳ ತಯಾರಿ ಮೇಲ್ಕಂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಾನವಾಗಿದೆ. ಇದರ ಜೊತೆಗೆ ನಾವು ಬ್ಯಾಂಕ್‌ನ ಜಾಗೃತಿ ಮತ್ತು ಹಣಕಾಸಿನ ಸಂಸ್ಥೆಗಳ ಮೇಲಿನ ವರದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಅರ್ಥೈಸಿಕೊಳ್ಳಬೇಕು.

ಎಸ್‌ಎಸ್‌ಸಿ ಸಿಜಿಎಲ್/ ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್/ ರೈಲ್ವೆ

ಇಲ್ಲಿ ರಾಷ್ಟ್ರದ ಆರ್ಥಿಕತೆ, ರಾಜನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ, ನೆರೆಹೊರೆಯ ರಾಷ್ಟ್ರಗಳ ಜೊತೆ ಭಾರತದ ಸಂಬಂಧ, ಕ್ರೀಡೆ, ಹೊಸ ಸಮಿತಿಗಳ ರಚನೆ, ಯೋಜನೆಗಳು, ವರದಿಗಳು, ಪ್ರಮುಖವಾದ ದಿನಗಳು, ಪ್ರತ್ಯೇಕ ರಾಜ್ಯಗಳ ಕಲೆ ಹಾಗೂ ಸಂಸ್ಕೃತಿ.. ಹೀಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಓದಬೇಕು. ಇಂತಹ ವಿಷಯಗಳನ್ನು ಸಂಕ್ಷಿಪ್ತವಾಗಿ ಏನು? ಎಲ್ಲಿ? ಯಾರು? ಯಾವಾಗ? ಎನ್ನುವ ಆಧಾರದ ಮೇಲೆ ನಮ್ಮ ತಯಾರಿಯನ್ನು ಮಾಡಬೇಕು.

ಈ ವಿಷಯಗಳನ್ನು ತಿಳಿಯಬೇಕಾದರೆ ಮೊದಲು ನಾವು ದಿನಪತ್ರಿಕೆಯನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯಾವುದಾದರೂ ಒಂದು ದಿನಪತ್ರಿಕೆಯನ್ನು ನಿಯಮಿತವಾಗಿ ಪ್ರತಿನಿತ್ಯ ಓದಬೇಕು, ಜೊತೆಗೆ ಸರ್ಕಾರಿ ವೆಬ್‌ಸೈಟ್‌ಗಳಾಗಿರುವ PIB, yojana.gov.in, PRS India, ISDA.in, Vikaspedia ಹೀಗೆ ಹಲವಾರು ಸಂಪನ್ಮೂಲಗಳನ್ನು ಆಧಾರವಾಗಿಟ್ಟುಕೊಂಡು ಪರಿಶ್ರಮದಿಂದ ನಮ್ಮ ತಯಾರಿಯನ್ನು ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಎಸ್‌ಡಿಎ/ ಎಫ್‌ಡಿಎ/ ಪಿಎಸ್‌ಐ/ ಪಿಡಿಒ

ಈ ಪರೀಕ್ಷೆಗಳಲ್ಲಿ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಗೆ ಓದುವ ವಿಷಯಗಳ ಜೊತೆಗೆ ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳ ಮೇಲೂ ಹೆಚ್ಚಿನ ಗಮನವಿರಿಸಬೇಕು. ರಾಜ್ಯದ ಆರ್ಥಿಕತೆ, ರಾಜಕೀಯ, ಹೊಸ ಯೋಜನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಸಮಿತಿಗಳು, ವರದಿಗಳು, ಪ್ರಶಸ್ತಿಗಳು, ಲೇಖನಗಳು, ಮಹತ್ವದ ಘಟನೆಗಳು, ಗಣ್ಯ ವ್ಯಕ್ತಿಗಳು.. ಹೀಗೆ ಹಲವಾರು ವಿಷಯಗಳು ಮೇಲೆ ಸಂಕ್ಷಿಪ್ತವಾಗಿ ಓದಬೇಕು. ಒಂದು ವಿಷಯದಲ್ಲಿ ಏನು? ಎಲ್ಲಿ? ಯಾವಾಗ? ಯಾರು? ಯಾವುದು? ಎನ್ನುವ ಸಾರಾಂಶವನ್ನು ಓದಿದರೆ ಸಾಕು.

(ಲೇಖಕ: ಯುಪಿಎಸ್‌ಸಿ ಮಾಸ್ಟರ್ ಟ್ರೇನರ್, ನವೋದಯ ಫೌಂಡೇಷನ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಮೈಸೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು