ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ.ಐ. ಕೋರ್ಸ್‌ ರಾಷ್ಟ್ರೀಯ ಕೌಶಲ ಅರ್ಹತೆಗೆ ಆದ್ಯತೆ

Last Updated 15 ಜನವರಿ 2020, 10:12 IST
ಅಕ್ಷರ ಗಾತ್ರ

ಕೈಗಾರಿಕೋದ್ಯಮ ಸಂಪನ್ಮೂಲಗಳಾದ ಮಾನವ ಸಂಪನ್ಮೂಲ, ಸಾಮಗ್ರಿ ಮತ್ತು ಯಂತ್ರೋಪಕರಣಗಳಲ್ಲಿ ಬಹುಮುಖ್ಯ ಪಾತ್ರ ವಹಿಸುವುದೆಂದರೆ ಮಾನವ ಸಂಪನ್ಮೂಲ. ಈ ಮಾನವ ಸಂಪನ್ಮೂಲವನ್ನು ಅತೀ ಹೆಚ್ಚು ಹೊಂದಿರುವ ದೇಶಗಳೆಂದರೆ ಚೀನಾ ಮತ್ತು ಭಾರತ. ಭಾರತದಲ್ಲಿರುವ ಬಹುತೇಕ ಉದ್ಯೋಗಾಕಾಂಕ್ಷಿಗಳು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವುದರಿಂದ ಉತ್ತಮ ಗುಣಮಟ್ಟದ ಕೈಗಾರಿಕಾ ಕೌಶಲಗಳನ್ನು ಪಡೆದರೆ ಭಾರತ ಭವಿಷ್ಯದ ಕೌಶಲದ ರಾಜಧಾನಿಯಾಗಬಹುದು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೌಶಲ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ವಿವಿಧ ಯೋಜನೆಗಳಾದ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿ.ಎಂ.ಕೆ.ವಿ.ವೈ), ಸಂಕಲ್ಪ, ಉಡಾನ್, ಪಾಲಿಟೆಕ್ನಿಕ್ ಯೋಜನೆ ಮತ್ತು ಕೌಶಲಯುತ ಶಿಕ್ಷಣದ ಯೋಜನೆಗಳನ್ನು ಕೌಶಲಾಭಿವೃದ್ಧಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿದೆ.

ಕೌಶಲ ಆಧಾರಿತ ಶಿಕ್ಷಣವನ್ನು ಯುವಶಕ್ತಿಗೆ ನೀಡಲು ನವದೆಹಲಿಯ ತರಬೇತಿ ಮಹಾ ನಿರ್ದೇಶನಾಲಯ (ಡಿ.ಜಿ.ಟಿ.)ವು ವಿವಿಧ ತರಬೇತಿ ಯೋಜನೆ/ ಕಾರ್ಯಕ್ರಮಗಳಲ್ಲಿ ಮುಖ್ಯವಾದ ಕುಶಲಕರ್ಮಿ ತರಬೇತಿ ಯೋಜನೆ (ಸಿ.ಟಿ.ಎಸ್), ಉಭಯ ವ್ಯವಸ್ಥೆ ತರಬೇತಿ (ಡಿ.ಎಸ್.ಟಿ.) ಮತ್ತು ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ (ಎ.ಟಿ.ಎಸ್.) ಗಳನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐ.ಟಿ.ಐ.) ಹಾಗೂ ಕುಶಲಕರ್ಮಿ ಬೋಧಕ ತರಬೇತಿ ಯೋಜನೆಯನ್ನು (ಸಿ.ಐ.ಟಿ.ಎಸ್.) ಕೇಂದ್ರ ಮತ್ತು ರಾಜ್ಯ ತರಬೇತಿ ಸಂಸ್ಥೆಗಳಲ್ಲಿ ಜಾರಿಗೊಳಿಸುತ್ತಿದೆ.

ದೇಶದಾದ್ಯಂತ ಕುಶಲಕರ್ಮಿ ತರಬೇತಿ ಯೋಜನೆಯಡಿ 15 ಸಾವಿರಕ್ಕೂ ಅಧಿಕ ಸಂಸ್ಥೆಗಳು ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಷನ್ ಫ್ರೇಮ್‌ವರ್ಕ್ ಅಥವಾ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (ಎನ್.ಎಸ್.ಕ್ಯು.ಎಫ್.) ಯೋಜನೆಗೆ ಜೋಡಿಸಿದ 138 ವೃತ್ತಿಗಳಲ್ಲಿ ಒಂದು ಮತ್ತು ಎರಡು ವರ್ಷಗಳ ಕೌಶಲ ತರಬೇತಿಯನ್ನು ನೀಡುತ್ತಿವೆ. ಹಾಗೆಯೇ ಸಿ.ಐ.ಟಿ.ಎಸ್. ಯೋಜನೆಯಡಿ ಐವತ್ತಕ್ಕೂ ಹೆಚ್ಚು ಸಂಸ್ಥೆಗಳು ಎನ್.ಎಸ್.ಕ್ಯು.ಎಫ್. ಆಧಾರಿತ 38 ವೃತ್ತಿಗಳಲ್ಲಿ ಒಂದು ವರ್ಷದ ಕೌಶಲ ತರಬೇತಿಯನ್ನು ನೀಡುತ್ತಿವೆ.

ಸಿ.ಟಿ.ಎಸ್. ಮತ್ತು ಸಿ.ಐ.ಟಿ.ಎಸ್. ಯೋಜನೆ ಅಡಿಯಲ್ಲಿ ನೀಡಲಾಗುವ ತರಬೇತಿಯು ಎನ್.ಎಸ್.ಕ್ಯು.ಎಫ್.ಗೆ ಜೋಡಿಸಿದ ತರಬೇತಿಯಾಗಿದ್ದು, ಇದರ ಅನುಸಾರ ಈ ಹಿಂದೆ ಅನುಸರಿಸುತ್ತಿದ್ದ ಪಠ್ಯಕ್ರಮವನ್ನು ರಾಷ್ಟೀಯ ಮಟ್ಟದಲ್ಲಿ ಒಂದು ಚೌಕಟ್ಟಿನಡಿ ಪರಿಷ್ಕರಿಸಲಾಗಿದೆ.

ಏನಿದು ಎನ್.ಎಸ್.ಕ್ಯು.ಎಫ್.?

ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಷನ್ ಫ್ರೇಮ್‌ವರ್ಕ್ ಅಥವಾ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು. ಅಂದರೆ ಐ.ಟಿ.ಐ. ಸಂಸ್ಥೆಗಳ ತರಬೇತಿಯಲ್ಲಿ ವೃತ್ತಿಪರ ಜ್ಞಾನ, ವೃತ್ತಿಪರ ಕೌಶಲ ಮತ್ತು ಹೊಣೆಗಾರಿಕೆಯನ್ನು ಸರಣಿ ಹಂತಗಳಲ್ಲಿ ಆಯೋಜಿಸಿ ಕಾರ್ಯಕ್ಷಮತೆಯ ಸಾಮರ್ಥ್ಯ ಸಾಧಿಸುವ ಒಂದು ರಾಷ್ಟ್ರೀಯ ಚೌಕಟ್ಟು. ಇದರ ಅನುಸಾರ ಪ್ರಸಕ್ತ ಐ.ಟಿ.ಐ. ಕೋರ್ಸ್‌ಗಳ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ.

ವೈಶಿಷ್ಟಗಳು

ಎನ್.ಎಸ್.ಕ್ಯು.ಎಫ್. ಆಧಾರದ ಪಠ್ಯಕ್ರಮವು, ತೀರ್ಮಾನ (ಔಟ್‌ಕಮ್), ಪುರಾವೆ (ಎವಿಡೆನ್ಸ್) ಮತ್ತು ಕಾರ್ಯಕ್ಷಮತಾ ಸಾಮರ್ಥ್ಯ (ಕಾಂಪಿಟೆನ್ಸಿ) ಆಧಾರಿತ ಪಠ್ಯಕ್ರಮ.

ತೀರ್ಮಾನ: ವಿದ್ಯಾರ್ಥಿಯು ಐ.ಟಿ.ಐ. ಕೋರ್ಸ್‌ಗೆ ಪ್ರವೇಶ ಪಡೆಯುವಾಗ ತರಬೇತಿ ಅವಧಿಯಲ್ಲಿ ಕಲಿಯುವ ಜ್ಞಾನ ಮತ್ತು ಕೌಶಲದ ಬಗ್ಗೆ ಸಂಪೂರ್ಣ ಅರಿವು ಹೊಂದಿ ಕೋರ್ಸ್ ಆಯ್ಕೆ ಮಾಡುವ ಬಗ್ಗೆ ತಿರ್ಮಾನ ಮಾಡುತ್ತಾನೆ.

ಪುರಾವೆ: ವಿಧ್ಯಾರ್ಥಿಯು/ ಬೋಧಕರು ತರಬೇತಿ ಪ್ರಾರಂಭದ ದಿನದಿಂದ ತರಬೇತಿ ಪೂರ್ಣಗೊಳ್ಳುವವರೆಗೆ ಪಡೆದ/ ನೀಡಿದ ಕೌಶಲಗಳ ಸಂಪೂರ್ಣ ಪುರಾವೆಗಳನ್ನು ಸಂಗ್ರಹಿಸಿ, ಅಂತಿಮ ಪರೀಕ್ಷೆಯ ಸಮಯದಲ್ಲಿ ಪರೀಕ್ಷಕರಿಗೆ ಹಾಜರುಪಡಿಸುವುದರಿಂದ ತರಬೇತಿಯು ದಾಖಲೆ ಆಧಾರಿತವಾಗಿ ಗುಣಮಟ್ಟದ್ದಾಗಿರುತ್ತದೆ.

ಕಾರ್ಯಕ್ಷಮತೆ ಸಾಮರ್ಥ್ಯ: ವಿದ್ಯಾರ್ಥಿಯು ತರಬೇತಿ ನಂತರ ತಾನು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಸಾಮರ್ಥ್ಯವನ್ನು ಅರಿತುಕೊಂಡು, ಕೈಗಾರಿಕೋದ್ಯಮಗಳಲ್ಲಿ ಉದ್ಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ ಹಾಗೂ ಉದ್ಯೋಗದಾತರಿಗೆ ಗುಣಮಟ್ಟದ ಅಭ್ಯರ್ಥಿಯನ್ನು ಆಯ್ಕೆಮಾಡಲು ಸಹ ಸಹಕಾರಿಯಾಗುತ್ತದೆ.

ಎನ್.ಎಸ್.ಕ್ಯು.ಎಫ್. ಆಧಾರಿತ ವೃತ್ತಿ ತರಬೇತಿಗಳನ್ನು 1–10 ಹಂತಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಹಂತವನ್ನು, ಐದು ಕ್ಷೇತ್ರಗಳಲ್ಲಿ ( ಹಂಚಿಕೆ ಮಾಡಲಾಗಿದೆ.

1. ಪ್ರಕ್ರಿಯೆ (ಸಾರಾಂಶ)

2. ವೃತ್ತಿಪರ ಜ್ಞಾನ (ವೃತ್ತಿ ಸಿದ್ಧಾಂತ)

3. ವೃತ್ತಿಪರ ಕೌಶಲ (ಕಾರ್ಯಾಗಾರ ಲೆಕ್ಕಾಚಾರ ಮತ್ತು ವಿಜ್ಞಾನ)

4. ಪ್ರಮುಖ ಕೌಶಲ (ಔದ್ಯೋಗಿಕ ಕೌಶಲ)

5. ಜವಾಬ್ದಾರಿ (ಹೊಣೆಗಾರಿಕೆಯ ಅರಿವು)

ತರಬೇತಿ ಅವಧಿಯಲ್ಲಿ ಥಿಯರಿ, ಪ್ರಾಯೋಗಿಕ ಪಾಠ ಮತ್ತು ಔದ್ಯೋಗಿಕ ಕೌಶಲಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿತು ನಿರ್ವಹಿಸಬಹುದಾದ ಉದ್ಯೋಗಗಳಲ್ಲಿ ಯಾವ ಮಟ್ಟದ ಹೊಣೆಗಾರಿಕೆಯನ್ನು ವಿದ್ಯಾರ್ಥಿ ಹೊಂದುತ್ತಾನೆ ಎಂಬುದನ್ನು ಹಂತಗಳು ತಿಳಿಸುತ್ತವೆ. ಪ್ರತಿ ಹಂತದ ಪ್ರಮಾಣ ಪತ್ರವನ್ನು ಎನ್.ಎಸ್.ಡಿ.ಸಿ. ಯಿಂದ ಪ್ರಮಾಣೀಕರಿಸಲಾಗಿದೆ ಹಾಗೂ ವಿದೇಶದಲ್ಲಿ ವಿತರಿಸುವ ಪ್ರಮಾಣ ಪತ್ರಕ್ಕೆ ಸಮಾನ.

ಪ್ರಯೋಜನಗಳು

ತರಬೇತುದಾರರು ಅತ್ಯುನ್ನತ ಕಾರ್ಯಕ್ಷಮತಾ ಸಾಮರ್ಥ್ಯ ಹೊಂದುತ್ತಾರೆ.

ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತವೆ.

ತರಬೇತಿಯಲ್ಲಿ ಹೆಚ್ಚುವರಿ ಕೌಶಲಗಳ ಕಲಿಕೆ ಮತ್ತು ಕಾರ್ಯಕ್ಷಮತೆಯ ಸಾಮರ್ಥ್ಯ ನವೀಕರಣವಾಗುತ್ತದೆ.

ಈ ಹಿಂದೆ ಹೊಂದಿರುವ ಕೌಶಲ ಗುರುತಿಸಿ ತರಬೇತಿಗೆ ಪರಿಗಣಿಸಲಾಗುತ್ತದೆ.

ರಾಷ್ಟ್ರೀಯ ಕೌಶಲ ಸಾಮರ್ಥ್ಯ ಮತ್ತು ಕೌಶಲ ನೀತಿಯನ್ನು ಸಾಕಾರಗೊಳಿಸುತ್ತದೆ.

ಬದುಕಿನುದ್ದಕ್ಕೂ ಕೌಶಲ ಕಲಿಕೆಯನ್ನು ಉತ್ತೇಜಿಸುತ್ತದೆ.

ಪಾರದರ್ಶಕ ಮತ್ತು ಜವಾಬ್ದಾರಿಯುತ ರಾಷ್ಟ್ರೀಯ ಕಲಿಕಾ ವ್ಯವಸ್ಥೆಯನ್ನು ಒದಗಿಸುತ್ತದೆ.

ಶಿಕ್ಷಣ ವ್ಯವಸ್ಥೆಯಿಂದ ಕೌಶಲ ವ್ಯವಸ್ಥೆಗೆ ಪರಿಣಾಮಕಾರಿಯಾಗಿ ಬದಲಾವಣೆ ಹೊಂದುತ್ತಾರೆ.

ವೈವಿಧ್ಯಮಯ, ಶ್ರೀಮಂತಿಕೆಯ ಮತ್ತು ಸಂಕೀರ್ಣತೆಯ ಭಾರತೀಯ ಕಲಿಕಾ ಪದ್ಧತಿ ಅಳವಡಿಕೆ.

ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯಲ್ಲಿ ಭರವಸೆಯನ್ನು ಮೂಡಿಸುತ್ತದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳ ಹೆಚ್ಚಳ.

(ಲೇಖಕರು ಸಹಾಯಕ ನಿರ್ದೇಶಕರು (ತರಬೇತಿ), ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT