ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಗೂ ಬೇಕು ವೈಜ್ಞಾನಿಕ ಮನೋಭಾವ

Last Updated 15 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಶಾಲಾ ಶಿಕ್ಷಣದಲ್ಲಿ ಪ್ರಶ್ನಿಸುವಿಕೆ ಮಹತ್ತರವಾದ ಕಲಿಕಾ ವಿಧಾನ. ಇದು ಮಕ್ಕಳಲ್ಲಿ ಕುತೂಹಲ ಮೂಡಿಸಿ, ಸಂದೇಹಕ್ಕೆ ಉತ್ತರ ಕಂಡುಕೊಳ್ಳುವ ಮೂಲಕ ಹೊಸತನಕ್ಕೆ ಪ್ರೇರೇಪಿಸುತ್ತದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಮೂಲಕ ಬಾಲವಿಜ್ಞಾನಿಗಳನ್ನು ಸೃಷ್ಟಿಸುತ್ತದೆ. ಅದಕ್ಕೆ ಶಾಲಾ ಶಿಕ್ಷಣವು ಸೂಕ್ತ ವೇದಿಕೆ ಎನ್ನಬಹುದು.

ವಿಜ್ಞಾನಿಗಳು ಪ್ರತಿಯೊಂದನ್ನೂ ಪ್ರಯೋಗ ಮಾಡಿ ನಂಬುವಂತೆ ಮಕ್ಕಳೂ ಸಹ ತಾವೇ ಸ್ವತಃ ಪ್ರಯೋಗ ಮಾಡಿ ನೋಡಿದ್ದನ್ನು, ಓದಿದ್ದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಪ್ರತಿಯೊಂದು ಬದಲಾವಣೆಯನ್ನು ಪ್ರಶ್ನಿಸುವ, ಅದಕ್ಕೆ ಕಾರಣವನ್ನು ಕೇಳಿ ತಿಳಿಯುವ, ಕಣ್ಣಾರೆ ಕಂಡ ಸತ್ಯವನ್ನೂ ಸಹ ಪ್ರಯೋಗದ ಮೂಲಕ ಒರೆಗೆ ಹಚ್ಚಿ ಖಚಿತಪಡಿಸಿಕೊಳ್ಳುವ ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಸಹಜವಾಗಿ ಬೆಳೆದಿರುತ್ತದೆ. ಆದರೆ ಮಗುವಿನ ಈ ಸಹಜ ಗುಣಕ್ಕೆ ತಡೆ ಹಾಕದೆ ವೈಜ್ಞಾನಿಕ ಮನೋಭಾವ ಬೆಳೆಸಬೇಕು.

ವೈಜ್ಞಾನಿಕ ಮನೋಭಾವ ಎಂದರೆ..

ಸತ್ಯವನ್ನು ಕಂಡುಕೊಳ್ಳುವ ಮಾರ್ಗದ ಅನ್ವೇಷಣೆಯಲ್ಲಿ ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ತೀರ್ಮಾನ ಕೈಗೊಳ್ಳುವುದು, ಪ್ರಯೋಗಗಳ ಮೂಲಕ ಸತ್ಯವನ್ನು ಸಾಬೀತು ಮಾಡುವುದು ಈ ಎಲ್ಲಾ ಹಂತಗಳು ವೈಜ್ಞಾನಿಕ ವಿಧಾನ ಅಥವಾ ವೈಚಾರಿಕ ವಿಧಾನದ ಹಂತಗಳಾಗಿವೆ.

ಪ್ರತಿಯೊಂದು ಸಮಸ್ಯೆಯನ್ನು ಇಂತಹ ವೈಜ್ಞಾನಿಕ ವಿಧಾನದ ಮೂಲಕ ಪರಿಹರಿಸಿಕೊಳ್ಳುವುದೇ ವೈಜ್ಞಾನಿಕ ಮನೋಭಾವ. ಅಂದರೆ ಪ್ರತಿ ಸಮಸ್ಯೆಯನ್ನು ಅವಲೋಕನ, ಅಂದಾಜು, ಪರಿಶೀಲನೆ, ಪ್ರಯೋಗ, ಮರುಪ್ರಯೋಗ, ತೀರ್ಮಾನದ ಮೂಲಕ ಪರಿಹಾರ ಕಂಡುಕೊಳ್ಳುವ ಮನೋಭಾವವೇ ವೈಜ್ಞಾನಿಕ ಮನೋಭಾವ ಎನ್ನಬಹುದು.

ಮಕ್ಕಳಿಗೆ ಆಗುವ ಲಾಭಗಳು

ವೈಜ್ಞಾನಿಕ ಮನೋವೃತ್ತಿ ತೀರ್ಮಾನದ, ವಿವೇಕದ ಪರಿಪಕ್ವತೆಯನ್ನು ಪೋಷಿಸುತ್ತದೆ ಎನ್ನುತ್ತಾರೆ ಭಾರತದ ಪ್ರಸಿದ್ಧ ವಿಜ್ಞಾನಿ, ಶಿಕ್ಷಣತಜ್ಞ ಪ್ರೊ. ಯಶಪಾಲ್‌. ವೈಜ್ಞಾನಿಕ ದೃಷ್ಟಿಕೋನದಿಂದ ಮಕ್ಕಳಲ್ಲಿ ತೀರ್ಮಾನದ ಪರಿಪಕ್ವತೆಯನ್ನು ಹೆಚ್ಚಿಸುವುದಾದರೆ ಅವರು ತಮ್ಮ ಬದುಕಿನ ಸಮಸ್ಯೆಗಳಿಗೆ ತಾವೇ ಪರಿಹಾರಗಳನ್ನು ಹುಡುಕಿಕೊಳ್ಳುತ್ತಾರೆ.

ಕಲಿಕೆ ಹಾಗೂ ವೈಜ್ಞಾನಿಕ ಮನೋಭಾವಕ್ಕೂ ಇರುವ ಸಂಬಂಧ

ಕಲಿಕೆ ಹಾಗೂ ವೈಜ್ಞಾನಿಕ ಮನೋಭಾವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿಯೊಂದು ಕಲಿಕೆಯೂ ವೈಜ್ಞಾನಿಕವಾಗಿ ಸಾಬೀತಾದರೆ ಮಾತ್ರ ಅದು ಶಾಶ್ವತವಾಗಲು ಸಾಧ್ಯ. ಕಲಿಕೆಯ ಪ್ರತಿಯೊಂದು ವಿಧಾನಗಳು ವೈಜ್ಞಾನಿಕ ತಂತ್ರಗಳನ್ನು ಆಧರಿಸಿ ರೂಪುಗೊಂಡಿರುತ್ತವೆ. ಯಾವುದೇ ಒಂದು ವಿಧಾನ ಜಾರಿಗೆ ಬರುವ ಮೊದಲು ಅನೇಕ ಹಂತಗಳ ಪರೀಕ್ಷೆಗೊಳಗಾಗಿ ಜಾರಿಗೊಂಡಿರುವುದನ್ನು ಶಿಕ್ಷಣದ ಇತಿಹಾಸದಲ್ಲಿ ಗಮನಿಸಬಹುದು. ಇಂದಿನ ಶಿಕ್ಷಣವು ಶಿಶು ಕೇಂದ್ರಿತವಾಗಿದೆ. ಮಕ್ಕಳು ಮುಕ್ತವಾಗಿ ಭಾಗವಹಿಸುವ ಮೂಲಕ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತಮಗೆ ಅರ್ಥವಾಗದೇ ಇರುವುದನ್ನು ಮುಕ್ತವಾಗಿ ಕೇಳುವ, ಸಂವಾದ ಮಾಡುವ ಮೂಲಕ ಸ್ವತಂತ್ರವಾಗಿ ಕಲಿಯುತ್ತಾರೆ. ತಮಗೆ ಗೊತ್ತಿರುವುದನ್ನು ಯಾವುದೇ ಭಯವಿಲ್ಲದೇ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಇದಕ್ಕೆ ಮೌಲ್ಯಮಾಪನ ಪ್ರಕ್ರಿಯೆಯೂ ಪೂರಕವಾಗಿದೆ.

ದಾಸ್ಯದ ಬದಲಿಗೆ ಜವಾಬ್ದಾರಿಯನ್ನು ಕಲಿಸುವ, ಅನುಕರಣೆಯ ಬದಲಿಗೆ ನಾಯಕತ್ವದ ಕೌಶಲ ಬೆಳೆಸುವ, ಏಕಾಂಗಿಯಾಗುವ ಬದಲು ಸಮಾಜಮುಖಿಯನ್ನಾಗಿಸುವ ಅನೇಕ ಶಿಶುಕೇಂದ್ರಿತ ಚಟುವಟಿಕೆಗಳು ವೈಜ್ಞಾನಿಕ ಮನೋಭಾವದ ಪ್ರತೀಕಗಳಾಗಿವೆ. ಕೇವಲ ವಿಜ್ಞಾನ, ಗಣಿತಗಳಲ್ಲದೇ ಸಮಾಜವಿಜ್ಞಾನ, ಭಾಷೆಗಳು, ಕಲೆ, ಆಟೋಟಗಳಲ್ಲಿಯೂ ಸಹ ಮಕ್ಕಳಲ್ಲಿ ತರ್ಕ, ಕಾರ್ಯಕಾರಣ ಸಂಬಂಧ, ವೈಚಾರಿಕತೆಗಳನ್ನು ಬೆಳೆಸಲಾಗುತ್ತದೆ. ಪಠ್ಯದಾಚೆಗಿನ ಕಲಿಕೆಯನ್ನು ಪಠ್ಯಕ್ಕೆ ಪೂರಕವಾಗಿಸುವ ಪ್ರಾಜೆಕ್ಟ್ ಆಧಾರಿತ ಕಲಿಕೆ ವೈಜ್ಞಾನಿಕ ವಿಧಾನದ ಹಾದಿಯಲ್ಲಿಯೇ ಸಾಗುತ್ತದೆ. ಇವೆಲ್ಲವೂ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಗಳಾಗಿವೆ.

ಜೀವನ ಮೌಲ್ಯಗಳಾದ ಸ್ವಾಯತ್ತತೆ, ಸಮಗ್ರತೆ, ಅನ್ವೇಷಣಾ ಮನೋಭಾವ, ನಿರ್ಭಯಗಳ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವುದು ಶ್ರಮದಾಯಕವಾದರೂ ಒಂದು ನಿಶ್ಚಿತ ವಿಧಾನವಾಗಿದೆ. ಪ್ರಜಾಪ್ರಭುತ್ವ/ ಸಾಂವಿಧಾನಿಕ ಮೌಲ್ಯಗಳನ್ನು ಮನೆಯಿಂದಲೇ ಕಲಿಸಬೇಕು. ನೈಸರ್ಗಿಕ ವಿದ್ಯಮಾನಗಳಾದ ಗಾಳಿ, ಮಳೆ, ಗುಡುಗು, ಮಿಂಚು, ಗ್ರಹಣಗಳು, ಚಂಡಮಾರುತಗಳು ಇತ್ಯಾದಿಗಳ ಬಗ್ಗೆ ಭಯ ಮೂಡಿಸದೇ ಭೌತಶಾಸ್ತ್ರೀಯ ಹಿನ್ನಲೆಯಲ್ಲಿ ವಿವರಿಸಿ.

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮಾರ್ಗಗಳು

-ಜ್ಞಾನದ ಆರಂಭವೇ ‘ಏಕೆ’ ಎಂಬ ಪ್ರಶ್ನೆಯಿಂದ. ಆದ್ದರಿಂದ ಮಕ್ಕಳು ಪ್ರಶ್ನೆ ಕೇಳಲು ಅವಕಾಶ ನೀಡಿ. ಪ್ರಶ್ನೆಗೆ ಸಮಂಜಸವಾಗಿ ಉತ್ತರಿಸುವ ಪ್ರಯತ್ನ ಮಾಡಿ. ಪ್ರಶ್ನೆಗಳನ್ನು ಕೊಲ್ಲಬೇಡಿ.

-ಮಕ್ಕಳ ನೈಸರ್ಗಿಕ ಹಕ್ಕನ್ನು ಕಸಿದುಕೊಳ್ಳದೇ ಮಕ್ಕಳನ್ನು ಮಕ್ಕಳ ಹಾಗೆ ಬೆಳೆಸಬೇಕು.

-ಮೂಢ ಆಚರಣೆಗಳನ್ನು ಮಕ್ಕಳ ಮೇಲೆ ಹೇರಬಾರದು.

-ಜಾತಿ, ಮತಗಳ ಕುರುಹುಗಳು/ ಉಡುಪುಗಳನ್ನು ಒತ್ತಾಯವಾಗಿ ಹೇರುವುದು ಬೇಡ.

-ಸಮಾಜದಲ್ಲಿ ಮುಕ್ತವಾಗಿ ಎಲ್ಲಾ ಮಕ್ಕಳೊಂದಿಗೆ ಮುಜುಗರವಿಲ್ಲದೆ ಬೆರೆಯುವ ಅವಕಾಶ ನೀಡಬೇಕು.

-ಶಿಸ್ತಿನ ಕಠಿಣ ಅಭ್ಯಾಸ ಬೇಡ. ಇದು ಕಲಿಕಾ ಕೌಶಲವನ್ನು ಕುಂಠಿತಗೊಳಿಸುತ್ತದೆ.

-ಕಂಠಪಾಠದ ಬದಲಿಗೆ ಬುದ್ಧಿಮತ್ತೆಯನ್ನು ಮತ್ತೆ ಮತ್ತೆ ಒರೆಗೆ ಹಚ್ಚುವ ಅವಕಾಶ ನೀಡುವ ಮೂಲಕ ಬಾಲವಿಜ್ಞಾನಿಗೆ ಸಹಾಯ ನೀಡಿ.

-ಮಕ್ಕಳಲ್ಲಿ ತಾರ್ಕಿಕತೆಯನ್ನು ಬೆಳೆಸುವ ಸನ್ನಿವೇಶಗಳನ್ನು ಸೃಷ್ಟಿಸಿ.

-ವಿಜ್ಞಾನ ಕಾರ್ಯಾಗಾರ, ಗೋಷ್ಠಿಗಳು, ಚರ್ಚೆ, ಸಂವಾದಗಳಲ್ಲಿ ಮಗು ಭಾಗವಹಿಸುವಂತೆ ಪ್ರೇರೇಪಿಸಿ.

ಇನ್ನಷ್ಟು ಲಾಭಗಳು..

-ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

-ಪ್ರಶ್ನೆ ಕೇಳುವ ಸ್ವಭಾವ ಮತ್ತೆ ಮತ್ತೆ ಜೀವಂತವಾಗುತ್ತದೆ.

-ಎಲ್ಲವನ್ನೂ ಪರೀಕ್ಷಿಸಿ, ಪರಿಶೀಲಿಸಿ, ಮಾಡಿ ನೋಡಿಯೇ ನಂಬುವುದು ಅಭ್ಯಾಸವಾಗುತ್ತದೆ.

-ಕೇಳಿದ್ದನ್ನು, ನೋಡಿದ್ದನ್ನು, ಓದಿದ್ದನ್ನು ಕುರಿತು ಪ್ರಶ್ನಿಸುವ, ಪುರಾವೆ ಹುಡುಕುವ/ ಕೇಳುವ ಮನೋಭಾವ ರೂಢಿಯಾಗುತ್ತದೆ.

-ರಮ್ಯತೆ, ಪುರಾಣ-ಪ್ರತೀತಿ, ಅಧ್ಯಾತ್ಮ ಇವುಗಳಿಗೂ ಹಾಗೂ ವೈಜ್ಞಾನಿಕ ಸತ್ಯಕ್ಕೂ ಇರುವ ವ್ಯತ್ಯಾಸದ ಸ್ಪಷ್ಟತೆ ಉಂಟಾಗುತ್ತದೆ.

-ಬದುಕಿನಲ್ಲಿ ಎಲ್ಲ ರೀತಿಯಲ್ಲೂ ಮುಂದುವರಿಯಲು ಇದು ಅವರಿಗೆ ಸಹಾಯಕವಾಗುತ್ತದೆ.

-ಮಕ್ಕಳಲ್ಲಿ ಭಯ, ಆತಂಕ, ಕುರುಡು ನಂಬಿಕೆಗಳು ದೂರವಾಗುತ್ತವೆ.

-ಬೇರೆಯವರಿಂದ ಬೇಗನೇ ವಂಚನೆಗೆ ಒಳಗಾಗುವುದಿಲ್ಲ.

-ಶೈಕ್ಷಣಿಕ ಸಾಧನೆ ಉತ್ತುಂಗಕ್ಕೇರುತ್ತದೆ.

-ದೈಹಿಕ, ಮಾನಸಿಕ, ಭಾವನಾತ್ಮಕ, ವೈಚಾರಿಕ ಹೀಗೆ ಪರಿಪೂರ್ಣ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ.

-ಮಾನವೀಯತೆ, ಅನ್ವೇಷಣೆ ಮತ್ತು ಸುಧಾರಣಾ ಪ್ರವೃತ್ತಿ ಬೆಳೆಯಲು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT