ಸೋಮವಾರ, ಜುಲೈ 26, 2021
21 °C

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ಪುನರ್‌ಮನನವೇ ಅಂಕ ಗಳಿಕೆಯ ಅಸ್ತ್ರ

ಸುರೇಶ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಪರಿಣತಿ ಸಾಧಿಸುವ ಏಕೈಕ ಮಾರ್ಗ ಮರಳಿ ಯತ್ನಿಸುತ್ತಲೇ ಇರುವುದು. ಚಿತ್ರ ಬಿಡಿಸುವುದೂ ಹೀಗೆಯೆ. ಪಠ್ಯದಲ್ಲಿದ್ದಂತೆಯೇ ಚಿತ್ರ ಬಿಡಿಸಬೇಕೆಂಬ ಹಟ ಬೇಡ. ಅಂಗಾಂಗಗಳ ರಚನೆ ಅರ್ಥ ಮಾಡಿಕೊಂಡು, ಅಭ್ಯಾಸ ಮಾಡಬೇಕು.  

ಕಣ್ಣು: ಕಂಪಾಸ್‌ ಬಳಸಿ ಒಂದು ಗೋಳ ಬರೆಯಿರಿ. ಅದರೊಳಗೆ ಇನ್ನೆರಡು ತುದಿಗೂಡದ ಗೋಳಗಳನ್ನು ರಚಿಸಿ. ಈಗ ಮೊದಲ ಗೋಳದ ಎರಡೂ ತುದಿಗಳನ್ನು ಮೇಲ್ಭಾಗದಲ್ಲಿ ಉಬ್ಬುವಂತೆ ಮಾಡಿದರೆ ಅದು ಕಣ್ಣುಗುಡ್ಡೆಯಾಗುತ್ತದೆ. ಒಳಗಿನ ಎರಡನೆಯ ಗೋಳ ಅಕ್ಷಿಪಟಲ, ಮೂರನೆಯದ್ದು ರೆಟಿನಾವನ್ನು ಸೂಚಿಸುತ್ತದೆ. ಗೋಳದ ಇನ್ನೊಂದು ತುದಿಯಲ್ಲಿ ಪುಟ್ಟ ಗೆರೆಗಳನ್ನೆಳೆದರೆ ಚಾಕ್ಷುಷ ನರಗಳಾಗುತ್ತವೆ. ಮೊದಲ ಮತ್ತು ಎರಡನೆಯ ಗೋಳದ ನಡುವಿನ ಭಾಗದಲ್ಲಿ ಪುಟ್ಟ ಗುರುತುಗಳನ್ನು ಹಾಕಿದರೆ ಅದು ಹಳದಿಭಾಗ. ಬಲ ಭಾಗದಲ್ಲಿ ಕಾರ್ನಿಯಾಗೂ ಮಸೂರಕ್ಕೂ ನಡುವಣ ಜಾಗ ಕಣ್ಣಿನ ಪಾಪೆ. ಮಸೂರದ ತುದಿಗೆ ಇರುವ ಜಾಗವೇ ಸೀಲಿಯರಿ ಕಾಯ. ಇಷ್ಟು ಮಾಡಿದರೆ ಚಿತ್ರ ಪೂರ್ಣ.

‌ನೆಫ್ರಾನ್: ಇದು ಕಿಡ್ನಿಯಲ್ಲಿ (ಮೂತ್ರಪಿಂಡ) ಇರುವ ಒಂದು ಭಾಗ. ಒಂದು ಕಿಡ್ನಿಯಲ್ಲಿ ಇವುಗಳ ಸಂಖ್ಯೆ 10 ಲಕ್ಷದಷ್ಟು. ಮೊದಲಿಗೆ ಒಂದು ಗೋಳ ಬರೆಯಿರಿ. ಅದುವೇ ಬೌಮನ್ನನ ಕೋಶ. ಗೋಳದ ಎಡಕ್ಕೆ ಸುರುಳಿ–ಸುರುಳಿಯಾಗಿ ನಾಳ ಚಿತ್ರಿಸಿಕೊಳ್ಳಿ. ಅದು ನೆಫ್ರಾನ್‌ ಕೊಳವೆ. ನಾಳದ ಮಧ್ಯದಲ್ಲಿ ಇಂಗ್ಲಿಷಿನ ‘U’ ಆಕಾರದಲ್ಲಿ ನಾಳವನ್ನು ಸಣ್ಣದಾಗಿ ಚಿತ್ರಿಸಿ. ಅದು ಹೆನೆಲ್‌ ಲೂಪ್‌(ಹೆನೆಲ್‌ ಕುಣಿಕೆ). ಬಳಿಕ ಮತ್ತೆ ಸುರುಳಿಯಾಗಿ ನಾಳ ಚಿತ್ರಿಸಿದರೆ, ನೆಫ್ರಾನ್‌ ಸಿದ್ಧ, ಅಂಕವೂ ಖಚಿತ.

ಜೀರ್ಣಾಂಗ ವ್ಯೂಹ: ಎರಡು ಚಿಕ್ಕದಾದ ಲಂಬ ಗೆರೆ ಎಳೆದರೆ ಅದು ಅನ್ನನಾಳ. ಅದಕ್ಕೆ ಹೊಂದಿಕೊಂಡು ಪಪ್ಪಾಯಿಯಂತೆ ಚಿತ್ರಿಸಿದರೆ ಜಠರ ಸಿದ್ಧ. ಅದರ ಮೇಲೊಂದು ಗುಡ್ಡದಂತೆ ಬರೆದರೆ ಅದುವೇ ಯಕೃತ್ತು. ಜಠರಕ್ಕೆ ಹೊಂದಿಕೊಂಡಂತೆ ಚಿಕ್ಕದಾಗಿ ಒಂದು ನಾಳ ಎಳೆದರೆ ಮೇದೊಜೀರಕ ಗ್ರಂಥಿ. ಜಠರದಿಂದ ಬಂದ ನಾಳಕ್ಕೆ ಹೊಂದಿಕೊಂಡಂತೆ ದೊಡ್ಡ ನಾಳ ಬರೆದರೆ ದೊಡ್ಡ ಕರುಳು ಎನಿಸಿಕೊಳ್ಳುತ್ತದೆ. ಅದರ ಒಳಗೆ ಒತ್ತುಒತ್ತಾಗಿ ಉದ್ದವಾದ ನಾಳ ಬರೆದರೆ ಅದುವೇ ಚಿಕ್ಕ ಕರುಳು. ದೊಡ್ಡ ಕರುಳಿನ ಬಲ ತುದಿಗೆ ಅಪೆಂಡಿಕ್ಸ್. ಎಡ ತುದಿಗೆ ಗುದನಾಳ. ಜೀರ್ಣಾಂಗ ವ್ಯೂಹ ಸಿದ್ಧ.

ಅಧ್ಯಯನ ಹೇಗೆ?

ಊಟದ ಎಲೆಗೆ ಮೊದಲಿಗೆ ಉಪ್ಪು, ಉಪ್ಪಿನ ಕಾಯಿ, ಕೋಸಂಬರಿ, ಪಲ್ಯ, ಪಾಯಸ, ಅನ್ನ, ಸಾರು ಕ್ರಮವಾಗಿ ಬಡಿಸುತ್ತಾರೆ. ಹಾಗಂತ ನಾವು ಅದೇ ಕ್ರಮದಲ್ಲೇ‌ ಉಣ್ಣುತ್ತೇವೆಯೇ? ಇಷ್ಟವಾದುದನ್ನು ಮೊದಲು ಉಣ್ಣುವಂತೆಯೇ ಓದು ಕೂಡ. ನಿಮಗೆ ಖುಷಿ ಕೊಡುವ ವಿಷಯ, ಪಾಠ ಮೊದಲಿಗೆ ಓದಿ.

ಒಟ್ಟು ಹತ್ತು ಪಾಠಗಳಲ್ಲಿ, ನಾಲ್ಕು ಪಾಠ ಸುಲಭ, ಮತ್ತೆ ನಾಲ್ಕು ಪಾಠ ಸ್ವಲ್ಪ ಪ್ರಯತ್ನ ಪಟ್ಟರೆ ತಿಳಿಯಬಲ್ಲವು. ಇನ್ನುಳಿದ ಎರಡು ಪಾಠ ಕಠಿಣ ಎನಿಸಬಹುದು. ಮೊದಲಿಗೆ ಸುಲಭ ಎನಿಸುವ ಪಾಠ ಓದಿ. ಅಷ್ಟು ಅಂಕಗಳ ಸಿದ್ಧತೆ ಆದಂತಾಯಿತು. ನಂತರ ಕಷ್ಟದ ಪಾಠಗಳನ್ನು ಪುನರ್‌ಮನನ ಮಾಡಿ. ಇನ್ನುಳಿದ ಎರಡು ಜಟಿಲ ಪಾಠಗಳನ್ನು ಓದಿ, ಬರೆಯಿರಿ, ಚರ್ಚಿಸಿ, ಅನುಮಾನಗಳನ್ನು ಶಿಕ್ಷಕರ ಬಳಿ ಪರಿಹರಿಸಿಕೊಳ್ಳಿ. ಇಷ್ಟಾದರೆ ಸಿದ್ಧತೆ ಪೂರ್ಣ.  

ಕಷ್ಟವೆನಿಸುವ ಪಾಠಗಳು ಬರದಿದ್ದರೂ, ಚಿಂತೆಯಿಲ್ಲ. ಉಳಿದ ಎಂಟು ಪಾಠಗಳ ಶೇ 80ರಷ್ಟು ಅಂಕಗಳ ತಯಾರಿ ಆಗಿರುತ್ತದೆ. ಸುಲಭ ಎನಿಸುವ ಪಾಠ ಮೊದಲು ಓದಿದಂತೆ, ಪರೀಕ್ಷೆ ಬರೆಯುವಾಗಲೂ ಸರಳವಾಗಿರುವುದನ್ನು ಮೊದಲು ಬರೆಯಿರಿ.

ಸುರೇಶ್ ಕುಲಕರ್ಣಿ ಅವರ ಪೂರ್ಣ ಪಾಠದ ಪ್ರಾತ್ಯಕ್ಷಿಕೆ ವೀಕ್ಷಿಸಲು ಈ ಲಿಂಕ್ ನೋಡಿ: https://bit.ly/3gL9n3f

(ಲೇಖಕ ಶಿಕ್ಷಣ ತಜ್ಞ ಹಾಗೂ ಸಂಪನ್ಮೂಲ ವ್ಯಕ್ತಿ)​

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು