ಮಂಗಳವಾರ, ಜನವರಿ 21, 2020
25 °C
ಮಾನಸಿಕ ಒತ್ತಡದಿಂದ ಕ್ಷೋಭೆಗೊಳಗಾಗುತ್ತಿರುವ ವಿದ್ಯಾರ್ಥಿಗಳು

ಪರೀಕ್ಷೆ: ಅಪಹರಣದ ಭ್ರಮೆ!

ವರುಣ್‌ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾನಸಿಕ ಒತ್ತಡದಿಂದ ಮನೋರೋಗಕ್ಕೆ ಒಳಗಾಗುವವರ ಸಂಖ್ಯೆ ನಗರದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಪರೀಕ್ಷೆಯ ಭಯ ಹಾಗೂ ಅಧಿಕ ಅಂಕಗಳಿಸಬೇಕೆಂಬ ಒತ್ತಡಕ್ಕೆ ಸಿಲುಕಿ ಪ್ರಥಮ ಪಿ.ಯು. ವಿದ್ಯಾರ್ಥಿಯೊಬ್ಬ ಅಪಹರಣಕ್ಕೊಳಗಾದ ಭ್ರಮೆಯಿಂದ ಬಳಲಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾನೆ. 

ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ ಪ್ರತಿ 10 ಜನರಲ್ಲಿ ಒಬ್ಬರು ಮಾನಸಿಕ ಒತ್ತಡ ಎದುರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ, ಕಚೇರಿಯಲ್ಲಿನ ಒತ್ತಡ, ಪರೀಕ್ಷಾ ಭಯ ಸೇರಿದಂತೆ ವಿವಿಧ ಕಾರಣಗಳಿಂದ ಯುವಜನರು ಮಾನಸಿಕ ಕ್ಷೋಭೆಗಳಿಗೆ ಒಳಗಾಗುತ್ತಿದ್ದಾರೆ.

ಈ ಸಮಸ್ಯೆ ಇತ್ತೀಚೆಗೆ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪರೀಕ್ಷೆಯ ಭಯದಿಂದ ಅಪಹರಣಗೊಂಡಂತೆ ಭ್ರಮೆಗೊಳಗಾಗಿದ್ದು ಇತ್ತೀಚಿನ ಸೇರ್ಪಡೆ. 

ಪರೀಕ್ಷೆಗೆಂದು ಮನೆಯಿಂದ ಬೈಕ್‌ನಲ್ಲಿ ಕಾಲೇಜಿಗೆ ಹೋದ ಪ್ರಥಮ ಪಿಯುಸಿ ವಿದ್ಯಾರ್ಥಿ ಎರಡು ದಿನಗಳ ಬಳಿಕ ಗಾಲಿ ‌ಕುರ್ಚಿಯಲ್ಲಿ ಮನೆಗೆ ಬಂದಿದ್ದ. ಆತಂಕಗೊಂಡ ಪೋಷಕರು ಆತನನ್ನು ವಿಚಾರಿಸಿದಾಗ, ‘ಯಾರೋ ನನ್ನನ್ನು ಅಪಹರಣ ಮಾಡಿ, ಹಲ್ಲೆ ಮಾಡಿದರು. ಇದರಿಂದ ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ’ ಎಂದು ವಿವರಿಸಿದ್ದ. ಗಾಬರಿಗೊಂಡ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಬಳಿಕ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳನ್ನು ಸಂಪರ್ಕಿಸಿದ್ದರು. ಸ್ಕ್ಯಾನಿಂಗ್, ಎಕ್ಸ್‌–ರೇ ಸೇರಿದಂತೆ ಹಲವು ಪರೀಕ್ಷೆಗಳ ಬಳಿಕ ವೈದ್ಯರು, ‘ಕಾಲಿನ ಯಾವುದೇ ಭಾಗಕ್ಕೆ ಹಾನಿಯಾಗಿಲ್ಲ’ ಎಂದು ತಿಳಿಸಿದ್ದರು. 

ಹತಾಶರಾದ ಪೋಷಕರು ಅಂತಿಮವಾಗಿ ಯಲಹಂಕದ ‘ಪೀಪಲ್ ಟ್ರೀ ಮಾರ್ಗ’ ಆಸ್ಪತ್ರೆಗೆ ಆತನನ್ನು ದಾಖಲಿಸಿ, ಮನೋರೋಗ ತಜ್ಞ ಡಾ.ಸತೀಶ್ ರಾಮಯ್ಯ ಅವರನ್ನು ಸಂಪರ್ಕಿಸಿದರು. ವಿದ್ಯಾರ್ಥಿಯನ್ನು ಪರೀಕ್ಷಿಸಿದ ವೈದ್ಯರು ಆತನ ವರ್ತನೆಗೆ ಕಾರಣ ಪತ್ತೆ ಮಾಡುವಲ್ಲಿ ಯಶಸ್ವಿಯಾದರು.

ಭಾವನೆಗಳಿಗೆ ಸ್ಪಂದನೆ ಅಗತ್ಯ: ‘ನಮ್ಮಲ್ಲಿ ಬಂದ ಯುವಕ ವಿಘಟಿತ ಗುರುತಿನ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಆತನ ಪ್ರಕಾರ ಅಪಹರಣ ನಡೆದದ್ದು ಸತ್ಯ. ಆದ್ದರಿಂದ ಅವನು ಹೇಳಿದ್ದನ್ನು ನಂಬಿ, ವಾಸ್ತವವನ್ನು ತಿಳಿಸಲು ಸೈಕೊ ಥೆರಪಿ ಹಾಗೂ ಫ್ಯಾಮಿಲಿ ಥೆರಪಿ ನೀಡಲಾಯಿತು’ ಎಂದು ಡಾ.ಸತೀಶ್ ರಾಮಯ್ಯ ‘ಪ್ರಜಾವಾಣಿ’ಗೆ
ತಿಳಿಸಿದರು.

‘ಚಿಕಿತ್ಸೆ ಬಳಿಕ 48ಗಂಟೆಯಲ್ಲಿ ಯುವಕ ಗಾಲಿ ‌ಕುರ್ಚಿಯಿಂದ ಕೆಳಗಿಳಿದು, ನಡೆದಾಡಲು ಆರಂಭಿಸಿದ. ಆತನ ಬಗ್ಗೆ ಕುಟುಂಬದ ಸದಸ್ಯರಲ್ಲಿ ವಿಚಾರಿಸಿದಾಗ ಪರೀಕ್ಷೆಯ ದಿನಗಳಲ್ಲಿ ಅತಿಯಾಗಿ ಒತ್ತಡಕ್ಕೆ ಒಳಗಾಗಿರುವುದು ತಿಳಿಯಿತು. ಆತನಿಗೆ ಕೌನ್ಸೆಲಿಂಗ್ ನಡೆಸಿದ್ದೇವೆ’ ಎಂದರು.

‘ಪರೀಕ್ಷೆ ಸಮಯ ಹೆಚ್ಚು ಪ್ರಕರಣ’

‘ಯುವಜನರಲ್ಲಿ ಖಿನ್ನತೆ ಪ್ರಕರಣಗಳು ಹೆಚ್ಚುತ್ತಿವೆ. 20 ವರ್ಷ ಒಳಗಿನವರು ವಿಘಟಿತ ಗುರುತಿನ ಅಸ್ವಸ್ಥತೆ ಸಮಸ್ಯೆಗೆ ಹೆಚ್ಚಾಗಿ ಒಳಗಾಗುತ್ತಿದ್ದಾರೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಖಿನ್ನತೆ, ಆತಂಕ ಸಾಮಾನ್ಯ. ಪೋಷಕರು ಮಕ್ಕಳನ್ನು ಹೆಚ್ಚಿನ ಸಂಖ್ಯೆ
ಯಲ್ಲಿ ಕರೆದುಕೊಂಡು ಬರುತ್ತಿರುವುದು ಈ ಸಮಯದಲ್ಲೇ’ ಎಂದು ಡಾ.ಸತೀಶ್ ರಾಮಯ್ಯ ತಿಳಿಸಿದರು.

ಏನಿದು ವಿಘಟಿತ ಗುರುತಿನ ಅಸ್ವಸ್ಥತೆ?

ಅತಿಯಾದ ಒತ್ತಡ ಹಾಗೂ ಭಯದಿಂದ ಜನ ಕೆಲವೊಮ್ಮೆ ವಾಸ್ತವಿಕ ಪ್ರಪಂಚದಿಂದ ದೂರವಾಗಿ, ಭ್ರಮಾ ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ. ಇದಕ್ಕೆ ‘ವಿಘಟಿತ ಗುರುತಿನ ಅಸ್ವಸ್ಥತೆ’ (ಡಿಸೋಷಿಯೇಟಿವ್‌ ಡಿಸಾರ್ಡರ್) ಎಂದು ಕರೆಯಲಾಗುತ್ತದೆ ಎಂದು ಡಾ.ಸತೀಶ್ ರಾಮಯ್ಯ ತಿಳಿಸಿದರು.

‘ಒಮ್ಮೆಲೆಯೇ ಬೀಳುವುದು, ಅಜಾಗೃತ ಪ್ರಜ್ಞೆ, ಕೈ ನಡುಕ, ಬರೆಯಲು ಸಾಧ್ಯವಾಗದಿರುವುದು, ತಲೆ ಸುತ್ತು ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳೂ ವಿಘಟಿತ ಗುರುತಿನ ಅಸ್ವಸ್ಥತೆಯ ಲಕ್ಷಣಗಳು. ಈ ಸಮಸ್ಯೆ ಎದುರಿಸುತ್ತಿರುವವರು ಹೇಳುವ ಕತೆ ಹೊರನೋಟಕ್ಕೆ ಸತ್ಯಕ್ಕೆ ದೂರವಾಗಿದೆ ಎಂದು ಅನಿಸಿದರೂ, ಅದು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ವಿವಾಹಿತ ಮಹಿಳೆ ಕಾಣೆಯಾಗಿ, ಮೂರು ದಿನದ ಬಳಿಕ ಉತ್ತರ ಕರ್ನಾಟಕದ ಮಠವೊಂದರಲ್ಲಿ ಕಾಣಿಸಿಕೊಂಡಿದ್ದರು. ಪತಿ–ಪತ್ನಿಯ ನಡುವಿನ ಜಗಳದಿಂದಾಗಿ ಆಕೆ ವಿಘಟಿತ ಗುರುತಿನ ಅಸ್ವಸ್ಥತೆಗೆ ಒಳಗಾಗಿದ್ದರು. ಅವರಿಗೆ ಹೇಗೆ ಅಲ್ಲಿಗೆ ಹೋದೆ ಎಂಬ ಅರಿವೂ ಇರಲಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು