ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ‘ಗ್ಯಾರಂಟಿ’ ಕೈಹಿಡಿಯಲಿದೆ: ಎಂ.ವಿ. ರಾಜೀವ್‌ ಗೌಡ ವಿಶ್ವಾಸ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ವಿ. ರಾಜೀವ್‌ ಗೌಡ ವಿಶ್ವಾಸ
Published 22 ಏಪ್ರಿಲ್ 2024, 0:13 IST
Last Updated 22 ಏಪ್ರಿಲ್ 2024, 0:13 IST
ಅಕ್ಷರ ಗಾತ್ರ
ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿರುವ ಎಂ.ವಿ. ರಾಜೀವ್‌ ಗೌಡ ಅವರು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕ್ಷೇತ್ರದ ಬಗೆಗಿನ ತನ್ನ ಅಭಿವೃದ್ಧಿಯ ಕಲ್ಪನೆ ಮತ್ತು ಕ್ಷೇತ್ರದ ಚಿತ್ರಣ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದ್ದಾರೆ.
ಪ್ರ

ನಿಮ್ಮನ್ನು ಯಾಕೆ ಗೆಲ್ಲಿಸಬೇಕು?

ಹಿಂದಿನ ನಾಲ್ಕು ಚುನಾವಣೆಗಳಲ್ಲಿ ಇಲ್ಲಿಂದ ಗೆದ್ದ ಬಿಜೆಪಿಯ ಸಂಸದರು ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಲ್ಲ. ಮತ್ತೊಮ್ಮೆ ಇಂಥವರನ್ನು ಆಯ್ಕೆ ಮಾಡಬಾರದೆಂದು ಜನ ತೀರ್ಮಾನ ಕೈಗೊಂಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಕನಸು–ಗುರಿ. 

ಪ್ರ

ನಿಮ್ಮ ಲೆಕ್ಕಾಚಾರಗಳು ಹೇಗಿವೆ?

ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಷ್ಟೇ ಅಲ್ಲ, ಯಶವಂತಪುರದ ಬಿಜೆಪಿ ಶಾಸಕರ ಬೆಂಬಲವೂ ಇದೆ. ಜೆಡಿಎಸ್‌ ಕಾರ್ಯಕರ್ತರ ಬೆಂಬಲವೂ ಇದೆ. 

ಪ್ರ

ಬಿಜೆಪಿ ಪಾರಮ್ಯದ ಕ್ಷೇತ್ರವಿದು. ಜೆಡಿಎಸ್‌ ಕೂಡ ಕೈಜೋಡಿಸಿದೆ. ನಿಮಗೆ ಗೆಲುವು ಕಷ್ಟ ಆಗುವುದಿಲ್ಲವೇ?

ಈ ಬಾರಿ ಮೋದಿ ಅಲೆ ಇಲ್ಲ. ಜೆಡಿಎಸ್–ಬಿಜೆಪಿ ಒಂದಾಗಿರುವುದು ಅವರಿಗೆ ಲಾಭಕ್ಕಿಂತ ನಷ್ಟ ಉಂಟು ಮಾಡಿದೆ. ಜೆಡಿಎಸ್ ಕಾರ್ಯಕರ್ತರಲ್ಲಿ ಇನ್ನೂ ಗೊಂದಲವಿದೆ. ಅವರೆಲ್ಲ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ದಾಸರಹಳ್ಳಿಯ ಮಾಜಿ ಶಾಸಕರು ಕೂಡ ಜೆಡಿಎಸ್‌ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. 

ಪ್ರ

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?

ಉತ್ತರ ಬೆಂಗಳೂರಿನ ಗೇಟ್‌ವೆ ಹೆಬ್ಬಾಳ ಫ್ಲೈಓವರ್‌. ಅಲ್ಲಿ ವಾಹನ ಸಂಚಾರ ಸರಾಗವಾಗಬೇಕು. ಉಪನಗರ ರೈಲು ಯೋಜನೆಗಾಗಿ 15 ವರ್ಷಗಳಿಂದ ನಾನು ಹೋರಾಟ ಮಾಡಿದ್ದೇನೆ. ಹೆಬ್ಬಾಳವನ್ನು ‘ಟ್ರಾನ್ಸಿಟ್‌ ಹಬ್‌’ ಮಾಡಲಾಗುವುದು. ಯೋಜನಾ ಆಯೋಗದ ಉಪಾಧ್ಯಕ್ಷನಾಗಿದ್ದಾಗ ನಾನೇ ನೀಡಿದ ಸಲಹೆಯಿಂದಾಗಿ ಇಂದು ಮೆಟ್ರೊ ಫೀಡರ್‌ ಬಸ್‌ ಕಾರ್ಯಾಚರಣೆ ನಡೆಸುತ್ತಿವೆ. ಕೆರೆಗಳನ್ನು ಸಂರಕ್ಷಿಸಬೇಕು. ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿ ಶುದ್ಧ ಕುಡಿಯುವ ನೀರಿಗೊಂದು, ಮರುಬಳಕೆಯ ನೀರಿಗೊಂದು ಪೈಪ್‌ಲೈನ್‌ ಆಗಬೇಕು. ಅಂತರ್ಜಲ ಹೆಚ್ಚಿಸಲು ಮಳೆ ನೀರು ಮರುಪೂರಣವಾಗಬೇಕು. ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಸಿಗಬೇಕು. ಸಾಂಸ್ಕೃತಿಕವಾಗಿಯೂ ಗುಣಮಟ್ಟ ಹೆಚ್ಚಬೇಕು. ಕಲೆ, ಕ್ರೀಡೆಗಳಿಗೆ ಅವಕಾಶ ನೀಡಬೇಕು. ಹೀಗೆ ಹಲವು ಯೋಜನೆಗಳಿವೆ.

ಪ್ರ

ಬಿಜೆಪಿಯ ಹಿಂದುತ್ವಕ್ಕೆ ನಿಮ್ಮಲ್ಲಿ ಪರ್ಯಾಯವೇನಿದೆ?

ಅಭಿವೃದ್ಧಿ ಮತ್ತು ‘ಗ್ಯಾರಂಟಿ’ ಯೋಜನೆಗಳು ನಮ್ಮ ಪರ್ಯಾಯ. ಹಿಂದುತ್ವ ಈ ಬಾರಿ ನಡೆಯುವುದಿಲ್ಲ. ಧರ್ಮವನ್ನು ದುರುಪಯೋಗ ಮಾಡಿಕೊಂಡು ಎಷ್ಟು ದಿನ ಮತ ಪಡೆಯಲು ಸಾಧ್ಯ? ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಕೆಟ್ಟ ಆಡಳಿತದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಅಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಅವರಿಗೊಂದು ಸಮಾಧಾನ ಸಿಕ್ಕಿತು. ಬದುಕಿನಲ್ಲಿ ಬದಲಾವಣೆಯನ್ನುಂಟು ಮಾಡಿತು.

ಪ್ರ

ಪ್ರೊಫೆಸರ್‌ ಆಗಿದ್ದವರು ನೀವು. ಗೆದ್ದಮೇಲೆ ಜನಸಾಮಾನ್ಯರ ಕೈಗೆ ಸಿಗುತ್ತೀರಾ?

ಎಲೈಟ್‌ ಎಂದು ಕರೆದ ಕೂಡಲೇ ನಾನು ಜನರಿಂದ ದೂರವಾಗುವುದಿಲ್ಲ. ನನಗೆ ರಾಜಕೀಯ ಹಿನ್ನೆಲೆ ಇದೆ. ನೇರ ಚುನಾವಣೆ ನನಗೆ ಮೊದಲನೆಯದ್ದಾಗಿರಬಹುದು. ಆದರೆ, ದೊಡ್ಡಪ್ಪ ಸ್ಪರ್ಧೆ ಮಾಡಿದ್ದಾಗ, ತಂದೆ ಸ್ಪರ್ಧೆ ಮಾಡಿದ್ದಾಗಲೆಲ್ಲ ಕೆಲಸ ಮಾಡಿದ್ದೆ. ಜನರ ಜೊತೆ ಬೆರೆದು ಅನುಭವವಿದೆ.

ಪ್ರ

ರಾಜಕೀಯ ಅನುಭವಿ ಶೋಭಾ ಕರಂದ್ಲಾಜೆ ಮುಂದೆ ಗೆಲುವು ಸುಲಭವೇ?

ಕರಂದ್ಲಾಜೆ ಅವರು ಎಲ್ಲಿಯಾದರೂ ಅಭಿವೃದ್ಧಿ ಮಾಡಿದ್ದು, ಅದರ ಬಗ್ಗೆ ಮಾತನಾಡಿದ್ದು ಕಂಡಿದ್ದೀರಾ? ಸಣ್ಣ ವಿಷಯ ಸಿಕ್ಕಿದರೆ ಗಲಭೆ ಎಬ್ಬಿಸಲು, ಜಗಳ ತಂದಿಡಲು ಮಾತ್ರ ಬರುತ್ತಾರೆ. ಕರಾವಳಿಯ ಪರಿಸ್ಥಿತಿ ತರಲು ನೋಡುತ್ತಾರೆ. ಕೋಮುಗಲಭೆ ಜನರಿಗೆ ಬೇಕಾಗಿಲ್ಲ. ಬದುಕು ಸುಟ್ಟು ಹೋಗುವುದನ್ನು ಜನ ಬಯಸುವುದಿಲ್ಲ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ಒಗ್ಗಟ್ಟಿನಿಂದ ಸಮಾಜವನ್ನು ಮುಂದಕ್ಕೆ ಒಯ್ಯುವುದು ನಮ್ಮ ಚಿಂತನೆ. ಅದು ನನ್ನ ಕೈಹಿಡಿಯುವ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT