ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಹಣ ಬಲ, ದೃತರಾಷ್ಟ್ರ ಪ್ರೇಮಕ್ಕೆ ಸೋಲು ಖಚಿತ: ಎಂ.ಕೃಷ್ಣಮೂರ್ತಿ

ಹೋರಾಟ, ಸಂವಿಧಾನ, ಶಿಕ್ಷಣ, ಜ್ಞಾನವೇ ನನ್ನ ಶಕ್ತಿ– ಬಿಎಸ್‌ಪಿ ಅಭ್ಯರ್ಥಿ ಕೃಷ್ಣಮೂರ್ತಿ ಮಾತು
Published 23 ಏಪ್ರಿಲ್ 2024, 4:19 IST
Last Updated 23 ಏಪ್ರಿಲ್ 2024, 4:19 IST
ಅಕ್ಷರ ಗಾತ್ರ
ಚಾಮರಾಜನಗರ ಮೀ‌ಸಲು ಲೋಕಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಕೊನೆ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ. ಪಕ್ಷದ ರಾಜ್ಯ ಸಂಚಾಲಕರಾದ ಎಂ.ಕೃಷ್ಣಮೂರ್ತಿಯವರನ್ನು ಕಣಕ್ಕಿಳಿಸಿದೆ. ಮೂರು ಚುನಾವಣೆಯನ್ನು ಎದುರಿಸಿ ಅನುಭವಿರುವ ಅವರು, ಕ್ಷೇತ್ರದಲ್ಲಿ ಪಕ್ಷದ ಬಲ, ರಾಜಕೀಯ ಚಿತ್ರಣ, ತಮ್ಮ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. 
ಪ್ರ

ಕೊನೆ ಕ್ಷಣದಲ್ಲಿ ಅಭ್ಯರ್ಥಿಯಾಗಿದ್ದೀರಿ. ಏನನ್ನಿಸುತ್ತಿದೆ?

ನಾನು ಅಭ್ಯರ್ಥಿಯಾಗಿದ್ದು ಅನಿರೀಕ್ಷಿತ. ಸಿ.ಮಹದೇವಯ್ಯ ಅವರನ್ನು ಅಭ್ಯರ್ಥಿ ಎಂದು ಹಿಂದೆಯೇ ಘೋಷಿಸಲಾಗಿತ್ತು. ಆಗ ತಾಂತ್ರಿಕ ಕಾರಣವೂ ಇತ್ತು. ಅಲ್ಲದೇ, ಅವರು ಕಾಂಗ್ರೆಸ್‌ ಜೊತೆ ಕೈಜೋಡಿಸುತ್ತಾರೆ ಎಂಬ ಸುಳಿವೂ ಸಿಕ್ಕಿತ್ತು. ಹೀಗಾಗಿ ಪಕ್ಷ ಬೇರೆಯವರನ್ನು ಕಣಕ್ಕಿಳಿಸಲು ನಿರ್ಧರಿಸಿದರು. ಕಾರ್ಯಕರ್ತರು ನಾನೇ ಆಗಬೇಕು ಎಂದು ಒತ್ತಾಯ ಮಾಡಿದರು. ಹಾಗಾಗಿ ದಿಢೀರ್‌ ಆಗಿ ನಾಮಪತ್ರ ಸಲ್ಲಿಸಿದೆ. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸುತ್ತಾಡಿದ್ದೇನೆ. ಬಿಎಸ್‌ಪಿ ಕಾರ್ಯಕರ್ತರು, ಮತದಾರರು, ನೌಕರರು ಸಹಕಾರ ನೀಡುತ್ತಿದ್ದಾರೆ. ಎಲ್ಲರಲ್ಲೂ ಒಂದು ರೀತಿಯ ಉತ್ಸಾಹ ಕಂಡು ಬರುತ್ತಿದೆ. 

ಪ್ರ

ಎನ್‌.ಮಹೇಶ್‌ ಪಕ್ಷದಿಂದ ದೂರವಾದ ನಂತರ ಚಾಮರಾಜನಗರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದು ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ನೀಡುವುದಿಲ್ಲವೇ?

1994ರಲ್ಲಿ ಬೀದರ್‌ನಲ್ಲಿ ನಮ್ಮ ಅಭ್ಯರ್ಥಿ ಮೊದಲ ಬಾರಿ ಗೆದ್ದಿದ್ದರು. 2018ರಲ್ಲಿ ಕೊಳ್ಳೇಗಾಲದಲ್ಲಿ ಸಿಕ್ಕಿದ್ದು ಎರಡನೇ ಗೆಲುವು. ಚುನಾವಣೆಯಲ್ಲಿ ಗೆದ್ದ ನಂತರ ಮಹೇಶ್‌ ಅವರು ಕೊಟ್ಟ ಮಾತು, ಜನರ ನಂಬಿಕೆ ಉಳಿಸಿಕೊಳ್ಳಲಿಲ್ಲ. ಪಕ್ಷಾಂತರ ಮಾಡಿ ಸಂವಿಧಾನವಿರೋಧಿಯಾದ, ಮೀಸಲಾತಿಯನ್ನು ತೆಗೆದುಹಾಕುವುದಾಗಿ ಹೇಳುವ ಬಿಜೆಪಿಯನ್ನು ಸೇರಿದ್ದು, ಕ್ಷೇತ್ರದ ಜನರಿಗೆ ತೀವ್ರ ಅಸಮಾಧಾನ ಉಂಟು ಮಾಡಿತ್ತು. ಕಳೆದ ವರ್ಷದ ಚುನಾವಣೆಯಲ್ಲಿ ಅವರನ್ನು ಹೀನಾಯವಾಗಿ ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಆ ನಂತರ ಸ್ಥಳೀಯ ನಾಯಕತ್ವದಲ್ಲಿ ಕೊರತೆ ಉಂಟಾಗಿತ್ತು. ಪಕ್ಷಕ್ಕೆ ಹಿನ್ನಡೆಯಾಗಿಲ್ಲ. ನಮ್ಮ ಕಾರ್ಯಕರ್ತರು ಪ್ರಬಲವಾಗಿದ್ದು,  ಈಗ ಪರಿಸ್ಥಿತಿ ಬದಲಾಗಿದೆ. ಈ ಚುನಾವಣೆ ಬಳಿಕ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ. 

ಪ್ರ

ಕ್ಷೇತ್ರದ ರಾಜಕೀಯ ಚಿತ್ರಣವನ್ನು ಹೇಗೆ ವಿಶ್ಲೇಷಿಸುತ್ತೀರಿ?

ಕ್ಷೇತ್ರದಲ್ಲಿ ಬಿಎಸ್‌ಪಿ, ಬಿಜೆಪಿ, ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಇದೆ. ಜನರು ಬಿಎಸ್‌ಪಿಯನ್ನು ಬೆಂಬಲಿಸಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. 

ಪ್ರ

2019ರ ಚುನಾವಣೆಯಲ್ಲಿ ನಿಮ್ಮ ಪಕ್ಷಕ್ಕೆ 87 ಸಾವಿರ ಮತಗಳು ಬಿದ್ದಿದ್ದವು. ಐದು ವರ್ಷಗಳಲ್ಲಿ ಪಕ್ಷ ಸಾಕಷ್ಟು ಏರಿಳಿತ ಕಂಡಿದೆ. ಹೀಗಿರುವಾಗ ನಿಮ್ಮ ಗೆಲುವು ಸಾಧ್ಯವೇ?

ಯಾಕೆ ಸಾಧ್ಯವಿಲ್ಲ? ಹೋದಲ್ಲೆಲ್ಲ ಉತ್ತಮ ಸ್ಪಂದನೆ ಸಿಗುತ್ತಿದೆ. ಎಲ್ಲ ವರ್ಗದವರೂ ಬೆಂಬಲಿಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹೋಲಿಸಿದರೆ ಶಿಕ್ಷಣ, ಜ್ಞಾನ, ಮಾತುಗಾರಿಕೆಯಲ್ಲಿ ನಾನೇ ಉತ್ತಮ ಅಭ್ಯರ್ಥಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪಕ್ಷದ ಹಿಂದಿನ ಅಭ್ಯರ್ಥಿಗಳು ಸೀಮಿತ ವಿಚಾರಗಳ ಬಗ್ಗೆ ಮಾತ್ರ ಪ್ರತಿಕ್ರಿಯಿಸುತ್ತಿದ್ದರು. ನಾನು ಅವರಿಗಿಂತ ಸಂಪೂರ್ಣ ಭಿನ್ನ. ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ರೈತರು, ಕಾರ್ಮಿಕ ಸಂಘಟನೆಗಳು, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತರು, ಅಂಗನವಾಡಿ ನೌಕರರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಗುತ್ತಿಗೆ ಆಧಾರಿತ ನೌಕರರ ಪರವಾಗಹಿ ಹೋರಾಟಗಳನ್ನು ಮಾಡಿದ್ದೇನೆ. 20 ವರ್ಷಗಳಿಂದ ಚಾಮರಾಜನಗರ ಕ್ಷೇತ್ರದಾದ್ಯಂತ ಸುತ್ತಾಡಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಚಳವಳಿ ನಡೆಸಿದ್ದೇನೆ. ಕ್ಷೇತ್ರದ ಜನರಿಗೆ ನನ್ನ ಪರಿಚಯ ಚೆನ್ನಾಗಿಯೇ ಇದೆ. ಹಾಗಾಗಿ, ಎಲ್ಲ ವರ್ಗದವರೂ ನನಗೆ ಮತ ಹಾಕಲಿದ್ದಾರೆ. ಇದು ಗ್ರಾಮ ಪಂಚಾಯಿತಿ ಚುನಾವಣೆ ಅಲ್ಲ. ಲೋಕಸಭಾ ಚುನಾವಣೆ. ಎಂಟು ವಿಧಾನಸಭಾ ಕ್ಷೇತ್ರಗಳ 25 ಲಕ್ಷ ಜನರು ಈ ಕ್ಷೇತ್ರದಲ್ಲಿ ಇದ್ದಾರೆ. ಸಂಸದರಾದವರು ಅವರನ್ನು ಲೋಕಸಭೆಯಲ್ಲಿ ಪ್ರತಿನಿಧಿಸಬೇಕು. ಅದಕ್ಕಾಗಿ ನಮಗೆ ಶಿಕ್ಷಣ, ಜ್ಞಾನ ಇರಬೇಕು. ಕ್ಷೇತ್ರದ ಜನರಿಗೆ ಇದು ಗೊತ್ತಿದೆ.  

ಪ್ರ

ಸಚಿವ ಮಹದೇವಪ್ಪ ಅವರು ಮಗನ ಗೆಲುವಿಗಾಗಿ ಹಣದ ಹೊಳೆ ಹರಿಸುತ್ತಿದ್ದೀರಿ ಎಂದು ಆರೋಪ ಮಾಡಿದ್ದೀರಿ. ನಿಮ್ಮ ಹೇಳಿಕೆಯನ್ನು ಹೇಗೆ ಸಮರ್ಥಿಸುತ್ತೀರಿ?

ದಲಿತ ಸಂಘಟನೆಗಳ ಮುಖಂಡರನ್ನು ಅವರನ್ನು ಖರೀದಿ ಮಾಡಿದ್ದಾರೆ. ದಲಿತ ಚಳವಳಿಯಲ್ಲಿ ಹೋರಾಟ ಮಾಡಿದ ದೊಡ್ಡ ದೊಡ್ಡ ಮುಖಂಡರೆಲ್ಲರೂ, ಸಚಿವರ ಮಗ ಎಂಬ ಒಂದೇ ಅರ್ಹತೆ ಹೊಂದಿರುವ ಸುನಿಲ್‌ ಬೋಸ್‌ ಅವರನ್ನು ಬೆಂಬಲಿಸಿದ್ದಾರೆ. ನಮ್ಮ ಪಕ್ಷದಲ್ಲಿದ್ದ ಕೆಲವು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಆರ್ಥಿಕ ಲಾಭ ಇಲ್ಲದೆ ಅವರು ಖಂಡಿತವಾಗಿಯೂ ಹೋಗಿಲ್ಲ. ಮಹದೇವಪ್ಪ ಅವರಿಗೆ ಧೃತರಾಷ್ಟ್ರ ಪ್ರೇಮ ಇದೆ. ಅದಕ್ಕಾಗಿ ಹಣ, ಅಧಿಕಾರ ಬಲ ಬಳಸುತ್ತಿದ್ದಾರೆ. ಎಲ್ಲವನ್ನೂ ಹಣದಿಂದಲೇ ಸಾಧಿಸಲು ಸಾಧ್ಯವಿಲ್ಲ. ಮಹದೇವಪ್ಪನವರ ಧೃತರಾಷ್ಟ್ರ ಪ್ರೇಮಕ್ಕೆ ಸೋಲಾಗುವುದು ಖಚಿತ. ನಾನು ಮಾಡಿರುವ ಆರೋಪಗಳ ಬಗ್ಗೆ ಮಹದೇವಪ್ಪ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ.

ಪ್ರ

ರಾಜಕೀಯ ಮೀಸಲಾತಿ ದುರ್ಬಳಕೆಯಾಗುತ್ತಿದೆ ಎಂದು ಹೇಳಿದ್ದೀರಿ...

ಹೌದು. ಅದನ್ನು ಪುನರುಚ್ಚರಿಸುತ್ತೇನೆ. ಅಂಬೇಡ್ಕರ್‌ ಅವರು ಸಮುದಾಯಕ್ಕಾಗಿ ರಾಜಕೀಯ ಮೀಸಲಾತಿ ಕೊಟ್ಟಿದ್ದಾರೆಯೇ ವಿನಾ, ಒಬ್ಬರೋ ಇಬ್ಬರಿಗಲ್ಲ. ಒಂದು ಬಾರಿ ಮೀಸಲಾತಿ ಪಡೆದು ಶಾಸಕನೋ, ಸಂಸದನೋ ಆದವರು ಮತ್ತೆ ಅವರ ಮಕ್ಕಳನ್ನು ಮೀಸಲಾತಿ ಅಡಿಯಲ್ಲೇ ಕಣಕ್ಕಿಳಿಸಬಾರದು. ಒಂದು ತಲೆಮಾರಿಗೆ ಅದು ಕೊನೆಯಾಗಬೇಕು. ಮಹದೇವಪ್ಪ ಸೇರಿದಂತೆ ಸಚಿವರು, ಶಾಸಕರು, ದಲಿತ ಮುಖಂಡರು, ತಮ್ಮ ಮಕ್ಕಳು, ಕುಟುಂಬಸ್ಥರ ರಾಜಕೀಯ ಮಹತ್ವಕಾಂಕ್ಷೆಗೆ ಈ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. 

ರಾಜಕೀಯ ಮೀಸಲಾತಿಯು 10 ವರ್ಷಗಳ ಅವಧಿಗೆ ಮಾತ್ರ ಇರಬೇಕು ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದ್ದರು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯು, ಈ ಸಮಾಜದಲ್ಲಿ ಅಸ್ಪೃಶ್ಯತೆ, ತಾರತಮ್ಯ, ಅಸಮಾನತೆ ಇರುವವರೆಗೂ ಜಾರಿಯಲ್ಲಿರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ, ಸರ್ಕಾರಗಳು ರಾಜಕೀಯ ಮೀಸಲಾತಿಯನ್ನು ಮುಂದುವರಿಸುತ್ತಿವೆ. ಖಾಸಗೀಕರಣದ ನೆಪದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಕಡಿತ ಮಾಡುತ್ತಾ ಇದ್ದಾರೆ. 

ನಾನು ಸಂಸದನಾದರೆ ಒಂದು ತಲೆಮಾರಿಗೆ ಮಾತ್ರ ರಾಜಕೀಯ ಮೀಸಲಾತಿ ನಿಗದಿ ಪಡಿಸುವ ಖಾಸಗಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತೇನೆ.

ಪ್ರ

ಗೆದ್ದರೆ ಕ್ಷೇತ್ರಕ್ಕೆ ಏನು ಕೊಡುಗೆಗಳನ್ನು ಕೊಡುವಿರಿ?

ಜಿಲ್ಲೆಗೆ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಕೇಂದ್ರೀಯ ವಿಶ್ವವಿದ್ಯಾಲಯ ಬರಬೇಕು. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿರುವ ಎಲ್ಲ ಶಾಲೆಗಳು ಶಾಲಾ ಕಾಲೇಜುಗಳ‌ನ್ನು ಮೇಲ್ದರ್ಜೆಗೆ ಏರಿಸಬೇಕು. ಆರೋಗ್ಯ ಶಿಕ್ಷಣಕ್ಕೆ ಮೈಸೂರನ್ನೇ ಅವಲಂಬಿಸಬೇಕಾಗಿದೆ. ಈ ಎರಡೂ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕು.  ನೀರಾವರಿ ಯೋಜನೆಗಳು ಬೇಕು. ಇಲ್ಲಿ ಸಾವಿರಾರು ಕೆರೆಗಳಿವೆ. ಎಚ್‌.ಡಿ.ಕೋಟೆಯಲ್ಲಿ ಕಬಿನಿ ಜಲಾಶಯವಿದೆ. ಚಾಮರಾಜನಗರದಲ್ಲಿ ಸುವರ್ಣಾವತಿ ಚಿಕ್ಕಹೊಳೆ ಗುಂಡಾಲ್‌ ಜಲಾಶಯಗಳಿವೆ. ಈ ನಾಲ್ಕೂ ಜಲಾಶಯಗಳ ನೀರನ್ನು ಬಳಸಿಕೊಂಡು ಎಲ್ಲ ಕೆರೆಗಳನ್ನು ತುಂಬಿಸುವ ಸಮಗ್ರ ನೀರಾವರಿ ಯೋಜನೆ ಜಾರಿ ನನ್ನ ಗುರಿ. ಇದು ಅನುಷ್ಠಾನಕ್ಕೆ ಬಂದರೆ ಎಷ್ಟೇ ಬರ ಇದ್ದರೂ ಇಲ್ಲಿನ ರೈತರಿಗೆ ಸಮಸ್ಯೆಯಾಗುವುದಿಲ್ಲ.  ಕೃಷಿ ಕೈಗಾರಿಕೆಗಳಿಗೆ ಒತ್ತು ಕ್ಷೇತ್ರ ವ್ಯಾಪ್ತಿಯ ಯುವಜನರಿಗೆ ಉದ್ಯೋಗ ಕಲ್ಪಿಸುವುದು ಪ್ರವಾಸೋದ್ಯಮದ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ನೀಲನಕ್ಷೆಯನ್ನು ಹಾಕಿಕೊಂಡಿದ್ದೇನೆ.  ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ 371 (ಜೆ) ಕಲಂ ಅಡಿಯಲ್ಲಿ ಅನುಕೂಲ ಕಲ್ಪಿಸಿದ ರೀತಿಯಲ್ಲೇ ಚಾಮರಾಜನಗರ ಜಿಲ್ಲೆಯನ್ನೂ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಪಡುವೆ.

ಪ್ರ

ನಿಮ್ಮ ಎದುರಾಳಿಗಳಾದ ಸುನಿಲ್‌ ಬೋಸ್‌ ಮತ್ತು ಬಾಲರಾಜು ಅವರ ಬಗ್ಗೆ ಏನು ಹೇಳುತ್ತೀರಿ?

ಬೋಸ್‌ ಅವರಿಗೆ ಸಚಿವನ ಮಗ ಎಂಬುದು ಬಿಟ್ಟರೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೇರೆ ಯಾವ ಅರ್ಹತೆಯೂ ಇಲ್ಲ. ಬಾಲರಾಜು ಅವರು ಎಲ್ಲ ಪಕ್ಷಗಳಲ್ಲೂ ಇದ್ದವರು. ಇಬ್ಬರಿಗೂ ತತ್ವ ಸಿದ್ಧಾಂತಗಳಿಲ್ಲ. ನಾನು ಅಂಬೇಡ್ಕರ್‌ ತತ್ವ ಸಿದ್ಧಾಂತ ಸಂವಿಧಾನದಲ್ಲಿ ನಂಬಿಕೆ ಇಟ್ಟವನು. ಹೋರಾಟ ಜ್ಞಾನ ನೀರಾವರಿ ಕೃಷಿ ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿನ ತಜ್ಞತೆ ನನ್ನ ಬಲ. ಇವುಗಳು ನನ್ನ ಕೈ ಹಿಡಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT