ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಎಷ್ಟು ಜೈಲುಗಳಿವೆ ನೋಡುತ್ತೇನೆ: ಬಿಜೆಪಿ ವಿರುದ್ಧ ಮಮತಾ ಕಿಡಿ

Published 15 ಏಪ್ರಿಲ್ 2024, 12:57 IST
Last Updated 15 ಏಪ್ರಿಲ್ 2024, 12:57 IST
ಅಕ್ಷರ ಗಾತ್ರ

ಕೂಚ್‌ಬೆಹರ್‌/ಅಲಿಪುರ್‌ದೌರ್‌: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಬೆದರಿಕೆಯೊಡ್ಡುತ್ತಿದೆ. ಎಷ್ಟು ಜೈಲುಗಳಿವೆ ಎಂದು ನಾನೂ ನೋಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಗುಡುಗಿದ್ದಾರೆ.

ಅಲಿಪುರ್‌ದೌರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮಮತಾ, ಚುನಾವಣಾ ಆಯೋಗದ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

'ಆಯೋಗವು ಬಿಜೆಪಿಯ ಸೂಚನೆಯಂತೆ ಮುರ್ಷಿದಾಬಾದ್‌ನ ಡಿಐಜಿಯನ್ನು ಬದಲಿಸಿದೆ. ಮುರ್ಷಿದಾಬಾದ್‌ ಅಥವಾ ಮಾಲ್ಡಾದಲ್ಲಿ ಗಲಭೆ ನಡೆದರೆ, ಚುನಾವಣಾ ಆಯೋಗವೇ ಜವಾಬ್ದಾರಿ ಹೊರಬೇಕಾಗುತ್ತದೆ. ಗಲಭೆ, ಹಿಂಸಾಚಾರ ನಡೆಸುವುದಕ್ಕಾಗಿ ಬಿಜೆಪಿಯು ಪೊಲೀಸ್‌ ಅಧಿಕಾರಿಗಳ ಬದಲಾವಣೆ ಬಯಸುತ್ತಿದೆ. ಒಂದೇ ಒಂದು ಗಲಭೆ ನಡೆದರೂ, ಚುನಾವಣಾ ಆಯೋಗವೇ ಹೊಣೆಯಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

2006ರಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದನ್ನು ಉಲ್ಲೇಖಿಸಿ ಮಾತನಾಡಿರುವ ಅವರು, 'ನಾನು ರೈತರಿಗಾಗಿ (ಸಿಂಗುರ್‌ನಲ್ಲಿ ಭೂ ಸ್ವಾಧೀನದ ವಿರುದ್ಧ) 26 ದಿನ ಉಪವಾಸ ಸತ್ಯಾಗ್ರಹ ನಡೆಸಬಲ್ಲೆ ಎಂದಾದರೆ, ನಿಮ್ಮ (ಚುನಾವಣಾ ಆಯೋಗದ) ಕಚೇರಿ ಎದುರೂ 55 ದಿನ ಅದೇ ರೀತಿಯ ಹೋರಾಟ ಮಾಡಬಲ್ಲೆ' ಎಂದು ಗುಡುಗಿದ್ದಾರೆ.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ಮುಖ್ಯಸ್ಥರೂ ಆಗಿರುವ ಮಮತಾ, ಬಿಜೆಪಿಯು ವಿರೋಧ ಪಕ್ಷಗಳ ನಾಯಕರಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಕಿಡಿಕಾರಿದ್ದಾರೆ. 'ನಿಮ್ಮಲ್ಲಿ ಎಷ್ಟು ಜೈಲುಗಳಿವೆ? ಎಷ್ಟು ಪೊಲೀಸರನ್ನು ಹೊಂದಿದ್ದೀರಿ? ಎಷ್ಟು ಜನರನ್ನು ಥಳಿಸಬಲ್ಲಿರಿ? ಎಂಬುದನ್ನು ನಾನೂ ನೋಡುತ್ತೇನೆ. ನನ್ನ ಮೇಲೆ ಸಾಕಷ್ಟು ಸಲ ಹಲ್ಲೆ ನಡೆಸಲಾಗಿದೆ. ಹೇಗೆ ಹೋರಾಡಬೇಕು ಎಂಬುದು ಗೊತ್ತಿದೆ. ನಾನೇನು ಹೇಡಿಯಲ್ಲ' ಎಂದಿದ್ದಾರೆ.

ಅಲಿಪುರ್‌ದೌರಕ್ಕೆ ತೆರಳುವುದಕ್ಕೂ ಮುನ್ನ ಕೂಚ್‌ಬೆಹರ್‌ನಲ್ಲಿ ಮಾತನಾಡಿದ ಮಮತಾ, ತಮ್ಮ ಪಕ್ಷದ ನಾಯಕ ಅಭಿಷೇಕ್‌ ಬ್ಯಾನರ್ಜಿ ಅವರ ಹೆಲಿಕಾಪ್ಟರ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ಚುನಾವಣೆ ವೇಳೆ ಬಿಜೆಪಿ ನಾಯಕರು ಬಳಸುತ್ತಿರುವ ಹೆಲಿಕಾಪ್ಟರ್‌ಗಳನ್ನೂ ತಪಾಸಣೆಗೆ ಒಳಪಡಿಸಿ ಎಂದು ಐ.ಟಿ ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ.

ಚುನಾವಣಾ ಆಯೋಗವು ಮಾರ್ಚ್‌ 16ರಂದು ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಒಟ್ಟು ಏಳು ಹಂತಗಳಲ್ಲಿ ಕ್ರಮವಾಗಿ ಏಪ್ರಿಲ್‌ 19, ಏಪ್ರಿಲ್‌ 26, ಮೇ 7, ಮೇ 13, ಮೇ 20, ಮೇ 25 ಹಾಗೂ ಜೂನ್‌ 1ರಂದು ಮತದಾನ ನಡೆಯಲಿದೆ.

ಬಿಹಾರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ, ಏಳೂ ಹಂತಗಳಲ್ಲಿ ಮತದಾನಕ್ಕೆ ಸಾಕ್ಷಿಯಾಗಲಿವೆ. ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT