ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಕೂಟಕ್ಕೆ ಬಹುಮತ ಸಿಗಲಿದೆ: ಕಾಂಗ್ರೆಸ್

Published 31 ಮೇ 2024, 23:30 IST
Last Updated 31 ಮೇ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದ ಸಕಾರಾತ್ಮಕ ಪ್ರಚಾರ, ನ್ಯಾಯ ಗ್ಯಾರಂಟಿಗಳು ಮತ್ತು ಸಂವಿಧಾನ ರಕ್ಷಣೆಗೆ ಪ್ರಾಧಾನ್ಯತೆ ನೀಡುವ ಭರವಸೆಯಿಂದ ‘ಇಂಡಿಯಾ’ ಕೂಟವು ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಕಾಂಗ್ರೆಸ್ ಶುಕ್ರವಾರ ಪ್ರತಿಪಾದಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮಾಧ್ಯಮ ಉಸ್ತುವಾರಿ ಪವನ್ ಖೇರಾ, ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೆತ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಇದೇ ವೇಳೆ ಪ್ರಧಾನಿ ಮೋದಿ ಅವರಿಗೆ ಕಳೆದ 72 ದಿನಗಳಲ್ಲಿ ಪಕ್ಷವು ಕೇಳಿದ್ದ 272 ಪ್ರಶ್ನೆಗಳನ್ನು ಸಂಕಲಿಸಿ ಪ್ರಕಟಿಸಲಾಗಿರುವ ‘72 ದಿನ, 272 ಪ್ರಶ್ನೆ, 0 ಉತ್ತರ, ಭಾಗ್ ಮೋದಿ ಭಾಗ್’ ಎನ್ನುವ ಕಿರುಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

‘ಜನವರಿ 23ರಂದು ರಾಹುಲ್ ಗಾಂಧಿ ಅವರು ಗುವಾಹಟಿಯಲ್ಲಿ ಮೊದಲ ಬಾರಿಗೆ ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ ನ್ಯಾಯ, ಭಾಗೀದಾರರ ನ್ಯಾಯ ಎಂಬ ಐದು ನ್ಯಾಯಗಳನ್ನು ಘೋಷಿಸಿದ್ದರು. ಅವರು ಪ್ರಚಾರ ಸಭೆಗಳಿಗೆ ಸಂವಿಧಾನದ ಪ್ರತಿಯನ್ನು ಕೊಂಡೊಯ್ಯುತ್ತಿದ್ದರು. ಸಾಮಾಜಿಕ ನ್ಯಾಯ ರಕ್ಷಿಸುವ, ಜಾತಿ ಗಣತಿ ಮಾಡಿಸುವ ಮತ್ತು ಮೀಸಲಾತಿ ಮೇಲಿನ ಶೇ 50ರ ಮಿತಿಯನ್ನು ತೆಗೆದುಹಾಕುವ ಗ್ಯಾರಂಟಿ ನೀಡಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಅವರ ಪ್ರಯತ್ನದಿಂದಾಗಿ ನಾವು ಸ್ಪಷ್ಟ ಬಹುಮತ ಪಡೆಯಲಿದ್ದೇವೆ’ ಎಂದು ಜೈರಾಮ್ ರಮೇಶ್ ತಿಳಿಸಿದರು.

‘ಪ್ರಧಾನಿ ಮೋದಿ ವಿರುದ್ಧ 14 ದೂರು ಸೇರಿದಂತೆ ಬಿಜೆಪಿ ವಿರುದ್ಧ ಹಲವು ದೂರುಗಳನ್ನು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ನಾವು ಆಯೋಗವನ್ನು ಗೌರವಿಸುತ್ತೇವೆ. ಆದರೆ, ನೋವಿನ ವಿಚಾರವೆಂದರೆ, ಪ್ರಚಾರದ ವೇಳೆ ಪಕ್ಷಪಾತ ಧೋರಣೆ ಅನುಸರಿಸಲಾಯಿತು’ ಎಂದು ಹೇಳಿದರು.

‘ಮೋದಿ ಅವರ ಪ್ರಚಾರ ತಂತ್ರಗಳನ್ನು ಕಾಂಗ್ರೆಸ್ ವಿಫಲಗೊಳಿಸಿತು. ತಮ್ಮ ಸರ್ಕಾರದ ಸಾಧನೆ ಏನು ಅನ್ನುವುದನ್ನು ಅವರು ದೇಶಕ್ಕೆ ಹೇಳಲೇ ಇಲ್ಲ’ ಎಂದು ಪವನ್ ಖೇರಾ ತಿಳಿಸಿದರು. 

‘ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಪ್ರಚಾರ ಪುನರಾವರ್ತಿತವಾಗಿತ್ತು. ಅದರಲ್ಲಿ ಯುವಜನತೆಯನ್ನು ಆಕರ್ಷಿಸುವಂಥದ್ದೇನೂ ಇರಲಿಲ್ಲ. ಕಾಂಗ್ರೆಸ್, ಯುವಜನತೆಯನ್ನು ಆಕರ್ಷಿಸುವಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ’ ಎಂದು ಸುಪ್ರಿಯಾ ಶ್ರೀನೆತ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT