ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಹಾದಿಗಳಿಂದ ಕಾಂಗ್ರೆಸ್‌ಗೆ ಬೆಂಬಲ; ಇಂಡಿ ಜಮಾತ್ ನನ್ನ ನಿಂದಿಸುತ್ತಿದೆ: ಮೋದಿ

ಉತ್ತರ ಪ್ರದೇಶದಲ್ಲಿ ರ್‍ಯಾಲಿ ನಡೆಸಿ ‘ಇಂಡಿಯಾ’ ಕೂಟದ ವಿರುದ್ಧ ವಾಗ್ದಾಳಿ
Published 26 ಮೇ 2024, 16:08 IST
Last Updated 26 ಮೇ 2024, 16:08 IST
ಅಕ್ಷರ ಗಾತ್ರ

ಘೋಸಿ/ದಿಯೋರಿಯ/ಮಿರ್ಜಾಪುರ: ‘ಇಂಡಿಯಾ’ ಕೂಟವು ದೇಶದ ಬಹುಸಂಖ್ಯಾತ ಸಮುದಾಯವನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಪರಿವರ್ತಿಸಲು ಹೊರಟಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಗಡಿಗಳುದ್ದಕ್ಕೂ ಜಿಹಾದಿಗಳು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿರುವುದಕ್ಕಾಗಿ ‘ಇಂಡಿ’ ಜಮಾತ್ ನನ್ನನ್ನು ನಿಂದಿಸುತ್ತಿದೆ’ ಎಂದು ಹೇಳಿದರು.

ಉತ್ತರ ಪ್ರದೇಶದ ಪೂರ್ವಾಂಚಲದ ವಿವಿಧ ಭಾಗಗಳಲ್ಲಿ ರ್‍ಯಾಲಿ ನಡೆಸಿದ ಅವರು, ‘ಇಂಡಿ’ ಕೂಟದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ಗಾಗಿ ಪಾಕಿಸ್ತಾನದಲ್ಲಿ ಪ್ರಾರ್ಥನೆ ಮಾಡಲಾಗುತ್ತಿದೆ. ಜಿಹಾದಿಗಳು ಅವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಎಸ್‌ಪಿ ಮತ ಜಿಹಾದ್‌ಗಾಗಿ ಕರೆ ನೀಡುತ್ತಿವೆ’ ಎಂದು ಪ್ರತಿಪಾದಿಸಿದರು.

‘ಮೊದಲನೆಯದಾಗಿ, ‘ಇಂಡಿ’ ಕೂಟದವರು ಧರ್ಮದ ಆಧಾರದಲ್ಲಿ ಮೀಸಲಾತಿ ತರಲು ಸಂವಿಧಾನವನ್ನು ಬದಲಿಸುತ್ತಾರೆ. ಎರಡನೆಯದಾಗಿ ಎಸ್‌ಸಿ, ಎಸ್‌ಟಿ, ಒಬಿಸಿಗೆ ನೀಡಿದ ಮೀಸಲಾತಿ ಅಂತ್ಯ ಮಾಡುತ್ತಾರೆ. ಮೂರನೆಯದಾಗಿ, ಇಡೀ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುತ್ತಾರೆ’ ಎಂದರು.

‘ಎಸ್‌‍ಪಿ ಸರ್ಕಾರವು ಬಂಧಿತ ಉಗ್ರರನ್ನು ಬಿಡುಗಡೆ ಮಾಡುತ್ತಿತ್ತು ಮತ್ತು ಉಗ್ರರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುತ್ತಿತ್ತು. ಅವರು ಪೂರ್ವಾಂಚಲವನ್ನು ಹಿಂದುಳಿದ ಪ್ರದೇಶವನ್ನಾಗಿಯೇ ಉಳಿಸುವ ಕುತಂತ್ರ ಮಾಡಿದರು’ ಎಂದು ಆರೋಪಿಸಿದರು.

ಮೋದಿ ಮಾತು...

* ಎಸ್‌ಪಿ ಆಡಳಿತದ ಅವಧಿಯಲ್ಲಿ ಸರ್ಕಾರಿ ಜಾಗದಲ್ಲಿ ಮಾಫಿಯಾಗಳು ಬಂಗಲೆಗಳನ್ನು ನಿರ್ಮಿಸಿದ್ದವು. ಯೋಗಿ ಆದಿತ್ಯನಾಥ ಬಂದ ನಂತರ ಮಾಫಿಯಾಗಳ ‘ಅಚ್ಛೇ ದಿನ’ ಹೋಯಿತು. ಅವರ ಬಂಗಲೆಗಳ ಜಾಗದಲ್ಲಿ ಬಡವರ ಮನೆಗಳು ನಿರ್ಮಾಣವಾದವು. ಇದು ಬಿಜೆಪಿ ಮತ್ತು ‘ಇಂಡಿಯಾ’ ಕೂಟದ ನಡುವಿನ ವ್ಯತ್ಯಾಸ.

* ಅನೇಕ ದೇಶಗಳು ‘ಬ್ರಹ್ಮೋಸ್’ ಅನ್ನು ಖರೀದಿ ಮಾಡಲು ಮುಂದೆ ಬಂದವು. ಆದರೆ, ಕಾಂಗ್ರೆಸ್ ಸರ್ಕಾರ ಅದಕ್ಕೆ ಅಡ್ಡಿಪಡಿಸಿತು. ಉತ್ತರ ಪ್ರದೇಶದಲ್ಲಿ ‘ಬ್ರಹ್ಮೋಸ್’ ಕ್ಷಿಪಣಿಗಳನ್ನು ನಿರ್ಮಿಸುವ ದಿನಗಳು ದೂರವಿಲ್ಲ.

* 2014ಕ್ಕೆ ಮುಂಚೆ ಕಾಂಗ್ರೆಸ್ ರಾತ್ರೋರಾತ್ರಿ ಕಾನೂನನ್ನು ಬದಲಿಸಿ, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಘೋಷಿಸಿತು. ಅದಕ್ಕೂ ಹಿಂದೆ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು ಪಡೆಯುತ್ತಿದ್ದ ಮೀಸಲಾತಿ ಸಂಪೂರ್ಣ ಅಂತ್ಯಗೊಂಡಿತು, ಮುಸ್ಲಿಮರಿಗೆ ಮೀಸಲಾತಿ ಸಿಕ್ಕಿತು.

* ಅವರು ಮೋದಿ ವಿರುದ್ಧ ಮತ ಜಿಹಾದ್‌ನ ಫತ್ವಾ ಹೊರಡಿಸುತ್ತಿದ್ದಾರೆ. ಆದರೆ, ಎಲ್ಲಿಯವರೆಗೆ ಮೋದಿಗೆ ದೇಶದ ತಾಯಂದಿರ, ಸೋದರಿಯರ ಮತ್ತು ನಿಮ್ಮೆಲ್ಲರ ರಕ್ಷಣೆ ಇರುತ್ತದೆಯೋ, ಅಲ್ಲಿಯವರೆಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ.

‘ಸಮೃದ್ಧಿ ಕಾಣುತ್ತಿಲ್ಲ ಏಕೆ’

ಫತೇಗಢ: ದೇಶದ ಆರ್ಥಿಕತೆಯು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ನಿಜವಾಗಿದ್ದರೆ, ಜನರ ಬದುಕು ಏಕೆ ಸಮೃದ್ಧಿಯಿಂದ ಕೂಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದರು.

ಪಂಜಾಬ್‌ನಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು, ‘ಪ್ರಧಾನಿ ಮೋದಿ ಅವರು ಅಧಿಕಾರ ಹಿಡಿಯಲು ಸುಳ್ಳು ಹೇಳುತ್ತಿದ್ದಾರೆ ಮತ್ತು ಪೊಳ್ಳು ಭರವಸೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇಶದ 70 ಕೋಟಿ ಯುವಜನತೆಯು ನಿರುದ್ಯೋಗಿಯಾಗಿದ್ದು, 45 ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ಇದೆ. ಮೋದಿ ಆಡಳಿತದಲ್ಲಿ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ’ ಎಂದು ವಾಗ್ದಾಳಿ ನಡೆಸಿದರು.

‘ಹಣದುಬ್ಬರವು ವಿಪರೀತ ಏರಿಕೆ ಆಗಿರುವುದು ಏಕೆ? ದೇಶವು ತ್ವರಿತಗತಿಯಲ್ಲಿ ಅಭಿವೃದ್ಧಿ ಆಗುತ್ತಿದ್ದರೆ, ಉಕ್ಕಿನ ಘಟಕಗಳು ಏಕೆ ಬಾಗಿಲು ಮುಚ್ಚುತ್ತಿವೆ? ಜಿಎಸ್‌ಟಿ ಹೇರಿಕೆಯಿಂದ ಉದ್ಯಮ ವಲಯಕ್ಕೆ ಪೆಟ್ಟು ಬಿದ್ದಿದ್ದು ಏಕೆ? ಮಧ್ಯಮ ವರ್ಗಕ್ಕೆ ಒಂದೂ ಯೋಜನೆ ಇಲ್ಲ ಏಕೆ’ ಎಂದು ಪ್ರಶ್ನಿಸಿದ್ದಾರೆ.

‘ಅಭಿವೃದ್ಧಿ ಎನ್ನುವುದನ್ನು ಕೇವಲ ಟಿವಿಗಳಲ್ಲಿ ಮಾತ್ರ ನೋಡುತ್ತಿದ್ದು, ವಾಸ್ತವದಲ್ಲಿ ಜನರ ಜೀವನ ಪ್ರಗತಿ ಹೊಂದುತ್ತಿಲ್ಲ’ ಎಂದು ಪ್ರತಿಪಾದಿಸಿದರು.

‘ಆತ್ಮವಿಶ್ವಾಸ ಕಳೆದುಕೊಂಡ ಮೋದಿ’

ಬಲಿಯಾ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮವಿಶ್ವಾಸ ಕಳೆದುಕೊಂಡಿದ್ದು, ಬಿಜೆಪಿಯು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಅರಿತಿರುವುದರಿಂದ ಭಾಷಣ ಮಾಡುವಾಗ ಎಡವುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಭಾನುವಾರ ಹೇಳಿದರು.

ಸಲೇಂಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿ ರಾಮ್‌ ಶಂಕರ್‌ ವಿದ್ಯಾರ್ಥಿ ಪರ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ‘ಇಂಡಿಯಾ’ ಒಕ್ಕೂಟ ಸರ್ಕಾರ ರಚಿಸಲಿದೆ ಮತ್ತು ಜೂನ್ 4ರ ನಂತರ ಕೇಂದ್ರ ಸಂಪುಟ ಮತ್ತು ಮಾಧ್ಯಮಗಳು ಬದಲಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಇಂಡಿಯಾ’ ಸರ್ಕಾರ ರಚನೆಯಾದರೆ ‘ಅಗ್ನಿವೀರ್‌’ ಯೋಜನೆಯನ್ನು ರದ್ದುಗೊಳಿಸುವುದಾಗಿ ಪುನರುಚ್ಚರಿಸಿದರು. ‘ಮೋದಿ ಸರ್ಕಾರವು ಉದ್ಯಮಿಗಳ ₹25 ಲಕ್ಷ ಕೋಟಿಯ ಸಾಲ ಮನ್ನಾ ಮಾಡಿದೆ. ‘ಇಂಡಿಯಾ’ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡಲಿದೆ ಮತ್ತು ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡಲಿದೆ’ ಎಂದು ಅಖಿಲೇಶ್‌ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT