ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ವೃಂದಾವನದ ವಿಧವೆಯರಿಗೆ ಮತದಾನದ ಹಕ್ಕೂ ಇಲ್ಲ

ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ನೊಂದ ಜೀವಗಳತ್ತ ನೋಡುವವರಿಲ್ಲ
Published 23 ಏಪ್ರಿಲ್ 2024, 20:24 IST
Last Updated 23 ಏಪ್ರಿಲ್ 2024, 20:24 IST
ಅಕ್ಷರ ಗಾತ್ರ

ವೃಂದಾವನ: ದೇಶದಾದ್ಯಂತ ಲೋಕಸಭಾ ಚುನಾವಣೆಯ ಗದ್ದಲ, ಚುನಾವಣಾ ಪ್ರಚಾರದ ಅಬ್ಬರ ಕೇಳಿಬರುತ್ತಿದ್ದರೂ ವೃಂದಾವನದಲ್ಲಿ ಮಾತ್ರ ಮೌನ ಆವರಿಸಿದೆ. ಕನಿಷ್ಠ ಮತದಾರರ ಗುರುತಿನ ಚೀಟಿಯೂ ಇಲ್ಲದಿರುವ ವೃಂದಾವನದ ಸಾವಿರಾರು ವಿಧವೆಯರು ಚುನಾವಣೆಯ ಕಾಲದಲ್ಲಿಯೂ ಅಂಚಿನಲ್ಲೇ ಉಳಿದಿದ್ದಾರೆ.

ತಮ್ಮ ಮನೆ ಮಂದಿಗೆ ಬೇಡವಾಗಿರುವ, ಗಂಡ ಸತ್ತ 60, 70 ವರ್ಷ ವಯಸ್ಸಿನ ಮಹಿಳೆಯರು ದೇವಾಲಯಗಳ ನಗರಿಯಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗಾಗಿ ಯಾವ ಪಕ್ಷವೂ ಯಾವ ಭರವಸೆ ಹೊತ್ತುತಂದಿಲ್ಲ. ಬಹುತೇಕರು ಇದು ತಮ್ಮ ಹಣೆಬರಹ ಎಂದುಕೊಂಡು ಸುಮ್ಮನಾದರೆ, ಕೆಲವರು ಹೋರಾಡುವುದೂ ಉಂಟು.

‘ಕೋಲ್ಕತ್ತದಲ್ಲಿದ್ದಾಗ ನಾನು ಪ್ರತಿಯೊಂದು ಚುನಾವಣೆಯಲ್ಲಿಯೂ ಮತದಾನ ಮಾಡಿದ್ದೇನೆ. ನಾನು ಈ ದೇಶದ ಪ್ರಜೆಯಾಗಿದ್ದು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂಬ ಬಯಕೆ ಇದೆ. ಬಹುಶಃ ಅದು ಈಗ ಸಾಧ್ಯವಿಲ್ಲ. ಅದಕ್ಕಾಗಿ ದುಃಖಿಸುವುದರಲ್ಲಿ ಏನು ಅರ್ಥವಿದೆ’ ಎಂದು ರಾಜಕೀಯ ತಿಳಿವಳಿಕೆ ಇರುವ 67 ವರ್ಷದ ಗಾಯತ್ರಿ ಹೇಳುತ್ತಾರೆ.

ತಮ್ಮ ಕುಟುಂಬದಿಂದ ದೂರ ಉಳಿಯಬೇಕಾಗಿರುವ ಅನಿತಾ ದಾಸ್ ಅವರಿಗೂ ಇದು ಚುನಾವಣೆಯ ಕಾಲ ಎಂದು ಗೊತ್ತಿದೆ. ಆದರೆ, ತಮ್ಮಂಥ ಮಹಿಳೆಯರಿಗೆ ಅದರಿಂದ ಏನಾಗಬೇಕಿದೆ ಎನ್ನುವ ನಿರ್ಲಿಪ್ತ ಸ್ಥಿತಿಗೆ ಅವರು ತಲುಪಿದ್ದಾರೆ.

ತಮ್ಮ ಪತಿಯ ಸಾವಿನ ನಂತರ ವೃಂದಾವನಕ್ಕೆ ಬಂದ ಅನಿತಾ ಅವರು, 17 ವರ್ಷಗಳ ವೈಧವ್ಯವನ್ನು ಮಥುರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವೃಂದಾವನದ ಬೀದಿಗಳಲ್ಲಿಯೇ ಕಳೆದಿದ್ದಾರೆ. 

ಬಿಳಿಯ ಸೀರೆ ಉಟ್ಟು ಭಿಕ್ಷೆ ಬೇಡುತ್ತಾ, ದೇವಾಲಯಗಳ ಹೊರಗೆ ‘ಭಂಡಾರ’ಕ್ಕಾಗಿ (ಉಚಿತ ಊಟ) ಕಾಯುತ್ತಾ ಅಥವಾ ಕೇವಲ ₹10ಕ್ಕಾಗಿ ಗಂಟೆಗಟ್ಟಲೆ ಭಜನೆಗಳನ್ನು ಹಾಡುತ್ತಾ ಬದುಕು ಸವೆಸುತ್ತಿರುವ ವಿಧವೆಯರ ಕತೆಗಳು ವೃಂದಾವನದ ಕಿರಿದಾದ ರಸ್ತೆಗಳಲ್ಲಿ, ರಾಧಾಕುಂಡ್ ಮತ್ತು ಗೋವರ್ಧನ ಪ್ರದೇಶಗಳ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸುತ್ತಿವೆ.

ದೇವಾಲಯಗಳ ನಗರಿಯಿಂದ ದೂರ ಹೋಗಲು ಇವರು ಸಿದ್ಧರಿಲ್ಲ. ಏಕೆಂದರೆ, ಅದರಿಂದ ಅವರ ಪ್ರತಿದಿನದ ಕೃಷ್ಣ ದರ್ಶನಕ್ಕೆ ಮತ್ತು ಭಜನೆಗಳನ್ನು ಹಾಡುವುದಕ್ಕೆ ತೊಂದರೆಯಾಗುತ್ತದೆ. 

‘ನಮಗೆ ಅವರ ಬಗ್ಗೆ ಕಾಳಜಿ ಇದೆ. ಅದಕ್ಕಾಗಿಯೇ ಅವರಿಗಾಗಿ ಆಧುನಿಕ ಸೌಲಭ್ಯಗಳೊಂದಿಗೆ 2018ರಲ್ಲಿ ಕೃಷ್ಣ ಕುಟೀರ ನಿರ್ಮಿಸಿದೆವು. ಆದರೆ, ಅಲ್ಲಿ ಉಳಿಯುವಂತೆ ಅವರ ಮನ ಒಲಿಸುವುದು ಕಷ್ಟ. ತಾವು ಎಲ್ಲಿದ್ದೇವೋ ಅಲ್ಲೇ ವಾಸ ಮಾಡುತ್ತೇವೆ ಎನ್ನುವುದು ಅವರ ನಿಲುವು. ನಾವೇನು ಮಾಡಲು ಸಾಧ್ಯ’ ಎನ್ನುತ್ತಾರೆ ಮಥುರಾದ ಎರಡು ಬಾರಿಯ ಸಂಸದೆ, ಬಿಜೆಪಿ ಅಭ್ಯರ್ಥಿ ಹೇಮಾಮಾಲಿನಿ.

ಕೆಲವರು ಖಾಸಗಿ ಅಥವಾ ಸರ್ಕಾರಿ ಆಶ್ರಮಗಳಲ್ಲಿ ವಾಸ ಮಾಡುತ್ತಾರೆ. ಹೆಚ್ಚಿನವರು ಇಕ್ಕಟ್ಟಾದ ಕೊಳಕು ಬಾಡಿಗೆ ಕೊಠಡಿಗಳಲ್ಲಿ ಆಶ್ರಯ ಪಡೆದಿದ್ದಾರೆ. ದೇವಾಲಯಗಳ ನಗರಿಯಲ್ಲಿ ಭಜನೆಗಳನ್ನು ಹಾಡಲು ಅವರು ಟೋಕನ್ ಪಡೆಯುತ್ತಾರೆ. ನಾಲ್ಕು ಗಂಟೆ ಹಾಡಿದರೆ ಅವರಿಗೆ ಊಟ, ಟೀ ಜತೆಗೆ ₹10 ಸಿಗುತ್ತದೆ. ಭಜನೆ ಹಾಡಲು ತಮ್ಮ ಸರದಿಗಾಗಿ ಅವರು ತುಂಬಾ ಸಮಯ ಕಾಯಬೇಕಾಗುತ್ತದೆ.

ಚುನಾವಣೆಯ ಕಾಲದಲ್ಲಿಯೂ ಏಕಾಂಗಿಯಾಗಿ ಜೀವಿಸುತ್ತಿರುವ ವೃಂದಾವನದ ವಿಧವೆಯರು, ಹಾಗೆ ಬದುಕುವುದು ಮತ್ತು ಇಲ್ಲಿನ ಬೀದಿಗಳಲ್ಲಿ ಅನಾಮಿಕವಾಗಿ ಸಾಯುವುದು ತಮ್ಮ ಹಣೆಬರಹ ಎಂದೇ ಭಾವಿಸಿದ್ದಾರೆ.

ಅಧಿಕೃತ ಸಂಖ್ಯೆಯೇ ಗೊತ್ತಿಲ್ಲ

18 ಲಕ್ಷ ಮತದಾರರಿರುವ ಮಥುರಾ ಕ್ಷೇತ್ರದಲ್ಲಿ ವೃಂದಾವನದ ವಿಧವೆಯರ ಸಂಖ್ಯೆ ಶೇ ಒಂದಕ್ಕಿಂತಲೂ ಕಡಿಮೆ. ಸರ್ಕಾರೇತರ ಸಂಸ್ಥೆಗಳ ಪ್ರಕಾರ, ಅವರ ಸಂಖ್ಯೆ 10 ಸಾವಿರದಿಂದ 12 ಸಾವಿರ ಇದೆ. ಅವರ ಪೈಕಿ ಹೆಚ್ಚಿನವರು ಪಶ್ಚಿಮ ಬಂಗಾಳದವರು. 

2007ರ ನಂತರ ಇವರ ಗಣತಿಯನ್ನೇ ಮಾಡಿಲ್ಲ ಎಂದು ಮೈತ್ರಿ ವಿಧವಾ ಆಶ್ರಮದ ಸಹ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ವಿನ್ನಿ ಸಿಂಗ್ ಹೇಳುತ್ತಾರೆ.

‘ಬಂಗಾಳದಿಂದಲ್ಲದೇ ಈಗ ಮಹಾರಾಷ್ಟ್ರ, ಗುಜರಾತ್, ಛತ್ತೀಸಗಢ, ಮಧ್ಯಪ್ರದೇಶ ರಾಜ್ಯಗಳಿಂದಲೂ ಇಲ್ಲಿಗೆ ಮಹಿಳೆಯರು ಬರುತ್ತಾರೆ. ನಾವು 400 ಮಂದಿಯ ಆರೈಕೆ ಮಾಡುತ್ತೇವೆ. ಆದರೆ, ಹೆಚ್ಚಿನವರು ಬೀದಿಗಳಲ್ಲಿಯೇ ಬದುಕುತ್ತಿದ್ದಾರೆ. ಅವರಿಗೆ ಮತದಾರರ ಚೀಟಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದೂ ಅಲೆದೂ ನಮಗೆ ಸಾಕಾಗಿ ಹೋಗಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT