ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ’ ಗೆಲ್ಲಲು ‘ಕೈ’ ನ್ಯಾಯಪತ್ರ

ಮೀಸಲಾತಿ ಮಿತಿ ರದ್ದತಿಗೆ ತಿದ್ದುಪಡಿ, ಕನಿಷ್ಠ ಕೂಲಿ ₹400ಕ್ಕೆ ಏರಿಕೆ ಸೇರಿ ಹಲವು ಭರವಸೆಗಳು
Published 5 ಏಪ್ರಿಲ್ 2024, 23:44 IST
Last Updated 5 ಏಪ್ರಿಲ್ 2024, 23:44 IST
ಅಕ್ಷರ ಗಾತ್ರ

ನವದೆಹಲಿ: ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಎರಡಂಕಿ ಗಳಿಸಲು ಏದುಸಿರು ಬಿಟ್ಟಿದ್ದ ಕಾಂಗ್ರೆಸ್‌ ಪಕ್ಷವು ಈ ಸಲ ಮೂರಂಕಿಗೆ ತಲುಪುವ ಕನಸು ಹೊತ್ತು ‘ನ್ಯಾಯ ಪತ್ರ’ವನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಮೀಸಲಾತಿಯ ಶೇ 50 ಮಿತಿ ತೆಗೆಯಲು ಸಾಂವಿಧಾನಿಕ ತಿದ್ದುಪಡಿ, ಆರ್ಥಿಕವಾಗಿ ಹಿಂದುಳಿದವರ ಶೇ 10 ಮೀಸಲಾತಿಯನ್ನು ಎಲ್ಲ ಜಾತಿಗಳಿಗೆ ವಿಸ್ತರಣೆ, ಕನಿಷ್ಠ ಕೂಲಿ ₹400ಕ್ಕೆ ಏರಿಕೆ, ವಿದ್ಯಾರ್ಥಿಗಳ ಸಾಲ ಮನ್ನಾ, ಸಾರ್ವಜನಿಕ ವಲಯದಲ್ಲಿ ಗುತ್ತಿಗೆ ಉದ್ಯೋಗ ರದ್ದುಪಡಿಸುವಂತಹ ಆಮೂಲಾಗ್ರ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ. 

ತನ್ನ ಪ್ರಣಾಳಿಕೆಗೆ ನ್ಯಾಯ ಪತ್ರ ಎಂದು ಹೆಸರಿಟ್ಟಿರುವ ಕಾಂಗ್ರೆಸ್‌, 25 ಗ್ಯಾರಂಟಿಗಳನ್ನು ಘೋಷಿಸಿದೆ. ಐದು ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿ ಭರಪೂರ ಭರವಸೆಗಳನ್ನು ನೀಡಿದೆ. ‘ಪಂಚ ನ್ಯಾಯಗಳು’ ಅಥವಾ ‘ನ್ಯಾಯದ ಸ್ತಂಭಗಳು’ ಮೂಲಕ ಯುವಜನರು, ಕೃಷಿಕರು, ಮಹಿಳೆಯರು, ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿ ಹೆಚ್ಚಿನ ಸ್ವಾತಂತ್ರ್ಯ, ವೇಗದ ಬೆಳವಣಿಗೆ, ಸಮಾನ ಅಭಿವೃದ್ಧಿ ಹಾಗೂ ಎಲ್ಲರಿಗೂ ನ್ಯಾಯ ಒದಗಿಸುವತ್ತ ಗಮನ ಹರಿಸಿದೆ. 

ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರು 48 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಹಾಗೂ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಪಿ.ಚಿದಂಬರಂ ಹಾಜರಿದ್ದರು. ಈ ಹಿಂದೆ ರಾಹುಲ್‌ ಗಾಂಧಿ ಅವರ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ ಸಂದರ್ಭದಲ್ಲಿ ಘೋಷಿಸಿದ ಗ್ಯಾರಂಟಿಗಳು ಸಹ ಪ್ರಣಾಳಿಕೆಯ ಭಾಗವಾಗಿವೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹತ್ತಯ ವರ್ಷಗಳ ಆಡಳಿತದ ವಿರುದ್ಧ ದೋಷಾರೋಪಣೆ ಹೊರಿಸಿರುವ ‘ಕೈ’ ಪಾಳಯವು, ಅಧಿಕಾರಕ್ಕೆ ಬಂದ ಬಳಿಕ ಪಕ್ಷವು ಏನೆಲ್ಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಪ್ರಣಾಳಿಕೆಯಲ್ಲಿ ತಿಳಿಸಿದೆ. ‘ಇದು ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ಬಡವರು ಮತ್ತು ವಂಚಿತ ವರ್ಗಗಳಿಗೆ ಅಭಿವೃದ್ಧಿಯ ಮುಚ್ಚಿದ ಬಾಗಿಲುಗಳನ್ನು ತೆರೆಯಲಿದೆ’ ಎಂದು ಖರ್ಗೆ ಪ್ರತಿಪಾದಿಸಿದರು.

ಬಿಜೆಪಿಯ ನೆಚ್ಚಿನ ಯೋಜನೆಯಾದ ‘ಒಂದು ರಾಷ್ಟ್ರ– ಒಂದು ಚುನಾವಣೆ’ಯನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ಅನುಗುಣವಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ. ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳ ನಾಯಕರು ದೊಡ್ಡ ಪ್ರಮಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ವಲಸೆ ಹೋಗಿದ್ದಾರೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಇತರ ಪಕ್ಷಗಳಿಗೆ ಪಕ್ಷಾಂತರ ಮಾಡುವ ಶಾಸಕರನ್ನು ಸ್ವಯಂಚಾಲಿತವಾಗಿ ಅನರ್ಹಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವುದಾಗಿ ಕಾಂಗ್ರೆಸ್‌ ಅಭಯ ನೀಡಿದೆ. 

ಪ್ರಣಾಳಿಕೆಯಲ್ಲಿ ವಿವರಿಸಿರುವ ಆರ್ಥಿಕ ತತ್ವವು ‘ಕೆಲಸ, ಸಂಪತ್ತು ಮತ್ತು ಕಲ್ಯಾಣ’ವನ್ನು ಆಧರಿಸಿದೆ. ಇದು ಉದ್ಯೋಗ ಒದಗಿಸುವುದು, ಸಂಪತ್ತು ಸೃಷ್ಟಿ ಹಾಗೂ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಗಮನ ಕೇಂದ್ರೀಕರಿಸಿದೆ. 

ದೇಶದಲ್ಲಿ ಹೆಚ್ಚುತ್ತಿರುವ ಬಲ-ಪಂಥೀಯ ಪ್ರವೃತ್ತಿಯನ್ನು ಕಟುವಾಗಿ ಟೀಕಿಸಿರುವ ಪ್ರಣಾಳಿಕೆ, ‘ನ್ಯಾಯಪತ್ರವು ಜನರಿಗೆ ಭಯದಿಂದ ಮುಕ್ತಿ, ಆಹಾರ ಮತ್ತು ಉಡುಪು, ಪ್ರೀತಿ, ವಿವಾಹ, ಪ್ರಯಾಣ ಮತ್ತು ದೇಶದ ಯಾವುದೇ ಭಾಗದಲ್ಲಿ ನೆಲೆಸುವಂತಹ ವೈಯಕ್ತಿಕ ಆಯ್ಕೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ವಾಗ್ದಾನ ನೀಡುತ್ತದೆ’ ಎಂದಿದೆ.

ವಿರೋಧ ಪಕ್ಷಗಳ ನಾಯಕರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ಮುಗಿ ಬಿದ್ದಿರುವುದನ್ನು ಬಿಜೆಪಿ ಪ್ರಾಯೋಜಿತ ಎಂದು ಬಣ್ಣಿಸಿರುವ ಪಕ್ಷವು, ಕಾನೂನಿನ ದುರ್ಬಳಕೆ, ಅನಿಯಂತ್ರಿತ ಶೋಧಗಳು, ನಿರಂಕುಶ ಬಂಧನಗಳನ್ನು ಕೊನೆಗೊಳಿಸುವುದಾಗಿ ಅಭಯ ನೀಡಿದೆ. 

ನ್ಯಾಯಾಧೀಶರು, ಸರ್ಕಾರದ ಕಾರ್ಯದರ್ಶಿಗಳು, ಉನ್ನತ ಶ್ರೇಣಿಯ ಪೊಲೀಸ್‌ ಅಧಿಕಾರಿಗಳು, ಕಾನೂನು ಅಧಿಕಾರಿಗಳು, ಕಂಪನಿಗಳ ನಿರ್ದೇಶಕ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ನೇಮಕ ಮಾಡುವ ಭರವಸೆ ನೀಡಿದೆ. ಮಹಿಳಾ ಮತಗಳ ಮೇಲೆ ಕಣ್ಣಿಟ್ಟು ಪ್ರಣಾಳಿಕೆಯಲ್ಲಿ ಹಲವು ಮಹಿಳಾ ಪರ ಘೋಷಣೆಗಳನ್ನು ಮಾಡಲಾಗಿದೆ. ಹೆಚ್ಚಿನ ಸಂಸದೀಯ ಪರಿಶೀಲನೆ ಹಾಗೂ ಚರ್ಚೆ ನಡೆಸದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಎಲ್ಲ ‘ಜನವಿರೋಧಿ’ ಕಾನೂನುಗಳನ್ನು ಆಮೂಲಾಗ್ರವಾಗಿ ಪರಿಶೀಲನೆ ನಡೆಸಿ ಬದಲಾಯಿಸಲಾಗುವುದು ಎಂದು ಪಕ್ಷ ತಿಳಿಸಿದೆ. 

ಪ್ರಣಾಳಿಕೆಯಲ್ಲಿರುವ ಹಲವಾರು ವಾಗ್ದಾನಗಳು ‘ಉದಯಪುರ ಚಿಂತನ ಶಿಬಿರ– 2022’ ಹಾಗೂ ‘ರಾಯಪುರ ಸಭೆ– 2023’ರ ನಂತರ ಪಕ್ಷ ತೆಗೆದುಕೊಂಡ ನಿರ್ಣಯಗಳು ಹಾಗೂ ಘೋಷಣೆಗಳ ಪುನರಾವರ್ತನೆಯಾಗಿದೆ. 

ಜಾತಿ ಗಣತಿಯಿಂದ ಮಹಾಲಕ್ಷ್ಮಿ ತನಕ

*ಜಾತಿಗಳು ಹಾಗೂ ಉಪ ಜಾತಿಗಳ ಸಾಮಾಜಿಕ– ಆರ್ಥಿಕ ಪರಿಸ್ಥಿತಿ ಅರಿಯಲು ರಾಷ್ಟ್ರವ್ಯಾಪಿ ಸಾಮಾಜಿಕ– ಆರ್ಥಿಕ ಮತ್ತು ಜಾತಿ ಗಣತಿ 

*ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ನೀಡುತ್ತಿರುವ ಶೇ 10 ಮೀಸಲಾತಿಯನ್ನು ತಾರತಮ್ಯವಿಲ್ಲದೆ ಎಲ್ಲ ಜಾತಿ ಹಾಗೂ ಸಮುದಾಯಗಳಿಗೆ ವಿಸ್ತರಣೆ 

*ಕೇಂದ್ರ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಸುಮಾರು 30 ಲಕ್ಷ ಖಾಲಿ ಹುದ್ದೆಗಳ ಭರ್ತಿ 

*ರಾಜಸ್ಥಾನದ ಮಾದರಿಯಲ್ಲಿ ₹25 ಲಕ್ಷದ ವರೆಗೆ ನಗದು ರಹಿತ ವಿಮಾ ಯೋಜನೆ ದೇಶದಾದ್ಯಂತ ಜಾರಿ 

*ಅಗ್ನಿಪಥ ಯೋಜನೆ ರದ್ದು

*ಮಹಾಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ ₹1 ಲಕ್ಷ ನೆರವು 

*25 ವರ್ಷದೊಳಗಿನ ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ಒಂದು ವರ್ಷ ₹1 ಲಕ್ಷ ‘ಶಿಷ್ಯ ವೇತನ’. ಅದಕ್ಕಾಗಿ ಕಾಯ್ದೆ ಜಾರಿ  *ರೈತರ ಸಾಲ ಮನ್ನಾ ಹಾಗೂ ಕನಿಷ್ಠ ಬೆಂಬಲ ಬೆಲೆಯ ಕಾನೂನುಬದ್ಧ ಗ್ಯಾರಂಟಿ 

*2025ರಿಂದ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 50 ಮೀಸಲಾತಿ 

*ಉಚಿತ ಆರೋಗ್ಯ ವ್ಯವಸ್ಥೆ

ಪೌರತ್ವ ಕಾಯ್ದೆ ಒಪಿಎಸ್ ವಿಶೇಷ ಸ್ಥಾನಮಾನದ ಉಲ್ಲೇಖವಿಲ್ಲ

ನರೇಂದ್ರ ಮೋದಿ ಸರ್ಕಾರದಿಂದ ಲೋಪವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿರುವ ರಫೇಲ್‌ ಯುದ್ಧ ವಿಮಾನ ಖರೀಸಿ ಪೆಗಾಸಸ್‌ ಕುತಂತ್ರಾಂಶ ಬಳಸಿ ಬೇಹುಗಾರಿಕೆ ನೋಟು ರದ್ದತಿ ಚುನಾವಣಾ ಬಾಂಡ್‌ ಹೀಗೆ ಹಲವು ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾ‍ಪಿಸಲಾಗಿದೆ. ಆದರೆ ಪಕ್ಷವು ಹೋರಾಡಿದ ಕೆಲವು ವಿಷಯಗಳಿಗೆ ಪ್ರಣಾಳಿಕೆಯಲ್ಲಿ ಜಾಗ ಸಿಕ್ಕಿಲ್ಲ.  ‘ಪರಿಸ್ಥಿತಿ ಬದಲಿಸದೆ ಕೈ’ ಎಂಬ ಟ್ಯಾಗ್‌ಲೈನ್‌ ಹೊಂದಿರುವ ಪ್ರಣಾಳಿಕೆಯಲ್ಲಿ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಮರುಸ್ಥಾಪನೆ ಹಾಗೂ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಬಗ್ಗೆ ಉಲ್ಲೇಖ ಇಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ತಕ್ಷಣವೇ ಮರುಸ್ಥಾಪನೆ ಮಾಡಲಾಗುವುದು ಎಂದು ಪಕ್ಷ ಭರವಸೆ ನೀಡಿದೆ.  ಆಡಳಿತಾರೂಢ ಬಿಜೆಪಿಯು ಪೌರತ್ವವನ್ನು ನೀಡಲು ಧರ್ಮವನ್ನು ಮಾನದಂಡವಾಗಿ ಬಳಸಿಕೊಳ್ಳುತ್ತಿದೆ ಎಂಬ ಕಾರಣ ನೀಡಿ ಕಾಂಗ್ರೆಸ್‌ ಪಕ್ಷವು ಸಂಸತ್ತಿನ ಒಳಗೆ ಹಾಗೂ ಹೊರಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದೆ. ಈ ಕಾನೂನು ಮುಸ್ಲಿಮರನ್ನು ಬಲಿಪಶು ಮಾಡುವ ಹುನ್ನಾರ ಹೊಂದಿದೆ ಎಂಬುದು ಕಾಂಗ್ರೆಸ್‌ನ ಆರೋಪ. ಈ ವಿಷಯದ ಬಗ್ಗೆ ಚುನಾವಣಾ ಕಣದಲ್ಲಿ ಪ್ರಸ್ತಾಪಿಸಿದರೆ ಹಿಂದೂ ಮತಗಳ ಧ್ರುವೀಕರಣ ಆಗಬಹುದು ಎಂಬ ಭಯ ಕಾಂಗ್ರೆಸ್‌ ನಾಯಕರಿಗೆ ಇದೆ.  ‘ಹಳೆಯ ಪಿಂಚಣಿ ಯೋಜನೆ’ಯು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಪ್ರಮುಖ ಚುನಾವಣಾ ವಿಷಯವಾಗಿತ್ತು. ಈ ವಿಷಯ ಹಾಗೂ ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸುವ ನಿಲುವು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಗೆಲುವಿಗೆ ಕಾರಣವಾಗಿತ್ತು.  ‘ಎನ್‌ಪಿಎಸ್‌ ಪರಿಶೀಲಿಸಲು ಕೇಂದ್ರ ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಇಂತಹ ಸನ್ನಿವೇಶದಲ್ಲಿ ಆ ವಿಷಯದ ಬಗ್ಗೆ ಪ್ರಸ್ತಾಪಿಸುವುದು ಸೂಕ್ತವಲ್ಲ’ ಎಂದು ಪಿ.ಚಿದಂಬರಂ ಸಮಜಾಯಿಷಿ ನೀಡಿದರು.  ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬಗ್ಗೆ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳಿಗೆ ತಕರಾರು ಇದೆ. ಮತಪತ್ರ ವ್ಯವಸ್ಥೆ ಮತ್ತೆ ಬರಬೇಕು ಎಂಬುದು ಕಾಂಗ್ರೆಸ್‌ನ ಹಲವು ನಾಯಕರ ಹಕ್ಕೊತ್ತಾಯ. ಇದರ ನಡುವೆಯೇ ಪಕ್ಷ ಅಧಿಕಾರಕ್ಕೆ ಬಂದರೆ ಮತಪತ್ರ ವ್ಯವಸ್ಥೆಯನ್ನು ಮರಳಿ ಜಾರಿಗೊಳಿಸುವುದಾಗಿ ಭರವಸೆ ನೀಡುವ ಗೋಜಿಗೆ ಹೋಗಿಲ್ಲ. ಅದರ ಬದಲು ಇವಿಎಂಗಳ ‘ದಕ್ಷತೆ’ ಮತ್ತು ಮತಪತ್ರದ ‘ಪಾರದರ್ಶಕತೆ’ ಯನ್ನು ಸಂಯೋಜಿಸಲು ಚುನಾವಣಾ ಕಾನೂನುಗಳಿಗೆ ತಿದ್ದುಪಡಿ ಮಾಡುವ ಭರವಸೆ ನೀಡುವ ಮೂಲಕ ಸಮತೋಲನದ ನಡೆ ಇಟ್ಟಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT