ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಮೂರನೇ ಹಂತ: ಕಣದಲ್ಲಿ ಶಾ, ಸಿಂಧಿಯಾ

1,300ಕ್ಕೂ ಅಧಿಕ ಅಭ್ಯರ್ಥಿಗಳು; ಅಹಮದಾಬಾದ್‌ನಲ್ಲಿ ಪ್ರಧಾನಿ ಇಂದು ಮತದಾನ
Published 7 ಮೇ 2024, 0:11 IST
Last Updated 7 ಮೇ 2024, 0:11 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ನಡೆಯಲಿದ್ದು, ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

120 ಮಹಿಳೆಯರು ಸೇರಿದಂತೆ 1,300ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗೃಹ ಸಚಿವ ಅಮಿತ್‌ ಶಾ (ಗಾಂಧಿನಗರ) ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಗುನಾ) ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಗಾಂಧಿನಗರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಅಹಮದಾಬಾದ್ ನಗರದ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಲಿದ್ದಾರೆ. 

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್‌ ಸಿಂಗ್‌ ಚೌಹಾನ್ ಮತ್ತು ದಿಗ್ವಿಜಯ್‌ ಸಿಂಗ್ ಅವರು ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿದಿದ್ದಾರೆ. 

ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮೂರನೇ ಹಂತದಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 94 ಸ್ಥಾನಗಳಿಗೆ ಮತದಾನ ನಡೆಯಬೇಕಿತ್ತು. ಆದರೆ ಗುಜರಾತ್‌ನ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ 93 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್– ರಜೌರಿ ಕ್ಷೇತ್ರದ ಮತದಾನವನ್ನು ಮೇ 7ರ ಬದಲು ಮೇ 25ಕ್ಕೆ ಮುಂದೂಡಲಾಗಿದೆ. ಏ.26 ರಂದು ನಡೆಯಬೇಕಿದ್ದ ಮಧ್ಯಪ್ರದೇಶದ ಬೇತುಲ್‌ ಕ್ಷೇತ್ರದ ಮತದಾನ ಮಂಗಳವಾರ ನಡೆಯಲಿದೆ. 

ಗುಜರಾತ್‌ನ ಎಲ್ಲ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿವೆ. ಮೂರನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಬಿಜೆಪಿಯು ಕಳೆದ ಬಾರಿ 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. 

ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದಲ್ಲಿ ಪವಾರ್‌ ಕುಟುಂಬದ ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್‌ ವಿರುದ್ಧ ಕಣಕ್ಕಿಳಿದಿದ್ದಾರೆ.

ಮೂರನೇ ಹಂತದ ಮತದಾನವು ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್‌ ಯಾದವ್ ಅವರ ಕುಟುಂಬಕ್ಕೆ ಮಹತ್ವದ್ದಾಗಿ ಪರಿಣಮಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರ ಪತ್ನಿ ಡಿಂಪಲ್‌ ಯಾದವ್ ಅವರು ಮೈನ್‌ಪುರಿ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ.

ಎಸ್‌ಪಿ ಮುಖಂಡ ರಾಮ್‌ಗೋಪಾಲ್ ಯಾದವ್‌ ಅವರ ಪುತ್ರ ಅಕ್ಷಯ ಯಾದವ್‌ ಅವರು ಫಿರೋಜಾಬಾದ್‌ ಕ್ಷೇತ್ರದಿಂದ, ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪಾಲ್‌ ಯಾದವ್‌ ಅವರ ಪುತ್ರ ಆದಿತ್ಯ ಯಾದವ್‌ ಅವರು ಬದಾಂಯೂ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 

ಗುಜರಾತ್‌ನ ಸೂರತ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಕೇಶ್‌ ದಲಾಲ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್‌ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಅದರ ಬೆನ್ನಲ್ಲೇ ಕಣದಲ್ಲಿದ್ದ ಇತರರು ನಾಮಪತ್ರ ವಾಪಸ್‌ ಪಡೆದಿದ್ದರು.

ಮೂರನೇ ಹಂತ ಮುಕ್ತಾಯಗೊಂಡರೆ 543 ಲೋಕಸಭಾ ಕ್ಷೇತ್ರಗಳಲ್ಲಿ 283 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಂತೆ ಆಗಲಿದೆ. ಇನ್ನುಳಿದ ನಾಲ್ಕು ಹಂತಗಳು ಕ್ರಮವಾಗಿ ಮೇ 13, ಮೇ 20, ಮೇ 25 ಮತ್ತು ಜೂನ್‌ 1 ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT