ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಧ್ರುವೀಕರಣವೇ ಗೆಲುವಿನ ಮೆಟ್ಟಿಲು

Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬುಡಕಟ್ಟು ಸಮುದಾಯಗಳೇ ಅಧಿಕವಾಗಿರುವ ಈಶಾನ್ಯ ರಾಜ್ಯಗಳಲ್ಲಿ ‘ಹೊರಗಿನವರು ಮತ್ತು ಮೂಲ ನಿವಾಸಿಗಳು’ ಎನ್ನುವ ಸಂಘರ್ಷವು ಹೊಸತೇನಲ್ಲ. ಹಾಗಿದ್ದರೂ ಇಷ್ಟೊಂದು ಸುದೀರ್ಘವಾದ ಸಂಘರ್ಷವು ಹಿಂದೆಂದೂ ನಡೆದಿರಲಿಲ್ಲ. ಈ ಸಂಘರ್ಷವು ಜನರನ್ನು ಹೈರಾಣಾಗಿಸಿರುವುದಲ್ಲದೆ, ರಾಜಕೀಯವಾಗಿಯೂ ಈಶಾನ್ಯದ ಎಲ್ಲ ರಾಜ್ಯಗಳ ಮೇಲೆ ಪರಿಣಾಮ ಬೀರಿದೆ. ಇದಕ್ಕೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿಜೋರಾಂ ಚುನಾವಣೆಯೇ ಉದಾಹರಣೆ. ಈ ಲೋಕಸಭಾ ಚುನಾವಣೆಯಲ್ಲೂ ಮಣಿಪುರ ಸಂಘರ್ಷ ನೇರ ‍ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗುತ್ತಿದೆ.

‘ಭಾರತವು ನಮ್ಮನ್ನು ಎಂದಿಗೂ ತಮ್ಮವರು ಎಂದು ಪರಿಗಣಿಸಿಯೇ ಇಲ್ಲ’ ಎನ್ನುವುದು ಹಿಂದಿನಿಂದಲೂ ಈಶಾನ್ಯ ರಾಜ್ಯದ ಜನರ ಬೇಸರ. ಮಣಿಪುರ ಸಂಘರ್ಷ ಆರಂಭವಾದಾಗಲೂ, ಸುಮಾರು ಒಂದು ವರ್ಷದಿಂದ ಸಂಘರ್ಷ ನಡೆಯುತ್ತಿರುವಾಗಲೂ ಅಲ್ಲಿನ ಜನರು ಹೇಳಿದ ಮಾತಿದು. ಸಂಘರ್ಷವನ್ನು ತಣಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿರುವುದು ಅಲ್ಲಿನ ಜನರ ಬೇಸರವನ್ನು ಇನ್ನಷ್ಟು ಹೆಚ್ಚಿಸಿದೆ. ಮಣಿಪುರದಲ್ಲಂತೂ ಈ ವಿಚಾರ ಮತನಿರ್ಣಯವನ್ನು ನೇರವಾಗಿ ಪ್ರಭಾವಿಸಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

‘ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ರಾಜ್ಯದಲ್ಲಿ ಶಾಂತಿ ನೆಲೆಸಬೇಕು’ ಎನ್ನುವುದು ಕುಕಿ ಬುಡಕಟ್ಟು ಸಮುದಾಯ ಹಾಗೂ ಬಹುಸಂಖ್ಯಾತ ಮೈತೇಯಿ ಸಮುದಾಯದ ಜನರ ಆಗ್ರಹ. ‘ನಿರಾಶ್ರಿತ ಶಿಬಿರಗಳಿಂದ ನಾವು ಮತ ಹಾಕುವುದಿಲ್ಲ. ನಮ್ಮ ನಮ್ಮ ಮನೆಗಳಿಗೆ ತೆರಳಬೇಕು. ಅಲ್ಲಿಂದಲೇ ನಾವು ಮತದಾನ ಮಾಡುತ್ತೇವೆ. ಇಲ್ಲವಾದಲ್ಲಿ ಮತದಾನಕ್ಕೆ ನಮ್ಮ ಬಹಿಷ್ಕಾರ ಇದೆ’ ಎನ್ನುತ್ತಿದ್ದಾರೆ. ಮೈತೇಯಿ ಸಮುದಾಯದ ಮಹಿಳೆಯರ ಗುಂಪು, ‘ಮಯಿರಾ ಪೈಬಿ’ಯವರೂ ಇದನ್ನೇ ಹೇಳುತ್ತಿದ್ದಾರೆ. ‘ನಾವು ಮತದಾನ ಮಾಡುವುದಿಲ್ಲ. ಒಂದು ವೇಳೆ ಮತದಾನ ಮಾಡುವುದಕ್ಕೆ ಒತ್ತಾಯ ಮಾಡಿದರೆ, ನೋಟಾ ಒತ್ತುತ್ತೇವೆ’ ಎನ್ನುತ್ತಿದ್ದಾರೆ.

ಮಣಿಪುರದಲ್ಲಿ ಚುನಾವಣೆಯ ಚಟುವಟಿಕೆಗಳು ನಡೆಯುತ್ತಿಲ್ಲ. ‘ನಾವು ದೊಡ್ಡ ದೊಡ್ಡ ರ್‍ಯಾಲಿಗಳನ್ನು ಆಯೋಜಿಸುವುದಿಲ್ಲ, ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ’ ಎಂದು ಮಣಿಪುರದ ಬಿಜೆಪಿ ಘಟಕ ಹೇಳಿದೆ. ಮಣಿಪುರಲ್ಲಿ ಇರುವುದು ಎರಡು ಲೋಕಸಭಾ ಕ್ಷೇತ್ರ. ಮೈತೇಯಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ‘ಇನ್ನರ್ ಮಣಿಪುರ’ ಕ್ಷೇತ್ರದಲ್ಲಿ ಮಾತ್ರವೇ ಬಿಜೆಪಿ ಸ್ಪರ್ಧಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರವು ಮೈತೇಯಿಗಳ ಹಿಡಿತದಲ್ಲೇ ಇದ್ದಿದ್ದರಿಂದ, ಅವರ ಪರವಾಗಿಯೇ ನೀತಿಗಳನ್ನು ರೂಪಿಸಿತ್ತು. ಸಂಘರ್ಷದ ಸಂದರ್ಭದಲ್ಲೂ ಮೈತೇಯಿಗಳ ಪರವಾಗಿಯೇ ನಿಂತಿತ್ತು. ಹೀಗಾಗಿ ಇನ್ನರ್ ಮಣಿಪುರದಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಆದರೆ ಕುಕಿ ಮತ್ತು ನಾಗಾ ಬುಡಕಟ್ಟುಗಳ ಪ್ರಾಬಲ್ಯವಿರುವ ‘ಔಟರ್‌ ಮಣಿಪುರ’ ಲೋಕಸಭಾ ಕ್ಷೇತ್ರದಲ್ಲಿ ಹಲವು ಪಕ್ಷಗಳು ಕಣದಲ್ಲಿವೆ. ನಾಗಾ ಪೀಪಲ್ಸ್‌ ಪಾರ್ಟಿಗೆ ಬಿಜೆಪಿ ಬೆಂಬಲ ಘೋಷಿಸಿದೆ. ಮಣಿಪುರ ಸಂಘರ್ಷದ ದಿನದಿಂದಲೂ ಕುಕಿ ಮತ್ತು ನಾಗಾ ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ಹೇಳುತ್ತಿರುವ ಕಾಂಗ್ರೆಸ್‌ ಈ ಬಾರಿ ನಾಗಾ ನಾಯಕ ಎ.ಕೆ.ಆರ್ತೂರ್ ಅವರನ್ನು ‘ಔಟರ್‌ ಮಣಿಪುರ’ದಿಂದ ಕಣಕ್ಕೆ ಇಳಿಸಿದೆ. ಪ್ರತಿ ಬಾರಿ ಕುಕಿ ಮತಗಳು, ಕುಕಿ ಅಭ್ಯರ್ಥಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಮಧ್ಯೆ ವಿಭಜನೆಯಾಗುತ್ತಿತ್ತು. ಇದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸುತ್ತಿದ್ದರು. ಹೀಗೆ ತಮ್ಮ ಸಮುದಾಯದ ಮತ ವಿಭಜನೆ ಆಗುವುದನ್ನು ತಡೆಯಲೆಂದೇ ಕುಕಿ ಸಮುದಾಯ ‘ಐಟಿಎಲ್‌ಎಫ್‌’ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಸಂಘರ್ಷದ ಕಾರಣದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಐಟಿಎಲ್‌ಎಫ್‌ ಹೇಳಿದೆ. ಈ ನಿರ್ಧಾರವು ಔಟರ್‌ ಮಣಿಪುರದಲ್ಲಿ ಬಿಜೆಪಿ ಬೆಂಬಲಿತ ಎನ್‌ಪಿಪಿ ಅಭ್ಯರ್ಥಿಗೆ ತೀವ್ರ ಸವಾಲು ಒಡ್ಡಲಿದೆ ಎಂದು ನಿರೀಕ್ಷಿಸಲಾಗಿದೆ.

ಈಶಾನ್ಯದ ಇತರ ರಾಜ್ಯಗಳಲ್ಲೂ ಬುಡಕಟ್ಟು ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಇಂಥದ್ದೇ ಸ್ಥಿತಿ ಇದೆ.

ಮಣಿಪುರ ಗಲಭೆ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆ

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿರುವಾಗಲೇ, ಮಿಜೋರಾಂನಲ್ಲಿ ಚುನಾವಣೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಮಿಜೋರಾಂಗೆ ಹೋಗಲೇ ಇಲ್ಲ. ಚುನಾವಣೆಗಾಗಿ ಪ್ರಧಾನಿ ಮೋದಿ ಅವರು ಪ್ರಚಾರ ನಡೆಸದ ಮೊದಲ ರಾಜ್ಯ ಮಿಜೋರಾಂ. ಎನ್‌ಡಿಎ ಜೊತೆಗಿದ್ದ ಎಂಎನ್‌ಎಫ್‌ ಪಕ್ಷವು ಆಗ ಮಿಜೋರಾಂನಲ್ಲಿ ಅಧಿಕಾರದಲ್ಲಿತ್ತು. ಮಣಿಪುರ ಸಂಘರ್ಷ ಆರಂಭವಾಗುತ್ತಿ ದಂತೆಯೇ, ಮಾಜಿ ಮುಖ್ಯಮಂತ್ರಿ, ಎಂಎನ್‌ಎಫ್‌ನ ಝೋರಮ್‌ತಂಗಾ ಅವರು ಬಿಜೆಪಿ ಸರ್ಕಾರವನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ‘ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ’ ಎಂದೂ ಹೇಳಿದ್ದರು. ಬಿಜೆಪಿಯಿಂದ ಅಂತರ ಕಾಯ್ದುಕೊಂಡರೂ ಜನರು ಎಂಎನ್‌ಎಫ್‌ ಸರ್ಕಾರವನ್ನು ತಿರಸ್ಕರಿಸಿದರು. ಈಗ ಲೋಕಸಭಾ ಚುನಾವಣೆಯಲ್ಲಿ, ಅಧಿಕಾರದಲ್ಲಿರುವ ಝೆಡ್‌ಪಿಎಂ ಪಕ್ಷವು ಎನ್‌ಡಿಎಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜನರು ಈ ಮೈತ್ರಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕು.

ಹಿಮಂತ ಮತ್ತು ಹಿಂದುತ್ವ

ಅಸ್ಸಾಂ, ತ್ರಿಪುರಾಗಳಲ್ಲಿ ಹಿಂದೂ ಜನ ಸಂಖ್ಯೆ ಹೆಚ್ಚಿದೆ. ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ಮುಖ್ಯಮಂತ್ರಿ ಆದಾಗಿನಿಂದಲೂ ಅಸ್ಸಾಂನಲ್ಲಿ ಹಿಂದುತ್ವದ ಅಬ್ಬರ ಹೆಚ್ಚಿದೆ. ಅಸ್ಸಾಂ ಸರ್ಕಾರವು, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಅಣಿಯಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ
ನಡೆಯುತ್ತಿದೆ. ಇವೆಲ್ಲವೂ ಹಿಂದೂ ಮತಗಳನ್ನು ಸೆಳೆಯುವ ಪ್ರಯತ್ನ. ಹಿಮಂತ ಅವರು ಬಿಜೆಪಿ ಸೇರುವುದಕ್ಕೂ ಮೊದಲೇ ಆರ್‌ಎಸ್‌ಎಸ್‌ ಅಸ್ಸಾಂ ಮತ್ತು ಸುತ್ತಲ ರಾಜ್ಯಗಳಲ್ಲಿ ಹಲವು ವರ್ಷಗಳ ಹಿಂದಿನಿಂದಲೇ ತನ್ನ ಕಾರ್ಯಚಟುವಟಿಕೆಯನ್ನು ಆರಂಭಿಸಿತ್ತು. ಆದರೆ, ಹಿಮಂತ ಅವರ ಆಗಮನದಿಂದ ಆ ಎಲ್ಲ ಚಟುವಟಿಕೆ ಗಳಿಗೆ ರಾಯಭಾರಿಯೊಬ್ಬರು ಸಿಕ್ಕಿದಂತಾಯಿತು. ಈ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಉಗ್ರ ಹಿಂದುತ್ವವನ್ನು ಪ್ರತಿಪಾದಿಸುತ್ತಿದೆ. ಹಿಂದೂಗಳು ನಿರ್ಣಾಯಕರಾಗಿರುವ ಕ್ಷೇತ್ರಗಳಲ್ಲಿ ಇದು ಬಿಜೆಪಿಗೆ ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿದೆ.

‘ದನದ ಮಾಂಸ ತಿನ್ನುವುದು ನಮ್ಮ ಸಂಸ್ಕೃತಿ’: ದನದ ಮಾಂಸ ತಿನ್ನುವ ಕುರಿತು ಬಿಜೆಪಿಯ ಈಶಾನ್ಯ ರಾಜ್ಯ ಘಟಕಗಳಿಗೂ, ಭಾರತದ ಇತರ ಪ್ರದೇಶದ ಬಿಜೆಪಿ ಘಟಕಗಳಿಗೂ ಬೇರೆ ಅಭಿಪ್ರಾಯವಿದೆ. ‘ದನದ ಮಾಂಸ ತಿನ್ನುವುದು ನಮ್ಮ ಸಂಸ್ಕೃತಿಯ ಭಾಗ. ಆದ್ದರಿಂದ ದನದ ಮಾಂಸ ತಿನ್ನಲು ಯಾವುದೇ ಅಭ್ಯಂತರವಿಲ್ಲ’ ಎಂದು ಮೇಘಾಲಯದ ಬಿಜೆಪಿ ಅಧ್ಯಕ್ಷ ಅರ್ನೆಸ್ಟ್‌ ಮಾರ್ವಿ ಹೇಳಿದ್ದರು. ಇಲ್ಲಿನ ಎಲ್ಲ ಜನರ ಸಂಸ್ಕೃತಿಯನ್ನು ನಿರಾಕರಿಸುವುದು ಬಿಜೆಪಿಗೆ ರಾಜಕೀಯವಾಗಿ ನಷ್ಟದ ವಿಚಾರ. ಹೀಗೆ ತನ್ನ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ ಬಿಜೆಪಿ ಮೇಘಾಲಯದಲ್ಲಿ ಮತನೆಲೆಯನ್ನು ಗಟ್ಟಿಮಾಡಿಕೊಳ್ಳುತ್ತಿದೆ. ಮತದಾನದ ವೇಳೆಯೂ ಇದು ಬಿಜೆಪಿಗೆ ಅನುಕೂಲವಾಗಲಿದೆ.

‘ಬುಡಕಟ್ಟು ಜನರು ಭಯೋತ್ಪಾದಕರು’

‘ಮಣಿಪುರದ ಈ ಸಂಘರ್ಷವು ಜನಾಂಗೀಯ ಸಂಘರ್ಷವಲ್ಲ ಅಥವಾ ಕಾನೂನು ಸುವ್ಯವಸ್ಥೆಯ ವಿಚಾರವೂ ಅಲ್ಲ. ಇದು ಭಾರತದ ವಿರುದ್ಧದ ಯುದ್ಧ. ಮ್ಯಾನ್ಮಾರ್‌ ಹಾಗೂ ಬಾಂಗ್ಲಾದೇಶದ ಕುಕಿ ಭಯೋತ್ಪಾದಕರೊಂದಿಗೆ ಸೇರಿ ಇಲ್ಲಿನ ಕುಕಿ ಭಯೋತ್ಪಾದಕರು ಯುದ್ಧ ನಡೆಸುತ್ತಿದ್ದಾರೆ’ ಎಂದು ಮಣಿಪುರದ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು ಹೇಳಿದ್ದರು. ಮೈತೇಯಿ ಸಮುದಾಯದ ಗುಂಪುಗಳೂ ಇದನ್ನೇ ಹೇಳಿದ್ದವು. ಹೀಗೆ ಇಲ್ಲಿನ ಜನರನ್ನು ಧರ್ಮ ಮತ್ತು ಸಂಸ್ಕೃತಿಯ ಆಧಾರದಲ್ಲಿ ವಿಭಜನೆ ಮಾಡಿ, ಮತ ಧ್ರುವೀಕರಣ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಹುಸಂಖ್ಯಾತರಲ್ಲಿ ಬಹುತೇಕರ ಮತಗಳು ಬಿಜೆಪಿಗೇ ಬೀಳಲಿವೆ. ಈ ರೀತಿ ಧ್ರುವೀಕರಣ ಮಾಡಿರುವ ಕಾರಣದಿಂದಲೇ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಈಶಾನ್ಯದ ರಾಜ್ಯಗಳಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT