ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾವು NDA ಕೂಟದಲ್ಲೇ ಇರುತ್ತೇವೆ; ಇಂದಿನ ಸಭೆಗೂ ಹೋಗುತ್ತೇವೆ: ಚಂದ್ರಬಾಬು ನಾಯ್ಡು

Published 5 ಜೂನ್ 2024, 6:25 IST
Last Updated 5 ಜೂನ್ 2024, 6:25 IST
ಅಕ್ಷರ ಗಾತ್ರ

ಅಮರಾವತಿ: ‘ನಾವು ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌ (ಎನ್‌ಡಿಎ) ಕೂಟದಲ್ಲೇ ಇರುತ್ತೇವೆ. ಜತೆಗೆ ದೆಹಲಿಯಲ್ಲಿ ಇಂದು ನಡೆಯಲಿರುವ ಸಭೆಗೂ ನಾನು ಹೋಗುತ್ತೇನೆ’ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಎನ್‌. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಮಾಧ್ಯಮದವರಿಗೆ ಯಾವಾಗಲೂ ಸುದ್ದಿ ಬೇಕಾಗುತ್ತದೆ. ನಾನು ಸುದೀರ್ಘ ರಾಜಕೀಯ ಅನುಭವ ಹೊಂದಿದ್ದೇನೆ. ಜತೆಗೆ, ದೇಶದಲ್ಲಿ ಹಲವು ರಾಜಕೀಯ ಬದಲಾವಣೆಗಳನ್ನು ನೋಡಿದ್ದೇನೆ. ಸದ್ಯ ನಾವು ಎನ್‌ಡಿಎ ಕೂಟದಲ್ಲಿದ್ದೇವೆ. ನಾನು ಇಂದಿನ ಸಭೆಯಲ್ಲಿ ಹಾಜರಾಗುತ್ತೇನೆ’ ಎಂದಿದ್ದಾರೆ.

ಆಂಧ್ರಪ್ರದೇಶದಲ್ಲಿ ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಈ ಬಾರಿ ಪುಟಿದೆದ್ದಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯುವ ಜತೆಗೆ ಲೋಕಸಭಾ ಚುನಾವಣೆಯಲ್ಲೂ ಗಮನಸೆಳೆದಿದೆ.

ಮಹಾ ಸಮರದಲ್ಲಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಕಿಂಗ್‌ ಮೇಕರ್‌ಗಳಾಗಿ ಹೊರಹೊಮ್ಮಿದ್ದಾರೆ.

ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಜಯಭೇರಿ ಬಾರಿಸಿದೆ. ಈ ಚುನಾವಣೆಯಲ್ಲಿ ನಾಯ್ಡು ಅಕ್ಷರಶಃ ಪುಟಿದೆದ್ದು ನಿಂತಿದ್ದಾರೆ. 175 ಸದಸ್ಯ ಬಲದ ವಿಧಾನಸಭೆಯಲ್ಲಿ ತೆಲುಗುದೇಶಂ ಪಕ್ಷ 133 ಸ್ಥಾನ ಗೆದ್ದಿದ್ದು, ಸ್ಪಷ್ಟಬಹುಮತ ಪಡೆದಿದೆ. ಸರ್ಕಾರ ರಚನೆಗೆ ಪಕ್ಷ ಸಜ್ಜಾಗಿದೆ.

ರಾಷ್ಟ್ರಮಟ್ಟದಲ್ಲಿ ಎನ್‌ಡಿಎ ಜೊತೆಗೆ ಗುರುತಿಸಿಕೊಂಡಿದ್ದ ತೆಲುಗು ದೇಶಂ ರಾಜ್ಯದಲ್ಲಿ ನಟ ಪವನ್‌ ಕಲ್ಯಾಣ್ ನೇತೃತ್ವದ ಜನಸೇನಾ, ಬಿಜೆಪಿ ಜೊತೆಗೂಡಿ ಮೈತ್ರಿಹೊಂದಿತ್ತು. ಆಡಳಿತ ವಿರೋಧಿ ಅಲೆಯೊಂದಿಗೆ, ವಿರೋಧ ಪಕ್ಷಗಳ ಧ್ರುವೀಕರಣವೂ ವೈಎಸ್‌ಆರ್‌ಸಿಪಿಯನ್ನು ನೇಪಥ್ಯಕ್ಕೆ ಸರಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಭಾರಿ ಗೆಲುವಿನ ಜೊತೆಗೆ ರಾಷ್ಟ್ರಮಟ್ಟದಲ್ಲೂ ನಿರ್ಣಾಯಕ ಪಾತ್ರ ವಹಿಸುವ ‘ಶಕ್ತಿ’ಯನ್ನು ನಾಯ್ಡು ಈ ಫಲಿತಾಂಶದಿಂದ ಪಡೆದುಕೊಂಡಿದ್ದಾರೆ. ತೆಲುಗು ದೇಶಂ ಹಾಗೂ ಜನಸೇನಾ ಪಕ್ಷದ ಮೈತ್ರಿಕೂಟ ಒಟ್ಟು 162 ಸ್ಥಾನವನ್ನು ಗೆದ್ದುಕೊಂಡಿವೆ.

ಸೀಟು ಹಂಚಿಕೆ ಒಪ್ಪಂದದಂತೆ ತೆಲುಗು ದೇಶಂ ವಿಧಾನಸಭೆಯ 144, ಲೋಕಸಭೆಯ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಜನಸೇನಾ ಪಕ್ಷ ವಿಧಾನಸಭೆಯ 21, ಲೋಕಸಭೆಯ 2 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಚಂದ್ರಬಾಬು ನಾಯ್ಡು ಈ ಗೆಲುವಿನೊಂದಿಗೆ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಗಾದಿಗೇರುವುದು ನಿಚ್ಚಳವಾಗಿದೆ.

ಈ ಫಲಿತಾಂಶದ ಮೂಲಕ ಸಾರ್ವತ್ರಿಕ ಚುನಾವಣೆಯಲ್ಲಿಯೂ ಆಡಳಿತ ಪಕ್ಷವನ್ನು ಬದಲಿಸುವ ಸಂಪ್ರದಾಯವು ಆಂಧ್ರಪ್ರದೇಶದಲ್ಲಿ ಆರಂಭವಾದಂತಿದೆ. 2019ರಲ್ಲಿ ವೈಎಸ್‌ಆರ್‌ಸಿಪಿ ಒಟ್ಟು 151 ಕ್ಷೇತ್ರಗಳಲ್ಲಿ ಗೆದ್ದಿದ್ದು, ಭಾರಿ ಬಹುಮತದೊಂದಿಗೆ ಅಧಿಕಾರ ಗಳಿಸಿತ್ತು. ಈ ಚುನಾವಣೆಯಲ್ಲಿ ಅದರ ಬಲ 10 ಸ್ಥಾನಕ್ಕೆ ಇಳಿದಿದೆ.

543 ಸದಸ್ಯ ಬಲದ ಲೋಕಸಭೆಗೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಜೂನ್‌ 4 (ಮಂಗಳವಾರ) ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 291 ಸ್ಥಾನಗಳನ್ನು ಹಾಗೂ 'ಇಂಡಿಯಾ' ಮೈತ್ರಿಕೂಟ 234 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಸರ್ಕಾರ ರಚಿಸುವ ಸಂಬಂಧ ಎನ್‌ಡಿಎ ಹಾಗೂ ಇಂಡಿಯಾ ನಾಯಕರು ಇಂದು ಸಭೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT