ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ವಿಕಸಿತ ಬಿಜೆಪಿಗೆ ‘ಉಜ್ವಲಾ’ ಬಲ?

ಸಹಾಯಧನ ಮುಂದುವರಿಸಿ ಲೋಕಸಭಾ ಚುನಾವಣೆಯಲ್ಲೂ ಮಹಿಳಾ ಮತದಾರರನ್ನು ಹಿಡಿದಿಟ್ಟುಕೊಳ್ಳುವ ತಂತ್ರ
Published 3 ಏಪ್ರಿಲ್ 2024, 3:25 IST
Last Updated 3 ಏಪ್ರಿಲ್ 2024, 3:25 IST
ಅಕ್ಷರ ಗಾತ್ರ

ಮಹಿಳಾ ಸಬಲೀಕರಣವನ್ನು ಕೇಂದ್ರದ ಬಿಜೆಪಿ ಸರ್ಕಾರವು ‘ನಾರೀಪಥ–ನಾರೀಶಕ್ತಿ’ ಎಂದು ಹೊಸ ಹೆಸರಿನಿಂದ ಕರೆಯುತ್ತಿದೆ. ಮಹಿಳೆಯರನ್ನೇ ಕೇಂದ್ರೀಕರಿಸಿಕೊಂಡು ಜಾರಿಗೆ ತಂದ ಎಲ್ಲಾ ಯೋಜನೆಗಳನ್ನು ಸಮಗ್ರವಾಗಿ ಬಿಜೆಪಿ ಹೀಗೆ ಕರೆಯುತ್ತಿದೆ. ಚುನಾವಣಾ ಪ್ರಚಾರದಲ್ಲೂ ಅದನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿ ಹೀಗೆ ರೂ‍ಪಿಸಿದ ಹತ್ತಾರು ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾದುದು ಮತ್ತು ಚುನಾವಣೆಗಳನ್ನು ಪ್ರಭಾವಿಸುತ್ತಿರುವುದು ‘ಉಜ್ವಲಾ’ ಯೋಜನೆ. ಈ ಲೋಕಸಭಾ ಚುನಾವಣೆಯಲ್ಲೂ ಈ ಯೋಜನೆಯು ಮಹಿಳಾ ಮತದಾರರ ಮತನಿರ್ಣಯವನ್ನು ಪ್ರಭಾವಿಸುವುದರಲ್ಲಿ ಎರಡನೇ ಮಾತಿಲ್ಲ ಎನ್ನಬಹುದು.

ದೇಶದ ನನ್ನ ತಾಯಂದಿರು, ಸೋದರಿಯರು ಉರುವಲು ಒಲೆಯ ಹೊಗೆಯಲ್ಲಿ ಬಳಲುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದು 2016ರಲ್ಲಿ ಯೋಜನೆ ಉದ್ಘಾಟಿಸುವಾಗ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ಒದಗಿಸಲಾಗುತ್ತದೆ ಎಂದೂ ಘೋಷಿಸಿದ್ದರು. ಯೋಜನೆ ಅಡಿ ಹೆಸರು ನೋಂದಾಯಿಸಿಕೊಂಡ ವಾರದ ಒಳಗೆ ಮನೆಗೆ ಎಲ್‌ಪಿಜಿ ಒಲೆ ಮತ್ತು ಸಿಲಿಂಡರ್‌ ಬಂದದ್ದು ಫಲಾನುಭವಿ ಮಹಿಳೆಯರಲ್ಲಿ ಹೊಸ ಉತ್ಸಾಹವನ್ನು ತಂದಿತ್ತು. ಹೀಗೆ ಸರ್ಕಾರವು 2023ರ ಅಂತ್ಯದವರೆಗೆ ಒಟ್ಟು 10 ಕೋಟಿ ಉಜ್ವಲಾ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಿದೆ. 

10 ಕೋಟಿ ಸಂಪರ್ಕಗಳನ್ನು ಯೋಜನೆ ಅಡಿ ಒದಗಿಸ ಲಾಗಿತ್ತಾದರೂ, ಅನುಷ್ಠಾನದಲ್ಲಿ ಹಲವು ದೋಷಗಳು ಮತ್ತು ಅಕ್ರಮಗಳು ಇದ್ದವು. ಈ ದೋಷಗಳ ಬಗ್ಗೆ ಮಹಾಲೇಖಪಾಲರ (ಸಿಎಜಿ) ವರದಿಯಲ್ಲೂ ಕಟುವಾಗಿ ಉಲ್ಲೇಖಿಸಲಾಗಿತ್ತು. ಯೋಜನೆ ಆರಂಭಿಸಿದಾಗ ಎಲ್‌ಪಿಜಿ ಸಿಲಿಂಡರ್‌ಗೆ ಇದ್ದ ಬೆಲೆ ನಂತರದ ವರ್ಷಗಳಲ್ಲಿ ಭಾರಿ ಏರಿಕೆಯಾಗಿತ್ತು. ಹೀಗಾಗಿ ಯೋಜನೆಯ ಬಹುತೇಕ ಫಲಾನುಭವಿಗಳು ಎಲ್‌ಪಿಜಿ ಬಳಕೆಯಿಂದ ದೂರ ಸರಿದಿದ್ದಾರೆ ಎಂದು ಸಿಎಜಿ ಹೇಳಿತ್ತು. ಸಿಲಿಂಡರ್‌ ಬೆಲೆ ಏರಿಕೆಯು ಯಾವಾಗಲೂ ಚುನಾವಣೆಯ ವಿಷಯವೇ ಹೌದು. ಆದರೆ ಉಜ್ವಲಾ ಯೋಜನೆ ಸಿಲಿಂಡರ್‌ ಬೆಲೆ ಏರಿಕೆಯ ವ್ಯಾಪ್ತಿಯನ್ನು ಹಲವು ಪಟ್ಟು ವಿಸ್ತರಿಸಿತ್ತು. ಆರೇಳು ವರ್ಷಗಳಲ್ಲಿ ಸಿಲಿಂಡರ್‌ ಬೆಲೆ ₹480ರಿಂದ ₹1,100 ತಲುಪಿದ್ದು, ಉಜ್ವಲಾ ಫಲಾನುಭವಿಗಳ ಕೈಸುಡಲಾರಂಭಿಸಿತ್ತು. ಸಿಲಿಂಡರ್‌ ಖರೀದಿಸಲಾಗದ ಕುಟುಂಬಗಳು ಅನಿವಾರ್ಯವಾಗಿ ಸೌದೆ ಒಲೆಗೆ ಮರಳಿದ್ದು, ಉಜ್ವಲಾ ಫಲಾನುಭವಿ ಮಹಿಳೆಯರ ಅಸಮಾಧಾನಕ್ಕೂ ಕಾರಣವಾಗಿತ್ತು. ಅದು ಚುನಾವಣೆ ಮತ್ತು ಸರ್ಕಾರದ ನೀತಿಗಳನ್ನೂ ಪ್ರಭಾವಿಸಿದ್ದು ನಿಜ.

ಕಳೆದ ವರ್ಷದ ಅಂತ್ಯದ ವೇಳೆಗೆ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಆಗ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹1,000ದ ಆಸುಪಾಸಿನಲ್ಲಿತ್ತು. ಮಹಿಳೆಯರು ಬಹಿರಂಗವಾಗಿಯೇ ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದರು. ಚುನಾವಣೆಗೆ ಈ ವಿಷಯವನ್ನು ಬಳಸಿಕೊಳ್ಳಲು ಮುಂದಾದ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಗೆದ್ದರೆ ₹500, ₹400ರ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಸುವುದಾಗಿ ಘೋಷಿಸಿದವು. ಇದು ಮಹಿಳಾ ಮತದಾರರನ್ನು ಆಕರ್ಷಿಸಲು ಆರಂಭಿಸಿತ್ತು. ಅದರ ಪರಿಣಾಮವನ್ನು ಗ್ರಹಿಸಿದ ಕೇಂದ್ರದ ಬಿಜೆಪಿ ಸರ್ಕಾರವು, ₹100 ದರ ಕಡಿತ ಮಾಡಿತು ಮತ್ತು ಉಜ್ವಲಾ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ ಮೇಲೆ ಒಟ್ಟು ₹300 ಮೊತ್ತದ ಸಹಾಯಧನ ಘೋಷಿಸಿಬಿಟ್ಟಿತು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ಸಿಲಿಂಡರ್‌ ಬೆಲೆ ಏರಿಕೆಯು ಚುನಾವಣಾ ಪ್ರಚಾರದಲ್ಲಿ ಮುನ್ನೆಲೆಯಲ್ಲಿ ಇತ್ತು. ಸಹಾಯಧನ ಘೋಷಿಸುವ ಮೂಲಕ ಕೇಂದ್ರ ಸರ್ಕಾರವು ಚುನಾವಣೆಯಲ್ಲಿ ಆ ವಿಷಯವೇ ಇಲ್ಲದಂತೆ ಮಾಡಿತು. ಆ ರಾಜ್ಯಗಳಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಗೆದ್ದಿತು ಎಂಬುದು ಗಮನಾರ್ಹ.

ಹೀಗೆ ತನಗೇ ಮುಳುವಾಗಬಹುದಾಗಿದ್ದ ತನ್ನದೇ ಯೋಜನೆಯನ್ನು ಬಿಜೆಪಿ ಮತ್ತೆ ತನ್ನ ಅನುಕೂಲಕ್ಕೆ ತಿರುಗಿಸಿಕೊಂಡಿತು. ಈಗಲೂ ಸಹಾಯಧನ ಮುಂದುವರಿಸುವ ಮೂಲಕ, ಲೋಕಸಭಾ ಚುನಾವಣೆಯಲ್ಲೂ ಮಹಿಳಾ ಮತದಾರರನ್ನು ಹಿಡಿದಿಟ್ಟುಕೊಳ್ಳುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ. ಸಹಾಯಧನ ದೊರೆಯುತ್ತಿರುವ ಕಾರಣ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ಉಜ್ವಲಾ ಫಲಾನುಭವಿಗಳನ್ನು ಅಷ್ಟಾಗಿ ಬಾಧಿಸುತ್ತಿಲ್ಲ. ಸೌದೆ ಹೊಂಚುವುದು, ಮಳೆಗಾಲಕ್ಕೆ ಅವನ್ನು ಕೂಡಿಡುವುದು, ಒಲೆಯನ್ನು ಉರಿಸುವಾಗ ಹೊಗೆ ಉಸಿರಾಡುವುದು ತಪ್ಪುವುದರಿಂದ ಫಲಾನುಭವಿ ಮಹಿಳಾ ಮತದಾರರು ಮತದಾನದ ವೇಳೆ ಈ ಬಗ್ಗೆ ಯೋಚಿಸದೇ ಇರಲಾರರು. ಅದು ಬಿಜೆಪಿಗೆ ಎಷ್ಟರಮಟ್ಟಿಗೆ ಅನುಕೂಲಕ್ಕೆ ಬರುತ್ತದೆ ಎಂಬುದನ್ನು ಚುನಾವಣಾ ಫಲಿತಾಂಶವೇ ಸ್ಪಷ್ಟಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT