ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಭ್ರಷ್ಟ' ಮುಕ್ತ ಕಾಂಗ್ರೆಸ್ ಸಾಧ್ಯವಾಗಿಸಿದ ಮೋದಿ: ಜೈರಾಮ್ ಹೀಗೆ ಹೇಳಿದ್ದೇಕೆ?

Published 25 ಮಾರ್ಚ್ 2024, 3:01 IST
Last Updated 25 ಮಾರ್ಚ್ 2024, 3:01 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ನವೀನ್ ಜಿಂದಾಲ್‌ ಅವರು ಬಿಜೆಪಿ ಸೇರ್ಪಡೆಯಾಗಿರುವ ಕುರಿತು 'ಕೈ' ನಾಯಕ ಜೈರಾಮ್‌ ರಮೇಶ್‌ ವ್ಯಂಗ್ಯವಾಡಿದ್ದಾರೆ. ಪರಿಶುದ್ಧರಾಗಲು ದೊಡ್ಡ ಗಾತ್ರದ ವಾಷಿಂಗ್‌ಮಷಿನ್‌ ಅಗತ್ಯವಿದ್ದಾಗ, ಇಂತಹ ಘಟನೆಗಳು ನಡೆಯುತ್ತವೆ ಎಂದು ಕುಟುಕಿದ್ದಾರೆ.

ಜಿಂದಾಲ್‌ ಅವರು ಕಾಂಗ್ರೆಸ್‌ ತೊರೆದಿರುವ ಬಗ್ಗೆ ಟ್ವೀಟ್‌ ಮಾಡಿರುವ ಜೈರಾಮ್‌, 'ಕಳೆದ 10 ವರ್ಷಗಳಲ್ಲಿ ಪಕ್ಷಕ್ಕೆ ಯಾವುದೇ ಕೊಡುಗೆ ನೀಡದಿದ್ದರೂ, ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿಕೊಳ್ಳುವುದು ಅತ್ಯಂತ ಹಾಸ್ಯಾಸ್ಪದ' ಎಂದು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಗುಡುಗಿರುವ ಕಾಂಗ್ರೆಸ್‌ ನಾಯಕ, 'ಪ್ರಧಾನಿ ಅವರು ಕಾಂಗ್ರೆಸ್‌ ಮುಕ್ತ ಭಾರತವನ್ನು ಮಾಡಲು ಬಯಸಿದ್ದರು. ಆದರೆ, ಅದರ ಬದಲು ಭ್ರಷ್ಟ ಮುಕ್ತ ಕಾಂಗ್ರೆಸ್‌ ಸಾಧ್ಯವಾಗಿಸಿದ್ದಾರೆ. ಇ.ಡಿ ಮತ್ತು ಸಿಬಿಐ ಜೊತೆಗೆ ಹಲವು ವಾಷಿಂಗ್‌ಮಷಿನ್‌ಗಳನ್ನು ನೇಮಿಸುವ ಮೂಲಕ ಭ್ರಷ್ಟ ಕಾಂಗ್ರೆಸ್‌ ನಾಯಕರು ಬಲವಂತವಾಗಿ ಬಿಜೆಪಿ ಸೇರುವಂತೆ ಮಾಡಿದ್ದಾರೆ' ಎಂದು ತಿವಿದಿದ್ದಾರೆ.

ಭ್ರಷ್ಟಾಚಾರದ ಆರೋಪದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಂದ ವಿಚಾರಣೆ ಎದುರಿಸುತ್ತಿರುವವರು, ಪ್ರಕರಣಗಳಿಂದ ಪಾರಾಗಲು ಬಿಜೆಪಿಗೆ ಸೇರುತ್ತಿದ್ದಾರೆ. ಬಿಜೆಪಿ ಸೇರಿದರೆ, ಎಲ್ಲ ಪ್ರಕರಣಗಳನ್ನು ಕೈಬಿಡಲಾಗುತ್ತದೆ ಎಂದು ಆರೋಪಿಸಲು, ಜೈರಾಮ್‌ ಆ ಪಕ್ಷವನ್ನು ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳನ್ನು ವಾಷಿಂಗ್‌ಮಷಿನ್‌ಗೆ ಹೋಲಿಸಿದ್ದಾರೆ.

ಜಿಂದಾಲ್‌, 2004ರಿಂದ 14ರ ಅವಧಿಯಲ್ಲಿ ಹರಿಯಾಣದ ಕುರುಕ್ಷೇತ್ರ ಲೋಕಸಭೆ ಸಂಸದರಾಗಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟ್ಯಾಗ್‌ ಮಾಡಿ ಭಾನುವಾರ ಟ್ವೀಟ್‌ ಹಂಚಿಕೊಂಡಿದ್ದ ಜಿಂದಾಲ್‌, 'ಕುರುಕ್ಷೇತ್ರ ಸಂಸದನಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 10 ವರ್ಷ ಪ್ರತಿನಿಧಿಸಿದ್ದೆ. ಕಾಂಗ್ರೆಸ್‌ ನಾಯಕರು ಹಾಗೂ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಧನ್ಯವಾದ ಹೇಳುತ್ತೇನೆ. ಇಂದು (ಮಾರ್ಚ್ 25), ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ತಿಳಿಸಿದ್ದರು.

ಬಿಜೆಪಿ ಟಿಕೆಟ್‌
ಕಾಂಗ್ರೆಸ್‌ ತೊರೆದು, ಭಾನುವಾರವೇ ಬಿಜೆಪಿ ಸೇರಿರುವ ಜಿಂದಾಲ್‌, ಪ್ರಧಾನಿ ಮೋದಿ ಅವರ 'ವಿಕಸಿತ ಭಾರತ' ಪರಿಕಲ್ಪನೆಗೆ ಕೊಡುಗೆ ನೀಡುವುದಕ್ಕಾಗಿ ಕೇಸರಿ ಪಾಳಯ ಸೇರಿರುವುದಾಗಿ ತಿಳಿಸಿದ್ದಾರೆ. ಮುಂಬರುವ ಲೋಕಸಭೆ ಚುಣಾವಣೆಯಲ್ಲಿ ಕುರುಕ್ಷೇತ್ರದಿಂದ ಸ್ಪರ್ಧಿಸಲು ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT