ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮತನಿರ್ಣಯ ಪ್ರಭಾವಿಸುವ ನಿರುದ್ಯೋಗ

ಕೇಂದ್ರ ಸರ್ಕಾರದ ಹುದ್ದೆಗಳಿಗೆ ನೇಮಕಾತಿ ನಡೆಯದಿರುವುದರಿಂದ ಯುವ ಜನರಲ್ಲಿ ಸಿಟ್ಟು, ಅಸಹನೆ
Published 29 ಮಾರ್ಚ್ 2024, 20:50 IST
Last Updated 29 ಮಾರ್ಚ್ 2024, 20:50 IST
ಅಕ್ಷರ ಗಾತ್ರ

ಉದ್ಯೋಗ ಸೃಷ್ಟಿ ಮತ್ತು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುತ್ತೇವೆ ಎಂಬ ಘೋಷಣೆಗಳಿಗೆ ಮತದಾರರು, ಅದರಲ್ಲೂ ಯುವ ಮತದಾರರು ಅತ್ಯುತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆಂದರೆ ನಿರುದ್ಯೋಗದ ಸಮಸ್ಯೆ ಅಷ್ಟರಮಟ್ಟಿಗೆ ಇದೆ ಎಂಬುದನ್ನು ಅದು ಸೂಚಿಸುತ್ತದೆ

ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದಕ್ಕಿಂತಲೂ ಮೊದಲು ನಡೆದ ಚುನಾವಣೆಯಲ್ಲಿ ಅಂದರೆ, 2014ರ ಲೋಕಸಭಾ ಚುನಾವಣೆಯ ವೇಳೆ ‘ಪ್ರತಿವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ’ ಎಂದು ಹೇಳಿದ್ದರು. ಆಗ ದೇಶದಲ್ಲಿದ್ದ ನಿರುದ್ಯೋಗದ ಪ್ರಮಾಣ ಶೇ 3ರಷ್ಟು. ಮೋದಿ ಅವರ ಘೋಷಣೆ ಹೊಸ ತಲೆಮಾರಿನ ಮತದಾರರನ್ನು, ಉದ್ಯೋಗಕ್ಕಾಗಿ ಎದುರು ನೋಡುತ್ತಿದ್ದವರನ್ನು ಆಕರ್ಷಿಸಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಮೋದಿ ಅವರು ಪ್ರಧಾನಿ ಆದ ನಂತರದ ಹಲವು ವರ್ಷಗಳವರೆಗೂ ಉದ್ಯೋಗ ಸೃಷ್ಟಿಯ ಮಾತು ಕೇಳುತ್ತಲೇ ಇತ್ತು. 2019ರ ಚುನಾವಣೆಯಲ್ಲೂ ಮೋದಿ ಅವರ ಆ ಘೋಷಣೆ ಪ್ರಚಲಿತದಲ್ಲಿ ಇತ್ತು, ಈ ಚುನಾವಣೆಯಲ್ಲೂ ಅದು ಚರ್ಚೆಯಲ್ಲಿದೆ. ಈ ಬಾರಿ ನಿರುದ್ಯೋಗವು ಈ ಹಿಂದೆಂದಿಗಿಂತಲೂ ಹೆಚ್ಚು ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.

ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ನಿರುದ್ಯೋಗದ ಸಮಸ್ಯೆ ಬಿಗಡಾಯಿಸಿದೆ ಎಂದು ವಿರೋಧ ಪಕ್ಷಗಳು ತಮ್ಮ ಪ್ರಚಾರದಲ್ಲಿ ಪದೇ–ಪದೇ ಹೇಳುತ್ತಿವೆ. ಈ ಹಿಂದೆ ಮೋದಿ ಅವರು ಹೇಳಿದ್ದಂತೆ, ತಾವು ಅಧಿಕಾರಕ್ಕೆ ಬಂದರೆ ಇಂತಿಷ್ಟು ನೇಮಕಾತಿಗಳನ್ನು ನಡೆಸುತ್ತೇವೆ ಎಂದೂ ಘೋಷಿಸುತ್ತಿವೆ. ಚುನಾವಣೆ ಸಂದರ್ಭದಲ್ಲಿ ಮಾಡಲಾದ ಇಂತಹ ಘೋಷಣೆಗಳು ಮತದಾನದ ಮೇಲೆ ಪ್ರಭಾವ ಬೀರಿವೆ ಎಂಬುದಕ್ಕೆ ನಮ್ಮೆದುರು ಹಲವಾರು ನಿದರ್ಶನಗಳಿವೆ.

ಮೋದಿಯವರ ‘ವರ್ಷಕ್ಕೆ 2 ಕೋಟಿ ಉದ್ಯೋಗ’ ಎಂಬುದು ಅದಕ್ಕೆ ದೊಡ್ಡ ಉದಾಹರಣೆ. 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್, ‘ಅಧಿಕಾರಕ್ಕೆ ಬಂದರೆ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಸುತ್ತೇವೆ’ ಎಂದು ಘೋಷಿಸಿದ್ದು ಮತ್ತೊಂದು ಉದಾಹರಣೆ. ಮೊದಲನೆಯದ್ದರಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿದಿತ್ತು. ಎರಡನೆಯದ್ದರಲ್ಲಿ ಆರ್‌ಜೆಡಿ ಅಧಿಕಾರಕ್ಕೆ ಬರದಿದ್ದರೂ ಚುನಾವಣಾ ಫಲಿತಾಂಶದಲ್ಲಿ ಅದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅದೇ ಹಾದಿ ತುಳಿದಿರುವ ರಾಹುಲ್‌ ಗಾಂಧಿ, ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ 40 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಈಗಾಗಲೇ ಘೋಷಿಸಿಬಿಟ್ಟಿದ್ದಾರೆ. ಉದ್ಯೋಗ ಸೃಷ್ಟಿ ಮತ್ತು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುತ್ತೇವೆ ಎಂಬ ಘೋಷಣೆಗಳಿಗೆ ಮತದಾರರು, ಅದರಲ್ಲೂ ಯುವ ಮತದಾರರು ಅತ್ಯುತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆಂದರೆ ನಿರುದ್ಯೋಗದ ಸಮಸ್ಯೆ ಅಷ್ಟರಮಟ್ಟಿಗೆ ಇದೆ ಎಂಬುದನ್ನು ಅದು ಸೂಚಿಸುತ್ತದೆ.

ಆರ್ಥಿಕವಾಗಿ ಮುಂದುವರಿದ ದಕ್ಷಿಣದ ರಾಜ್ಯಗಳಲ್ಲಿ ಇಂತಹ ಘೋಷಣೆಗಳು ಹೆಚ್ಚು ಪ್ರಭಾವ ಬೀರುವುದಿಲ್ಲ. ಆದರೆ ಹಿಂದುಳಿದ ಬಿಮಾರು (ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ) ರಾಜ್ಯಗಳಲ್ಲಿ ಇದರ ಪ್ರಭಾವ ಹೆಚ್ಚು. ಏಕೆಂದರೆ ಈ ರಾಜ್ಯಗಳಲ್ಲಿ ಖಾಸಗಿ ವಲಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುವುದಿಲ್ಲ. ಅತಿಹೆಚ್ಚು ಜನಸಂಖ್ಯೆ ಇರುವ ಈ ರಾಜ್ಯಗಳಲ್ಲಿ ಉದ್ಯೋಗದ ಮೂಲ ಸರ್ಕಾರವೇ ಆಗಿದೆ. ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಯುವುದು ಮತ್ತು ನಡೆಯದಿರುವುದು ರಾಜ್ಯ ಮಟ್ಟದಲ್ಲಿ ಸರ್ಕಾರ ಬದಲಾಗಲು ಕಾರಣವಾಗುತ್ತದೆ. ಕೆಲ ತಿಂಗಳ ಹಿಂದಷ್ಟೇ ನಡೆದ ರಾಜಸ್ಥಾನ ಚುನಾವಣೆಯಲ್ಲಿ ನಿರುದ್ಯೋಗ ಮತ್ತು ನೇಮಕಾತಿ ಹಗರಣವು ಒಂದು ದೊಡ್ಡ ವಿಷಯವಾಗಿತ್ತು. ಸರ್ಕಾರ ಬದಲಾಗಲು ಅದೂ ಒಂದು ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಈಗ ಉತ್ತರ ಪ್ರದೇಶದಲ್ಲೂ ಹಲವು ವರ್ಷಗಳಿಂದ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ವಿರೋಧ ಪಕ್ಷಗಳು ಆ ವಿಷಯವನ್ನು ಮುಂದು ಮಾಡಿದ್ದವು, ಈಗಲೂ ಮಾಡುತ್ತಿವೆ.

ಈ ಬಿಮಾರು ರಾಜ್ಯಗಳಲ್ಲಿ ನಿರುದ್ಯೋಗವು ಮತದಾನದ ಸ್ವರೂಪದಲ್ಲಿ ದೊಡ್ಡಮಟ್ಟದ ಬದಲಾವಣೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ನಿರುದ್ಯೋಗ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಈ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧವೂ ಅಸಹನೆ ಹೆಚ್ಚೇ ಇದ್ದಂತಿದೆ. ಸೇನಾ ನೇಮಕಾತಿಯನ್ನು ಕಡೆಗಣಿಸಿ, ಅಗ್ನಿವೀರ ಯೋಜನೆ ಜಾರಿಗೆ ತಂದಿದ್ದು ಅಂತಹ ಸಿಟ್ಟು ಮತ್ತು ಅಸಹನೆಗೆ ಕಾರಣಗಳಲ್ಲಿ ಒಂದು. ಸೇನಾ ನೇಮಕಾತಿಗಾಗಿ ಸಿದ್ಧತೆ ನಡೆಸಿದ್ದ ಲಕ್ಷಾಂತರ ಸಂಖ್ಯೆಯ ಆಕಾಂಕ್ಷಿಗಳು ಅನಿವಾರ್ಯವಾಗಿ ಅರೆಕಾಲಿಕ ಸ್ವರೂಪದ ಹುದ್ದೆಯಾದ ಅಗ್ನಿವೀರರಾಗುತ್ತಿದ್ದಾರೆ. ಈ ಬಗ್ಗೆ ರಾಜಕೀಯ ಪಕ್ಷಗಳ ಸಭೆಗಳಲ್ಲಿ, ಸಂವಾದಗಳಲ್ಲಿ ಯುವಕರು ದೊಡ್ಡಮಟ್ಟದ ಆಕ್ಷೇಪ ಹೊರಹಾಕಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅಗ್ನಿವೀರ ಯೋಜನೆಯ ವಿರುದ್ಧ ತೀರಾ ಈಚೆಗೂ ಪ್ರತಿಭಟನೆಗಳು ನಡೆದಿವೆ. ಇದರ ಜತೆಯಲ್ಲಿ ಕೇಂದ್ರ ಸರ್ಕಾರದ ಹುದ್ದೆಗಳಿಗೆ ನೇಮಕಾತಿ ನಡೆಯದಿರುವುದು (ಸುಮಾರು 9.8 ಲಕ್ಷ ಹುದ್ದೆಗಳು ಖಾಲಿ ಇವೆ), ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ನೇಮಕಾತಿ ನಡೆಸದೇ ಇರುವುದು (ಈ ಸಂಸ್ಥೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಒಟ್ಟು ವಿವರವನ್ನು ಸಂಸತ್ತಿನಲ್ಲಿ ಕೇಳಿದರೂ, ಕೇಂದ್ರ ಸರ್ಕಾರ ನೀಡಿಲ್ಲ) ಈ ರಾಜ್ಯಗಳಲ್ಲಿ ನಿರುದ್ಯೋಗಿ ಮತದಾರರ ಮತನಿರ್ಣಯವನ್ನು ಪ್ರಭಾವಿಸುತ್ತದೆ ಎಂದೇ ನಿರೀಕ್ಷಿಸಲಾಗಿದೆ.

ಸೊಲ್ಲೆತ್ತದ ಬಿಜೆಪಿ

ದೇಶದಲ್ಲಿ ನಿರುದ್ಯೋಗದ ಸಮಸ್ಯೆ ತಮ್ಮ ಆಡಳಿತಾವಧಿಯಲ್ಲಿ ಹೆಚ್ಚಾಗಿದೆ ಎಂಬುದನ್ನು ಬಿಜೆಪಿ ನಿರಾಕರಿಸುತ್ತಲೇ ಬಂದಿದೆ. ಹೀಗಾಗಿ ಈಗ ನಿರುದ್ಯೋಗದ ಸಮಸ್ಯೆ ಮತ್ತು ಉದ್ಯೋಗ ಸೃಷ್ಟಿಯ ಯಾವ ಮಾತುಗಳನ್ನೂ ಬಿಜೆಪಿ ಆಡುತ್ತಿಲ್ಲ.

2017ರಲ್ಲಿ ಬಿಡುಗಡೆಯಾಗಬೇಕಿದ್ದ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ‘ನಿರುದ್ಯೋಗ’ ವರದಿಯನ್ನು ಕೇಂದ್ರ ಸರ್ಕಾರ ತಡೆಹಿಡಿಯಿತು. 2017ರಲ್ಲಿ ದೇಶದಲ್ಲಿ ನಿರುದ್ಯೋಗದ ಪ್ರಮಾಣವು ಭಾರಿ ಏರಿಕೆಯಾಗಿದೆ ಮತ್ತು ಅದು 40 ವರ್ಷಗಳಲ್ಲೇ ಗರಿಷ್ಠ ಎಂದು ವರದಿಯಲ್ಲಿ ಹೇಳಲಾಗಿತ್ತು. ಆ ವರದಿಯೇ ಸರಿ ಇಲ್ಲ ಎಂದು ಹೇಳಿದ ಕೇಂದ್ರ ಸರ್ಕಾರವು, ಹಲವು ವರ್ಷ
ಗಳವರೆಗೆ ಅಂತಹ ವರದಿ ಬರುವುದನ್ನೇ ತಡೆಹಿಡಿಯಿತು.

ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಅಂತರರಾಷ್ಟ್ರೀಯ ಸಂಸ್ಥೆಗಳು ನೀಡಿದ ವರದಿಯನ್ನೂ ಬಿಜೆಪಿ ನಿರಾಕರಿಸಿದೆ. ಈ ವಾರವಷ್ಟೇ ಬಿಡುಗಡೆಯಾದ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ವರದಿಯಲ್ಲಿ, ‘ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ.
ನಿರುದ್ಯೋಗಿಗಳಲ್ಲಿ ಯುವಜನರ ಪ್ರಮಾಣ ಶೇ 82.9ರಷ್ಟು, ವಿದ್ಯಾವಂತ ನಿರುದ್ಯೋಗಿ
ಗಳ ಪ್ರಮಾಣ ಶೇ 65.7ಕ್ಕೆ ಏರಿಕೆಯಾಗಿದೆ. ಭಾರತವು ತೋರಿಸುತ್ತಿರುವ ಆರ್ಥಿಕ ಬೆಳವಣಿಗೆಯು, ಉದ್ಯೋಗ ಸೃಷ್ಟಿಗೆ ನೆರವಾಗುತ್ತಿಲ್ಲ’ ಎಂದು ವಿಶ್ಲೇಷಿಸಲಾಗಿತ್ತು.
ಎಂದಿನಂತೆ ಈ ಬಾರಿಯೂ ಬಿಜೆಪಿ ಸರ್ಕಾರ ಇದನ್ನು ನಿರಾಕರಿಸಿದೆ. ‘ನಮ್ಮ ದೇಶದ ವರದಿಗಳನ್ನು ಮಾತ್ರ ನಂಬಬೇಕು’ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್ ಗುರುವಾರವಷ್ಟೇ ಹೇಳಿದ್ದಾರೆ.

ಆದರೆ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣ ನೀಡುವ ವರದಿಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಲೇ ಇಲ್ಲ. ಕಾರ್ಮಿಕ ಸಚಿವಾಲಯ ಪ್ರತಿ ತ್ರೈಮಾಸಿಕಕ್ಕೊಮ್ಮೆ ಮತ್ತು ವರ್ಷಕ್ಕೊಮ್ಮೆ ನೀಡುತ್ತಿದ್ದ ‘ಉದ್ಯೋಗ–ನಿರುದ್ಯೋಗ’ ವರದಿಯನ್ನು 2016ರ ನಂತರ ಬಿಡುಗಡೆಯೇ ಮಾಡಿಲ್ಲ. ಆದರೆ ಉದ್ಯೋಗ ಸೃಷ್ಟಿಯನ್ನಂತೂ ಮಾಡುತ್ತಿದ್ದೇವೆ ಎಂದು ಭವಿಷ್ಯ ನಿಧಿ ಚಂದಾದಾರಿಕೆ ಹೆಚ್ಚಳ, ಎಂಎಸ್‌ಎಂಇ ನೋಂದಣಿ ಹೆಚ್ಚಳದ ದತ್ತಾಂಶಗಳನ್ನು ಬಿಜೆಪಿ ಸರ್ಕಾರ ಮುಂದಿಡುತ್ತದೆ. ಈ ಹತ್ತು ವರ್ಷಗಳಲ್ಲಿ ಪ್ರತಿ ವರ್ಷ ಒಂದು ಕೋಟಿಗಿಂತ ಹೆಚ್ಚು ಮಂದಿ ಭವಿಷ್ಯ ನಿಧಿ ಚಂದಾದಾರಿಕೆ ಪಡೆದಿದ್ದಾರೆ. ಈ ಪ್ರಕಾರ ಹತ್ತು ವರ್ಷದಲ್ಲಿ 10 ಕೋಟಿಯಷ್ಟು ಭವಿಷ್ಯ ನಿಧಿ ಚಂದಾದಾರರ ಸಂಖ್ಯೆ ಹೆಚ್ಚಾಗಿರಬೇಕಲ್ಲವೇ? ವಾಸ್ತವದಲ್ಲಿ ಸಕ್ರಿಯ ಚಂದಾದಾರರ ಸಂಖ್ಯೆ 7.55 ಕೋಟಿ ಮಾತ್ರ. ಸರ್ಕಾರ ಹೇಳುತ್ತಿರುವ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ನಿರುದ್ಯೋಗದ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲವಾದರೂ, ಯುವ ಮತದಾರರು ಆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT